ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ
ಅಶೂ ಅನ್ನೋ
ಅಶ್ವಥ್ ನ ಬಗ್ಗೆ ಯೋಚಿಸಿದ್ರೇನೇ
ದುಃಖ ಉಮ್ಮಳಿಸಿ ಕೊಂಡುಬರುತ್ತೆ.
ನಿನ್ನೆ ಘಂಟೆಗಟ್ಲೆ ಮಾತಾಡ್ದೋನು
(ನೋಡಿ ನಮ್ ಜೊತೆ ಫೋನಿನಲ್ಲಿ ಮಾತಾಡೋಕೇಂತ ಮಹಡಿಯಲ್ಲಿ ಸೆಪರೇಟ್ ರೂಮ್ ಕಟ್ಟಿಟ್ಟಿದ್ದ)
ಇವತ್ತು ಇಲ್ಲಾಂತಂದ್ರೆ...
ದುಃಖ ಎದೆತುಂಬಿ
ಮಾತೇ ಹೊರಬರದು,
ಅನನ್ಯ,ಆತ್ಮೀಯನ
ಕಳೆದುಕೊಂಡ ಕಸಿವಿಸಿ.
ಏನೋ ಒಂದುತರಹ ಭ್ರಮೆ,
ಕೊನೆಗೆ ಶೂನ್ಯ.
ಶೂನ್ಯತೆ...
ಇವತ್ತು ನವೆಂಬರ್ ಇಪ್ಪತ್ತೇಳು
ಸಂಜೆ 4:15 ಕ್ಕೆ ಇಂಡಿಗೋ ವಿಮಾನದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಫ್ಲೈಟ್ ನಲ್ಲಿ ಅಶ್ವಥ್ ಮತ್ತೆ ಸುಜಾತಾ ರವರೊಟ್ಟಿಗೆ ನಾನೂ ಟಿಕೆಟ್ ಮಾಡಿಟ್ಟಿದ್ದೆ
ಏರ್ ಪೋರ್ಟ್ನಲ್ಲಿ ಲಾಸ್ಟ್ ಕಾಲ್ ಫಾರ್ ಮಿಸ್ಟರ್ ಅಶ್ವಥ್ ನಾರಾಯಣ್ ರೆಡ್ಡಿ ಅಂದಾಗ ಮನಸ್ಸು ಚುರುಕ್ ಅಂತು.
ಪಯಣಕ್ಕೆ ಮುಂಚೆನೇ ಅಕಸ್ಮಾತ್ತಾಗಿ
ಅಶೂ ನಮ್ಮನ್ನೆಲ್ಲಾ ಅಗಲಿ ಹೋದ.
ಇಹಲೋಕದ ಟಿಕೆಟ್ ಇನ್ನೂ ಜೀವಂತವಾಗಿತ್ತು..
ಕೊನೆಗೂ ದುಃಖ ತುಂಬಿದ ಹೃದಯದಿಂದ
ಅವರಿಲ್ಲದೆ ನಾನು ಮಂಗಳೂರಿಗೆ ಹೊರಡಲು ಅನುವಾದೆ.
ಮಂಗಳೂರಲ್ಲಿ ನವೆಂಬರ್ 28ಕ್ಕೆ ಫಿಶರೀಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ COFAA ದ್ವಾರ ಆಯೋಜಿಸಿದ್ದ ಕಾಲೇಜು Reunion ಸಮಾರಂಭ. ಅದರಲ್ಲೂ BFSc.. ಯ 1975ರಲ್ಲಿ ಪದವೀಧರರಾದ ನಮಗೆ ಈ ವರ್ಷ ಅಂದರೆ 2025ರಲ್ಲಿ 50ವರ್ಷಗಳು ತುಂಬಿದ್ದರಿಂದ ನಾವೀಗ ಬಂಗಾರದ
ಪದವೀಧರರು (ಗೋಲ್ಡನ್ ಗ್ರಾಜುಎಟ್ಸ್). ನಮ್ಮನ್ನೆಲ್ಲಾ ಗೌರವಿಸಲು
ಆಯೋಜನೆ ಒಂದನ್ನ ಏರ್ಪಾಡು ಮಾಡಿದ್ದರು ಅದಕ್ಕಾದ ತಯ್ಯಾರಿಗಳನ್ನ
ನಾವೆಲ್ಲ ಕೂಡಿ ಮಾಡುತಿದ್ದೆವು ಅದರಲ್ಲಿ ಕಾಫಿ ಟೇಬಲ್ ಬುಕ್ ಒಂದನ್ನು ನಮ್ಮೆಲ್ಲರ ಅನುಭವಗಳನ್ನ ಸಂಕ್ಷಿಪ್ತವಾಗಿ
ಬರೆಯಬೇಕಿತ್ತು ರಾತ್ರಿಯಿಡೀ ಕುಳಿತು ಬರೆಯುತ್ತಿದ್ದ ಅಶೂನ್ನ ಅವರ
ಪತ್ನಿ ಶ್ರೀಮತಿ ಸುಜಾತಾ ರವರು
ಏನ್ರಿ ಇದು ತೀಸಿಸ್ ತರಹ ಬರೀತಾ ಇದ್ದೀರಾಂತ ಚುಡಾಯಿಸಿದ್ದು ಜ್ಞಾಪಿಸಿದರು.
