*ಬೂದಿಗೆರೆ ಭೂತ*
ಬೂದಿಗೆರೆ ಭೂತ
ಬೂದಿಗೆರೆ ಗ್ರಾಮದ ಊರ ಹಿರಿಯರು ಕೂಡಿ,
ಚೌಡೇಶ್ವರಿ ದೇವಿ ಹುಣ್ಣಿಮೆ ಹಬ್ಬದ ಪ್ರಯುಕ್ತ ಶನಿ ಮಹಾತ್ಮನ ಪ್ರಭಾವ/ ರಾಜ ವಿಕ್ರಮಾದಿತ್ಯನ ಕಥೆ ನಾಟಕವ ಆಯೋಜಿಸಿದ್ದರು.ಶನಿವಾರ ರಾತ್ರಿ 9.30ಗೆ ನಮೋ ವೆಂಕಟೇಶ ನಮೋ ತಿರುಮಲೇಶ ಎಂದು
ವಿಷ್ಣು ಸ್ತುತಿ ಕೊಳವೆ ಸ್ಪೀಕರ್ ನಲ್ಲಿ ಕೇಳಿದ,
ಮಂಜು ಮತ್ತು ಅವ್ನ ತಮ್ಮ ರವಿ
ಶಾಲು, ದಿಂಬು, ಕಂಬಳಿ,
ಎಲ್ಲಾ ಬಗಲಲಿಟ್ಟು ಕೊಂಡು
ಬಿರ್ ಬಿರ್ನೆ ಅಮ್ಮ ಲಕ್ಷ್ಮಮ್ಮನ
ಜೊತೆ ನಾಟಕ ನೋಡಲು ನಡೆದಿದ್ದರು.
ಪೂರಾ ಬೂದಿಗೆರೆಯ ಜನತೆ ನೆರದಿತ್ತು.
ಕಥೆ ಹೇಳುವ ಸೂತ್ರಧಾರ
ಲಾಲಿಸು ಸುಮತಿ
ಪೇಳುವೆ ಸುಮತಿ
ನಿಷ್ಠೆಯಿಂದಲೇ... ಎಂದು ಪ್ರಾರಂಭಿಸಿಯೇ ಬಿಟ್ಟ.
ಶನಿದೇವರ ನಾಟಕ ಒಂದ್ಸಲ ನೋಡೋಕೆ ಕೂತ್ಕೊಂಡ್ರೆ ಏಳಂಗಿಲ್ಲ, ನಿದ್ದೆ ಮಾಡಾಂಗಿಲ್ಲ. ನಾಟಕಕಿಂತಲೂ ಪಾತ್ರಧಾರಿಗಳ ವೇಷ ಭೂಷಣ ನೋಡೋದಿಕ್ಕೆ ವಿಚಿತ್ರವಾದ್ರುವೇ ಚೆನ್ನಾಗಿತ್ತು. ನೋಡ್ತಾ ನೋಡ್ತಾ ಮುಂಜಾನೆಯ ಮಂಜು ದ್ರಾಕ್ಷಿ ತೋಟಗಳನ್ನು ನಿಧಾನವಾಗಿ ಹಬ್ಬಿ ಮಂಜು,ರವಿ ಕುಳಿತಿದ್ದ ರಂಗಮಂಚದ ಬಯಲ ವ್ಯಾಪಿಸ ತೊಡಗಿತ್ತು. ಮುಸುಕು ಮುಸುಕಾಗಿದ್ದ ಬಾನು ಬೆಳಗಾಯಿತು ಅನ್ನೋದರಲ್ಲಿ,
ಜಯ ಜಯ ಶನಿದೇವಾಂತ ಮಂಗಳಾರತಿ
ಹಾಡಲು ಸೀ ಅನ್ನ ಪ್ರಸಾದ ಇಸ್ಕೊಂಡು
ಫೆಬ್ರವರಿ ತಿಂಗಳ ಚಳಿಯಲ್ಲಿ ಶಾಲು
ಹೊದ್ದು ಕೊಂಡು ಗುಮ್ಮಾತಾಯಿ ತರಹ
ಮನೆ ತಲುಪಿ ನಿದ್ದೆ ಮಾಡಿದ್ದಷ್ಟೇ ಜ್ಞಾಪಕ.
ಯಾವಾಗ ಎದ್ರೂಂತ ಗೊತ್ತೇ ಆಗಲಿಲ್ಲ.
