ಸೊಳ್ಳೆ

ನಂಜನಗೂಡಿನ ಕೆಂಡಗಣ್ಣಸ್ವಾಮಿಯವರ 
ಮಗ, ಚಂದ್ರಶೇಖರ.(ಚಂದ್ರು)
ಯಾರೂಂತ  ಕೇಳ್ತೀರ?
ನನ್ನ ಬಾಲ್ಯ ಸ್ನೇಹಿತ 
ಕೆ.ಜಿ.ಎಫ್.ಕಂದಸ್ವಾಮಿಯವರ 
ಮಗ ಸುರೇಶ.(ಅದು ನಾನು)  
ನಾವಿಬ್ಬರು ಬಾಲ್ಯಮಿತ್ರರು .
ಆಗ ನಾವಿದ್ದದ್ದು ಕಾರ್ಗಲ್ ಕಾಲೋನಿ, 
ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ.
ಓದಿದ್ದು NTMS ನ್ಯೂ ಟೈಪ್ ಮಿಡ್ಲ್ ಸ್ಕೂಲ್ 
ನಾವಿಬ್ಬರೂ ಬೆಟ್ಟಿ ಯಾಗಿದ್ದು  
ಸ್ಕೂಲ್  ಭರ್ತಿಯಾದ 
ಸೆಕೆಂಡ್ ಸ್ಟ್ಯಾಂಡರ್ಡ್ 
ಜೂನ್ ಒಂದನೇ ತಾರೀಕು 
ಅದ್ಯಾಕೆ ಎರಡನೇ ಕ್ಲಾಸ್ 
ಯಾಕಂದ್ರೆ ನಾನು 
ಒಂದನೇ ಕ್ಲಾಸ್ ಓದಲೇ ಇಲ್ಲಾ 
ನಮ್ಮಪ್ಪ ಸೀದಾ ಎರಡನೇ ತರಗತಿಗೆ ಸೇರಿಸಿದ್ರು
ಡಬಲ್ ಪ್ರಮೋಷನ್. 
ಚಂದ್ರು ಕಡ್ಲೆ ಮಿಠಾಯಿ ಕೊಟ್ರೆ,
ನಾನು ನ್ಯೂಟ್ರಿನ್ ಚಾಕ್ಲೆಟ್ ಕೊಟ್ಟೆ.
ಪರಸ್ಪರ ಮಿಠಾಯಿ ಹಂಚಿ ಕೊಂಡಿದ್ದರಿಂದ 
ನಾವಿಬ್ಬರೂ  ಕ್ಲೋಸ್ ಫ್ರೆಂಡ್ಸ್.
ನಮ್ಮ ಮನೆಯಿಂದ ಹತ್ತು ಮನೆ ದಾಟಿದರೆ 
ಅವನ ಮನೆ.
ನಮ್ಮಪ್ಪ PWD ಇಂಜಿನಿಯರ್  
ಅವರಪ್ಪ ಡ್ರಾಫ್ಟ್ಸ್ ಮ್ಯಾನ್ 
ಅದರರ್ಥ ನನಗ್ ಗೊತ್ತಿರಲಿಲ್ಲ 
ನಾನು ಚಂದ್ರು ಅವರ ಮನೆಯಲ್ಲಿ 
ಅವನು ನಮ್ಮ ಮನೆಯಲ್ಲಿ 
ಜೊತೆ ಜೊತೆಯಲಿ ಕಳೆದ ದಿನಗಳವು 
ಇಬ್ಬರೂ ಕಾರ್ಗಲ್ ನ ಒಂದೇ ಮಿಡ್ಲ್ ಸ್ಕೂಲ್
ಜೋಗ್ ಫಾಲ್ಸ್ ನ ಒಂದೇ ಹೈಸ್ಕೂಲ್ 
ಒಂದೇ ಬೆಂಚ್ 
ಪಕ್ಕ ಪಕ್ಕ ಕುಳಿತುಕೊಂಡು ಓದಿದ್ದು.
ನಿಕ್ಕರ್ ನಿಂದ ಪ್ಯಾಂಟ್ ಗೆ ಬದಲಾಗ್ದಾಗ್ಲು 
ನಮ್ಮ ಸ್ನೇಹ ಬದಲಾಗಲಿಲ್ಲ.
ಅವರ ಮನೆಯಲ್ಲಿ  ಅವರಮ್ಮ ಉಪ್ಪಿಟ್ಟು ಉಪ್ಪಿನಕಾಯಿ ತಿನ್ನಿಸಿದ್ರೆ, ನಮ್ಮ ಮನೆಯಲ್ಲಿ 
ನಮ್ಮಮ್ಮ ಚಂದ್ರು ಗೆ  ದೋಸೆ,ಚಟ್ನಿ ತಿನ್ನಿಸಿ 
ಕಳಸೋರು. ಅದ್ಲಾ ಬದ್ಲಿ ಕಾರ್ಯಕ್ರಮ 
ನಡೀತಾನೆ ಇತ್ತು. 
ಸ್ಲೇಟು ಬಳಪ ದಿಂದ ಪೆನ್ಸಿಲ್ ಬುಕ್ ಗೆ 
ಯಾವಾಗ? ಹೆಂಗೆ? ಬದಲಾದೆವೋ ಗೊತ್ತೇ 
ಆಗಲಿಲ್ಲ. 
7ನೇ ಕ್ಲಾಸ್ ಇರಬೇಕು ಆಗ 
ನಾವಿಬ್ಬರೂ ಸೇರಿ ಪ್ರಪ್ರಥಮವಾಗಿ ಬರೆದು 
ಪತ್ರಿಕೆ (ಮೇಗಜಿನ್)ಒಂದನ್ನು 
ಪಬ್ಲಿಶ್ ಮಾಡಿದ್ವಿ. 
ಬರೆಯುವ ಚಟ ನನ್ನದಾದರೆ 
ಡ್ರಾಯಿಂಗ್ಸ್, ಆರ್ಟ್, ಕಲಾ ಚಂದ್ರುದು.
