ತೊಕ್ಕೊಟ್ಟು ಟೇಲ್ಸ್

                     ತೊಕ್ಕೊಟ್ಟು ಟೇಲ್ಸ್ 
(ಎಡದಿಂದ ಬಲಕ್ಕೆ ಸುರೇಶ, ಲಚ್ಚಿ, ಮರಗಲ್, ವೀರಣ್ಣ ಜಗದೀಶ್,ಉದಯಕುಮಾರ್, ಮಂಜು, ವಿಜಯ್, ಕೊಂಡಾ ತೊಕ್ಕೊಟ್ಟು CRS ಹಾಸ್ಟೆಲ್ ಸೋಮಾರಿ ಕಟ್ಟೆ ಮೇಲೆ)

ತೊಕ್ಕೊಟ್ಟು ಟೇಲ್ಸ್ 
ರಾತ್ರಿ ಸುಮಾರು 10.30 ಇರಬೇಕು 
ಬೆಂಗಳೂರಿನ 
ಆನಂದ್ ರಾವ್ ಸರ್ಕಲ್ ನಲ್ಲಿ ನಿಂತಿದ್ದ
ಬಳ್ಳಾಲ್ ಮೋಟರ್ ಟ್ರಾನ್ಸ್ ಪೋರ್ಟ್ ರವರ 
ಬೆಂಗಳೂರಿ ನಿಂದ ಮಂಗಳೂರಿಗೆ ಹೋಗುವ
ಸೆಮಿ-ಡಿಲಕ್ಸ್ ಬಸ್ ಹತ್ತಿದೆ.
ನನ್ನ ಸೀಟ್ ನಂಬರ್ 17 
ಪಕ್ಕದ 18ನೇ ನಂಬರ್ ಸೀಟ್ ಖಾಲಿಯಿತ್ತು
ಇನ್ನೂ ಯಾರೂ ಬಂದಿರಲಿಲ್ಲ. 
ಚಂಚಲ ಮನಸ್ಸು ಕೇಳಲಿಲ್ಲ 
ಚೆಂದದ ಚೆಲುವೆ ಬಂದ್ರೆ ಚೆಲೋ ಇರುತ್ತಲ್ಲಾ
ಅಂತ ಮನಸ್ಸಿಗೆ ಅನಿಸುತಿತ್ತು
ಅದೂ ಅಲ್ಲದೆ 
ಆಗಷ್ಟೇ ನೋಡಿದ್ದ ಆರಾಧನಾ,
ಹಿಂದಿ ಪಿಕ್ಚರ್ ರೀಲ್ ಮನಸ್ಸಿನ 
ಪರದೆಯ ಮೇಲೆ ಮೂಡಿತ್ತು.
ಮೇರೆ ಸಪ್ಪುನೋಂಕಿ ರಾಣಿ 
ಕಬ್ ಆಯೇಗಿ ತೂ... ಹಾಡು
ಅರ್ಧದಲ್ಲೇ ಕಟ್
ಬಿಳಿಯ ಗೌನು ಉಡುಪುಧಾರಿ
ಬಂದು ಸೀಟ್ ನಂಬರ್18ರಲ್ಲಿ 
ಕುಳಿತು ಕೊಂಡರು.
ತಮ್ಮನ್ನು ಫಾದರ್ ಥಾಮಸ್ಂತ 
ಮಂಗಳೂರ ಕಾಲೇಜೊಂದರಲ್ಲಿ ಪ್ರೊಫೆಸರ್
ಎಂದು ಪರಿಚಯಿಸಿಕೊಂಡರು.
ಅವರನ್ನ ನೋಡಿದ ಮೇಲೆ ಅವರು
ಪ್ರೊಫೆಸರ್ ಅಂದ ಮೇಲೆ..
ನಾವೆಲ್ಲಾ ಓದು ಮೊದಲು, ಮತ್ತೆಲ್ಲಾ ಆಮೇಲೆ ಅನ್ನುವ ಪೀಳಿಗೆಗೆ ಸೇರಿದವರು
ಅಂಬೋದನ್ನ ರುಜುವಾತು ಪಡಿಸಲು 
BFSc ಯ ಮೊದಲ ವರ್ಷ
ಬೆಂಗಳೂರಿನ ವೆಟರ್ನರಿ ಕಾಲೇಜಿನಲ್ಲಿ
ಅಂದ್ರೆ ಮೂರು ಸೆಮಿಸ್ಟರ್ ಮುಗಿಸಿ 
ಉಳಿದ ಒಂಬತ್ತು ಸೆಮಿಸ್ಟರ್ 
ಅಂದ್ರೆ ಮೂರು ವರ್ಷ ಮಂಗಳೂರಿನ 
ಫಿಶರೀಸ್ ಕಾಲೇಜ್ನಲ್ಲಿ 
ಮುಗಿಸಲು ಹೋಗ್ತಾ ಇದ್ದೀನಿ ಅಂತ 
ನನ್ನ ಪರಿಚಯ ಕೊಟ್ಟೆ.
ಅದೂ ಅಲ್ಲದೆ ಮಿನಿಮಮ್ 
CGPA 2.25 ಔಟ್ ಆಫ್ 4.0ಗಳಿಸಿದರೆ 
ಮಾತ್ರ ಪಾಸ್ ಅದಾದ ನಂತರ ವೇ 
BFSc ಡಿಗ್ರಿ ದೊರಕುವುದು 
ಅನ್ನೋದನ್ನ ಸಂಕ್ಷಿಪ್ತವಾಗಿ ವಿವರಿಸಿ 
ಪ್ರೊಫೆಸರ್ ನ ಇಂಪ್ರೆಸ್ ಮಾಡ್ದೆ 
ಅನಿಸುತ್ತೆ ಯಾಕೆಂದ್ರೆ 
ಅವರು ನಿದ್ದೆ ಮಾಡ್ಬಿಟ್ರು 
ನನಗೆ ನಿದ್ದೆ ಬರಲೇ ಇಲ್ಲ, 
ಕುಣಿಗಲ್, ಹಾಸನ ಸಕ್ಲೇಶಪುರ ಬಂಟ್ವಾಳ ಮಂಗಳೂರು.. ಅಂತ 
ಕತ್ತಲೆಯಲ್ಲಿ ಮೈಲುಗಲ್ಲುಗಳ ನೋಡ್ತಾ ನೋಡ್ತಾ 
ನಿದ್ದೆ ಹೋಗಿದ್ದೆ 
ದಿಢೀರ್ ಅಂತ ಗಾಡಿ ನಿಂತಂಗೆ ಆಯ್ತು. 