ಅಶ್ವಥ್ ನಾರಾಯಣ ರೆಡ್ಡಿ ನಮ್ಮನ್ನೆಲ್ಲಾ
ಬಿಟ್ಟು ಆಕಸ್ಮಾತ್ತಾಗಿ ಇಷ್ಟು ಅರ್ಜೆಂಟಾಗಿ ಹೋಗ್ತಾರೇಂತ ಕಿಂಚಿತ್ತೂ ಭಾವಿಸಿರಲಿಲ್ಲ.
ತಳಿ ಅನ್ನೋ ಪುಟ್ಟ ಗ್ರಾಮದಲ್ಲಿ
ಶ್ರೀ ಮತ್ತು ಶ್ರೀಮತಿ ನರಸಿಂಗರೆಡ್ಡಿಯವರ
ಕ್ರಷಿಕ ಪರಿವಾರದಲ್ಲಿ ಏಕೈಕ ಪುತ್ರರಾಗಿ ಜನುಮಿಸಿದ ಶ್ರೀ ಅಶ್ವಥ್ ನಾರಾಯಣ್ ರೆಡ್ಡಿ ಯವರು ಅದೇ ಊರಲ್ಲಿ
ಬೆಳದು ಪ್ರೈಮರಿ, ಸೆಕೆಂಡರಿ,ಶಾಲಾ ವಿದ್ಯಾಭ್ಯಾಸವ ಮುಗಿಸಿ ಬೆಂಗಳೂರಿನ
ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಓದಿ
ಫಿಷರೀಸ್ ಕಾಲೇಜಿನಲ್ಲಿ ಸೇರಿಕೊಂಡರು.
ಸ್ನೇಹಿತನಾಗಿ ಜೊತೆ ಜೊತೆಯಲಿ
ಹಾಸ್ಟೆಲ್ನಲ್ಲಿ ,ಕಾಲೇಜಿನಲ್ಲಿ,
ಉದ್ಯೋಗದಲ್ಲಿ, ಮತ್ತೆ ನಿವೃತ್ತಿ ಜೀವನದಲ್ಲಿ
50 ವರ್ಷಕ್ಕೂ ಹೆಚ್ಚು ಸಮಯ
ಅಭಿನ್ನ ಮಿತ್ರನಾಗಿದ್ದ ಅಶು ನವೆಂಬರ್ ತಿಂಗಳ ಹದಿಮೂರರಂದು ಮಿತ್ರರೊಟ್ಟಿಗೆ
ವಾಕಿಂಗ್ ಹೋದವ ಧಿಡೀರ್ಂತ ಕುಸಿದು
ಹೃದಯಾಘಾತದಿಂದ ಮೃತನಾದ.
ಅಶೂನ ಫೋನ್ ಬೆಳಗ್ಗೆ 11ಘಂಟೆಗೆ
ಬಂದಾಗ ಮಾತಾಡಿದ್ದು ಅಶೂ ಅಲ್ಲ,
ಅವರ ಮಗ ಅಮೇರಿಕಾದಿಂದ ಬಂದಿದ್ದ ಅಭಿಷೇಕ್ ಈ ಶೋಕ ಸುದ್ದಿಯ ತಿಳಿಸಿದ.
ಮೊದ ಮೊದಲು ಶಾಕ್ ಆಯಿತು.
ನಂಬಲಾಗಲೇ ಇಲ್ಲಾ.
ನಂತರ ಮಂಜು ಧ್ರಡ ಪಡಿಸಿದರು.