ಅಂದ್ರೆ ಒಂದು ಬಿಳಿ ಹಾಳೆಯನ್ನು 
ನಾಲ್ಕಾಗಿ ಫೋಲ್ಡ್ ಮಾಡಿ,
ಎರಡಾಗಿ ಹರಿದು ಮತ್ತೆ ಎರಡಾಗಿ ಮಡಿಚಿ, 
ಮೊದಲ್ನೇ ಪುಟ ಟೈಟಲ್ 
ನನ್ನ ಹಾಗೂ ಚಂದ್ರುವಿನ ಹೆಸರುಗಳು 
ಅಂಕ, ದಿನ, ದಿನಾಂಕ. 
ಎರಡನೇ ಪುಟದಲ್ಲಿ ನ್ಯೂಸ್, 
ಸೈನ್ಟಿಫಿಕ್ ವಿವರಗಳು, 
ಮೂರನೇ ಪುಟದಲ್ಲಿ ಜೋಕ್ಸ್, ವ್ಯಂಗ್ಯ.
ನಾಲ್ಕನೇ ಪುಟ ಕಾರ್ಟೂನ್ ಗಾಗಿ ಸೀಮಿತವಾಗಿತ್ತು.
ಶೀರ್ಷಿಕೆ ಏನಿರಬೇಕು ಅನ್ನೋದರಲ್ಲಿ  
ಇಬ್ಬರಿಗೂ ಒಂದೇ ಅಭಿಪ್ರಾಯ.
ಬಲು ವಿಚಿತ್ರವಾಗಿರಬೇಕು.
ಅದೇ ಸಮಯ ಆಕರ್ಷಶಕವಾಗಿರಬೇಕು. 
ರಕ್ತ ಕುಡಿದ ಸೊಳ್ಳೆಯೊಂದು ಮತ್ತಿನಲಿ,
ಬಿಳಿ ಹಾಳೆಯ ಮೊದಲ್ನೇ ಪುಟದ 
ಮೇಲೆ ಕುಳಿತಿತ್ತು. 
ಚಂದ್ರುವಿನ ಕೈ ಸ್ವಲ್ಪ ಅಗಲ 
ಆರ್ಟಿಸ್ಟ್ ಅಲ್ವಾ, 
ಒಂದೇ ಒಂದು ಸಪಾಟಾದ ಏಟು. 
ರಕ್ತ ಚದುರಿ ಬಿಳಿ ಹಾಳೆಯ ನಡುವೆ, 
ರಕ್ತರಂಜಿತ ಮಾಡ್ರನ್ ಆರ್ಟ್ ಆಗಿತ್ತು. 
ಆದ್ರೆ ಅದು ನಮ್ಮ ಪತ್ರಿಕೆಗೆ ಹೆಸರುಕೊಟ್ಟು 
ಜೀವ ಸಮರ್ಪಿಸಿತ್ತು. ಹಾಂ ಹೌದು 
ನಮ್ಮ ಪತ್ರಿಕೆಗೆ ನಾವಿಟ್ಟ ಹೆಸರು 
ಸೊಳ್ಳೆ
ವಾರಕ್ಕೊಮ್ಮೆ ಪ್ರತಿ ಶುಕ್ರವಾರದ ಸಂಜೆ 
ಹೊಸ ಅಂಕ, ಹೊಸ ಸುದ್ದಿ ಬರಲೇಬೇಕು
ಅನ್ನೋದರಲ್ಲಿ ನಾನು ಚಂದ್ರು ಖಾಯಂ ಆಗಿದ್ವಿ.
ಕಾರ್ಬನ್ ಕಾಪಿಗಳ ಉಪಯೋಗಿಸಿ ಹಂಚಿಕೊಂಡೆವು.
ನಮ್ಮ ಸ್ಕೂಲ್ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಪ್ರಶಸ್ತಿ ಗಳಿಸಿದ್ದು. 
ಬಿರುಗಾಳಿಯಲ್ಲಿ ಮನೆ ಮುಂದಿದ್ದ 
ಮಾವಿನಮರದ ಟೊನ್ಗೆ ಮುರಿದು ಬಿದ್ದು  
ಪೊಟರೆಯಿಂದ ಹೊರಬಂದ ಮಳೆಯಲ್ಲಿ 
ತೊಯ್ದ ಹಸಿರು ಗಿಣಿ ಮರಿ, ಜೋರು ಮಳೆ 
ಬಂದು ದೊಡ್ಡಪ್ಪ ಗೌಡ್ರ ಗದ್ದೆ ಗಳಲ್ಲಿ ನೀರು ತುಂಬಿದ್ದು, ಚಿರತೆಯೊಂದು ಬೆಣ್ಣೆಮನೆ-ತಲಕೆಳಲೆ ಗ್ರಾಮದಲ್ಲಿ ಕಂಡಿದ್ದು, ಹೀಗೇ ಸುದ್ದಿಗಳಿಗೆ ಬರಗಾಲವೇ ಇರಲಿಲ್ಲಾ.
ನಮ್ಮ ಪತ್ರಿಕೆಯ ಬಲು ಮುಖ್ಯವಾದ ಸುದ್ದಿ.
ಸೊಳ್ಳೆ ಪ್ರಾರಂಭವಾದ ಆರನೇ ಅಂಕ ಇರಬೇಕು.
ಮುಖ್ಯವಾದ ಘಟನೆ ಯೊಂದರ 
ಜೀವಂತ ಕವರೇಜ್ 
ನವೆಂಬರ್ ತಿಂಗಳ ಮೂರನೇ ಶನಿವಾರ. 
ಶರಾವತಿ ಕಣಿವೆ ಯೋಜನೆಯ ಕ್ಲಬ್. 
ಹಾಲ್ನಲ್ಲಿ ಗಿಜಿ ಗಿಜೀಂತ ಜನ ತುಂಬಿತ್ತು. 
ಕ್ಲಬ್ ನ ಅಧ್ಯಕ್ಷ ರಾದ ವೆಂಕಟೇಶ್ ಮೂರ್ತಿಯವರು ಎಲ್ಲರನ್ನೂ ಶಾಂತವಾಗಿರಲು ಮನವಿ ಮಾಡಿಕೊಳ್ಳುತ್ತಾ ಇದ್ದರು.