ಹಾಸನ ಬಂತು ಅಂತ ಕಾಣುಸ್ತೇ 
ಕಂಡಕ್ಟರ್ ಹೇಳ್ದ  
ಟೀ ಕಾಫಿ ಕುಡಿಯೋರು ಹೋಗಿ ಬನ್ನಿ 
ಗಾಡಿ ಹದಿನೈದು ನಿಮಿಷ ಹಾಲ್ಟ್ 
ಅಂದಾಗ ಅಪ್ಪಾ ಕೊಡಿಸಿದ hmt ವಾಚ್ನಲ್ಲಿ 
ಟೈಮ್ ನೋಡಿದ್ರೆ ರಾತ್ರಿ 1.30 
ರೆಸ್ಟ್ ರೂಮ್ಗೆ ಹೋಗಿ ಉಪಾದೆ ಗಳ ಮುಗಿಸಿ 
Tea ಕೆಫೆ ಗೆ ಹೋದ್ರೆ ಬಿಸಿ ಬಿಸಿ ಇಡ್ಲಿ 
ಅದರ ಮೇಲೆ ಕರಗಿ ಹೋಗುವಂತ 
ಬಿಳಿ ಬೆಣ್ಣೆ ಉಂಡೆ ಜೊತೆಗೆ 
ತರಿ ತರಿ ತೆಂಗಿನಕಾಯಿ ಚಟ್ನಿ 
ಬಾಯಲ್ಲಿಳಿಸಿದ ಮೇಲೆ 
ಕಾಫಿಗೆ ಬದ್ಲು ಇನ್ನೊಂದು ಆಂಬೊಡೆ 
ಒಂದಕ್ಕೆ ಮಿಗಿಲಾಗಿ ಮತ್ತೊಂದು 
ಅಮೃತ ಸ್ವಾಮಿ ದೈವಾಮೃತ...
ಎಷ್ಟು ಇಡ್ಲಿ ಎಷ್ಟು ವಡೆ ತಿಂದೇನ್ನೋದು 
ಗೊತ್ತಾಗ್ಲಿಲ್ಲಾ ಅವ್ನು ಕೇಳ್ದಷ್ಟು ದುಡ್ಡು ಕೊಡಲು 
ಬಸ್ಸಿನ ಹಾರ್ನ್ ಶಬ್ದ ಕೇಳಲು ಸರಿ ಹೋಯ್ತು 
ಮತ್ತೆ ಬಸ್ಸ ಹತ್ತಿದ ಮೇಲೆ ಪ್ರಯಾಣ ಮುಂದುವರಿಯಿತು ಹಾಗೆಯೇ 
ನನ್ನ career ನ ಪಯಣ ಕೂಡ...
ಕಾಲೇಜು ಶುರುವಾಗಿ ಮೂರೇ ವರ್ಷ ಆಗಿತ್ತು 
ನಮ್ದು ಮೂರನೇ ಬ್ಯಾಚ್ 
ಒಂದೊಂದು ಬ್ಯಾಚ್ ನಲ್ಲಿ ಹೆಚ್ಚು ಕಮ್ಮಿ 
ದೇಶ ವಿದೇಶ ಎಲ್ಲಾ ಸೇರಿ ಇಪ್ಪತ್ತೈದು ಹುಡುಗ್ರು   
ಹುಡುಗಿಯರು ಇದುವರೆಗೂ ಸೇರಿರಲಿಲ್ಲ.
ಅಲ್ಪ ಸ್ವಲ್ಪ ಗೊತ್ತಿತ್ತು 
ಮತ್ತದೆಲ್ಲಾ ಫಿಶರೀಸ್ ಕಾಲೇಜು ಬಗ್ಗೆ 
ಸೀನಿಯರ್ಸ್ ಮೂಲಕ 
ತಿಳ್ಕೊಂಡಿದ್ದು 
ಫೈನಲ್ ಇಯರ್ ನಲ್ಲಿ 
ಜಪಾನ್ ಕರೆದುಕೊಂಡು ಹೋಗ್ತಾರೆ 
ಬರೀ ನೀರಿನ ಮೇಲೇ ಟ್ರೈನಿಂಗ್ ಅಂತ 
ರೋಡ್ ಮೇಲೆ ರೈಲ್ ಬಿಟ್ಟಿದ್ರಪ್ಪ 
ಆದ್ರೆ ಅವರೇನು ಮಾಡ್ತಾರೆ 
ಅವರಿಗೂ ಸಹ ಅದನ್ನೇ ಬಡಿಸಿದ್ರು.
ಆದ್ರೂವೆ ಉತ್ಸಾಹ ಕುಂದದೆ ಕುತೂಹಲದಿಂದ 
ಮಂಗಳೂರೇ ಫಾರಿನ್ ಅಂದ್ಕೊಂಡು 
ಕಣ್ಣ್ ಬಿಟ್ರೆ 
ಬಸ್ಸು ಮಂಗಳೂರ ಹಂಪನಕಟ್ಟೆಯ ತಲುಪಿತ್ತು.
ಬೆಳಗಾದ್ರೂವೆ ಗವ್ಂತ 
ಮೋಡ ಮುಚ್ಕೊಂಡಿತ್ತು 
ಜಿಟಿ ಜಿಟಿ ಮಳೆ ಸುರಿಯಲು ಪ್ರಾರಂಭವಾಯ್ತು.
ಸ್ವಾಗತ ಜೋರಾಗಿದೆ ಅನ್ನೋದ್ರಲ್ಲಿ 
ಜೋಂತ ಸತತವಾಗಿ 
ಮಳೆ ಸುರಿಯಲಾರಂಭಿಸಿತು 
ಹಾಗೂ ಹೀಗೂ ಹೇಗೋ ಜೆಪ್ಪು ತಲುಪಿದೆ. 
ಉಳಿದು ಕೊಳ್ಳಲು
ಮೇಕ್ ಶಿಫ್ಟ್ ಅಂದ್ರೆ 
ತಾತ್ಕಾಲಿಕ ವ್ಯವಸ್ಥೆ ಮಾಡಿದ್ರು 
ಇದ್ದ ಗೋಡೌನ್ ಡಾರ್ಮಿಟರಿಯಾಗಿ ಪರಿವರ್ತನೆಯಾಗಿತ್ತು. 
ಬೆಳಗ್ಗೆ ಬ್ರೇಕ್ ಫಾಸ್ಟ್ 
ಇಡ್ಲಿ ಇಡ್ಲಿ ತರಹ ಇರಲಿಲ್ಲಾ.. 
ಸಾಂಬಾರ್ ಸಾಂಬಾರ್ ತರಹ ಇರಲಿಲ್ಲಾ 
ಟಿಫನ್ ಚೆನ್ನಾಗಿದ್ರೆ ಎಲ್ಲಾದರೂ
ಓದಿ ಹೇಗಾದ್ರು ಇರಬಹುದು
ಊಟ ಚೆನ್ನಾಗಿರಬೇಕು
ಅನ್ನೋದು ನನ್ನ ವಾದ.