ಹೋದ ತಿಂಗಳಷ್ಟೇ
ನಾವು ಭೇಟಿಯಾಗಿದ್ದು ಜ್ಞಾಪಕಕ್ಕೆ ಬಂತು...
ಆಗ ಗೊತ್ತಿರಲಿಲ್ಲ ಅದು ನಮ್ಮ
ಅಂತಿಮ ಭೇಟಿಯೆಂದು..
ಬೆಳಗ್ಗೆ ವಾಕಿಂಗ್ ಮುಗಿಸಿ
EV ಸ್ಕೂಟರ್ ನ್ನು ಜಯನಗರದ
ಮಯ್ಯ ಹೋಟೆಲ್ನ ಹೊರಗೆ ನಿಲ್ಲಿಸಿ
ಮೊದಲನೇ ಮಹಡಿಯ ಮೂಲೆಯಲ್ಲಿದ್ದ ಟೇಬಲ್ ಹತ್ತಿರ ಕುಳಿತಿದ್ದ ನನ್ನ ಬಳಿ ಬಂದು ಹಾಯ್, ಗುಡ್ ಮಾರ್ನಿಂಗ್ ಹೇಳಿ
ಬಂದು ಬಹಳ ಹೊತ್ತಾಯ್ತಾಂತ, ಕೇಳ್ದ
ಒಂದು ಚೂರೂ ಮೀಸೆ ದಾಡಿಯಿಲ್ಲದ ನುಣ್ಣನೆಯ ಕಾಂತಿಯುಕ್ತ
ಆಕರ್ಷಕ ಮುಖ,ಗೋಧಿ ಬಣ್ಣ
ಚೂಪಾದ ಮೂಗು, ವಿಶಾಲಾಕ್ಷಿಗಳು,
ಸ್ವಲ್ಪ ಹೈಟ್ ಕಮ್ಮಿ,ಅಷ್ಟೇ
ಕುಳ್ಳಾಂತ ಹೇಳಲಾಗದ ಎತ್ತರ
ಹಾಗೇಯೇ ಅವನನ್ನ
ಅವಾಕ್ಕಾಗಿ ನೋಡ್ತಾ ಕುಳಿತಿದ್ದ ನನಗೆ
ಅವನು ಹೇಳಿದ್ದು ಯಾವುದೂ ಕಿವಿಗೆ
ಬೀಳಲೇ ಇಲ್ಲಾ...
ಐವತ್ತು ವರುಷಗಳಿಗೂ ಹೆಚ್ಚಾಗಿ
ಅಶ್ವಥ್ ನ ನೋಡ್ತಾ ಇದ್ದೀನಿ
ಏನೊಂದೂ ಬದಲಾವಣೆ ಇಲ್ಲಾ
ವಿದ್ಯಾರ್ಥಿಗಳಾಗಿದ್ದಾಗ ಮೀಸೆ ಇತ್ತು
ಈಗಿಲ್ಲಾ,..
ಮುಖ ಲಕ್ಷಣವಾಗಿ, ತಲೆ ಬಾಚಿ
ಶುಭ್ರವಾದ, ಇಸ್ತ್ರಿ ಹಾಕಿದ ಅಂಗಿ,
ಆದರೆ, ಇತ್ತೀಚಿಗೆ ಕೆಂಪು,ಹಳದಿ,ಹಸಿರು
ಬಣ್ಣ ಬಣ್ಣದ ಟೀ ಶರ್ಟ್ ಗಳನ್ನು ಉಡಲು
ತೊಡಗಿದ್ದ. ಅಶೂಗೆ ಪ್ರಸ್ತುತಿಗಾಗಿ
ಹತ್ತಕ್ಕೆ ಹತ್ತು ಅಂಕಗಳನ್ನು
ಧಾರಾಳವಾಗಿ ಕೊಡಬಹುದಿತ್ತು.
ವಾಕಿಂಗ್, ಯೋಗ, ಶಾಖಾಹಾರಿ, ತೋಟಗಾರಿಕೆ, ದೇವಸ್ಥಾನಗಳ ಪುನಃರುತ್ಥಾನ,ಸಮಾಜ ಸೇವಾ
ಇವೆಲ್ಲಾ ಸೇವಾ ನಿವೃತ್ತಿಯ ನಂತರ
ಬೆಳೆಸಿಕೊಂಡ ಬಹುಮುಖ ಹವ್ಯಾಸಗಳು.