ಸುಮಾರು ಐವತ್ತು ಅರುವತ್ತು ವರುಷಗಳ
ಹಿಂದಿನ ಘಟನೆಯಿದು.
ಭಸ್ಮಾಸುರನನ್ನು ಭಸ್ಮ ಮಾಡಿದ ಇತಿಹಾಸವಿರುವ ಭಸ್ಮರೇಖಾಪುರಿ ಕೊನೆಗೆ ಬೂದಿಗೆರೆ ಆಗಿ ಸುತ್ತ ಮುತ್ತ ಇದ್ದ ಹಿತ್ತರಹಳ್ಳಿ, ಹಂದ್ರಹಳ್ಳಿ, ಅಮಾನಿಕೆರೆ, ಚೌಡಪ್ಪನ ಹಳ್ಳಿ ಹೀಗೇ ಹಲವಾರು ಹಳ್ಳಿಗಳು ಬೂದಿಗೆರೆಯ
ಶೋಭೆಯನ್ನು ಹೆಚ್ಚಿಸಿತ್ತು.
ಮಂಜು ಮತ್ತು ರವಿ ಯವರ ತಂದೆ
ಮುತ್ತಪ್ಪ ಬೂದಿಗೆರೆಯ ಸಭ್ಯ ವ್ಯವಸಾಯಿ
ದ್ರಾಕ್ಷಿ ತೋಟ, ಟೊಮೇಟೊ, ಕ್ಯಾರಟ್,
ಹೂಕೋಸು, ಹುರುಳಿಕಾಯಿ,ಹೂವು ಮುಂತಾದ್ದು ಬೆಳೆದು ಬೆಂಗಳೂರು ಕಲಾಸಿಪಾಳ್ಯದ
ಕೆ.ಆರ್.ಮಾರುಕಟ್ಟೆಗೆ ತಲುಪಿಸಿ ಬೂದಿಗೆರೆಯ
ಧನವಂತರಾದವರು. ಹಾಗೆಯೇ,
ಅವರು ಪಶು ಪಾಲನೆಯಲ್ಲಿ ಅಗ್ರಜರು.
ಹಾಲು ಮೊಸರು, ತರಕಾರಿ ಬೀಜಗಳನ್ನು
ಮನೆಯಿಂದ ಅಕ್ಕಪಕ್ಕದ ಎಲ್ಲಾ ಹಳ್ಳಿ
ಊರುಗಳಿಗೆ ಸಪ್ಲೈ ಮಾಡಿ
ಒಳ್ಳೆ ಹೆಸರು ಗಳಿಸಿದವರು.
ಮಂಜು, ಅವರಮ್ಮ ಲಕ್ಷ್ಮಮ್ಮನ
ತರಹ ಸರಳ,ಸೌಮ್ಯ.
ಸಿಕ್ರೆ ಓಕೆ,ಸಿಗಲಿಲ್ಲಾಂದ್ರೂ ಓಕೆ.
ಆದ್ರೆ ರವಿ ಸ್ವಲ್ಪ ತುಂಟ, ಹಠಮಾರಿ.
ಒಂದ್ಸಲ ಏಳ್ನೇ ಕ್ಲಾಸ್ಸಲ್ಲಿ ಫಸ್ಟ್ ಬಂದದಕ್ಕೆ
ಮುತ್ತಪ್ಪನವ್ರು ಮಂಜುಗೆ ಪೈಲಟ್ ಪೆನ್ನು
ಕೊಟ್ಟು ಪ್ರೋತ್ಸಾಹಿಸಿದ್ರೆ,
ಐದನೇ ಕ್ಲಾಸ್ ಓದುತ್ತಿದ್ದ
ರವಿಗೆ ಕೋಪ.
ಪ್ರಶ್ನೆ ಅದಲ್ಲ ಆ ಸಂಜೆ,
ಮಂಜು ಹತ್ತಿರ ಇರೋದು
ರವಿಗೆ ಬೇಕೇ ಬೇಕು. ಪೆನ್ನಿಗಾಗಿ ಇಬ್ಬರ
ನಡುವೆ,ಜಟಾಪಟಿ, ಜಿದ್ದಾ ಜಿದ್ದಿ,
ಈ ಸಲ ಕೋಪ ಪಟ್ಟ ಮುತ್ತಪ್ಪನವ್ರು
ರವಿಗೆ ಬೆತ್ತದಲ್ಲಿ ಎರಡು ಬಾರಿಸಿ ಬುದ್ದಿ ಹೇಳಿದ್ರೆ,
ಕೇಳ್ದೆ ಮನೆ ಬಿಟ್ಟು ಹೋದವ
ರಾತ್ರಿಯಾದರೂ ಬರಲಿಲ್ಲ.