ಹೊಸ ಕಾಲೇಜು, ಹೊಸ ಊರು, 
ಹೊಸ ಪರಿಸರ, ಹೊಸ ಜೀವನ 
ಹೊಸ ಭಾಷೆ ತುಳು ಭಾಷೆ
ಒರಟು ಕನ್ನಡಕ್ಕೆ ಒಗ್ಗಿ ಹೋದ ಮನಸ್ಸು
ರಾಗವಾಗಿ ಮಾತನಾಡುವ ಕನ್ನಡ ಕೇಳಿ
ಏನೋ ಒಂತರಾ ಆಯ್ತು ಮಾರಾಯ್ರೆ.
ಓರಿಯೆಂಟೇಷನ್ ಅಂದ್ರೆ 
ಕಾಲೇಜಿನ ವೀಕ್ಷಣೆ ಹಾಗೂ
ಪರಿಚಯಾತ್ಮಕ ವಿವರಣೆ ನೀಡ್ತಾರೆ
ಅಂತಿತ್ತು ಟೈಮ್ ಟೇಬಲ್ಲು..
ವೀಕ್ಷಿಸಿದೆ, ವಿವರಣೆ ನೀಡಿದರು.
ನಿರುತ್ಸಾಹ ಇನ್ನೂ ಹೆಚ್ಚಿತು. 
ಕಲ್ಪನೆಗೂ ವಾಸ್ತವಿಕಕ್ಕೂ... 
ಅಜಗಜಾಂತರ ವ್ಯತ್ಯಾಸ 
ಸೀದಾ ಜಪಾನ್ ನಿಂದ ಜೆಪ್ಪಿನವರಗೆ 
ಜೊಯ್ಯಂತ ಹವಾ ಇಳಿದು ಹೋಯ್ತು.
ಒಂದು ವಾರದೊಳಗೆ ನಮ್ಮನ್ನ ಅಂದ್ರೆ 
ಸೆಕೆಂಡ್ ಇಯರ್ ಹಾಗೂ ಥರ್ಡ್ ಇಯರ್ 
ವಿದ್ಯಾರ್ಥಿಗಳನ್ನ ಇನ್ನೊಂದು ಹಾಸ್ಟೆಲ್ ಗೆ 
ಸ್ಥಾನಾಂತರಿಸೋ ಪ್ಲಾನ್ ಗೌರವಾನ್ವಿತ
ಡೈರೆಕ್ಟರ್ HPC Shetty ಯವರದು
ಅದನ್ನ ಕಾರ್ಯಗತ ಗೊಳಿಸಿ ಪೂರೈಸೋ
ಜಿಮ್ಮೆದಾರಿ ಇನ್ನೊಬ್ಬ shetty ಯವರದು
ಅವ್ರು ನಮ್ಮೆಲ್ಲರ ಅಚ್ಚು ಮೆಚ್ಚಿನ
ಡ್ರೈವರ್ Shetty ಯವರು.
ನಮ್ಮನ್ನೆಲ್ಲಾ ಹಸಿರು ಬಣ್ಣದ ಕಾಲೇಜು 
ಮಿನಿಬಸ್ನಲ್ಲಿ ಕರೆದುಕೊಂಡು ಹೊರಟ್ರು.
ಜೆಪ್ಪು ಹಾಸ್ಟೆಲ್ನಿಂದ ಹೊರಟ ಬಸ್ಸು 
ಸುಮಾರು 15 ಕಿಲೋಮೀಟರ್ 
ದೂರದಲ್ಲಿದ್ದ ತೊಕ್ಕೊಟ್ಟು ಹಾಸ್ಟೆಲ್
ತಲುಪಲು ಹಿಡಿದದ್ದು
ವೆಸ್ಟ್ ಕೋಸ್ಟ್ ಹೈವೇ 
ಕೇರಳ ಕರ್ನಾಟಕ ವ ಜೋಡಿಸೋ
ಗೇಟ್ ವೇ, ಟ್ರೇಡ್ ವೇ
ರಸ್ತೆಯಲ್ಲಿ
ನೇತ್ರಾವತಿ ನದಿ ಪಾರು ಮಾಡಲು
ಕಟ್ಟಿದ್ದ ಸೇತುವೆ
ಅದರಮೇಲೆ ಹೋಗ್ತಾ ಇರೋ
ನಮ್ ಬಸ್
ಧಡ್ ಧಢಕ್, ಧಡ್ ಧಡಕ್ ಅಂತ
ಬ್ರಿಡ್ಜ್ ಕ್ರಾಸ್ ಮಾಡೊ ಶಬ್ದ 
ಸೌಂಡುಎಫೆಕ್ಟ್ ಜೊತೆಗೆ
ಎಂತಾ ಒಂದು ಸುಂದರ ವಿಹಂಗಮ ದ್ರಶ್ಯ
ಬಂದೇ ಬಿಡ್ತು
ತೊಕ್ಕೊಟ್ಟು ಜಂಕ್ಷನ್
ಸೀದಾ ಹೋದ್ರೆ ತಲಪಾಡಿ ಕಾಸರಗೋಡು
ಎಡಕ್ಕೆ ತಿರುಗಿದರೆ ಕೊಣಾಜೆ ಮಂಗಳ ಗಂಗೋತ್ರಿ
ಅದೇ ಬಲಕ್ಕೆ ನಮ್ಮ ತೊಕ್ಕೊಟ್ಟು 
ಎರಡು ಕಿ.ಮೀ. ದೂರದಲ್ಲಿ ಉಳ್ಳಾಲ ಬೀಚ್
ನಮ್ಮ ಹಾಸ್ಟೆಲ್ ಬಂತು 
ಜಪ್ಪಲೆ ಅಂತ ತುಳುವಿನಲ್ಲಿ ಶೆಟ್ರು ಹೇಳೋಕೆ
ಅಂದ್ರೆ ಇಳೀರಿ ಅಂತ
ಒಬ್ಬೊಬ್ಬರಾಗಿ ಇಳಿದ್ವಿ
ಮಂಜು ಬಿಳಿ ಪ್ಯಾಂಟ್
ಕೆಂಪು ಶರ್ಟ್ ಮುಗುಳ್ನಗೆಯೊಂದಿಗೆ
ಕೈಯಲ್ಲಿ ಕೆಂಪು ಸೂಟ್ ಕೇಸ್
ಹಿಡಿದ್ ಕೊಂಡು ಇಳಿದ್ರು
ಜ್ಞಾಪಕಕ್ಕೆ ಬಂತಾ   
ನಗು ನಗುತಾ ನಲಿ ನಲಿ ಏನೇ ಆಗಲಿ
ನಮ್ ಬಂಗಾರದ ಮನುಷ್ಯ 
ನಂತರ
ವಿಜಯ್ ನಸ್ಲಾಪುರ
ಅವನ ಬುಲ್ ಬುಲ್ ತಾರಾ ಹಿಡ್ಕೊಂಡು
ನಾನು ನನ್ನ ಹೆಚ್ಚು ಸೌಂಡ್ ಮಾಡುವ ಪುಟ್ಟ
ಟ್ರಾನ್ಸಿಸ್ಟೆರ್ ರೇಡಿಯೋ.. ತಗಲ್ ಹಾಕ್ಕೊಂಡು
ಇಳಿದ್ವಿ
ಹಾಸ್ಟೆಲ್ ಗೆ ಎಲ್ರು ಬಂದಿದ್ದಾಯ್ತು
ಸುತ್ತ ಮುತ್ತಲೂ Cashew ಕಾಜು ಮರಗಳು
ಅದರ ನಡುವೆ ಇದ್ದ ತೊಕ್ಕೊಟ್ಟಿನ
Cashew Research Station ನ್ನು 
ಪ್ಲೈವುಡ್ ಪಾರ್ಟಿಷನ್ ಮಾಡಿ
ರೂಮ್ ಗಳಾಗಿ ಪರಿವರ್ತಿಸಿ 
ರೂಮ್ ಗೆ ಮೂರು ಮೂರು 
ದೇಶೀ, ವಿದೇಶಿ, ಸೀನಿಯರ್, ಜೂನಿಯರ್, 
ಅಂತ ಎಲ್ಲಾ 
ಪರ್ಮುಟೇಶನ್ ಕಾಂಬಿನೇಶನ್ ಮಾಡಿ
ರೂಮುಗಳ ಹಾಗೂ ರೂಮ್ ಮೇಟುಗಳ 
ವಿತರಣೆ ಯಾಗಿತ್ತು. 