ಅದೇ ನುಣ್ಣನೆಯ ನಗು ಮುಖ,
ಕೈ ತೊಳೆದು ಕೊಂಡು ಬಂದು
ಸಿಂಗಲ್ ಇಡ್ಲಿ, ಸಿಂಗಲ್ ವಡೆ,
ಆರ್ಡರ್ ಕೊಟ್ಟು ಕುಳಿತು, ಕಾಫಿ
ಮಾತು-ಕಥೆಯೆಲ್ಲಾ ಮುಗಿಸಲು
ಸಮಯ ಕಳೆದಿದ್ದು ಗೊತ್ತೇ ಆಗಲಿಲ್ಲಾ...
ಅಶೂ ಕೈ ತೊಳೆಯೋದರ ಬಗ್ಗೆ
ಇಷ್ಟು ಲೈಟಾಗಿ ಹೇಳಿ ಮುಗಿಸಲಾಗದು
ವಾಶ್ ಬೇಸಿನ್ ನೋಡಿದ್ರೆ ಕೈ ತೊಳೆಯ
ಬೇಕು, ಬಾರೋ ಪಿಕ್ಚರ್ ಗೆ ಹೋಗೋಣ
ಅಂತಂದ್ರೆ ಒಂದು ನಿಮಿಷ ಅಂತ ಹೋಗಿ
ಕೈ ತೊಳ್ಕೊಂಡು ಬರೋನು
ನಾವು ಬ್ಯಾರಕ್ಪುರದಲ್ಲಿ ದ್ದಾಗ ತರಕಾರಿ ಕಟ್ ಮಾಡೋಕೆ ಮುಂಚೆ, ಮಾಡಿದ್ಮೇಲೆ
ಅಡಿಗೆ ಮಾಡೋಕೆ ಮುಂಚೆ,
ಮಾಡುವಾಗ,ಮಾಡಿದ್ಮೇಲೆ
ಕೈ ತೊಳೆಯದೆ ಇರಲಾರ.
ಅಶೂ ಪರ್ಸನಲ್ ಸ್ವಚ್ಛತೆಗೆ
ನೀಡುತ್ತಿದ್ದ ಪ್ರಾಮುಖ್ಯತೆ ಸ್ವಲ್ಪ ಅತಿ
ಅಂತ ಅನಿಸಿದ್ರುವೇ ಈ ಒಳ್ಳೆಯ
ಅಭ್ಯಾಸಕ್ಕಾಗಿ ಅವನಿಗೆ ನಮ್ಮ ಬ್ಯಾಚ್ ನ
ಮಿಸ್ಟರ್ ಕ್ಲೀನ್ ಅಂತ ಪಟ್ಟ ಕೊಟ್ಟಿದ್ವಿ.
ಕ್ಲಾಸ್ಸಿನಲ್ಲಿ ಫಷ್ಟು, ಓದಿನಲ್ಲಿ ಫಷ್ಟು
ಎಲ್ಲಾ ವಿಷಯಗಳಲ್ಲಿ A ಗ್ರೇಡ್
ನಾಲಕ್ಕಕ್ಕೆ ನಾಲಕ್ಕು CAGP ಗಳಿಸಿದವ
BFScಯಲ್ಲಿ ಫಸ್ಟ್ Rank
MFSc., ಯಲ್ಲಿಯೂ ಮೊದಲಿಗ
ಹಾಗೆಯೇ ARS ನಲ್ಲಿಯೂ ಸಹ
ಪ್ರತಿಯೊಂದು ಶೈಕ್ಷಣಿಕ ಸೋಪಾನದಲ್ಲಿಯು
ಹಲವಾರು ಚಿನ್ನದ ಪದಕಗಳನ್ನು ಗಳಿಸಿದವ ಪರಿಶ್ರಮಿ, ಬುದ್ಧಿವಂತ, ತೇಜಸ್ವಿ..
ಓದುವದರಲ್ಲಿಯಷ್ಟೇ ಸಾಟಿಯಿಲ್ಲದವಾಂತ
ಅಂದುಕೊಂಡಿದ್ರೆ
ಕ್ರೀಡಾ ಸ್ಪರ್ಧೆಯಲ್ಲಿಯು ಸಹ ಮೊದಲಿಗ
ನಮಗಿನ್ನೂ ಆಗ ಗೊತ್ತೇ ಇರಲಿಲ್ಲ
ಕಪ್ಪೆ ಕುಣಿತಕ್ಕೆ,
ಹಾಫ್ ಸ್ಟೆಪ್ ಜಂಪ್ ಅಂತ ಹೆಸರಿದೇಂತ ಅದರಲ್ಲಿಯೂ ಸಹ
ನಮ್ ಅಶೂಗೆ ಫಸ್ಟ್ ಪ್ರೈಜ್...