ಲಕ್ಷ್ಮಮ್ಮನಿಗಂತೂ ದುಃಖ, ಅವರು ಅಳೋದನ್ನ ನೋಡಿ ಎಲ್ರೂ ರವಿ ನಾ ಹುಡುಕ್ಕೊಂಡು ಹೋದ್ರೆ
ಶ್ರೀ ದೇಶನಾರಾಯಣಸ್ವಾಮಿ ದೇವಸ್ಥಾನದ
ಮೆಟ್ಟಿಲ ಮೇಲೆ ಕುಳಿತುಕೊಂಡು ಪುಳಿಯೋಗರೆ ಪ್ರಸಾದವ ತಿನ್ನುತ್ತಿದ್ದ. ಏನೂ ನಡೀಲಿಲ್ಲಾನ್ನೋ ತರಹ ಇದ್ದ ರವಿಯನ್ನ ಸೋದರ ಮಾವ ರಘು ಕರ್ಕೊಂಡು ಬಂದ ಮೇಲೆ ಲಕ್ಷ್ಮಮ್ಮ ನಿಟ್ಟುಸಿರು ಬಿಟ್ರು. ಆ ರಾತ್ರಿ ರಘು ಮಾಮ ರವಿ,ಮತ್ತು ಮಂಜುಗೆ ಬೂದಿಗೆರೆ ಭೂತದ ಕಥೆ ಹೇಳೊಕೆ
ಶುರು ಮಾಡಿದರು.
ಗೋಪಾಲ ಗೊತ್ತಲ್ಲಾ,
ನಿಮ್ ದೊಡ್ಡಪ್ಪನ ಮನೆಯಲ್ಲಿ
ದನ ಕಾಯೋವ್ನು,
ಅವನು ಒಂದ್ಸಲ ಚೌಡಪ್ಪನ ಹಳ್ಳಿ
ಒಂಟಿ ರಸ್ತೆ ಯಲ್ಲಿ ಅಮಾವಾಸೆ ರಾತ್ರಿ
ಒಬ್ಬನೇ ಸೈಕಲ್ ನಲ್ಲಿ ಹೋಗ್ತಾ ಇದ್ದ.
ಬೂದಿಗೆರೆ ಕೆರೆ ಒಡ್ಡಲ್ಲಿದ್ದ ಹುಣಿಸೇಮರವ
ದಾಟುತ್ತಿದ್ದಾಗ, ಇದ್ದಕಿದ್ದ ಹಾಗೇ ಯಾರೋ
ಸೈಕಲ್ ಹಿಡ್ಕೊಂಡಹಂಗೆ.
ತಿರುಗಿ ನೋಡಿದ್ರೆ ಯಾರೂ ಇಲ್ಲ.
ಪೆಡಲ್ ಜೋರ್ ಜೋರಾಗಿ ತುಳೀತಾನೇ ಇದ್ದ.
ಆದ್ರೆ ಹಾಳು ಸೈಕಲ್, ಮುಂದಕ್ಕೆ ಹೋಗ್ಲೇ ಇಲ್ಲಾ. ಎಲ್ಲಾ ದೇವರುಗಳ ಹೆಸರು ಮನಸಲ್ಲೇ
ನೆನಸ್ಕೊಂಡು, ಏಕಂದ್ರೆ ಬಾಯಲ್ಲಿ ಶಬ್ದ
ಬರಲೇ ಇಲ್ಲಾ ಬರೀ ಗಾಳಿ ಬಂತು.
ಹೇಗೋ ಮನೆ ಹೋಗಿ ಸೇರಿದ್ ಮೇಲೆ
ಉಸಿರಾಟ ಸಾಮಾನ್ಯವಾಯಿತು.
ಈ ಕಥೆ ಯಾಕೆ ಹೇಳಿದೆ ಅಂದ್ರೆ ಬೂದಿಗೆರೆ ಭೂತ ರಾತ್ರಿಯಾದ್ರೆ ಕೆರೆಯ ಹತ್ತಿರ ಕಾಯ್ಕೊಂಡು ಕೂತಿರುತ್ತೆ.
ಅದಕ್ಕೆ ರವಿಗೆ ಒಬ್ಬನೇ ಎಲ್ಲಿಗೂ
ಹೋಗಬೇಡಾಂತ ತಿಳುವಳಿಕೆ ಕೊಡ್ತಾ ಇದ್ರು.
