ಹಣ್ಣೆಲೆ ಚಿಗುರಿದಾಗ

ಹಣ್ಣೆಲೆ ಚಿಗುರಿದಾಗ 
ತ್ರಿವೇಣಿಯವರಿಗೆ ನಮನ, ಸ್ಕೂಲ್ ಕಾಲೇಜು ದಿನಗಳಿಂದಲೂ ನಿಮ್ಮ ಕಥೆಗಳನ್ನು ಓದಿ ಬೆಳೆದ
ನನಗೆ, ಮೊನ್ನೆ ತಮಿಳು ನಾಡಿನ ವೇಲೂರಲ್ಲಿ 
ಐವತ್ತು ವರ್ಷಗಳಿಗೂ ಹೆಚ್ಚಾಗಿ ಯಶಸ್ವಿಯಾಗಿ ಸಂಸಾರ ನಡೆಸಿಕೊಂಡು ಬಂದ 70 ವರ್ಷ ತುಂಬಿದ ಸುಜಾತಕ್ಕನ ಮನೆಗೆ ಹೋಗಿದ್ದೆ. ಅಷ್ಟೊಂದು ಸಂತೋಷ, ಮನಬಿಚ್ಚಿ ನಾವಿಬ್ಬರೂ ಕನ್ನಡದಲ್ಲಿ ಗಂಟೆಗಟ್ಲೆ ಮಾತಾಡ್ಕೊಂಡ್ವಿ. (ಅದೇ ಮದುವೆಯಾದ ಹೊಸತರಲ್ಲಿ ನಾವಿಬ್ರು ಕನ್ನಡದಲ್ಲಿ ಮಾತಾಡಿ ಕೊಂಡಾಗ ಆವಮ್ಮ ಸುಜಾತಕ್ಕ ನ ಮಾಮಿಯಾರ್ ಅದೇನು ಕುಸುಕುಸೂಂತ ಕನ್ನಡದಲ್ಲಿಮಾತಾಡ್ತದ್ದೀರಾ ಅಂತ 
ಮುನಿಸ್ಕೊಂಡ್ರು...ಈಗ ಅವರಿಲ್ಲ ).
ಆಗ, ಅಕ್ಕನ್ನ ಹೈ ಸ್ಕೂಲ್ ದಿನಗಳಲ್ಲಿ ಸ್ಕೂಲ್ ಫಂಕ್ಷನ್ ನಲ್ಲಿ ಆಡಿ ಪ್ರಶಸ್ತಿ ಗಳಿಸಿದ ಹೂವು ಚೆಲುವೆಲ್ಲಾ 
ತಾನೆಂದಿತು ಹಾಡಿಗೆ ಡ್ಯಾನ್ಸ್ ಮಾಡಲು ಕೇಳಿದೆ 
ಅಕ್ಕ ಹಾಡಿನೊಡನೆ ಅಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದ್ರು. 
ನಿಮ್ಮ ಪ್ರತಿಯೊಂದು ಕಥೆಗಳಲ್ಲಿ ಆ ಕಾಲದಲ್ಲೇ ಅಷ್ಟೊಂದು ಕ್ರಾಂತಿಕಾರಿ ವಿಚಾರಧಾರೆ.
ಈಗ ಎಲ್ಲಿ ಹೋಯಿತು? ಸಂಕೀರ್ಣ ವಿಚಾರಧಾರೆಯ ಪುನ್ನರಾವೃತ್ತಿಯ ತಡೆಯಲು ತ್ರಿವೇಣಿಯವರೇ ಮತ್ತೊಮ್ಮೆ ಹುಟ್ಟಿ ಬನ್ನಿ. 
ಈಗಲೂ ನಿವ್ರತ್ತ ರಾದಮೇಲೆ 70ರ ಹೊಸ್ತಿಲ ಮೆಟ್ಟಲಿರುವ ನನಗೆ ಬರೆಯಬೇಕಂಬ ಆಸೆ ಚಿಗುರಿತು.