ನಾನೂ ಅಮ್ಮ ಅಪ್ಪನ ಜೊತೆ ಆ ಸಮಾರಂಭಕ್ಕೆ ಹೋಗಿದ್ದೆ. ಮುಖ್ಯ ಅತಿಥಿಗಳಾಗಿ 
ಜನರಲ್ ಕಾರಿಯಪ್ಪ ರವರು  ಆಗಮಿಸಿದ್ದರು. 
ಕ್ಲಬ್ ಸಚಿವರಾಗಿದ್ದ ಮಧುಕರ್ ರವರು 
ಮಡಿಕೇರಿ ಶನಿವಾರಸಂತೆಯಲ್ಲಿ ಜನುಮಿಸಿದ್ದ  
ಜನರಲ್ ಕೊಡಂದೆರ ಮಾದಪ್ಪ ಕಾರಿಯಪ್ಪ 
ರವರ ಬಗ್ಗೆ ವಿವರಣೆ ನೀಡ್ತಾ ಅವರನ್ನು ಮಾತನಾಡಲು ಆಹ್ವಾನಿಸಿದರು.
ಜನರಲ್ ಕಾರಿಯಪ್ಪ ರವರ ಉತ್ಸಾಹವರ್ಧಕ 
ಭಾಷಣ ಕೇಳಿ ಪ್ರೇಕ್ಷಕರಲ್ಲಿ ಜೋಶ್ ತುಂಬಿತ್ತು.  ತದನಂತರ ಪ್ರಶ್ನನೋತ್ತರ ಕಾರ್ಯಕ್ರಮ. 
ಪ್ರಶ್ನೆ ಜನರಲ್ ಕಾರಿಯಪ್ಪ ನವ್ರು ಕೇಳೋರು 
ಜನತಾ ಉತ್ತರಿಸಬೇಕು. 
ಮೊಟ್ಟ ಮೊದಲ ಪ್ರಶ್ನೆ 
ಪ್ರಪಂಚದಲ್ಲಿ ಅತಿ ಮುಖ್ಯರಾದವರು ಯಾರು?
ನಾನು ಎದ್ದು ನಿಂತು, ತಂದೆ,ತಾಯಿ,
ಎಂದು ದಿಟ್ಟವಾಗಿ ಹೇಳ್ದೆ  
ಸರಿಯಾದ ಉತ್ತರ ಮೇಲೆ ಬಾ 
ಎಂದು ಕರೆದರು.👏ಚಪ್ಪಾಳೆಗಳ ನಡುವೆ 
ಸ್ಟೇಜ್ ಹತ್ತಿದೆ.
ನನ್ನ ಬೆನ್ನ ತಟ್ಟಿ  ಶಭಾಷ್ ಎಂದರು 
ನಾನು ಚಡ್ಡಿ ಪಾಕೆಟ್ ನಲ್ಲಿ ಕೈ  
ಹಾಕಿಕೊಂಡು ನಿಂತಿದ್ದನ್ನು ನೋಡಿ
ಪಾಕೆಟ್ ನಿಂದ ಕೈಯ ತೆಗಿ ಅಮ್ಮನಿಗೆ ಹೇಳಿ 
ಚಡ್ಡಿ ಪಾಕೆಟ್ಟು ಹಿಂದೆ ಮುಖ ಮಾಡಿ 
ಹೊಲಿಸೂಂತ ಉಪದೇಶಿಸಿದರು. 
ನನಗಂತೂ ಜೀವನ ಪರ್ಯಂತ 
ಮರೆಯಲಾಗದ ಅನುಭವವಾಗಿತ್ತು.
ನಮ್ಮ ಸೊಳ್ಳೆ ಪತ್ರಿಕೆಯ ಸಂಪಾದಕ 
ಫಸ್ಟ್ ಪೇಜ್ ನ ಸುದ್ದಿಯಾದ.
ಭಾರತ ಸರ್ಕಾರ 1985 ರಲ್ಲಿ 
ಜನರಲ್ ಕಾರಿಯಪ್ಪ ರವರಿಗೆ 
ಪ್ರಪ್ರಥಮ ಬಾರಿಗೆ ಫೀಲ್ಡ್ ಮಾರ್ಷಲ್ ಎನ್ನುವ 
ಟೈಟಲ್ ಕೊಟ್ಟು ಗೌರವಿಸಿ ಹೆಮ್ಮೆ ಪಟ್ಟುಕೊಂಡಿತು. 
ನನಗಂತೂ ಅಸೀಮ ಸಂತೋಷ.

7ನೇ ಕ್ಲಾಸ್ಗೆ ಪಬ್ಲಿಕ್ ಎಕ್ಸಾಮ್ ಅಂತ ಹೇಳಿ 
ಸೊಳ್ಳೆ ಪತ್ರಿಕೆಗೆ ಸ್ವಲ್ಪ ವಿರಾಮ ಕೊಟ್ಟಿದ್ವಿ.

ಎಲ್ರೂವೇ ಫಸ್ಟ್ ಕ್ಲಾಸ್ ನಲ್ಲಿ ಪಾಸು ಮಾಡಿ ಜೋಗಫಾಲ್ಸ್ ನ MSEB ಹೈಯರ್ ಸೆಕೆಂಡರಿ 
ಸ್ಕೂಲ್ಗೆ ಸೇರಿಕೊಂಡೆವು.
ಮತ್ತೆ 
ನಮ್ಮ ಸೊಳ್ಳೆ ಪಯಣ ಮುಂದುವರಿಯಿತು .
8ನೇ ಸ್ಟ್ಯಾಂಡರ್ಡ್ ನಲ್ಲಿ MA ಶೇಕ್ ರವರು 
ನಮ್ಮ ಸೈನ್ಸ್ ಟೀಚರ್. ಸೈನ್ಸ್ ಕ್ಲಬ್ ನ ಸದಸ್ಯರು ನಾವಾದೆವು. 
ಸೊಳ್ಳೆ ಪತ್ರಿಕೆ ಸ್ವಲ್ಪ ಸೈನ್ಟಿಫಿಕ್ ಆಯ್ತು. 