ಇದರಲ್ಲಿ ನಿಜ ಎಷ್ಟೋ, ಸುಳ್ಳು ಎಷ್ಟೋ.
ಆದ್ರೆ ಆ ಹುಣಿಸೇಮರದಲ್ಲಿ
ಮುನೇಶ್ವರನ ದೇವಸ್ಥಾನದ ಹತ್ತಿರ ಇದ್ದ
ಯಾರೋ ಒಬ್ಬ ಹೊಟ್ಟೆನೋವು ತಾಳಲಾರದೆ
ನೇಣು ಹಾಕೊಂಡ್ ತೀರ್ಕೊಂಡು ಬಿಟ್ಟ.
ಆ ಮರದಲ್ಲಿ ಅವನ ಆತ್ಮ ದೆವ್ವ ಆಗಿ ರಾತ್ರಿಯಲ್ಲಿ ಕಾಡಿಸ್ತೈತೇಂತ ಊರ ಜನರ ನಂಬಿಕೆ.
ಅದೊಂದು ದಿವಸ ಮುತ್ತಪ್ನವರು ರವಿಗೆ
ದೊಡ್ಡಪ್ಪನ ಮನೆಯಿಂದ ತುಪ್ಪ ತರೋಕೆ ಹೇಳಿದ್ರು. ಒಲ್ಲದ ಮನಸಿನಿಂದ ಚೌಡಪ್ಪನ ಹಳ್ಳಿಗೆ ಹೋದವನಿಗೆ ದೊಡ್ಡಮ್ಮನ ಮನೆಯಲ್ಲಿ ದೊಡ್ಡ ಔತಾಣವೇ ಕಾದಿತ್ತು. ಒಬ್ಬಟ್ಟು, ಗಿಣ್ಣು ಹಾಲುಕೋವ
ಎಲ್ಲಾ ತಿಂದು ಹೊರಡೋ ಹೊತ್ತಿಗೆ ಸಂಜೆಯಾಗಿತ್ತು.
ಕೈಯಲ್ಲಿ ತೂಗು ಪಾತ್ರೆ ತುಂಬಾ ತುಪ್ಪ ಕೊಟ್ಟು ಕಳಿಸಿದ್ರು. ಗೋಧೂಳಿ ಮುಸ್ಸಂಜೆ, ಹಾಗೇ
ಹಾಡು ಹಾಡಿಕೊಂಡು ಬಂದವನಿಗೆ ಬೂದಿಗೆರೆ
ಕೆರೆಯ ಒಡ್ಡಿಗೆ ಬಂದಿದ್ದು ಗೊತ್ತೇ ಆಗಲಿಲ್ಲ.
ರವಿ, ಏನ್ ನೋಡದ್ನೋ, ಏನಾಯ್ತೋ
ಕಾಲು ಎಡರಿ ಕೆಳಗೆ ಬಿದ್ದ.
ಕಾಲಚಿಪ್ಪು ತರಿಸಿ ಹೋಗಿ
ಉರಿಯಕ್ಕೆ ಶುರುವಾಯಿತು.
ಹಾಗೂ ಹೀಗೂ ಅತ್ತುಕೊಂಡು
ಮನೆ ಸೇರಿದ ರವಿ ಬೇ ಬೇ ಬೇ
ಅಂತ ತೊದಲ್ತಾ ಬೆವತು ನೀರಾಗಿದ್ದ.
ಕೆರೆ, ಭೂತ, ಅಂತ ಸಂಬಂಧ ವಿಲ್ಲದೆ
ಏನೇನೋ ಹೇಳ್ತಿದ್ದ. ಹಾಗೇ ಊಟ
ಮಾಡದೇನೆ ಮಲಗಿಬಿಟ್ಟ. ದಯ್ಯ ಬಡಿದಂಗೇ
ಗೋಡೆ ನೋಡ್ಕೊಂಡ್ ಕೂತೇ ಇದ್ದ.
ಯಾಕೋ? ಏನಾಯ್ತೋ?
ಅಂತ ಕೇಳಿದ್ರೆ ಏನೂ ಜವಾಬಿಲ್ಲ.