ಹಣ್ಣೆಲೆ ಚಿಗುರಿದಾಗ ಎನ್ನುವ ನಿಮ್ಮ ಶೀರ್ಷಿಕೆಯನ್ನು ಈ ಬ್ಲಾಗ್ ಗೆ ಉಪಯೋಗಿಸಿ ಕೊಂಡಿದ್ದೇನೆ,

ಊರು, ಮನೆ, ಪರಿವಾರ 

ಡಿಸೆಂಬರ್ ತಿಂಗಳ ಕೊರೆಯೋ ಚಳಿಯಲ್ಲಿ 
ಮುಂಜಾನೆ ಹಲಸಿನ ಮರವ ತಬ್ಬಿಕೊಂಡ 
ಮಂಜು ಕವಿದ ಹಂಚಿನ ಮನೆ,
ಹೊಂಬಿಸಿಲ ಸೂರ್ಯ ಕಿರಣ 
ಬೀಳುತ್ತಲೇ ಕರಗಿ ಹೋದ ಮಂಜು 
ಬ್ಯಾಕ್ ಗ್ರೌಂಡ್ ಮ್ಯೂಸಿಕ್ನಲ್ಲಿ 
ಮನೆಯಿಂದ ಮರ್ಫಿ ರೇಡಿಯೋದಿಂದ 
ಕೇಳಿಬಂದ ದಾರಾಬೇಂದ್ರೆಯವರ 
ಕಾಲಕ್ಕೂ ಅಳಿಯದ ಈ ಹಾಡು 
ಮೂಡಲ ಮನೆಯ ಮುತ್ತಿನ ನೀರಿನ 
ಎರಕಾವಾ ಹೊಯ್ದ  
ನುಣ್ಣನೆ ಎರಕಾವಾ ಹೊಯ್ದ 
ಮನಸ್ಸು ಹಾಗೇ ಹಾಯಾಗಿ
ಕನಸ್ಸಿನ ಲೋಕಕ್ಕೆ ಕರೆದೊಯ್ದಿತ್ತು 
ಹೊಸ್ತಿಲ ದಾಟಿ 
ಸೂರ್ಯ ಕಿರಣ ಮನೆ ಮುಂದೆ 
ಆಂಗಣವ ಚುಂಬಿಸಲು 
ಗುಡಿಸಿ ಸಗಣಿ ಸಾರಿಸಿ ಸಮತಳ 
ಮಾಡಿದ ರಸ್ತೆ ಕಮ್ ಆಂಗಣದಿಂದ 
ಬನ್ನಿ ನಮ್ಮೂರ ಪರಿಚಯ ಮಾಡ್ತೀನಿ 
ಊರು 
ಕಾರ್ಗಲ್ ಕಾಲೋನಿ, 
ಸಾಗರ ತಾಲೂಕು, 
ಶಿವಮೊಗ್ಗ ಜಿಲ್ಲೆ.
ನನ್ನ ಬಲದ ಕೈ ಚಾಚಿ ತೋರಿಸೋ ದಿಕ್ಕಲ್ಲಿ
ದೂರದಲ್ಲಿ ಕಾಣಿಸೋದೆ ಬೆಟ್ಟದ ನಡುವೆ 
ಶರಾವತಿ ನದಿಗೆ ಕಟ್ಟಿದ್ದಅಣೆಕಟ್ಟು  
ಲಿಂಗನಮಕ್ಕಿ ಡ್ಯಾಮ್. ಕೆಳಗಿಳಿದು 
ಮುಖ್ಯ ರಸ್ತೆಯ ಹಿಡಿದ್ರೆ 
ಬಚ್ಚಗಾರ್ ಘಾಟ್ ಸೆಕ್ಷನ್ನು 
ಗಣಪತಿ ದೇವಸ್ಥಾನ ನಮಸ್ಕಾರ ಮಾಡಿ 
ಘಾಟ್ ತಿರುವಿನಲ್ಲಿ 
BRKMS ಶಿವಮೊಗ್ಗದಿಂದ ಜೋಗಫಾಲ್ಸ್ ಗೆ ಪ್ರತಿನಿತ್ಯ ಬರುತಿದ್ದ ಪ್ರೈವೇಟ್ ಬಸ್ಸಿನ 
ಹಾರ್ನ್ ಶಬ್ದ ಇಡೀ ಕಾರ್ಗಲ್ಗೇ ಮಧ್ಯಾಹ್ನ 
ಹನ್ನೆರಡು ಘಂಟೆ ಆದದನ್ನ ಸೂಚಿಸ್ತಿತ್ತು. 