ಚಂದ್ರು ಮನೆಯಲ್ಲಿ ಓದಲೆಂದು  ಪ್ರತ್ಯೇಕ 
ಕೋಣೆ ಇತ್ತು. ಅದು ನಮ್ಮ ಫಿಸಿಕ್ಸ್ ಮತ್ತೆ 
ಬಯೋಲಜಿಯ ಲ್ಯಾಬ್ ಆಗಿತ್ತು. 
ಕಾರ್ಗಲ್ನಲ್ಲಿದ್ದ ಟೂರಿಂಗ್ ಟಾಕೀಸ್ನಿಂದ 
ಕಟ್ ಆದ ಫಿಲಂ ರೀಲ್ಗಳ ಶೇಕರಿಸಿ, 
ಫ್ಯೂಸ್ ಆದ ಗಾಜಿನ ಬಲ್ಬು ಗಳಲ್ಲಿ 
ನೀರನ್ನು ತುಂಬಿ  ಶೂ ಬಾಕ್ಸ್ ನೊಳಗಿಟ್ಟು 
ಸೂರ್ಯ ಕಿರಣ ಹಾದು ಹೋಗುವ ಹಾಗೆ 
ಮಾಡಿ ಫಿಲಂ ರೀಲನ್ನು ಕೈಯಲ್ಲಿ ಓಡಿಸಿ 
ಬಿಳಿ ಗೋಡೆ ಮೇಲೆ ಪಿಕ್ಚರ್ ಮೂಡಿ ಬಂದಾಗ ಅದೊಂತರ ಥ್ರಿಲ್ಲಿಂಗ್ ಅನುಭವವಾಗಿತ್ತು. 
ಅಮರಶಿಲ್ಪಿ ಜಕಣಾಚಾರಿ ಕಲರ್ ಪಿಕ್ಚರ್ ನ 
ಫಿಲಂ ಗೋಡೆ ಮೇಲೆ ನೋಡಿದ ಆ ಕ್ಷಣ 
ಇನ್ನೂವೆ ಹಚ್ಚ ಹಸಿರಾಗಿ ಮನದಲ್ಲಿ 
ಉಳಿದು ಹೋಯ್ತು.
ಮಧ್ಯಾಹ್ನ ಲಂಚ್ ಬ್ರೇಕ್, 
ಹೈಸ್ಕೂಲ್ ನ ಬಗಲಲ್ಲಿದ್ದ ಗಾಂಧೀ ಪಾರ್ಕ್,
ಮರದ ನೆರಳಲ್ಲಿ ಹುಡುಗಿಯರ ಗುಂಪು,  
ಹುಡುಗ್ರುದು ಬೇರೆ, ಇನ್ನೊಂದು ಮರದ ಕೆಳಗೆ.
ಎಲ್ರು ಅವರವರ ಮನೆಯಿಂದ ತಂದ ಟಿಫನ್ 
ಬಾಕ್ಸ್ ನ್ನು ಓಪನ್ ಮಾಡಿ ಹಂಚಿ ಕೊಂಡು 
ತಿನ್ನೋ ಆನಂದಾನೇ ಬೇರೆ. 
ಸುರೇಶ ನ ಬಾಕ್ಸ್ ನಲ್ಲಿ  ಉಪ್ಪಿಟ್ಟುಂತ 
ಎಲ್ರೂ ಊಹೆ ಮಾಡ್ತಿದ್ರು. 
ಒಂದು ದಿನ ಹಂಚಿ ಕೊಳ್ಳಲಾಗದಂತೆ 
ಚಪಾತಿ ಮಾಡಿ ಅದರ ಮೇಲೆ 
ಸೊಪ್ಪಿನ ಸಾರು ಹಾಕಿ ಕೊಟ್ಟು ಕಳಿಸಿದ್ರು. 
ಆ ದಿನ ಅಮ್ಮನ ಹತ್ತಿರ ಕೋಪಿಸ್ಕೊಂಡಿದ್ದು
ಜ್ಞಾಪಕಕ್ಕೆ ಬಂತು.
ಇದರಿಂದ ಅಮ್ಮಂಗೆ ಪ್ರತಿನಿತ್ಯ 
ಟಿಫನ್ ಮಾಡಿ ಕಟ್ಟಿ ಕೊಡೋದು 
ದೊಡ್ಡ ಚಾಲೆಂಜ್ ಆಗಿತ್ತು.
ಶುಕ್ರವಾರದ ಒಂದು ಮಧ್ಯಾಹ್ನ 
ಲಂಚ್ ಟೈಮ್ ನಲ್ಲಿ 
ಹುಡುಗಿಯರ ಗುಂಪಲ್ಲಿ 
ಏನೋ ಗುಸುಗುಸು,ಪಿಸು ಪಿಸು ಮಾತುಗಳು, ಏನೋ ಗದ್ದಲ, ಏನೋ ತಳಮಳ,
ಏನೋ ಕಸಿವಿಸಿ, ಒಟ್ಟುಗೂಡಿ 
ನಮ್ಮೆಲ್ಲರ ಬಳಿ ಬಂದು ಹೊರ ಊರಿನಿಂದ ಬಂದ ಟೂರಿಸ್ಟು ಗಳು ಯಾರೋ 
ನಮ್ಮ ಸ್ಕೂಲ್ ಹುಡುಗಿಯರ 
ಫೋಟೋ ತೆಗೆದ್ರಂತೆ.
ಅಷ್ಟೇ, ನಾವೂ ಹೀರೋಗಳು ಅಂತ ಸಿದ್ಧಿಸೋಕೆ ಇದಕ್ಕಿಂತ ಉತ್ತಮ ಅವಕಾಶ ನಮಗಿನ್ನೆಲ್ಲಿ ಸಿಗುತ್ತೆ 
ಅಷ್ಟೇ ನಮ್ ಹುಡುಗ್ರು 
ಟೂರಿಸ್ಟ್ ಗಳು ಬಂದ ಬಸ್ಸನ್ನು 
ಅಲ್ಲೇ ನಿಲ್ಲಿಸಿ ಘೇರಾವ್ ಮಾಡಿ 
ಕ್ಯಾಮೆರಾ ಕಸಿದು ಕೊಂಡು 
ಫಿಲಂ ರೋಲ್ ಗಳನ್ನ ಎಕ್ಸ್ಪೋಸ್  ಮಾಡಿ ಅವರೆಲ್ಲರು ಹುಡುಗಿಯರ ಬಳಿ 
ಕ್ಷಮೆ ಕೋರಿದ ಬಳಿಕ 
ಕ್ಯಾಮೆರಾ ವಾಪಸ್ಸು ಕೊಟ್ಟು 
ಟೂರಿಸ್ಟ್ ಗಳನ್ನು ಬಿಟ್ಟೆವು.