U su, ಅಲ್ಲಾ ಪಿಚ್ಚೆ, ಡೇವಿಡ್, ರವೀಂದ್ರನ್
ಷಣ್ಮುಗ ಮಣಿ, BFSc ಮಾಡಲು 
ವಿದೇಶದಿಂದ ಬಂದವರು ನಮ್ಮ 
ಹಾಸ್ಟೆಲ್ ಜೀವನಕ್ಕೆ ಹೊಂದಿಕೊಂಡವ್ರು
ಸುಂದರ ಪರಿಸರ, ಸ್ವಚ್ಛ ವಾತಾವರಣ
ಹಸಿರು ತೆಂಗು ಕಾಜು ಮರಗಳ ತೋಟ, 
ಮುಖ್ಯವಾಗಿ ಥಾಮಸ್ ಹಾಗೂ ಅಪ್ಪು  
ವೆಜ್ ಮತ್ತೆ ನಾನ್ ವೆಜ್ ಅಡುಗೆಯವರು 
ಸಿಕ್ಕಿದ್ದು. ಆಮ್ಲೆಟ್ ಮತ್ತೆ ಕ್ವಾರ್ಟರ್ ಚಿಕನ್
ಪನೀರ್, ಆಪಲ್, ಹೋದ ಪ್ರಾಣ 
ಮರಳಿ ಬಂದಂಗಿತ್ತು. 
ಜಪಾನ್ಗಂತು ಹೋಗಲಿಕ್ಕಾಗಲಿಲ್ಲ
ಆದ್ರೆ ಅದಕ್ಕಿಂತಲೂ ಹೆಚ್ಚಾಗಿ 
ಜಾಪನೀಸ್ ಕೇಕ್
ಡೈನಿಂಗ್ ಟೇಬಲ್ ಗೇ ಬಂದ್ಬಿಡ್ತು
ಬಲು ಬೇಗ ಹೊಂದುಕೊಂಡು ಬಿಟ್ವಿ.
ಎಲ್ರು ಸೇರಿ ಹಾಕಿದ್ರು ಒಂದು ಜೈ
ಫಿಶರೀಸ್ ಕಾಲೇಜು ತೊಕ್ಕೊಟ್ಟು ಹಾಸ್ಟೆಲ್ ಗೆ
ಪ್ರತಿನಿತ್ಯ ಬ್ರೆಡ್ ಜಾಮ್ ಆಮ್ಲೆಟ್ಟ್ ಬೆಳಗ್ಗೆ 
ಹಾಸ್ಟೆಲ್ ನಲ್ಲಿ ಮತ್ತೆ ಕಾಲೇಜು ಬಸ್ಸ ಹತ್ತಿ
ಬಂದರ್ ಕ್ಷೇತ್ರದ ಪಕ್ಕ ಹೊಯಿಗೆ ಬಜಾರ್ನಲ್ಲಿದ್ದ
ಕಾಲೇಜು ಅಟೆಂಡ್ ಮಾಡಿ
ಮಧ್ಯಾಹ್ನ ಕಾಲೇಜು ಕ್ಯಾಂಪಸ್ 
ಕೆಫೆಟೇರಿಯಾದಲ್ಲಿ ಲಂಚ್,
ಸಂಜೆ ವಾಪಸ್ಸು ತೊಕ್ಕೊಟ್ಟು ಹಾಸ್ಟೆಲ್ ಗೆ
ಇದೊಂದು ವಾಡಿಕೆ ಅಂದ್ರೆ ರೋಟೀನ್ ಆಗಿತ್ತು
ಮೊದಲ್ನೇ ಶುಕ್ರವಾರ ರಾತ್ರಿ 
ಇಂಗ್ಲೀಷಲ್ಲೇ ಮಾತಾಡೋ 
ನಮ್ ಕ್ಲಾಸ್ಮೇಟ್ ಗಳು 
ದೇಶವಾಸಿ ವಾಟ್ ಮ್ಯಾನ್ ಅಂದ್ರೆ
ವಿದೇಶಿ ವಾಟ್ ಲಾ ಅಂತ
ಮುಖ್ಯವಾಗಿ ಮ್ಯಾತ್ಯು, ಜೈ ಕುಮಾರ್, 
ಕೆಳವ ಎನ್ನುವ ರಾಮಚಂದ್ರನ್ 
ಮತ್ತೆ 
ಇನ್ನೊಬ್ಬ ಯಾರುಂತ ಜ್ಞಾಪಕಕ್ಕೆ ಬರಲಿಲ್ಲಾ
ಆ ನಾಲ್ವರು ಯಾವಾಗ್ಲೂ ಜೊತೆಗೆ ಇರೋರು
ಎಲ್ರು ಮಲಗಿಕೊಂಡ ಮೇಲೆ
ಎಲ್ಲೆಡೆ ಕಾರಿರಳು. ಹಾಸ್ಟೆಲ್ ನ ಹೊರಗೆ
ಮಿಣಕ್ ಮಿಣಕ್ಅಂತ 
ಗುಂಡುಬಲ್ಬು ಗಳು ಹಳದಿ ಬೆಳಕ ಚೆಲ್ಲಿತ್ತು
ಆ ಕತ್ತಲಲ್ಲಿ ನಾಲ್ವರು 
ಮಿನಿ ಬಸ್ಸು ನಿಂತಿದ್ದ ಕೊನೆಗೆ ಹೋದ್ರು
ಮ್ಯಾತ್ಯು ಬಸ್ಸ ಏಣಿ ಹಿಡಿದ
ಬಸ್ ಮೇಲೆ ಹತ್ತಿಯೇ ಬಿಟ್ಟ
ಪಕ್ಕದಲ್ಲಿದ್ದತೆಂಗಿನಮರ ಹತ್ತಿ
ಎಳನೀರು ಕಾಯಿಗಳ ಗೊನೆಯ ಕತ್ತರಿಸಿ
ಕೆಳಗೆ ಹಾಕಿದ್ದು ದೊಡ್ಡ ಶಬ್ದ ಕೇಳಿ 
ವಾಚ್ ಮ್ಯಾನ್ ಓಡಿ ಬಂದ.
