HN ರವರ ಹುಡುಗ್ರು

ಒಂದುಕಡೆ ಪಂಪ ಮಹಾಕವಿ, 
ಇನ್ನೊಂದು ಕಡೆ ಡಿ.ವಿ.ಜಿ.ಯವರು,
ಜೀವಂತವಾಗಿಲ್ಲದಿದ್ದರೂ 
ಬೆಂಗಳೂರಿನ ಬಸವನಗುಡಿಯ ಬಳಿ 
ಒಳ್ಳೆಯ ವಿದ್ಯಾಲಯಕ್ಕೆ ದಾರಿ ತೋರಿಸೋ 
ರಸ್ತೆಗಳಾಗಿ, ಸೇರುವ ಜಾಗವೇ 
ನ್ಯಾಷನಲ್ ಕಾಲೇಜು. 
ಹಾಗೋ, ಹೀಗೋ, ಹೇಗೋ, ಕಾಲೇಜು 
ತಲುಪಿದ್ರೆ 
ಬೆಳಗ್ಗೆ ಹತ್ತು ಘಂಟೆ, 
ಎಲ್ರೂವೆ ಅಸೆಂಬ್ಲಿಯಲ್ಲಿ ಸೇರಿ 
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮದೇವ ದೇವ
ಒಟ್ಟುಗೂಡಿ ಪ್ರಾರ್ಥನೆ ಮುಗಿಸಿ ಅವರವರ 
ಕ್ಲಾಸ್ ರೂಂಗಳಿಗೆ ಹೋದ್ರೆ 
ನಾನೊಬ್ಬ 
ಪ್ರಿನ್ಸಿಪಾಲರ ರೂಮ್ ನ ಹೊರಗೆ ನಿಂತಿದ್ದೆ. 
ಇಡೀ ಕರ್ನಾಟಕದಲ್ಲಿ, 
ಬೇಡಾ ಬಿಡಿ, 
ಬೆಂಗಳೂರು ಯೂನಿವರ್ಸಿಟಿಯ 
ಪದವಿ ಪೂರ್ವ ಕಾಲೇಜ್, PUC
ಪರೀಕ್ಷೆಯಲ್ಲಿ ನ್ಯಾಷನಲ್ ಕಾಲೇಜಿಗೆ ಅಗ್ರಸ್ಥಾನ.
1968-69ರ PUC ಫಲಿತಾಂಶ ಬಂದಾಗ 
ಮೊದಲ ಹತ್ತು rank ಗಳಲ್ಲಿ 
ಒಂಬತ್ತು rank ಗಳನ್ನು ದಕ್ಕಿಸಿ ಕೊಂಡ ಕಾಲೇಜು 
ಬಸವನಗುಡಿ ನ್ಯಾಷನಲ್ ಕಾಲೇಜು.
ಪ್ರಿನ್ಸಿಪಾಲರು ಕ್ಲಾಸ್ ನಡೆಸಲು ಹೋಗಿದ್ದರಿಂದ 
ಅವರ ರೂಮ್ ಹೊರಗೆ 
ನನ್ನನ್ನು ನಿರೀಕ್ಷಿಸಲು ಹೇಳಿದರು.
ಸರಿ, ಈ ವೈಟಿಂಗ್ ಸಮಯದಲ್ಲಿ 
ನಾನು ಹೇಗೇ ಜೋಗ್ ಫಾಲ್ಸ್ ನಿಂದ 
ಬೆಂಗಳೂರು ನ್ಯಾಷನಲ್ ಕಾಲೇಜು 
ಪ್ರಾಂಗಣದಲ್ಲಿ, ಅನ್ನೋ ದೊಡ್ಡ ಕಥೆಯನ್ನ 
ಸಣ್ಣದಾಗ ಹೇಳ್ತೀನಿ. 
ನಾನು SSLC ಓದಿದ್ದು 
ಜೋಗ್ ಫಾಲ್ಸ್ ನಲ್ಲಿದ್ದ MSEB 
ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ.