ಸೊಳ್ಳೆ ಪತ್ರಿಕೆ ಇದೆಲ್ಲವನ್ನು ಇನ್ನೂ ರೋಚಕವಾಗಿ  ಪ್ರತಿಬಿಂಬಿಸಿತ್ತು. 

ಪ್ರತಿನಿತ್ಯ ಶನಿವಾರ ಹಾಗು ಭಾನುವಾರ ಬಿಟ್ಟು ಮತ್ತೆಲ್ಲಾ ದಿನಗಳು ಬೆಳಗ್ಗೆ10ಘಂಟೆಗೆ 
ಸ್ಕೂಲ್ ಬಸ್ ಕಾರ್ಗಲ್ ನಿಂದ ಜೋಗಫಾಲ್ಸ್ ನಲ್ಲಿದ್ದ MSEB ಹೈಸ್ಕೂಲ್ ಗೆ 
ಕರೆದೊಯ್ದು ಸಂಜೆ 5 ಘಂಟೆಗೆ  ಕಾರ್ಗಲ್ ಗೆ 
ವಾಪಸ್ಸು ತಂದು ಬಿಡುತ್ತಿತ್ತು.
9ನೇ ತರಗತಿಯ 
ಸಮಾಜ ಶಾಸ್ತ್ರದ ಫೈನಲ್ ಪರೀಕ್ಷೆ  
ಏಪ್ರಿಲ್ ತಿಂಗಳ ಮೊದಲ ಬುಧವಾರ 
ಮಧ್ಯಾಹ್ನ 12.30ಗೆ ಇತ್ತು. 
ಬೆಳಗ್ಗೆ 10 ಘಂಟೆ ಬಸ್ NTM ಸ್ಕೂಲ್ ಹತ್ತಿರ ಹೋಗುವಷ್ಟರಲ್ಲಿ ಹೊರಟೋಗಿತ್ತು. 
ಎಲ್ರೂ ಹೊರಟು ಹೋಗಿದ್ದರು. 
ಸರಿ ಯಾವದಾದ್ರು ಟ್ರಕ್, ಜೀಪ್ ಸಿಕ್ರೆ ಹೋಗೋಣಾಂತ ಮಾರ್ಕೆಟ್ ಹತ್ರ ಹೋದ್ರೆ ಯಾವೊಂದು ಗಾಡಿಯು ಸಿಗಲಿಲ್ಲ.
ಮಾರ್ಕೆಟ್ನಲ್ಲಿ ನಿಂತಿದ್ದಾಗ 
ಸೋಡಾ ಫ್ಯಾಕ್ಟರಿ ಅಂಗಡಿಯ 
ಶ್ಯಾಮರಾವ್ ರವರು ಮತ್ತೆ 
ಅವರ ಮಗ ಉಮೇಶ ಸಿಕ್ಕಿದ್ರು, 
ಅವರಿಗೆ ನನ್ನ ವ್ಯಥೆ ಹೇಳ್ತಿದ್ದಂಗೆ 
12ಘಂಟೆಗೆ BRKMS ಬಸ್ಸು ಬಂದು ನಿಲ್ತು. 
ಆ ಬಸ್ ಗೆ ನಮ್ಮ MSEB ಸ್ಕೂಲ್ 
ಹತ್ತಿರ ಸ್ಟಾಪ್ ಉಂಟು. ಇದರಲ್ಲಿ ಹೋದ್ರೆ  
ಸರಿ ಸಮಯದಲ್ಲಿ ಹೋಗಿ ಸೇರಬಹುದು. 
ಆದ್ರೆ ನನ್ನ ಹತ್ತಿರ ಒಂದು ಪೈಸೆ ಕೂಡ ಇರಲಿಲ್ಲ.
ಶ್ಯಾಮರಾವ್ ರವರು ಡ್ರೈವರ್ ಹತ್ತಿರ ಹೋಗಿ 
ಏನ್ ಹೇಳಿದ್ರೋ ಗೊತ್ತಿಲ್ಲ, 
ಬಸ್ ಚಾರ್ಜ್ ದುಡ್ಡು ಕಂಡಕ್ಟರ್ ಗೆ 
ಕೊಟ್ಟು ಬಸ್ಸ ಹತ್ತಿಸಿ 
ನನಗೆ ಆಲ್ ದಿ ಬೆಸ್ಟ್ ಅನ್ನೋ ಹಾಗೆ 
ಕೈ ಹೆಬ್ಬೆಟ್ಟ 👍 ತೋರಿಸಿ ಕಳುಹಿಸಿ ಕೊಟ್ರು. 
ಅತಿ ವೇಗದಿಂದ ಬಸ್ಸು ನಮ್ಮ ಹೈ ಸ್ಕೂಲ್ 
ಕಾಂಪೌಂಡ್ ಒಳಗೆ ನುಗ್ಗಿ ಕ್ಲಾಸ್ ರೂಮ್ ನ 
ಹತ್ತಿರ  ಸರಿಯಾಗಿ 12.30 ಗೆ ನಿಲ್ತು. 
ಎಲ್ರೂ ಕ್ಲಾಸ್ ರೂಮಿನಿಂದ ಹೊರಬಂದು 
ಯಾರಪ್ಪಾ ಬಂದ್ರೂಂತ ನನ್ನ ನೋಡಿ ಆಶ್ಚರ್ಯಚಕಿತರಾಗಿದ್ದರು. 
ಇದಂತೂ ಮರೆಯಲಾಗದಂತ 
ಅನುಭವವಾಗಿತ್ತು. (ನನಗೂ )
ಸೊಳ್ಳೆ ಪತ್ರಿಕೆ ಗಂತೂ ಅಪರಿಮಿತ ಆನಂದ. 