ಮತ್ತೆಲ್ರು ಏನಾಯ್ತು ಏನೋ ಅಂತ
ಓಡಿ ಬಂದ್ರೆ ನಾಲ್ವರು ಸಿಕ್ಕಿ ಹಾಕೊಂಡ್ರು
ಹಾಸ್ಟೆಲ್ ವಾರ್ಡನ್ ಶ್ರೀ ಶೇಷಪ್ಪ
 ಬುದ್ಧಿ ಹೇಳಿ ವಾರ್ನಿಂಗ್ ಕೊಟ್ರು. 
ಹಾಗೆಯೇ ಹೊಸ
ಹೆಸರು ಕೊಟ್ರು  
ಕೊಕೊನಟ್ ಕಳ್ರು.
ಆಗಾಗ ಗದ್ದೆಗಳೂಳಗೆ ಎದ್ದು ಬಿದ್ದು 
ಗ್ರಾಮದ ಹಲಸಿನ ಹಣ್ಣ ದೋಚಿ ತಂದು
ಕೆಳವ ರಾಮಚಂದ್ರನ ರೂಮಲ್ಲಿ 
ಹಲಸಿನ ಹಣ್ಣ ಬಗಿದ್ರೆ ಅದರ 
ಸುವಾಸನೆ ಕ್ಷಮಿಸಿ ಪರಿಮಳ 
ಎಲ್ಲೆಡೆ ಹರಡಿ, ಎಲ್ರೂ ಡಕೈತಿ ಮಾಲ್
ಹಂಚಿ ತಿನ್ನಲು ಒಟ್ಟುಗೂಡಿ ದಾಳಿ ಹಾಕ್ತಿದ್ರು.
ಎಲ್ಲವೂವೆ ತೊಕ್ಕೊಟ್ಟು ಗ್ರಾಮದ ಫಸಲು.
CRS ಹಾಸ್ಟೆಲ್ ನ ಸೋಮಾರಿ ಕಟ್ಟೆಯ
ಮೇಲೆ ಆರಾಮಾಗಿ ಕುಳಿತು
ಅಪ್ಪನಿಂದ ಬಂದ ಪತ್ರವನ್ನ ಆಗಷ್ಟೇ 
ಓದಲು ಶುರು ಮಾಡಿದ್ದೆ. 
ಅಷ್ಟರಲ್ಲಿ 
ಏನು ಓದುತಿದ್ದೀಯ ಎಂದು 
ಇಣಕಿ 
ನೋಡಿದ ವೆಂಕಿ ಕಣ್ಣಿಗೆ ಕಂಡಿದ್ದು  
ಈ ವಾಕ್ಯ 
ಎನಿಮಿ ಫ್ರೆಂಡ್ಸ್ ಹತ್ತಿರ ಜಾಗ್ರತೆಯಾಗಿರು
ಓದಿದ್ದನ್ನು ಎಲ್ಲರಿಗೂ  
ಸುದ್ದಿ ಸರಪಟಾಕಿಯ ಹಚ್ಚೇ ಬಿಟ್ಟ.
ಫ್ರೆಂಡ್ಸ್ ಎಲ್ರು ನನ್ನ ಹಿಡ್ಕೊಂಡುಬಿಟ್ರು.
ಮೇಲೆ ಮುಂದುವರಿಸಿ ಓದಲು ಬಿಟ್ರೆ ತಾನೇ
ಏನೋ ಇದು?
ಒಂದು ಎನಿಮಿ ಅರ್ಥಾತ್ ಶತ್ರು,
ಇನ್ನೊಂದು ಫ್ರೆಂಡ್ಸ್ ಗಳು ಮಿತ್ರರು. 
ಅದೇನೋ ಅದು ಎನಿಮಿ ಫ್ರೆಂಡ್ಸ್,
ಶತ್ರು ಮಿತ್ರರು ಅಂದ್ರೆ ಏನು 
ಅವರಿಗೆಲ್ಲಾ ಅದರ ಅರ್ಥ ತಿಳಿದುಕೊಳ್ಳೋ ಕುತೂಹಲ, ನನಗೂ ಸಹ ಗೊತ್ತಿರಲಿಲ್ಲ, 
ಪತ್ರ ಓದಲು ಮುಂದುವರೆಸಿದೆ.
ನಮ್ಮಪ್ಪ ಬರೆದಿದ್ದ ಇನ್ನೊಂದು ಪಂಕ್ತಿಯಲ್ಲಿ ಉದಾಹರಣೆಯೊಂದಿಗೆ ವ್ಯಾಖ್ಯಾನಿಸಿದ್ದರು.
ನೀನು ಒಂಟಿಯಾಗಿ ನೀರಿನ ಹತ್ತಿರ
ನಿಂತಿರುವಾಗ ತಮಾಷೆಗಾಗಿ ನಿನ್ನನ್ನು 
ಹಿಂದಿನಿಂದ ಯಾರಾದ್ರೂವೆ ನೀರೊಳಗೆ 
ತಳ್ಳಿಬಿಟ್ಟು ಕೇಕೆ ಹಾಕ್ತಾರೆ.ಅವರನ್ನೇ 
ಎನಿಮಿ ಫ್ರೆಂಡ್ಸ್, ಶತ್ರು ಮಿತ್ರರು 
ಅಂತ ನಮ್ಮಪ್ಪ ಗುರುತಿಸಿದ್ದರು.ಅಂತವರಿಂದ 
ದೂರ ಇರು ಹಾಗೂ ಜಾಗ್ರತೆಯಾಗಿ ಇರು.
ವಿಷಯ ತಿಳಿದ್ಕೊಂಡ ಮೇಲೆ ಫ್ರೀ ಯಾಗಿ 
ಬಿಟ್ ಬಿಟ್ರು.  