ಹಾಗೆಯೇ, ಬಸ್ಸಿನ ಡ್ರೈವರಣ್ಣ 
ಕಾರ್ಗಲ್ ನ ರಾಮ್ ಭವನ ದಲ್ಲಿ 
ಊಟ ಮಾಡಿ ಎರಡು ಬಾರಿ 
ಲಾಂಗ್ ಹಾರ್ನ್ ಮಾಡಿದ್ರೆ 
ಅಪರಾಹ್ನ ಶಿವಮೊಗ್ಗಕ್ಕೆ ಎರಡು ಘಂಟೆಗೆ 
ಹೋಗೋ  ಬಸ್ಸು ರೆಡಿ ಅಂತ ಅರ್ಥ.
ನನ್ನ ಎಡದು ಕೈ ಚಾಚೋ ದಿಕ್ಕಿನಲ್ಲಿ  ಗುಡ್ಡ, 
ಒಡೆನ್ ಬೈಲು ಟನೆಲ್ಲು ಸುರಂಗ..ಹಾಗೂ
ಎರಡುಮನೆ ದಾಟಿ ಕೊನೆಯ ಮನೆ 
ಮಿಡಲ್ ಸ್ಕೂಲ್ ಹೆಡ್ ಮಾಸ್ಟರ್ 
ಶ್ಯಾಮಣ್ಣ ಉಪಾಧ್ಯಾಯರ ಮನೆ 
ಅವರ ಮಗಳು ಲೀಲಾವತಿ ನನ್ ಕ್ಲಾಸ್ಮೇಟ್ 
ಬೆನ್ನ ಹಿಂದೆ ಮನೆ ಅದರ ಹಿಂದೆ 
ಕ್ಲಾಸ್ಮೇಟ್ ಸುಧೀರ್ ಮತ್ತೆ ಗಣೇಶನ ಮನೆಗಳು
ಅದಕ್ಕೂ ಮೇಲೆ ಹತ್ತಿದ್ರೆ ವಾಟರ್ ಟ್ಯಾಂಕ್ ಗುಡ್ಡ  
ಹುಳಿ,ಸಿಹಿ ಹಸಿರು, ಕೆಂಪು ಬಣ್ಣದ 
ಹಲಗೆ ಹಣ್ಣಿನ, ಮತ್ತು ಲ್ಯಾಂಟೇನ ಪೊದೆಗಳು, ಬುಲ್ಬುಲ್ ಪಕ್ಷಿಗಳ ಇಂಚರ. 
ಎತ್ತರದ ನಂದಿ ಮರಗಳ ನಡುವೆ ಜೇನುಗೂಡು. 
ಬೋರೆ ಹಣ್ಣು, ನೆಲ್ಲಿಕಾಯಿ, ನೇರಳೆ, ಮಾವಿನ ಮರಗಳ ಕಾಡು. ನೇರಳೆ ಹಣ್ಣ ತಿನ್ನಲು ಕರಡಿಗಳು ಬರ್ತಾ ಇರುತ್ತೆ, ಆ ಗುಡ್ಡಕ್ಕೆ ಹೋಗಬೇಡಿ ಅಂತ ಬೆದರಿಸಿಟ್ಟೋರು.
ನನ್ನ ಮೂಗಿನ ನೆಟ್ಟಿಗೇ ಅಂದ್ರೆ 90 ಡಿಗ್ರಿ 
ದೂರದಲ್ಲಿ ಲೇಬರ್ ಕಾಲೋನಿ ಗುಡ್ಡ  
ಅದರೊಟ್ಟಿಗೆ ತಗಲಿಯೇ ಮುಖ್ಯ ರಸ್ತೆ,  
ಅದನ್ನ ಹಮ್ಮಿ ಕೊಂಡ ಬಸ್ ಸ್ಟ್ಯಾಂಡು 
ಮಾರುಕಟ್ಟೆ, ಹೋಟಲುಗಳು, ತರಕಾರಿ 
ಸುಬ್ಬಮ್ಮನ ಅಂಗಡಿ,ಸೋಡಾ ಫ್ಯಾಕ್ಟರಿ 
ಮತ್ತೆ ಭಾನುವಾರ ಸಂತೆ ಮೈದಾನ, 
ಪಕ್ಕದಲ್ಲೇ ಸಿನಿಮಾ ಟೆಂಟು.