ಸ್ಕೂಲ್ ರಿಸಲ್ಟ್ ಬರುವವರೆಗೂ 8,9, ಹಾಗೂ SSLC ಪ್ರಿಪರೇಟರಿ ಪರೀಕ್ಷೆಯಲ್ಲಿ ಯಾವಾಗಲೂ ಫಸ್ಟ್ ಬರುತಿದ್ದ ಮಮತಳನ್ನ ಹಿಂದೆ ಹಾಕಿ 
ನಾನು ಅಧಿಕ ಅಂಕ ಗಳಿಸಿ 
ನಮ್ಮ ಸ್ಕೂಲ್ಗೇ ಹಾಗೇಯೇ 
ಇಡೀ ಸಾಗರ ತಾಲೂಕಿಗೆ 
SSLC ಯಲ್ಲಿ ಪ್ರಥಮನಾಗಿ ನಿಂತೆ.
ಅಪ್ಪ ಅಮ್ಮನಿಗಂತು ಬಹಳ ಹೆಮ್ಮೆ 
ಹಾಗೇ ಭಾರೀ ಸಂತೋಷ.
ನಮ್ಮೂರಲ್ಲಿ ಕಾಲೇಜ್ ಇಲ್ಲದ್ದರಿಂದ 
ಸಾಗರದಲ್ಲಿದ್ದ ಲಾಲ್ ಬಹದ್ದೂರ್ 
ಶಾಸ್ತ್ರೀ ಕಾಲೇಜ್ಗೆ ಹೋಗ ಬೇಕಿತ್ತು. 
ಮನೆಯಿಂದ ದೂರ ಒಂದು ಕಾರಣವಾದ್ರೆ 
ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು 
ಬಿಟ್ಟು ಬೇರೆ ಸಬ್ಜೆಕ್ಟ್ ಇರಲಿಲ್ಲ. 
ಆ ಕಾಲದ ಫ್ಯಾಷನ್ ಅಥವಾ ಪ್ಯಾಶನ್
ಅಂದ್ರೆ ಡಾಕ್ಟರ್ ಅಥವಾ ಇಂಜಿನಿಯರ್ ಯಾವದಾದ್ರು ಒಂದು ಆಗೋದು.
ನಮ್ಮನ್ನೆಲ್ಲಾ ಯಾರು ಕೇಳೋವ್ರು. 
ಅಪ್ಪಂಗೆ ನಾನು ಡಾಕ್ಟರ್ ಆಗ ಬೇಕೂಂತ, 
ಅದು ಬೆಂಗಳೂರಿಗೆ ಹೋದ್ರೆ ಸಾಧ್ಯ ಅಂತ ನಿರ್ಣಯಿಸಿದರು.ಅದೂ ಅಲ್ಲದೆ 
ಬೆಂಗಳೂರಿನಲ್ಲಿ ಇಂಜಿನಿಯರಿಂಗ್ 
ಓದುತಿದ್ದ ಸುಂದರಣ್ಣನ ರೂಮಿನಲ್ಲಿದ್ದುಕೊಂಡು 
ಓದು ಮುಂದುವರಿಸಲೆಂದು ಹತ್ತಿರದ 
ತಾಳಗುಪ್ಪ ರೈಲ್ವೆ ಸ್ಟೇಷನ್ನಿಂದ ಬೆಂಗಳೂರಿಗೆ 
ರೈಲು ಗಾಡಿ ಹತ್ತಿಸಿ ಕಳುಹಿಸಿಯೇ ಬಿಟ್ರು.
ಮೊದಲಬಾರಿಗೆ ಅಮ್ಮ ಅಪ್ಪನ ಆಗಲಿ 
ಅತ್ತುಕೊಂಡೇ ಬೆಂಗಳೂರಿಗೆ ಹೋದೆ.
ಅಣ್ಣ ಸಿಟಿ ರೈಲ್ವೆ ಸ್ಟೇಷನ್ ಗೆ ಬಂದು
ನನ್ನನ್ನು NRಕಾಲೋನಿಯಲ್ಲಿದ್ದ
ರೂಮ್ ಗೆ ಕರೆದುಕೊಂಡು ಹೋದ.
ಜೂನ್ ತಿಂಗಳ ಎರಡನೇ ವಾರ 
ಗ್ಯಾಸ್ ಕಾಲೇಜು, ವಿಜಯ ಕಾಲೇಜು, ಆಚಾರ್ಯ ಪಾಠಶಾಲಾ, ಎಲ್ಲಾ ಪ್ರಯತ್ನ ಪಟ್ಟು ಸಿಗದಿದ್ದಾಗ 
ನಾನೇ ಕೊನೆಯ ಚಾನ್ಸ್ ಅಂತ 
ನ್ಯಾಷನಲ್ ಕಾಲೇಜ್ ಗೆ ಬಂದಿದ್ದೆ 
ಅದೂ ಅಲ್ದೆ NR ಕಾಲೋನಿ ಯಲ್ಲಿದ್ದ 
ನಮ್ಮಣ್ಣನ ರೂಮ್ಗೆ ಹತ್ತಿರ ಬೇರೆ.