ಬಲು ಚೂಟಿ,ಚುರುಕು, ಕ್ರೀಡಾಪಟು
ಕಬಡ್ಡಿ, ವಾಲಿಬಾಲ್ ತಂಡದಿಂದ
ಯೂನಿವರ್ಸಿಟಿಯನ್ನು ಪ್ರತಿನಿಧಿಸಿದ
ಕ್ರೀಡಾ ಪಾರಂಗತ..
ಬಹುಮುಖ ಪ್ರತಿಭಾಶಾಲಿ.
ಆದ್ರೆ ಮತ್ಸ್ಯ ವಿಜ್ಞಾನಿಯಾಗಿ ಶೋಭಿಸಬೇಕಾದ ಅಶೂಗೆ
ದೊರಕ್ಕಿದ್ದೆಲ್ಲಾ ಕಹಿ ಅನುಭವಗಳೇ
ಹೆಸರು ಕೇಳಿದ್ರೇನೇಬೆಚ್ಚಿ ಬೀಳೋಂತಹ
ಪದಸ್ಥಾಪನೆಗಳು ಸುಂದರ್ ಬನದ
ಕಾಕ್ ದ್ವೀಪದಲ್ಲಿ prawns ಗಳ ಜೊತೆ ಬ್ರೀಡಿಂಗ್, ಸಾಕಣೆ ಅದೂನೂ
ಗಂಗಾ ಸಂಗಮವಾಗೋ ಪುಣ್ಯಕ್ಷೇತ್ರದಲ್ಲಿ
ಶೋಧ ಕಾರ್ಯ, ಹಾಗೆಯೇ ಓಡಿಸ್ಸಾದ
Mangrove ಫಾರೆಸ್ಟ್ ನ ಭೀತ್ರಕಾಣಿಕ
ಉಪ್ಪು ನೀರಿನ ಅತಿ ದೊಡ್ಡ ಮೊಸಳೆಗಳ
ತಂಗುದಾಣ, ಬೈತರಣಿ ಮತ್ತೆ ಬ್ರಾಹ್ಮನಿ
ನದಿಗಳು ಸಮುದ್ರವ ಸೇರುವ ಭಯಾನಕ
ಸ್ಥಳದಲ್ಲಿ ನಮ್ ಅಶ್ವಥ್ ಸೀನಿಯರ್ ವೆಂಕಿ
ಜೊತೆಗೆ ಕ್ಯಾಂಪ್ ಹಾಕಿ ಹಿಲ್ಸಾ, ಭೇಟ್ಕೀಯ ಸಂತಾನೋತ್ಪತ್ತಿ, ಹಾಗೇ ಓಡಿಸ್ಸಾದ ಸಮುದ್ರವ್ವನ್ನಂಟಿ ಕೊಂಡ ಚಿಲಿಕಾ ಲೇಕ್ ನ ತಟದಲ್ಲಿ ಎಷ್ಟೋದಿನಗಳು
ರಾಬಿನ್ಸನ್ ಕ್ರೂಸೋ ತರಹ
ನಾಗರಿಕತೆಯ ಸೋಂಕಿಲ್ಲದ ಮರು ಭೂಮಿಯಲ್ಲಿ ವಾಸ ಮಾಡಿ
ಬ್ರಾಕಿಶ್ ವಾಟರ್ ಮೀನುಗಳನ್ನು
ಸ್ವಚ್ಛಂದ ವಾತಾವರಣದಲ್ಲಿ ಸಂಗ್ರಹಿಸಿ ನಿಯಂತ್ರಿತ ಸಂತಾನೋತ್ಪತ್ತಿ, ಮೀನು ಮರಿಗಳ ಸಾಕಣೆಯಲ್ಲಿ ಪ್ರಪ್ರಥಮರಾಗಿ ಯಶಸ್ವಿಯಾಗಿದ್ದು ಅದ್ವಿತೀಯ.