ನಾಲ್ಕು ಪುಟಗಳು ಸಾಲದಾಯಿತು.

ಜೋಗದ ಜಲಪಾತ 1940 ರ ವರೆಗೆ 
ಧಾರೆ ಧಾರೆಯಾಗಿ ಆಕಾಶದಿಂದ ಭೂಮಿಯ ಸ್ಪರ್ಶಿಸುವ ವಿಹಂಗಮ ದ್ರಶ್ಯಕ್ಕಾಗಿ 
ಪ್ರಸಿದ್ಧಿ ಪಡೆದಿತ್ತು. 
ಜಲಪಾತದ ನೀರು ವ್ಯರ್ಥವಾಗಿ ಹರಿದು ಹೋಗುವದನ್ನು ಜಲ ವಿದ್ಯುತ್ ಉತ್ಪತ್ತಿಗಾಗಿ  
ಉಪಯೋಗಿಸುವ ಯೋಜನೆಯು 1940 ರಲ್ಲಿ  
ಮೈಸೂರು ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯಾರ್ -IV ರವರ ಪ್ರಯಾಸದಿಂದ ಕಾರ್ಯರೂಪ ಗೊಂಡಿತ್ತು.
1948 ರಲ್ಲಿ ಮಹಾತ್ಮ ಗಾಂಧಿ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಎಂದು ನಾಮಕರಣವಾಯಿತು. 
ಪತ್ರಿಕೆಗೆ ಎಂದಾದರೂ ನ್ಯೂಸ್ ಇಲ್ಲದಿದ್ದಾಗ  
ಇವೆಲ್ಲಾ ಸುದ್ದಿಯಾಗ್ತಿತ್ತು.
ಇದನ್ನ ಯಾಕೆ ಹೇಳ್ತಿದ್ದೀನಿ ಅಂದ್ರೆ 
ಶರಾವತಿ ನದಿಗೆ ಸಿರೂರ್ ರಿಸರ್ವಾಯರ್ 
ಫೋರ್ ಬೇನಿಂದ ನಾಲ್ಕುಭ್ರಹತ್ ಪೈಪ್ ಗಳ 
ಮೂಲಕ ರಭಸದಿಂದ ನೀರು ಟರ್ಬೈನ್ ಗಳ  
ಮೇಲೆ ಬಿದ್ದು ಅದರ ಸತತವಾದ ಚಾಲನೆಯಿಂದ 
ವಿದ್ಯುತ್ ಉತ್ಪತ್ತಿಯಾಗುತ್ತಿತ್ತು.
ಆ ನಾಲ್ಕು ದೊಡ್ಡ ಸೈಜ್ ನ ಪೈಪ್ ಗಳು 
ನಮ್ಮ ಹೈಸ್ಕೂಲ್ ಗೆ ಹತ್ತಿರದಲ್ಲಿದ್ದ 
ಬೆಟ್ಟದ ಇಳಿಜಾರಿನಿಂದ ನೋಡಬಹುದು. 
ಜೊತೆಗೇ ಟ್ರಾಲಿಯಿಂದಲೂ ಇಳಿಯಬಹುದಿತ್ತು. ಅದರೊಟ್ಟಿಗೆ ಮೇಲಿನ ಮಳೆ ನೀರು ವೇಸ್ಟ್ ನೀರು ಸೇರಿ ಈ ಪೈಪ್ ಗಳನ್ನು 
ಕಾಪಾಡುವ ಸಲುವಾಗಿ ಪ್ರತ್ಯೇಕ 
ಸಣ್ಣ ಸಣ್ಣ ಚೆಕ್ ಡ್ಯಾಮ್ ಗಳನ್ನು ಕಟ್ಟಲಾಗಿತ್ತು. 
ಅದರ ಉಪಯೋಗ, 
ಊರ ಜನ ಬಟ್ಟೆ ಒಗೆಯಲು, 
ಹಾಗೆಯೇ ಎಮ್ಮೆ, ದನ, ಕುರಿ ಗಳಿಗೆ ನೀರು ಕುಡಿಯಲು ಉಪಯೋಗಿಸುತಿದ್ದರು.
ಹತ್ತನೇ ತರಗತಿಯಲ್ಲಿದ್ದಾಗ 
ಒಂದು ದಿನ ಯಾವದೋ ಒಂದು ಕಾರಣಕ್ಕಾಗಿ ಓದ್ಕೊಳ್ಳಿ ಅಂತ ಹೇಳಿ ಸ್ಕೂಲ್ ಗೆ 
12ಘಂಟೆಗೇ ರಜೆ ಕೊಟ್ಬಿಟ್ರು. 
ಆ ಒಂದು ದಿನಾನೇ ಮರೆಯಲಾಗದಾಗಿತ್ತು. 
ಸಂಜೆ ಐದು ಘಂಟೆಯವರೆಗೆ ಫ್ರೀ... 
ಸರಿ ಹುಡುಗ್ರು 
ನಾವು ಅಂದ್ರೆ ಚಂದ್ರು, ಅಂಥೋನಿ, ಸುಧೀರ್, ಸೈಮನ್, ಪ್ರಭಾಶಂಕರ್, ಇಲಿಯಾಸ್, ಮಣಿ, 
ಬಾಲಸುಬ್ರಹ್ಮಮಣ್ಯ ಮತ್ತೆ ನಾನು.
ಎಲ್ರುವೇ ಪಿಕ್ನಿಕ್ ತರಹ ಹತ್ತಿರದಲ್ಲೇ ಇದ್ದ 
ಚೆಕ್ ಡ್ಯಾಮ್ ನ ಹತ್ತಿರ ಹೋಗಿ 
ಲಂಚ್ ಪ್ಯಾಕ್ ತೆರೆದು ತಿನ್ನುವಷ್ಟರಲ್ಲಿ 
ಸೈಮನ್ ತುಂಬಿ ಹರಿಯುತ್ತಿದ್ದ ಚೆಕ್ ಡ್ಯಾಮ್ ನಲ್ಲಿ ಜಂಪ್ ಮಾಡಿ ಈಜಲು 
ನೀರೆಲ್ಲಾ ಹೊರಗೆ ಕುಳಿತಿದ್ದ 
ನಮ್ಮ ಮೇಲೆ ಚಿಮ್ಮಿತು. 