ನಿರೀಕ್ಷಿಸಿದ್ದ ಆ ಸಮಯವೂ ಬಂತು.
ಮಧ್ಯಾಹ್ನ 1.30 ಆಯ್ತು.  
HN ಬಂದ್ರು ಬಂದ್ರೂಂತ, ಸ್ವಲ್ಪ ಗದ್ದಲ 
ಸ್ವಲ್ಪ ಗಡಿಬಿಡಿ ನಂತರ ಶಾಂತವಾಯ್ತು 
ಇದಕ್ಕೆ ಮುಂಚೆ ಅವರನ್ನ ನೋಡೂ ಇರಲಿಲ್ಲ.
ಅವರು ಯಾರು ಅವರ ಬಗ್ಗೆ ಏನೂ ಗೊತ್ತಿರಲಿಲ್ಲ 
ಆಗಷ್ಟೇ ಗೊತ್ತಾಗಿದ್ದು ಅವ್ರೇ HN ಅಂತ 
ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲ್. 
ಬಿಳಿ ಪಂಚೆ, ಬಿಳಿ ಜುಬ್ಬಾ, ಬಿಳಿ ಗಾಂಧಿ ಟೋಪಿ,
ಎಲ್ಲವೂವೆ ಖಾದಿಯಲ್ಲಿ 
ಇಷ್ಟೊಂದು ಸಿಂಪಲ್ ಪ್ರಿನ್ಸಿಪಾಲ್
ಬೇರೆ ಯಾರೂ ಇರಲಾರರು.
ಅವರ ವೇಷ ಭೂಷಕ್ಕೂ ಅವರ ಓದಿಗೂ 
ಏನೂ ಸಂಬಂಧ ಇಲ್ಲದಂತೆ ಇದ್ದ 
ಡಾಕ್ಟರ್ ಹೆಚ್ ನರಸಿಂಹಯ್ಯ ನವರು 
ಹೆಚ್ ಎನ್ ಎಂದು ವಿಖ್ಯಾತಿ ಹಾಗೂ ಜಗಜ್ಯಾತಿ, 
ನ್ಯೂಕ್ಲಿಯರ್ ಫಿಸಿಕ್ಸ್ ನಲ್ಲಿ ಅಮೇರಿಕಾದ
ಓಹೀಯೋ ಯೂನಿವರ್ಸಿಟಿ ಯಲ್ಲಿ 
ಪಿಎಚ್ಡಿ ಮಾಡಿ ಮತ್ತೆ ನ್ಯಾಷನಲ್ ಕಾಲೇಜಿಗೆ 
ಮರಳಿ ಫಿಸಿಕ್ಸ್ ಲೆಕ್ಚರರ್ ಆಗಿ ಕ್ಲಾಸ್ ತಗೋಂತಿದ್ರು.
ಕಾಲೇಜು ಮತ್ತೆ ಪಕ್ಕದಲ್ಲಿದ್ದ ಹಾಸ್ಟೆಲ್ ಅವರ ಜೀವ, ವಿದ್ಯಾರ್ಥಿಗಳ ಜೊತೆ ಜೀವನ.
ಇವೆಲ್ಲವನ್ನೂ ಕಾರಿಡಾರ್ನಲ್ಲಿ ನಿಂತಿದ್ದ ಹಿರಿಯರೊಬ್ಬರು ಹೇಳುತ್ತಿದ್ದರು.
ಅಷ್ಟರಲ್ಲಿ ನನ್ನನ್ನು 
ಒಳ ಬರಲು ಹೇಳಿದರು. 
ಖಾಕೀ ಪ್ಯಾಂಟು,ಬಿಳಿ ಶರ್ಟು 
ಚಪ್ಪಲಿಯಲ್ಲಿದ್ದ ನಾನು ಒಳ ಹೋದೆ. 