ಅದೊಂದು ಹುಣ್ಣಿಮೆಯ ರಾತ್ರಿ 
ಸೋಮೇಶ್ವರ ಬೀಚ್ 
ಹಾಸ್ಟೆಲ್ ನಿಂದ ಬಹಳ ಹತ್ತಿರ ಅಂದ್ರೆ 
ಒಂದೂವರೆ ಕಿಲೋಮೀಟರು ದೂರವಷ್ಟೇ,
ವಾರ್ಡನ್ ಶೇಷಪ್ಪ ನವರ ಕಣ್ಣ ತಪ್ಪಿಸಿ
ಸೋಮೇಶ್ವರದ ಬೀಚ್ ಗೆ ಮಿತ್ರರೊಂದಿಗೆ 
ಹೋಗಿದ್ದೆ, ಭೋರ್ಗೆರೆಯುತ್ತಿದ್ದ ಅಲೆಗಳು 
ರಪ್ಪನೇ ಬಂಡೆಗಳ ಮೇಲೆ ಅಪ್ಪಳಿಸಿ 
ತುಂತುರು ತುಂತುರು ನೀರ ಹನಿ 
ಮುಖದ ಮೇಲೆ 
ಒಂದು ಕ್ಷಣ ಬಿಳಿ ನೊರೆಯ 
ತೆರೆಯನ್ನೇ ತೋರಿ ಮರು ಕ್ಷಣ 
ಸಮುದ್ರದೊಳಗೆ ವಾಪಸ್ಸು ಹೋಗಿ ಮತ್ತೆ ಅದಕ್ಕಿಂತಲೂ ಹೆಚ್ಚಾಗಿ ಇನ್ನೊಂದು ದೊಡ್ಡ ಅಲೆ 
ಬಂಡೆಯ ಸಮೀಪ ಅಪ್ಪಳಿಸುವ ದ್ರಶ್ಯವ
ಮನದ ಕ್ಯಾಮೆರಾದಲ್ಲಿ ಕೈದು ಮಾಡುತ್ತಿದ್ದಾಗ 
ಯಾರೋ ಸಮುದ್ರದ 
ನೀರಲ್ಲಿ ನನ್ನ ತಳ್ಳಿ ಬಿಟ್ಟರು 
ಉಪ್ಪು ನೀರು ಕಣ್ಣು,ಮೂಗು, ಬಾಯಿ, 
ಗಂಟಲೊಳಗಿಳಿಯಲು ಒಂದು ಕ್ಷಣ  
ದಿಕ್ಕು ತೋಚದಂತಾಗಿ ಫ್ಲಾಟ್ ಆಗಿ 
ಬೀಚಿನ ಮೇಲೆ ಧೊಪ್ಪ್ಂತ ಬಿದ್ದೆ.
ದೈವವಶ ಏನೂ ಆಗಲಿಲ್ಲಾ 
ಆದರೆ ಅಪ್ಪ ಪತ್ರದಲ್ಲಿ ಬರೆದಿದ್ದಂಗೆ 
ನಡೆದಿದ್ದ ನೆನಸಿಕೊಂಡು 
ದಿಗ್ಬ್ರಮೆಯಾಯಿತು.
ದಯಮಾಡಿ ಬಲ್ಲೆಂತ ತುಳು ವಿನಲ್ಲಿ 
ವಾರ್ಡನ್ ಶೇಷಪ್ಪ ನವರನ್ನು ಹಾಗೂ 
ಇಷ್ಟ ವಿರುವಂತೆ ನಾಟಕವಾಡುವ ನಮ್ಮನ್ನು 
ತೊಕ್ಕೊಟ್ಟು ಭೂತ ಕೋಲಾ
ಗ್ರಾಮ ದೇವತೆಗಳ ಉತ್ಸವಕ್ಕೆ 
ಆಹ್ವಾನಿಸಿದರು. ರಾತ್ರಿಯಿಡೀ 
ನಡೆವ ಪೂಜೆಗೆ
ಮುಂದಿನ ಸಾಲಿನಲ್ಲಿ ಕುರ್ಚಿ ಹಾಕಿ ಕೂರಿಸಿದರು
ಮೊದ ಮೊದಲು ಬೂತ ಕೋಲಾ 
ಗೂಳಿಗ ರೂಪದಲ್ಲಿ ದೈವಾರಾಧನೆ 
ಒಂದು ತರಹ ಗ್ರಾಮ ನ್ಯಾಯ ದೇವತೆ
ದೇವರ ಹತ್ತಿರ ಯಾರು ಏನು ಬೇಡ್ಕೊಂಡು
ಕಣಿ ಕೇಳಿದ್ರೆ ಹಾಗೆ ನಡೆಯುತ್ತೆ ಅನ್ನೋದು
ಒಂದು ನಂಬಿಕೆ, 
ನಮಗಾಗ ಒಂದು ತರಹ ಭಯ
ಗ್ರಾಮದವರು ಎಲ್ಲಿ ಹಲಸಿನ ಹಣ್ಣಗಳು
ಮರ್ಮ ರೂಪದಲ್ಲಿ 
ಮರೆಯಾಗೋದ್ರಾ ಬಗ್ಗೆ ಕೇಳಿ 
ಹಾಸ್ಟೆಲ್ ಹುಡುಗ್ರ ಸಂಶಯ ಪಟ್ರೆ 
ಏನ್ ಮಾಡೋದು ಅಂತ 
ಸದ್ದು ಮಾಡದೆ ಅಲ್ಲಿಂದ ಕಳಚಿ ಕೊಂಡೆವು
ಅದಕ್ಕೆ ಮುಖ್ಯ ಕಾರಣ 
ಕೊಕೊನಟ್ ಕಳ್ರು.
ವಾರ್ಡನ್ ಶೇಷಪ್ಪ ರವರಿಗೆ ಸಂಶಯ ಬಂದು
ರೂಮ್ ರೂಮಾಗಿ ಪರೀಕ್ಷೆ ಮಾಡಿದ್ರು 
ಎಲ್ಲೂ ಏನೂ ಸಿಗಲಿಲ್ಲಾ
ಆದ್ರೆ
ಕೆಳವ ರಾಮಚಂದ್ರನ ಮಂಚದ ಕೆಳಗೆ 
ಯಾರೂ ಊಹಿಸಲಾಗದ ಅನಿರೀಕ್ಷಿತ
ಅತಿಥಿ...ಹಾವೊಂದು ಮಲಗಿತ್ತು.
ಅದನ್ನು ಹೊರ ಹಾಕಿ ದ ಮೇಲೆ 
ಎಲ್ರೂವೆ ನಿಟ್ಟುಸಿರು ಬಿಟ್ಟರು.
ಹಾಸ್ಟೆಲ್ಗೆ ಹತ್ತಿರದಲ್ಲಿಯೇ
ಮಂಗಳೂರಿನಿಂದ ಕೊಚ್ಚಿ ಗೆ ಹೋಗುವ 
ರೈಲು ಟ್ರಾಕ್ ಹಾದು ಹೋಗುತ್ತಿತ್ತು. 