ಎಲ್ರೂ ಹೋ ಅಂತ ಅರಚಲು 
ಸಂಭ್ರಮ ಕಳೆ ಕಟ್ಟಿತು. 
ಅದೆಲ್ಲಿತ್ತೋ ಗೊತ್ತಿಲ್ಲಾ 
ಎಮ್ಮೆಯೊಂದು ನೀರಲ್ಲಿ ಇಳಿದಿದ್ದು 
ಯಾರೂ ನೋಡಲಿಲ್ಲ.  
ನಾವು ಕೈ ತೊಳೆಯಲು ಚೆಕ್ ಡ್ಯಾಮ್ ನ 
ನಡುವೆ ಇದ್ದ ಪೈಪ್ ನ ಧಾರೆಯ ಕೆಳಗೆ ಹೋಗಿದ್ವಿ.
ಇದರ ನಡುವೆ ಸೈಮನ್ ಎಮ್ಮೆಯ ಮೇಲೆ ಹತ್ತಿ ಜೋರಾಗಿ ಹಾಡ್ತಾ ಇದ್ದ. 
ಆಮೇಲೇನೂ ಶಬ್ದಾನೇ ಕೇಳಸಲಿಲ್ಲ. 
ಸ್ವಲ್ಪ ಸಮಯದ ನಂತರ 
ನಾವೆಲ್ಲಾ ಮೇಲೆ ಬಂದ್ವಿ....   ನೋಡಿದ್ರೆ...
ಸೈಮನ್ ಎಲ್ಲೂ ಕಾಣಲಿಲ್ಲ.
ಸೈಮನ್ಸೈಮನ್ ಸೈಮನ್ ...ಅಂತ ಕೂಗಿದ್ವಿ 
ಎಮ್ಮೆ ತಲೆ ನೀರಿನ ಮೇಲೆ ಮಾತ್ರ ಕಾಣಿಸ್ತಾ ಇತ್ತು ಅದು ಈಜುತ್ತಾ ದಡಕ್ಕೆ ಬಂತು. 
ಭಯ ನಮ್ಮನ್ನು ಕಾಡಿಸ ತೊಡಗಿತ್ತು.
ಅಷ್ಟೊಂದು ಆಳವು ಇರಲಿಲ್ಲಾ.  
ಅಂಥೋನಿ ಲೋಪೀಸ್ ನೀರೊಳಗೆ ಧುಮುಕಿ ಹುಡುಕಲು ಶುರು ಮಾಡಿದ. 
ನಂತರ ಚಂದ್ರು ಇಳಿದ . 
ಈಜುತಿದ್ದ ಅಂಥೋನಿಯ ಕಾಲಿಗೇನೋ 
ಎಡರಿದಂತಾಗಿ ಬಗ್ಗಿ ನೋಡಿದ್ರೆ  
ಸೈಮನ್ ನ ದೇಹ, 
ಬಾಯಿಯಿಂದ ಗುಳು ಗುಳು ಎಂದು ಗುಳ್ಳೆ ಗಳು, 
ಎಮ್ಮೆಯ ಕಾಲಡಿಯಲ್ಲಿ ಸಿಕ್ಕಿ ಕೊಂಡು 
ಅದರ ತುಳಿತದಲ್ಲಿ ಮಣ್ಣಲ್ಲಿ ಸಿಕ್ಕಿರ ಬೇಕು 
ಕಷ್ಟ ಪಟ್ಟು ಆತನ ನೀಲಿ ಬನಿಯನ್ ನ್ನು ಹಿಡಿದು ಎಳುದು ದಡಕ್ಕೆ ತಂದ ಅಂಥೋನಿ..
ನಾವೆಲ್ಲರೂ ಒಮ್ಮೆಲ್ಲೇ ಜೋರಾಗಿ ಕಿರುಚಲು ಅಕ್ಕಪಕ್ಕದಲ್ಲಿದ್ದವ್ರೆಲ್ಲಾ ಓಡಿ ಬಂದರು.
ಸೈಮನ್ ಮೂರ್ಛೆ ಹೋಗಿದ್ದ. 
ಜೀವ ಇದೆಯೋ ಇಲ್ಲವೋ ಎನ್ನುವ ಜ್ಞಾನ 
ನಮಗಿರಲಿಲ್ಲ. ನಾಡಿ ಹಿಡಿದು ನೋಡಿದ್ವಿ.
ಹೃದಯ ಬಡಿತವ ಕೇಳಲು ಕಿವಿಯನ್ನಿಟ್ಟು 
ಕೇಳಿದ್ರೆ ನಮ್ಮ ಬಡಿತವಷ್ಟೇ ಕೇಳ್ತಿತ್ತು  
ಪಿಟಿ ಮೇಷ್ಟ್ರು ಹೇಳ್ಕೊಟ್ಟ ಪ್ರಥಮ ಚಿಕಿತ್ಸೆಯಲ್ಲಿ  ಒಬ್ಬಬ್ಬರು ಒಂದೊಂದು ಸಲಹೆ 
ಮಗುಚಿ ಹಾಕಿ ಬೆನ್ನ ಒತ್ತಿ ಲಂಗ್ಸ್ ನಲ್ಲಿರೋ 
ನೀರ ಹೊರ ತೆಗೆಯಿರಿ, 
ಟ್ರೈ ಮಾಡಿದ್ವಿ 
ಏನೂ ಆಗಲಿಲ್ಲ ನಮಗೆಲ್ಲಾ 
ಕೈ ಕಾಲು ಎಲ್ಲವೂ ಹಗುರವಾಗಿ 
ನಡುಗಲಾರಂಭಿಸಿತು
ಅಂಥೋನಿ 
ಬಾಯಿಗೆ ಬಾಯಿಟ್ಟು ಶ್ವಾಸ ಕೊಟ್ಟು
ಜೋರಾಗಿ ಊದಿದ. 