ಅಮ್ಮಂಜೊತೆ ಸಂತೆಗೆ ಕೈ ಹಿಡ್ಕೊಂಡು ಹೋಗೋದು,  
ಗಿರ್ಗಿಟ್ಲೆ ತಿರಗಿಸಿಕೊಂಡು, ಕಳ್ಳೆಪುರಿ ತಿನ್ಕೊಂಡು ತರಕಾರಿ ತುಂಬಿದ ಬ್ಯಾಗ ಹೊತ್ಕೊಂಡು  
ಹೆಮ್ಮೆಯಿಂದ ಬೀಗ್ಕೊಂಡು 
ವಾಪಸ್ಸು ನಡೆದು ಬರೋ ಸವಿ ನೆನಪುಗಳು. 
ಹಾಗೇ ಕಾಲು ಜಾಡಿಸಿ ಹೆಜ್ಜೆ ಹಾಕಿ ಮುಂದೆ ನಡದ್ರೆ 
ತಗ್ಗಾದ ಪ್ರದೇಶ, ಸಾವಕಾಶವಾಗಿ ಇಳಿಯಲು
ಹನ್ನೆರಡು ಸಿಮೆಂಟ್ ಮೆಟ್ಟಿಲುಗಳು ಪಕ್ಕದಲ್ಲೇ
ದಿನದಲ್ಲಿ ನೆರಳಾಗಿ ರಾತ್ರಿಯಲ್ಲಿ ಭಯಂಕರವಾಗಿ ಕಾಣಿಸ್ತಿದ್ದ ವಿಶಾಲವಾದ ಆಲದ ಮರ. 
ದಾಟಿದ್ರೆ ಮತ್ತೆ ಆರು ಮೆಟ್ಟಿಲುಗಳು ಸರಿ 
ಇನ್ನೊಂದು ಏಳು ಮೆಟ್ಟಿಲುಗಳು ಇಳಿದು 
ರಸ್ತೆ ಪಾರು ಮಾಡಿದರೆ 
ನಾ ಓದಿದ NTM ಸ್ಕೂಲ್ ನ್ಯೂ ಟೈಪ್ ಮಿಡ್ಲ್ ಸ್ಕೂಲ್ ಮತ್ತೆ ರಸ್ತೆ ದಾಟಿದ್ರೆ ಆಸ್ಪತ್ರೆ 
ಅದರ ಹಿಂದೆ ಕಣ್ಣು ಕಾಣಿಸೋ 
ದೂರದವರೆಗೂ ದೊಡ್ಡಪ್ಪ ಗೌಡ್ರ 
ತೆನೆ ತುಂಬಿದ ಭತ್ತದ ಗದ್ದೆ 
ಇದೇ ಕಾರ್ಗಲ್ಲಿನ ವಿಸ್ತ್ರತ ಭೌಗೋಳಿಕ ಮಾಹಿತಿ.