ಹೀಗೇ ಹಾದು ಹೋಗುವ 
ರೈಲು ಸೇವಾ ಟ್ರಾಕ್ ನಲ್ಲಿ  
ನೇತ್ರಾವತಿ ರೈಲು ಸೇತುವೆ, 
ನಮ್ ತೊಕ್ಕೊಟ್ಟು
ಉಳ್ಳಾಲ, ಮಂಜೇಶ್ವರ,ನೀಲೇಶ್ವರ, 
ಅರಬ್ಬೀ ಸಮುದ್ರ ಹಾಗೂ ನದಿಗಳ
ಸಂಗಮಗಳ ಬಳಸಿ ಚಿಕ್ಕು ಬುಕ್ಕೂಂತ 
ಕರೆದೊಯ್ಯುವ ರೈಲು ಗಾಡಿ ದ್ರಶ್ಯ 
ಅವಿಸ್ಮರಣೀಯ.
ಆಗಸ್ಟ್ 20,
ಅದೊಂದು ಭಾನುವಾರ,
ಎಲ್ರೂ ಅವರವರ ಶೈಲಿ 
ಅವರವರ ಪಾಣಿ ಯಲ್ಲಿ  
ರಜೆ ಯ ಅನುಭವಿಸಲು ತಯ್ಯಾರಿ ನಡೆಸಿದ್ರು
ಬೆಳಗ್ಗೆ ಟಿಫನ್ ಮಾಡಿ CRS ಹಾಸ್ಟೆಲ್ 
ಸೋಮಾರಿ ಕಟ್ಟೆಯ ಮುಂದೆ
ವಾಲಿ ಬಾಲ್ ಆಡ್ತಾ ಇದ್ವಿ
ಹತ್ತಿರದ ರೈಲ್ವೆ ಟ್ರಾಕ್ ನಿಂದ ಟ್ರೇನಿನ
ಲಾಂಗ್ ಹಾರ್ನ್ ಶಬ್ದ ಸೀಳಿ ಕೊಂಡು ಬಂತು.
ಹಾಗೆಯೇ ಕೀಚು ಶಬ್ದದೊಂದಿಗೆ 
ರೈಲು ಗಾಡಿ ನಿಂತದ್ದು ಕೇಳಿತು
ಇದ್ಯಾವ ಟ್ರೈನ್ ಪ್ಪಾಂತ ನಾವು ಯೋಚಿಸೋ
ಹೊತ್ಗೆ ಯಾರೋ ಗೇಟ್ ನಿಂದ ಕೂಗಿಕೊಂಡೇ 
ಓಡಿ ಬಂದರು. ನೋಡಿ, ಯಾರೋ ಸ್ಟೂಡೆಂಟು
ರೈಲ್ ಗಾಡಿ ಮುಂದೆ ಬಿದ್ದಿದಾರೆಂತ, ಅಷ್ಟೇ
ವಾಲಿ ಬಾಲು ಎಲ್ಲವನ್ನೂ ಬಿಟ್ಟು ಓಡಿದೆವು.
ರೈಲ್ ಗಾಡಿಯ ಇಂಜಿನ್ನಿಂದ ಹಿಂದೆ ಡಿಬ್ಬೆಗಳನ್ನೆಲ್ಲಾ
ದಾಟಿ ನೋಡಿದರೆ  
ಇಂಜಿನ್ ಡ್ರೈವರ್ ಇರಬೇಕು
ರೈಲ್ವೆ ಟ್ರ್ಯಾಕಿನ ಪಕ್ಕದಲ್ಲಿ
ದೇಹ ಹಾಗೂ ಬೇರಾದ ತಲೆ ಕೈಯ 
ಭಾಗವನ್ನು ಜೋಡಿಸಿ,
ಮೇಲೊಂದು ಬೆಡ್ ಶೀಟ್ ಹಾಕಿ 
ಮರೆ ಮಾಡಿದ್ದ. 
ಅಷ್ಟರೊಳಗೆ ಹಾಸ್ಟೆಲ್ ಹಾಗೂ 
ಅಕ್ಕ ಪಕ್ಕದ ಜನರೆಲ್ಲಾ ಇಕ್ಕಟ್ಟಾದರು.
ವಾರ್ಡನ್ ಶೇಷಪ್ಪ ನವರೂ ಸಹ ಬಂದರು.
ಶೀಟನ್ನು ತೆರೆದು ನೋಡಿದ
ನಮಗೆಲ್ಲರಿಗೂ ಶಾಕಿಂಗ್ ಆಗಿತ್ತು.
ಆತ ನಮ್ಮ ಸೀನಿಯರ್, ಥರ್ಡ್ ಇಯರ್
ಮುಗ್ಧ, ಸೌಮ್ಯ, ವ್ಯಕ್ತಿತ್ವ ದ ಹುಡುಗ
ರಮೇಶ್.
ನಂಬಲಾಗಲಿಲ್ಲ, 
ನಾವೆಲ್ಲಾ ಕಕ್ಕಾ ಬಿಕ್ಕಿಯಾಗಿ ನೋಡ್ತಾ ಇದ್ವಿ.
ಪೊಲೀಸರು ಬಂದ್ರು. ರೈಲುಗಾಡಿಯ 
ಇಂಜಿನ್ ಡ್ರೈವರ್ ವಿವರಿಸುತ್ತಿದ್ದರು. 
ನೇತ್ರಾವತಿ ಸೇತುವೆಯ ದಾಟಿದೊಡನೆ
ಗಾಡಿಯ ವೇಗ ಕಮ್ಮಿಯಾಗಿತ್ತು  
ಆಗಷ್ಟೇ ಗಾಡಿ ಗತಿ ಹಿಡಿಯಲು ಪ್ರಾರಂಭಿಸಿತ್ತು
ದುರ್ಘಟನೆ ಯಾದ ಸ್ಪಾಟ್ ನಲ್ಲಿ 
ರಮೇಶ ಆತ್ಮಹತ್ಯೆಯ ನೆರವೇರಿಸಲು 
ಟ್ರಾಕ್ ಮೇಲೆ ಮಲಗಿದ್ದ. ಇಂಜಿನ್ ಡ್ರೈವರ್ 
ನೋಡಿದ ತಕ್ಷಣ ಎಮರ್ಜೆನ್ಸಿ ಬ್ರೇಕ್ ಹಾಕಿಯೂ
ರಮೇಶನನ್ನು ಕಾಪಾಡಲಾಗಲಿಲ್ಲ.
ಪೊಲೀಸರು ಜಟಪಟನೆ ಪಂಚನಾಮ 
ಕಾರ್ಯವಾಹಿ ಮುಗಿಸಿ ಪಾರ್ಥಿವ ಶರೀರವನ್ನು
ಪೋಸ್ಟ್ ಮಾರ್ಟಮ್ ಗಾಗಿ ಆಂಬುಲೆನ್ಸ್ ಮೂಲಕ
ಸರಕಾರಿ ಆಸ್ಪತ್ರೆ ಗೆ ಕರೆದೊಯ್ದರು. ಹಾಸ್ಟೆಲ್ ಹುಡುಗ್ರು ಆಂಬುಲೆನ್ಸ್ ಜೊತೆ ಹೋದರು.
ರಮೇಶನ ತಂದೆ ತಾಯಿ ಗೆ ಸುದ್ದಿ ಹೋಯ್ತು
ರಮೇಶನ ತಂದೆ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ
ಪ್ರೊಫೆಸರ್ ಆಗಿದ್ದರು. 