ಮೇಜಿನ ಹತ್ತಿರ ನಿಂತಿದ್ದ HN ರವರು 
ದೊಡ್ಡ ಕನ್ನಡಕವ ಸರಿಸಿ, 
ನಾನು ಗಳಿಸಿದ ಮಾರ್ಕ್ ಶೀಟನ್ನು ಅವಲೋಕಿಸಿ,ನನ್ನನ್ನು ನೋಡಿ 
ಏನ್ ಹೆಸರು, ಯಾವ ಊರುಂತ  
ಕೇಳಿದರು. ಹಾಗೇನೇ, ಸ್ವಲ್ಪ ಮೃದುವಾಗಿ 
ಪಕ್ಕದಲ್ಲೇ ನಿಂತಿದ್ದ ವೈಸ್ ಪ್ರಿನ್ಸಿಪಾಲರನ್ನು 
ಉದ್ದೇಶಿಸಿ ಹೇಳಿದರು. ನೋಡಿ ಶ್ರೀಧರ್   
ಈ ತರಹ ಹುಡುಗರಿಗೆ ಖಂಡಿತವಾಗಲೂ 
ಸೀಟ್ ಕೊಡಬೇಕು, ಅವನು ಕೇಳುವ 
ಪಿಸಿಬಿ ಸೆಕ್ಷನ್ನಲ್ಲಿ ಸೇರಿಸ್ಕೊಳ್ಳಿ ಅಂತ 
ಗೌರಿಬಿದನೂರಿನಿಂದ ಬೆಂಗಳೂರಿಗೆ ನಡೆದುಕೊಂಡೇ ಬಂದು ಕಾಲೇಜಿನಲ್ಲಿ ಓದಿದ್ದನ್ನು ಹೇಳಿ
ಮುಗುಳ್ನಕ್ಕು ಚೆನ್ನಾಗಿ ಓದೂಂತ 
ಬೆನ್ನ ತಟ್ಟಿ ಕಳುಹಿಸಿ ಕೊಟ್ರು.
ಯಾರ ಒಂದು ಸಿಫಾರಿಶು ಇಲ್ಲದೆ 
ಸೀಟು ಸಿಕ್ಕಿದ್ದು ಒಂದು ಪವಾಡವೇ 
ಕ್ಷಮಿಸಿ HN ರವರಿಗೆ ಹಿಡಿಸದ ಶಬ್ದ 
ಪವಾಡ ಅಂದ್ರೆ ಡೋಂಗಿ ಪವಾಡ.
ಖುಷಿ ಖುಷಿಯಾಗಿ ಕಾಲೇಜು ಸೇರುವ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಿ ಪ್ರತಿಷ್ಟಿತ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾದೆ.
ಹೊಸ ಊರು, ಹೊಸ ವಾತಾವರಣ
ಕನ್ನಡ ಮೀಡಿಯಂ ನಿಂದ ಇಂಗ್ಲಿಷ್ 
ಸಬ್ಜೆಕ್ಟ್ ಗಳನ್ನು ಅಂದ್ರೆ ವಿಷಯಗಳನ್ನ
ಓದಿ ಅರ್ಥ ಮಾಡಿಕೊಳ್ಳುವದರಲ್ಲಿ 
ಸಾಕು ಸಾಕಾಗಿ ಹೋಗಿತ್ತು. 
ನಮಗೆ ಗೊತ್ತಿದ್ದ ಹರುಕು ಮುರುಕು
ಇಂಗ್ಲಿಷ್...
it ಅದು but ಆದ್ರೆ 
what ಏನು ಅನ್ನೋ ಗುಂಪು
ಬಹುತೇಕ 
ವಿದ್ಯಾರ್ಥಿಗಳು ಬಲು ಚುರುಕು. 
ಪಿರಿಯಡ್ ಗಳ ನಡುವೆ ಘಂಟೆ 
ಬಾರಿಸುವದನ್ನೇ ಕಾಯುತ್ತಿದ್ದ ಹಾಗೆ 
ಕೀನ್ ಟೈಪ್ ಕುಡುಮಿಗಳು 
ಫಸ್ಟ್ ಬೆಂಚ್ ಹಿಡಿಯೋರು ಹೀಗಾಗಿ 
ನಮಗೆ ಲಭ್ಯವಾಗಿದ್ದು ಕೊನೆಯ ಬೆಂಚೇ.
ಸ್ಕೂಲಿನ ವಾತಾವರಣವೇ ಮುಂದುವರಿದ 
ಹಾಗಿತ್ತು. ಸಿನಿಮಾಗಳಲ್ಲಿ ಕಂಡು ಬಂದ ಹಾಗೂ 
ನಾವು ಅಂದು ಕೊಂಡಿದ್ದ ಕಾಲೇಜೇ ಬೇರೆ. 