ಮನೆ 

ಸರಿ, 
ರೈಟ್ ಅಬೌಟ್ ಟರ್ನ್ 
ಪೀಚೆ ಮೂಡ್ 
ಎರಡೂ ಒಂದೇ ಅಲ್ಲವಾ 
ಹಿಂತಿರುಗಿ ನೋಡಿದ್ರೆ 
ನಮ್ಮ ಅದೇ ಹಲಸಿನ ಮರ 
ತಬ್ಬಿ ಕೊಂಡ ಹಂಚಿನ ಮನೆ,
ಹತ್ತು ಸಿಮೆಂಟಿನ ಪುಟ್ಟ ಮೆಟ್ಟಿಲುಗಳ 
ಹತ್ತಿದರೆ  ಸಿಮೆಂಟಿನ ಚಿಕ್ಕ ಆಂಗಣವ 
ತುಂಬಿ ಹೆಜ್ಜೆಯಿಡಲುಜಾಗವಿಲ್ಲದಂತೆ
ಅಕ್ಕ ಹಾಕಿದ ಚುಕ್ಕಿ ರಂಗೋಲಿಯ 
ಮೇಲೆ ತುಳಿಯದೆ ಜಾಗ್ರತೆಯಾಗಿ  ಹೋದ್ರೆ 
ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸಲು 
ಎದುರಿಗೆ ಹಸಿರು ಬಣ್ಣದ ಬಾಗಿಲು
ತೆರೆದೇ ಇರುತ್ತೆ ಬಾಗಿಲ ಎಡ ಕದದ ಮೇಲೆ 
ಹೊಳೆಯೋ ಹಿತ್ತಾಳೆ ಪಟ್ಟಿಯ ಮೇಲೆ ಕಪ್ಪು ಅಕ್ಷರದಲ್ಲಿ V.Kandaswamy DCE ಅಂತ 
ನೇಮ್ ಪ್ಲೇಟ್
ಹೊಸ್ತಿಲ ದಾಟಿ ಮನೆಯ ಆವರಣದೊಳಗೆ 
ಕಾಲಿಟ್ಟದ್ದು ಸಿಮೆಂಟು ತಳ 
ಬಲದ್ಕಡೆ ಅಪ್ಪಾವ್ರ ಆಫೀಸ್ ರೂಮು 
ಮೇಜು ಕುರ್ಚಿ ಪಕ್ಕದಲ್ಲಿ ಓದಲು 
ನನಗಾಗೆ ಮಾಡಿಸಿದ ಪುಟ್ಟ ಡೆಸ್ಕ್ 
ತಲೆಯ ಮೇಲೆ ತೂಗಾಡೋ ಗುಂಡು ಬುಲ್ಬು 
ಎಡದ್ಕಡೆ  ಶೀಟು ಮರೆ ಮಾಡಿ ಇದ್ದ ಸ್ಪೆಷಲ್ 
ಅಣ್ಣಾವ್ರ ರೂಮು 
ಎರಡು ಹೆಜ್ಜೆ ಇಟ್ಟಲ್ಲಿ ಮುಖ್ಯಹಾಲು 
ಎದುರಿಗೇ ತಿರುಪತಿ ತಿಮ್ಮಪ್ಪನ ಫ್ರೇಮ್ ಹಾಕಿದ ವಿಶಾಲವಾದ ಫೋಟೋ 
ವಿಟಾವಾಕ್ಸ್ ಟೇಬಲ್ ರೇಡಿಯೋ 
ಮರದ ಮಂಚ, ಗೋಡೆಗೆ ತಗುಲಿಯೇ 
ಇದ್ದ ಹಲಗೆ ಶೆಲ್ಫು ಅದರ ಮೇಲೆ 
ಸರಸ್ವತಿ,ಗಣೇಶ,ಲಕ್ಷ್ಮಿಫೋಟೋ 
ಎರಡು ಕಂಬದ ದೀಪ ನಡುವೆ 
ಕಾಂಚಿ ಕಾಮಾಕ್ಷಿ ದೀಪ ಆರತಿ ತಟ್ಟೆ 
ತೀರ್ಥದ ಚೊಂಬು, ಊದುಬತ್ತಿ ಸ್ಟ್ಯಾಂಡು