ಎಲ್ಲವನ್ನೂ ತ್ಯಾಗ ಮಾಡಿ ಪರಿಶ್ರಮ ಪಟ್ಟರೆ ಅವರ ಬಾಸ್ ಅವನನ್ನು
ಯೂರೋಪ್ ನಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ
ಅಡಚಣೆ ಉಂಟು ಮಾಡಿದ್ದು ಮತ್ಸ್ಯ ವಿಜ್ಞಾನವ ತೊರೆಯಲು ಕಾರಣವಾದದ್ದು
ದುರಾದ್ರಷ್ಟ.
ಆದ್ದರಿಂದ ಜಿಗುಪ್ಸೆ ಯಾಗಿ
ವೃತ್ತಿ ಬದಲಾಯಿಸಿ
ಬ್ಯಾಂಕ್ ಆಫ್ ಇಂಡಿಯಾವ ಸೇರಿ ಮೂವತ್ತು ವರ್ಷಕ್ಕೂ ಹೆಚ್ಚಾಗಿ
ಸೇವೆ ಸಲ್ಲಿಸಿ ಉನ್ನತ ಪದವಿಯ ಗಳಿಸಿ ಸೇವಾನಿವ್ರತ್ತನಾಗಿ ಬೆಂಗಳೂರಿನಲ್ಲಿ
ಆರಾಮವಾಗಿದ್ದರು.
ನಮ್ ಅಶೂನ್ನ
ಮತ್ಸ್ಯವಿಜ್ಞಾನ ಕಳೆದು ಕೊಂಡಿದ್ದು
ಒಂದೆಡೆಯಾದರೆ
ಆತ್ಮೀಯಮಿತ್ರ
ಆಕಸ್ಮಿಕವಾಗಿ ನಮ್ಮನ್ನು ಬಿಟ್ಟು ಅಗಲಿದ್ದು ಇನ್ನೊಂದೆಡೆ...
ಅದೇ ಮೂಲೆ, ಅದೇ ಟೇಬಲ್ಲು,
ಅದೇ ಇಡ್ಲಿ ಅದೇ ವಡೆ
ಅಶ್ವಥ್ ಗಾಗಿ ಕುಳಿತು ಕಾಯ್ತಾ ಇದ್ದೀನಿ
ಆದ್ರೆ ಬರಲೇ ಇಲ್ಲಾ..
ವಾಕಿಂಗ್ ಗೆ ಹೋಗಿದ್ದಾನೆ, ಈಗ
ಬರುತ್ತಾನೇ ಅನ್ನೋ ಸ್ತುಪ್ತ ಮನಸ್ಸಿಗೆ
ಬರೋಲ್ಲ ಅಂತಾ ಗೊತ್ತಿದ್ದೂ
ಕಾಯ್ತಾ ಇರೋದು ಸಾಂತ್ವನಕ್ಕಾಗಿಯೋ
ಅಥವಾ ಅಗಲಿಕೆಯಒಪ್ಪದ ಮನಸ್ಸಿನ
ತಳಮಳವೋ...
ಅಶೂ ನಮ್ಮೆಲ್ಲರ ಅಚ್ಚುಮೆಚ್ಚಿನ
ಸ್ನೇಹಿತ, ತತ್ವ ಜ್ಞಾನಿ, ಮೃದುಭಾಷಿ, ಹ್ಯಾಂಡ್ಸಮ್, ಬುದ್ಧಿವಂತ
ಮುಗುಳ್ನಗೆಯ ಒಡೆಯ, ಪರೋಪಕಾರಿ ಹೀಗೇ ಹಲವಾರು ಗುಣವಾಚಕಗಳನ್ನು ಜೋಡಿಸ್ತಾ ಹೋಗಬಹುದು
ಅಶ್ವಥ್ ನ ಕಳೆದುಕೊಂಡು
ದುಃಖದಲ್ಲಿ ಪರಿತಪಿಸಿತ್ತಿರುವ
ಅವರ ಪತ್ನಿ ಶ್ರೀಮತಿ ಜಿ ಸುಜಾತಾರವರಿಗೆ
ಏಕೈಕ ಮಗ ಶ್ರೀ ಎ. ವಿ ಅಭಿಷೇಕ್ ಗೆ ಮತ್ತು ಸೊಸೆ ಶ್ರೀಮತಿ ಕೆ. ತೇಜಶ್ವಿನಿ.
ಬಂಧುಗಳಿಗೆ
ದೇವರು ಸಾಂತ್ವನವ ನೀಡಲಿ.