ರಮೇಶನ ಅಮ್ಮ ಹಾಗೂ ಅಪ್ಪಾ ಇಬ್ಬರೂ
ಹಾಸ್ಟೆಲ್ ಗೆ ಬಂದರು. 
ಯಾಕೆ ಆತ್ಮಹತ್ಯೆ ಮಾಡಿಕೊಂಡ 
ಈ ಪ್ರಶ್ನೆಗೆ ಯಾವ ಉತ್ತರವೂ ಇರಲಿಲ್ಲಾ
ರಮೇಶನ ಬಗ್ಗೆ ಅವರಿಗೂ ಗೊತ್ತಿರಲಿಲ್ಲಾ
ದುಃಖಭರಿತ ರಾಗಿ ರಮೇಶನ ಡ್ರೆಸ್ಸುಗಳು
ಪುಸ್ತಕ ಗಳು ಎಲ್ಲವನ್ನು ಸಂಗ್ರಹಿಸಿ 
ಪ್ಯಾಕ್ ಮಾಡಿದರು.
ಮೌನವಾಗೇ ಇದ್ದರು
ಆದ್ರೆ ಟೇಬಲ್ ಮೇಲೆ 
ತೆರೆದೇ ಇದ್ದ 
ರೈಲ್ವೆ ಟೈಮ್ ಟೇಬಲ್ ನ ಪುಸ್ತಕವ ನೋಡಿ
ಮಂಗಳೂರಿನಿಂದ ಬೆಳಗ್ಗೆ ಕೇರಳದ ಕಡೆಗೆ
ಹೋಗುವ ನಾಲ್ಕು ಟ್ರೇನ್ ಗಳ ಸೂಚಿಯಿತ್ತು.
ಅದರಲ್ಲೊಂದು ಬೆಳಗ್ಗೆ ದುರ್ಘಟನೆಯ
ಸಮಯಕ್ಕೆ ಹೊಂದಿ ಕೊಳ್ಳುವ ಟ್ರೈನ್ ಗೆ
ರಮೇಶ ಟಿಕ್ ಮಾಡಿದ್ದ. 
ದುಃಖ ತಡೆಯಲಾಗದೆ
ಬಿಕ್ಕಿಬಿಕ್ಕಿ ಅಳಲಾರಂಭಿಸಿದರು
ನಾವೂ ಸಹ. 
ಆತ್ಮೀಯನೊಬ್ಬನ
ಸಾವನ್ನು ಇಷ್ಟು ಹತ್ತಿರದಿಂದ ನೋಡಿದ್ದು
ಮೊದಲ ಬಾರಿ.
ಸಾಕಾಯ್ತು ತೊಕ್ಕೊಟ್ಟು 
ಅನಿಸ ತೊಡಗಿತು
ಗೊರಿಗುಡ್ಡದಲ್ಲಿ ಹೊಸ ಹಾಸ್ಟೆಲ್ 
ಹೊಸ ಕಾಲೇಜು ನಿರ್ಮಾಣ ಸಂಪೂರ್ಣವಾಗಿ
ಶೀಘ್ರವೇ ಸ್ಥಾನಾಂತರ ಮಾಡ್ತೀವಿ ಎಂದು
ಹಾಸ್ಟೆಲ್ ವಾರ್ಡನ್ ಶೇಷಪ್ಪ ಹೇಳಿದ್ರು
ಅದುವರೆಗೂ ಹಾಗೂ ಹೀಗೂ ಹೇಗೋ
ಕಾಲ ಕಳಿಯೋ ನಿರ್ಧಾರಕ್ಕೆ ಬಂದಿದ್ವಿ
ಹೊಸ ಸೇರಿಕೆ ಅಂದ್ರೆ ಅದು 
ಧಾರವಾಡದಲ್ಲಿ ಒಂದು ವರ್ಷ ಮುಗಿಸಿ 
ವಿಜಯ್ ಕುಮಾರ್ ಎಮ್ ಬರಗಿ
ನಮ್ಮೊಟ್ಟಿಗೆ ತೊಕ್ಕೊಟ್ಟು ಹಾಸ್ಟೆಲ್ನಲ್ಲಿ 
ಸೇರಿ ಕೊಂಡ್ರು
ಹಾಲಿಗೆ ನೀರು ಬೆರತಂತೆ.
ಇದೆಲ್ಲಾ ನಡೆದು 
ಐವತ್ತು ವರ್ಷಗಳಕ್ಕಿಂತಲೂ ಮೇಲಾಗಿತ್ತು
ಐವತ್ತು ವರ್ಷಗಳು ಏನು ಕಮ್ಮಿ ಸಮಯವಲ್ಲ
ಹಲ್ಲು, ಒಂದೊಂದಾಗಿ ಬೀಳ್ತಾ ಇದೆ
ಉಜ್ಜಿ ಕಾಪಾಡಿ ಕೊಳ್ಳೋಣ ಅಂದ್ರೆ
ಬಿನಾಕಾ ಟೂತ್ ಪೇಸ್ಟೇ ಇಲ್ಲ...
ಕೇಳೋಣ ಅಂದ್ರೆ 
ಬಿನಾಕಾ ಗೀತ್ ಮಾಲಾನೂ ಇಲ್ಲಾ
ತಮ್ಮ ವಾರ್ತಾಜಾಲದಿಂದ ಆಕರ್ಷಿಸಿದ 
ಜಾದೂ ಧ್ವನಿಯ ಒಡೆಯ 
ಅಮೀನ್ ಸಯಾನಿ ಇಲ್ಲಾ
ಹಾಡುವ ಲತಾ,ಮುಕೇಶ್, 
ಕಿಶೋರ್, ರಫಿ, ಇಲ್ಲಾ
ಹಿಂದೆ ಬ್ಯಾಕ್ ಗ್ರೌಂಡ್ ನಲ್ಲಿ ನಮ್ಮ ಪ್ಲೇ ಬ್ಯಾಕ್ ಸಿಂಗರ್ ವಿಜಯ್ ಕುಮಾರ್ ಎಮ್ ಬರಗಿ
ಹಾಡೋದು ಕೇಳಸ್ತಾ ಇದೆ. ಕೇಳಿಸ ಬೇಕಲ್ಲಾ
ಪಾರ್ಟಿಷನ್ ಮಾಡಿದ ತೊಕ್ಕೊಟ್ಟು ರೂಮ್ಗಳು
ಜಾನೇ ಕಹಾನ್
ಗಯೇ ವೋ ದಿನ್
कल खेल में हम हो-ना-हो, 
गर्दिश में तारे रहेंगे सदा
कल खेल में हम हो-ना-हो, 
गर्दिश में तारे रहेंगे सदा
भूलोगे तुम, 
भूलेंगे वो, 
पर हम तुम्हारे रहेंगे सदा 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.