ಹಾಲಿನ ಬಲದ್ಕಡೆ  ನೆಲದ ಮೇಲೆ ಹಾಸಿದ್ದ 
ಅಪ್ಪ ಅಮ್ಮ ನ ಬೆಡ್ದು ಅದರೊಟ್ಟಿಗೆ 
ನಮ್ಮ ಚಾಪೆ ನಾನು ತಮ್ಮ ತಂಗಿ ಅಮ್ಮನ ಬೆಡ್ಡೇ ದಿಂಬು ಏನೊಂದು ಚಿಂತೆಯಿಲ್ಲದೆ ಕಳೆದ ದಿನಗಳವು 
ಹಾಲ್ನಿಂದ ಎರಡು ಹೆಜ್ಜೆ 
ಆ ಕಾಲದ ಡೈನಿಂಗ್ ಹಾಲ್ ಆವರಣ 
ಎಡದ್ಕಡೆ ಸ್ವಲ್ಪ ವಿಶಾಲವಾದ ಹೊಗೆ ಹಿಡಿದು 
ಮಬ್ಬಾದ  ಅಡಿಗೆ ಮನೆ ಕತ್ತಲಲ್ಲೂ 
ಮಿಣಕ್ ಮಿಣಕ್ ಅಂತ ಮಿನುಗುತ್ತಿದ್ದ 
ಮೂಗುತಿ ಯ ಒಡತಿ ಒಲೆಯ ಮುಂದೆ ಕೂತು ಊದುಕೊಳವೆ ಯಿಂದ ಸೌದೆ ಒಲೆ ಊ ಊ ಅಂತ ಊದಿ ಬೆಂಕಿ ಹಚ್ಚಿಅಡಿಗೆ ಮಾಡ್ತಾ ಇದ್ದೋರೆ ನೋಡಿ ಅವ್ರೇ ನಮ್ಮಮ್ಮ ಶಾಂತಮ್ಮ ಆದ್ರೆ 
ಕಾರ್ಗಲ್ ಅಮ್ಮಾಂತ  ಪ್ರಸಿದ್ಧಿ ಅಡ್ಡೆಸರು 
ಮತ್ತೆ ಆವರಣದಲ್ಲಿ 
ಮಸಾಲೆ ಅರಿಯೋ ಅಮ್ಮಿ ಕಲ್ಲು , ರಾಗಿ ಬೀಸೋ ಕಲ್ಲು 
ಕಡೆಯುವ ಕಲ್ಲು , ಮಿಕ್ಸಿ ಇಲ್ಲಾ, ಇಡ್ಲಿ  ಹಿಟ್ಟ ರುಬ್ಬೊ ಕಲ್ಲು  ಬಲದ್ಕಡೆ ಬಾತ್ರೂಮ್ ಸಿಮೆಂಟ್ ತೊಟ್ಟಿ, 
ನೀರು, ನಲ್ಲಿ, ಎದುರುಕೋಣೆಯಲ್ಲಿ ಬಿಸಿನೀರಿಗಾಗಿ ದೊಡ್ಡ ತಾಮ್ರದ ಹಂಡೆ, ಕೆಳಗೆ ಉರಿಯೋ ಸೌದೆ ಒಲೆ. ಅಲ್ಲಿಂದ ಹಿತ್ತಲ ಆವರಣ ಅದರ ಒಂದು ಮೂಲೆಯಲ್ಲಿ ಟಾಯ್ಲೆಟ್,  ನೀರಿನ ತೊಟ್ಟಿ, ಬಟ್ಟೆ ಒಗೆಯೋಕ್ಕೆ ಅಗಸೆ ಕಲ್ಲು ಅದೆಲ್ಲರ ಹಿಂದೆ ಸೀಬೆ ಹಣ್ಣಿನ ಮರ, ಅಷ್ಟೇ ತಡುಕಿದರೆ ಗುಡ್ಡದ ಗೋಡೆ. ಮನೆಯ ಬಲದ ಹೊರ ಆಂಗಣ ದ ಪಾತಿಯಲ್ಲಿ ತೋಟಗಾರಿಕೆ ಬದನೇಕಾಯಿ, ಬೆಂಡೆಕಾಯಿ, ಸೊಪ್ಪು, ನಮ್ಮ ಮನೆ ಕಿಚನ್ಗಾರ್ಡನ್.
ಆಯ್ತು ನಮ್ಮ ಪುಟ್ಟ ಮನೆಯ ಪರಿಕ್ರಮ.