ದಿವಂಗತರ ಆತ್ಮಕ್ಕೆ ಚಿರ ಶಾಂತಿ ದೊರಕಲಿ
ಪರಮಾತ್ಮನಲ್ಲಿ ಐಕ್ಯರಾದ ಅಶೂಗೆ
ಅವರ ಜೊತೆಗಾರರು ಅರ್ಪಿಸುವ ವಿನಮ್ರ
ಶ್ರದ್ದಾಂಜಲಿ..
ಓಂ ಶಾಂತಿ, ಓಂ ಶಾಂತಿ, ಓಂ ಶಾಂತಿ.
1975 BFSc ನ ಪರವಾಗಿ
B. R. Jagadeesha
A.Jayasheela Reddy
P. Kondareddy
P.T. Lakshman Reddy
G. Lakshmipathi
T. K. Lokanath
M. Manjunath
M. M. Maragal
R. R. Mohite
Ram Mohan Menon
P. Ram Mohan Reddy
Sudhir B Patil Kulkarni
K. Suresh
Vijaykumar M. Baragi
ಶ್ರದ್ದಾಂಜಲಿ ನಮ್ ಸೀನಿಯರ್ಸ್ ಪರವಾಗಿ
ಸಿ. ವಾಸುದೇವಪ್ಪ, ಬಿ. ವೆಂಕಟೇಶ್ ಮತ್ತೆ ಅನಾಕನೇಕ ಮಿತ್ರರು...
ನಮ್ಮೊಟ್ಟಿಗೆ ತೆಗೆದು ಕೊಂಡ ಕೆಲ ಚಿತ್ರಗಳು
ಹದಿನೈದು ಮಿತ್ರರು ಈಗ ಹದಿಮೂರು
ನಾವೆಲ್ಲರೂ
ಅಗಲಿದ ಮಿತ್ರನಿಗೆ ಭಾವಪೂರ್ವ ಶ್ರಧ್ದಾಂಜಲಿ ಅತಿ ಸುಂದರವಾಗಿ ಮೂಡಿ ಬಂದಿದೆ. ಎಂದಿನಂತೆ ಸುಲಲಿತ ಬರಹ. ಧನ್ಯವಾದಗಳು ಮತ್ತು ಶುಭಾಷಯಗಳು.
ಪ್ರತ್ಯುತ್ತರಅಳಿಸಿಬಹಳ ಚೆನ್ನಾಗಿ ಮೂಡಿಬಂದಿದೆ. ಹಳೆಯ ನೆನಪುಗಳನ್ನು ಚೆನ್ನಾಗಿ ವಿವರಿಸಿದೆ.
ಪ್ರತ್ಯುತ್ತರಅಳಿಸಿಅಶೂ ಮಗನ ಮದುವೆಯಲ್ಲಿ ನಾನಿಲ್ಲ
ಪ್ರತ್ಯುತ್ತರಅಳಿಸಿನನ್ನ ಮಗಳ ಮದುವೆಯಲ್ಲಿ ಅಶೂ ಇಲ್ಲಾ
ಫೋಟೋ ಶೂಟ್ ನಲ್ಲಿ ಇಬ್ಬರೂಇಲ್ಲಾ
ಡಿಸೆಂಬರ್ 1,2 ಬೆಂಗಳೂರಲ್ಲಿ ಅಶೂ ಮನೆಯ ಮದುವೆ, ಡಿಸೆಂಬರ್ 3 ಮತ್ತೆ 4 ನನ್ನ ಮಗಳ ಮದುವೆ ಚೆನ್ನೈ ನಲ್ಲಿ ಹೀಗಾಗಿ ಒಬ್ಬರೊನೊಬ್ಬರು ಮಿಸ್ ಮಾಡ್ಕೊಂಡ್ವಿ ಈಗ ಅಶೂ ನ ಪೂರ್ಣತಃ ಕಳೆದು ಕೊಂಡಿದ್ದೀನಿ.
This tribute to Ashwath Sir is deeply touching and beautifully written. The way you’ve woven personal memories with heartfelt emotion makes the narrative resonate long after reading. Your vivid storytelling, like waiting at Mayya’s Hotel with the idli and coffee that became a symbol of your last moments together, is especially moving. The blog also beautifully reflects how friendships evolve over time, what a decades-old companionship looks like in its later years, and how the memories we share with friends leave a forever imprint on our hearts.
ಪ್ರತ್ಯುತ್ತರಅಳಿಸಿ