ಹೊಟ್ಟೆಯ ಅದುಮಿ 
ನೀರನ್ನು ಹೊರ ತೆಗೆದ ಪ್ರಯಾಸ ಸಫಲವಾಯ್ತು  
ನೀರ ತೆಗೆದೊಡನೆ ಕೆಮ್ಮುತ್ತಾ 
ಸ್ವಾಶಿಸಲು ಪ್ರಾರಂಭಿಸಿದ ಸೈಮನ್.
ನಮ್ಮೆಲ್ಲರಿಗೂ ನಿಂತಿದ್ದ ಹೃದಯ 
ಬಡಿಯಲು ಶುರುವಾಯ್ತು.
ನಮ್ಮ ಶ್ವಾಸವೂ ನಾರ್ಮಲಾಯ್ತು.
ಸೈಮನ್ ನನ್ನು ಹೆಗಲ ಮೇಲೆ ಬಾರಿ ಬಾರಿ 
ಎತ್ಕೊಂಡು ಆಸ್ಪತ್ರೆ ಗೆ ಹೋದ್ವಿ . 
ಆಸ್ಪತ್ರೆಯ ಎಡಭಾಗದಲ್ಲಿ ಇದ್ದ 
ಪಿಂಕು ಬಣ್ಣದ ದ್ರವ ದೊಡ್ಡ ಗಾಜಿನ ಬಾಟಲಿಗಳ
ತುಂಬಿದ್ದವು. ಕಾಪರ್ ಸಲ್ಫೇಟ್ ನ ಹಸಿರು ಬಣ್ಣದ ದ್ರವ ಇನ್ನೊಂದರಲ್ಲಿ ಅದರ ಹಿಂದೆ ಕಾಂಪೌಂಡರ್ 
ಇದ್ದರು. ಡಾಕ್ಟರ್ ಇದ್ದಾರಾ ನೋಡ ಬೇಕಿತ್ತು 
ಎಂದು ಕೇಳಿದ್ದಕ್ಕೆ ನಮ್ಮನ್ನ ಡಾಕ್ಟರ್ ಹತ್ತಿರ ಕರೆದುಕೊಂಡು ಹೋದರು. ಅದೃಷ್ಟವಶ 
ಡಾಕ್ಟರ್ ಚೆನ್ನಬಸಪ್ಪನವ್ರು ಕಾರ್ಗಲ್ 
ನಿಂದ ಜೋಗ ಬಂದಿದ್ದರು.
ಅವರ ಮಗ ಹರ್ಷ 
ನಮ್ಮ ಹೈಸ್ಕೂಲ್ನಲ್ಲಿ ಒಂದು ವರ್ಷ ಜೂನಿಯರ್ 
ನಮ್ಮ ಕ್ರಿಕೆಟ್ ಟೀಮಿನ ಸ್ಪಿನ್ ಬೌಲರ್.
ನನ್ನನ್ನು ಕಂಡೊಡನೆ ಗುರುತಿಸಿ ಕೇಳಿದ್ರು 
ಏನಾಯ್ತುಂತ ನಡೆದದ್ದನ್ನ ವಿವರಿಸಿದೊಡನೆ 
ಸೈಮನ್ ನ ಪರೀಕ್ಷಿಸಿ ಚೆನ್ನಾಗಿದ್ದಾನೆ
ಎಂದು ಧೈರ್ಯ ಕೊಟ್ಟರು.
ಹಾಗೂ ಹೀಗೂ ಹೇಗೂ ದುರಂತ ದಿಂದ 
ಪಾರಾಗಿದ್ದನ್ನು ನೆನಸ್ಕೊಂಡು ಸಂತೋಷ ದಿಂದ 
ಜೋಗದಲ್ಲಿದ್ದ ಸೈಮನ್ ಮನೆಗೆ 
ಹೋಗಿ ಬಿಟ್ಟು ಬಂದೆವು 
ಐವತ್ತು ವರ್ಷಗಳು ಉರುಳಿ ಹೋದರೂ 
ಮತ್ತೆ ಚೆಕ್ ಡ್ಯಾಮ್ ನ ತಿರುಗಿ ನೋಡಲೇ ಇಲ್ಲಾ 
ಸಾವಿನ ದವಡೆಯಿಂದ ಬದುಕಿ ಬಂದದ್ದೋ ಏನೋ ಅದನ್ನು ಅಷ್ಟು ಹತ್ತಿರದಿಂದ ಕಂಡಿದ್ದೋ ಏನೋ 
ಅಥವಾ ನ್ಯೂಸ್ ಪೇಪರ್ನ ಸುದ್ದಿಯಾಗುವದರಿಂದ ಜಸ್ಟ್ ಎಸ್ಕೇಪ್ ಆಗಿದ್ದಕ್ಕೋ ಏನೋ 
ಈ ಘಟನೆಯನ್ನು ಮಾತ್ರ  ಸೊಳ್ಳೆ ಪತ್ರಿಕೆಗಾಗಿ 
ಬರೆಯಲು ಸಾಧ್ಯವಾಗಲಿಲ್ಲ.
ಹೀಗಾಗಿ ಸೊಳ್ಳೆ ಪತ್ರಿಕೆಗೆ ಪೂರ್ಣ ವಿರಾಮ ಕೊಡಬೇಕಾಗಿ ಬಂತು. 
ಸ್ಕೂಲ್, ಕಾಲೇಜು , ವೃತ್ತಿ , ಸಂಸಾರ , ನಿವೃತ್ತಿ ಯ ಕಾಲ ಚಕ್ರ ಉರುಳುತ್ತಾ....
ಐವತ್ತು ವರ್ಷಗಳ ನಂತರ,
ಯಾವ ಸೊಳ್ಳೆ ಕಚ್ಚಿತೋ ಏನೋ 
ಬರೆಯುವ ಚಟ ಮತ್ತೆ ಹಚ್ಕೊಂಡ್ತು .
ಆದ್ರೆ ಆರ್ಟ್, ಚಿತ್ರ, ಕಾರ್ಟೂನ್, 
ಬರೆಯೋ ಬಾಲ್ಯ ಸ್ನೇಹಿತ ಚಂದ್ರು 
ಎಲ್ಲಿದ್ದಾನೋ?








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.