HN ರವರು ಕನ್ನಡದಲ್ಲಿ ಅರ್ಥವಾಗದ
ಕ್ಲಿಷ್ಟ ಫಿಸಿಕ್ಸ್ ನ್ನು ಬಲು ಸುಲಭ ವಾಗಿ 
ಉದಾಹರಣೆ ಗಳೊಂದಿಗೆ ಕಲಿಸಿ ಕೊಡುತಿದ್ದರು.
ಅವರ ಇನ್ನೊಂದು ಗುರುಮಂತ್ರ 
ಯಾವ ವಿಷಯವೇ ಆಗಲಿ 
ಪ್ರಶ್ನಿಸದೆ ಒಪ್ಪಬೇಡಿ,
ಕ್ವೆಶ್ಚನ್ ಮಾಡಿ, ಪ್ರಶ್ನಿಸಿ
ಹೇಗೆ? ಯಾಕೆ? ಎಂದು. 
ಅದರಲ್ಲೂ 
ಮೂಢನಂಬಿಕೆ ಗಳ ವಿರುದ್ಧ ಹೋರಾಡಲು 
ಜನರಲ್ಲಿ ಸೈನ್ಟಿಫಿಕ್ ವಿಚಾರ ಜಾಗ್ರತಿಸಲು 
ಬೆಂಗಳೂರು ಸೈನ್ಸ್ ಫೋರಮ್ ಸ್ಥಾಪಿಸಿದವರು. 
PUC ಪರೀಕ್ಷೆ ಯಲ್ಲಿ ನಾನು ಎಣಿಸಿದ 
ಹಾಗೇ ಮಾರ್ಕ್ ಬರಲಿಲ್ಲ ಮತ್ತೆ ಕೃಷಿ ವಿಶ್ವ ವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ಯಲ್ಲಿ ಒಳ್ಳೆಯ ಅಂಕ ಗಳಿಸಿದ್ದರಿಂದ ನಾಲ್ಕು ವರ್ಷದ 
ಪದವಿಯೇತ್ತರ ಫಿಶರೀಸ್ ಕಾಲೇಜಿನಲ್ಲಿ 
ಸೀಟ್ ಸಿಕ್ತು. ಆಗ ಅಂದುಕೊಂಡೆ
ನಮಗೊಂದು ಅವಕಾಶ ಸಿಕ್ಕರೆ ಅದನ್ನು ಪರಿಪೂರ್ಣವಾಗಿ ಉಪಯೋಗಿಸಿ ಕೊಳ್ಳಬೇಕೆಂದು 
ಹೊಸ ಕೋರ್ಸ್ BFSc ಅಂತ  
ಹೊಸ ಊರು ಮಂಗಳೂರು 
ಚೆನ್ನಾಗಿ ಓದಿ ಒಳ್ಳೆಯ ಅಂಕಗಳು ಪ್ರಾಪ್ತಿಯಾಯ್ತು 
BFSc ಓದಿ ಮುಗಿಸಿದ ತಕ್ಷಣ 
ನನಗೆ ಸ್ನಾತ್ತಕೋತ್ತರ MFSc 
ಸೀಟು ಸಿಕ್ಕಿತ್ತು 
ಅದೇ ಸಮಯ ಕರ್ನಾಟಕ ಸರ್ಕಾರದ ಫಿಶರೀಸ್ ಡಿಪಾರ್ಟಮೆಂಟ್ ನಲ್ಲಿ ಸಹಾಯಕ ಸೂಪರ್ಡೆಂಟ್ ಹುದ್ದೆ ದೊರಕಿತ್ತು.ಅಪ್ಪ ಸೇವಾ ನಿವೃತ್ತರಾಗಿ ಸಕುಟುಂಬ ಸಮೇತ ಕಾರ್ಗಲ್ ನಿಂದ 
ಬೆಂಗಳೂರು ವಸಂತ ನಗರಕ್ಕೆ ಶಿಫ್ಟ್ ಆಗಿದ್ದರು.