ಪರಿವಾರ 

         ಶ್ರೀ ವಿ. ಕಂದಸ್ವಾಮಿ ಶ್ರೀಮತಿ ಶಾಂತಮ್ಮ

ಏ ಸುರೇಶ 
ರೇಷನ್ ಅಂಗಡಿಗೆ ಹೋಗ್ಬಿಟ್ಟು ಬಾರೋ 
ಅಂತ ಅಮ್ಮ ಕೂಗಿ ಹೇಳಿದ್ರೂವೆ 
ಕೇಳಸ್ದಿದ್ದಂಗೆ ಸುಮ್ಮನೇ ಕೂತಿದ್ದೆ 
ಇನ್ನೊಂದು ಸಲ ಅಮ್ಮ ಜೋರಾಗಿ ಕೇಳಲು 
ರೇಷನ್ ಅಂಗಡಿಯೋರು ಗೇಲಿ ಮಾಡ್ತಾರೆ 
ನಾನು ಹೋಗಲ್ಲಾಂತ... 
ಯಾಕೋ? ರೇಷನ್ ಕಾರ್ಡ್ನ ನೋಡಿ 
ಎಷ್ಟು ಮಂದೀನೋ ಮನಿಯಾಗ ಅಂತ ಚಿಡಾಯಿಸ್ತಾರೆ. ಅವರು ಹೇಳಿದಂಗೆ 
ಮನೆಯ ಸೆನ್ಸಸ್ ರಿಪೋರ್ಟ್ ನ ಪ್ರಕಾರ 
ಅಮ್ಮ ಅಪ್ಪ ಮತ್ತೆ ನನ್ನೂ ಸೇರಿ 
ಹನ್ನೊಂದು ಮಂದಿ ಕ್ರಿಕೆಟ್ ಟೀಮ್. 
ಹಿರಿಯರಿಂದ ಕಿರಿಯರ ಆರ್ಡರ್ ನಲ್ಲಿ ಎಲ್ಲರಿಗಿಂತಲೂ ಹಿರಿಯೋರು 
ದೊಡ್ಡಣ್ಣ ಸುಂದರಣ್ಣ 
ನಂತರ ದೊಡ್ಡಕ್ಕ ನಿರ್ಮಲಕ್ಕ, ಸಜಂತಕ್ಕ,
ರಜಿನಿಯಕ್ಕ, ಅಣ್ಣ  ಮೇಧಾವಿ, 
ನಂತರ ಸುಜಾತಕ್ಕ, ನಾನು, 
ತಮ್ಮ ಉದಯ ಮತ್ತೆ ತಂಗಿ ಜ್ಯೋತಿ.
ರಾಜೇಶ್ವರಿ ಅಕ್ಕ ಸಣ್ಣವಯಸ್ಸಲ್ಲೇ ತೀರ್ಕೊಂಡುಬಿಟ್ರು ಹತ್ತು ಮಕ್ಕಳ ಕುಟುಂಬ ಈಗ ಒಂಬತ್ತು 
ನವರತ್ನಗಳೋ ಇಲ್ಲಾ ನವಗ್ರಹಗಳೋ 
ಆದ್ರೆ ಖಂಡಿತವಾಗಲೂ ಅಲ್ಲಗಳೆಯಲಾಗದ 
ನವರಸ ಪ್ರತಿಭಾಶೀಲರೋ 
ಏನೋ 
ಒಮ್ಮೆ ಕಾರ್ಗಲ್ ನ  ಶರಾವತಿ ವ್ಯಾಲಿ ಪ್ರಾಜೆಕ್ಟ್  ಕ್ಲಬ್ಬಲ್ಲಿ ಗಣತಂತ್ರ ದಿವಸದ ಕ್ರೀಡಾ ಸ್ಪರ್ಧೆಯಲ್ಲಿ 
ನಮ್ಮಪ್ಪ ಸ್ಲೋ ವಾಕಿಂಗ್ ರೇಸ್ ನಲ್ಲಿ ಫಸ್ಟ್ ಪ್ರೈಜ್, ಅಮ್ಮ ರಂಗೋಲಿ ಮತ್ತೆ ನಿಂಬೆ ಹಣ್ಣು ಸ್ಪೂನ್ ರೇಸ್ ನಲ್ಲಿ ಪ್ರಥಮ, ಸುಂದರಣ್ಣ ಸೈಕಲ್ ರೇಸ್ನಲ್ಲಿ ಫಸ್ಟು,   