ಸ್ವಲ್ಪ ಸ್ವಲ್ಪವಾಗಿ ರವಿ ಬೂದಿಗೆರೆ, ಹುಣಿಸೇಮರ ದೆವ್ವಾಂತ ಹೇಳ್ತಾ ಇದ್ದ, ಅಮ್ಮಂಗೆ ಚಿಂತೆ ಹಚ್ಚಿಕೊಂಡುಬಿಡ್ತು.ಅಮಾನಿಕೆರೆ ಗಿರಿಜಂಗೂ
ಇದೇ ಸಮಸ್ಯೆ. ಯಾರೋ ಆಗ್ದೇ ಇದ್ದವ್ರು
ಮಂತ್ರ ಮಾಟ ಹಾಕಿದ್ರೂಂತ, ಹಿತ್ತರಹಳ್ಳಿ
ಮುನಿಯನ ಹತ್ರ ಕರ್ಕೊಂಡ್ ಹೋಗಿ
ಭೂತ ಬಿಡಿಸಿದ್ರೂಂತ ಕೇಳಿದ್ರು.
ಆದ್ರೆ ಆತ ಪರಕೆ ತೆಗೊಂಡು ರಪರಪಾಂತ
ಹೊಡೆದು ಭೂತ ಬಿಡಿಸ್ತಾನೇ ಅಂತ,
ಅಷ್ಟೇ ರವಿಯ ಮುಖ ನಿಜವಾಗ್ಲೂ
ಭೂತ ಹಿಡ್ಕೊಂಡ ಹಂಗೆ ಬಾಡಿ ಹೋಯ್ತು
ಅಮ್ಮ ಬೇಡಮ್ಮಾ, ನಂಗೆ ಏನೂ ಆಗಿಲ್ಲಾ
ಅಂತ ನಿಜ ಹೇಳಲು ಪ್ರಾರಂಭಿಸಿದ
ಚೌಡಪ್ಪನಹಳ್ಳಿ ಯಿಂದ ತುಪ್ಪ ತೆಗೊಂಡು
ಬೂದಿಗೆರೆ ಹುಣಿಸೇಮರದ ಕಟ್ಟೆ ಬಳಿ
ಬಂದಾಗ ರಘು ಮಾಮ ಹೇಳಿದ ಕಥೆ
ಜ್ಞಾಪಕಕ್ಕೆ ಬಂತು. ಭಯದಲ್ಲಿ
ಏನ್ ನೋಡದ್ನೋ, ಏನಾಯ್ತೋ
ಕಾಲು ಎಡರಿ ಕೆಳಗೆ ಬಿದ್ದ.
ಕೈಲಿದ್ದ ತುಪ್ಪ ತುಂಬಿದ್ದ ತೂಗುಪಾತ್ರೆ
ಮುಚ್ಚಳ ಬೇರೆ, ಪಾತ್ರೆ ಬೇರೆಯಾಗಿ,
ಪೂರಾ ತುಪ್ಪ ಚೆಲ್ಲಿ ಹೋಯಿತು.
ಮನೆಗೆ ತುಪ್ಪ ಇಲ್ದೆ ಹೋದ್ರೆ,
ಅಪ್ಪ ಬೈತಾರೆ, ಹೊಡೀತಾರೇಂತ,
ಹೆದರ್ಕೊಂಡು,ಹುಟ್ಟು ಕಥೆ
ಜೋಡಿಸ್ಕೊಂಡು ನಾಟಕವಾಡಿದ.
ಗುಟ್ಟು ಹೊರಗಾಯ್ತು,
ಬೂದಿಗೆರೆ ಭೂತದ ಕಥೆ.
ಸರಿ, ಈ ಘಟನೆ ನಡೆದು,
ಅರವತ್ತು ವರ್ಷ ಮುಗೀತಾಲ್ಲಾಂತ,
ಈಗ ಹೋಗಿ ನೋಡಿದ್ರೆ, ಅಲ್ಲಿ
ಹುಣಿಸೇಮರಾನೂ ಇಲ್ಲಾ,
ಕಟ್ಟೆನೂ ಇಲ್ಲಾ,
ಒಡ್ದು ಇಲ್ಲಾ,
ಕೆರೇನೂ ಇಲ್ಲಾ,
ಆ ಜಾಗದಲ್ಲಿ ಈಗ 24 ಮಹಡಿಗಳ ಕಟ್ಟಡ.
ಏನೋ ಟವರ್ ಹೆಸರಲ್ಲಿ ಭೂತಾಕಾರವಾಗಿ
ನಿಂತು ಎಲ್ಲವನ್ನೂ ನುಂಗಿ, ನಗ್ತಾ ಇದ್ದಂಗೆ ಕಾಣಿಸ್ತು
*ಬೂದಿಗೆರೆ ಭೂತ*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