ನಿರ್ಮಲಕ್ಕ ಸೂಜಿ ದಾರ ಸ್ಪರ್ಧೆಯಲ್ಲಿ ದ್ವಿತೀಯ, ಸಜಂತಕ್ಕ ಹಾಡು ಹಾಡಿ ಪ್ರಶಸ್ತಿ, ರಜಿನಿಯಕ್ಕ ಕೇರಮ್ ನಲ್ಲಿ  ಫಸ್ಟು, ಮೇಧಾವಿ ಸ್ಯಾಕ್ ರೇಸ್ನಲ್ಲಿ ಸೆಕೆಂಡು, ಸುಜಾತಾಕ್ಕ ಟೆನ್ನಿಕಾಯಿಟ್ಟುನಲ್ಲಿ ಪ್ರಥಮ, ನಾನು ಚೆಸ್ನಲ್ಲಿ ಫಸ್ಟು, ಉದಯ ರನ್ನಿಂಗ್ ರೇಸ್ ನಲ್ಲಿ ಫಸ್ಟು, ಜ್ಯೋತಿ ಡ್ಯಾನ್ಸ್ ನಲ್ಲಿ ಪ್ರಶಸ್ತಿ ಗಳಿಸಿದ್ದಳು  ಮನೆಯಲ್ಲಿದ್ದ ಎಲ್ಲರಿಗೂ ಒಂದಲ್ಲಾ ಒಂದು  ಪ್ರೈಜ್ ದೊರಕಿತ್ತು. ಅಣ್ಣ, ತಮ್ಮ, ಅಕ್ಕ, ತಂಗಿ, ಅಪ್ಪ, ಅಮ್ಮ, ಎಲ್ಲಾ ಸಂಬಂಧಗಳ ಹೊಂದಿದ್ದ ಒಂದು ಪರಿವಾರ 
ಸಂಪೂರ್ಣ ಪರಿವಾರ ಅಲ್ಲವೇ... 
ಎಲ್ರನ್ನೂ ಕೂರಿಸಿ ಉಪ್ಪು ಒಣಮೆಣಸಿನಕಾಯಿ 
ಕೈಯಲ್ಲಿಟ್ಟುಕೊಂಡು ಆ ಕಣ್ಣು, ಈ ಕಣ್ಣು, ಕಂಡವರ ಕಣ್ಣು, ಪಿಶಾಚಿ ಕಣ್ಣು, ಅಂತ ಎಲ್ಲಾ ಕಣ್ಣುಗಳನ್ನು ಉಚ್ಚರಿಸಿ ಆ ಕಡೆ ಈ ಕಡೆ  ಕೈ ಮುಷ್ಟಿಯ ಎಲ್ರು ಮುಖಕ್ಕೂ ತೋರ್ಸಿ ತೂ ತೂ ಅಂತ  ಉಗಿಯೋ ಭಾವನೆ ಮಾಡಿ ಉರಿಯುತ್ತಿರುವ ಒಲೆಯಲ್ಲಿ ಹಾಕಿ ಕಣ್ ದೃಷ್ಟಿ ನಿವಾರಣೆ ಮಾಡಿದ ಮೇಲೆ ನಿಟ್ಟುಸಿರು ಬಿಡ್ತಿದ್ರು ನಮ್ಮಮ್ಮ. 
ಹೆಮ್ಮೆಪಟ್ಕೊಳೋಂತ ಒಂದ್ ಊರು, 
ಅಂಬೆಗಾಲಿಟ್ಟು ಒಂದೊಂದು ಕಣ ಕಣವೂ 
ಅಳೆದು ಬೆಳೆದ ಮನೆ, 
ಉಸಿರಿಗೆ ಉಸಿರಾಗಿ 
ಅಮ್ಮ,ಅಪ್ಪ,ಅಣ್ಣ,ಅಕ್ಕ ತಮ್ಮ ತಂಗಿಂತ ಒಬ್ಬರಿಗೊಬ್ಬರೂಂತ
ಪರಿವಾರ 
ಇದು ಬರಿ ಟ್ರೈಲರ್ 
ಪೂರಿ ಪಿಕ್ಚರ್ ಇನ್ನೂ ಇದೆ 
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.