ಕೆಲಸಕ್ಕೆ ಹೋಗಲೇ ಬೇಕಾದ ಅವಶ್ಯಕತೆ 
ಸರಿ ಒಮ್ಮೆ HN ರವರನ್ನು ಕಂಡು 
ವಿಷಯ ತಿಳಿಸಿ ಅವರ ಸಲಹೆ ಪಡೆಯೋಣವೆಂದು ಅವರಿದ್ದ ಹಾಸ್ಟೆಲ್ 
ರೂಮಿಗೆ ಹೋದೆ. ಯಾವಾಗಲೂ ವಿದ್ಯಾರ್ಥಿಗಳ ಜುಂಡೊಡನೆ ಇದ್ದವರನ್ನ ಕಂಡೆ, ಕೆಲಸಕ್ಕೆ ಹೋಗಬೇಡ, 
ಸ್ನಾತ್ತಕೋತ್ತರ MFSc ಅದೂ ಅಲ್ಲದೆ
ಸ್ಕಾಲರ್ಷಿಪ್ ಬೇರೆ ಸಿಗೋದ್ದರಿಂದ
ಓದೂಂತ ಪ್ರೋತ್ಸಾಹಿಸಿ ಕಳಿಸಿದರು. 
ಅದರ ಫಲಸ್ವರೂಪ 
ARS (ಅಗ್ರಿಕಲ್ಚರ್ ರಿಸರ್ಚ್ ಸರ್ವಿಸ್ ) 
ICAR ನಲ್ಲಿ ವಿಜ್ಞಾನಿ ಹುದ್ದೆ ಮತ್ತೆ 
ಅದರಿಂದ IAS ಪಾಸು ಮಾಡಿ 
ಮಧ್ಯ ಪ್ರದೇಶದಲ್ಲಿ ಸೇವೆ ಸಲ್ಲಿಸಲು 
ಶಿಕ್ಷಾಭಾಗ್ಯದ ಬಾಗಿಲ ತೆರೆದು ದಾರಿ ತೋರಿಸಿದ ದೀರ್ಘದರ್ಶಿ HN ರವರು ಅಂತಂದ್ರೆ 
ಅತಿಶಯೋಕ್ತಿಯಲ್ಲ.
ನ್ಯಾಷನಲ್ ಕಾಲೇಜಿನಿಂದ ಫಿಶರೀಸ್ ಕಾಲೇಜಿಗೆ 
ಸೇರಿ ಕೊಂಡಾಗ ಅರರೆ... 
ಇವನನ್ನು ನ್ಯಾಷನಲ್ ಕಾಲೇಜ್ ನಲ್ಲಿ ನೋಡಿದ್ದೀನಲ್ಲಾ... ಹೌದು 
ಎಸ್. ಅಯ್ಯಪ್ಪನ್ ಸಿಕ್ಕಿದ್ರು... 
ಮಿಸ್ ಮಾಡೋಂಗೆ ಇಲ್ಲಾ 
ಮತ್ತೆ ಪರಿಚಯ ವಾದ 
ಎಮ್ ಮಂಜುನಾಥ್ ರವರೂ
ಸಹ ನ್ಯಾಷನಲ್ ಕಾಲೇಜ್ ಅಂತ ಗೊತ್ತಾಯ್ತು 
ಐಸಿಂಗ್ ಆನ್ ದಿ ಕೇಕ್ ಅನ್ನೋ ರೀತಿಯಲ್ಲಿ 
ರೂಮ್ ಮೇಟ್ ಆಗಿ ವೆಂಕಿ ಅನ್ನೋ 
ಬಿ.ವೆಂಕಟೇಶ್ ನವ್ರು ಸಿಕ್ಕಿದ್ದು.
ಮತ್ತೆ ಹಾಸ್ಟೆಲ್ ನಲ್ಲಿ ಪರಿಚಯರಾದ
ಉದಯಕುಮಾರ್ ಮಿತ ಭಾಷಿ
ರಾವ್ ಸಾಹೇಬ್ ಆರ್ ಮೋಹಿತೆ
ಇವರೂವೆ ನ್ಯಾಷನಲ್ ಕಾಲೇಜ್ ನ
ಸಹಪಾಠಿಗಳು ನಮ್ಮ ಬ್ಯಾಚ್ನಲ್ಲಿಯೇ
ಇಪ್ಪತ್ತೈದರಲ್ಲಿ ಐದು ಮಂದಿ
ಸಂತೋಷಕ್ಕೆ ಎಲ್ಲೆಯೇ ಇಲ್ಲಾ.
ನನ್ನೆಲ್ಲಾ ಪ್ರಗತಿ ಯಲ್ಲಿ ಜೊತೆ ನಿಂತು 
ಪ್ರೋತ್ಸಾಹಿಸಿದವರು ಈ ನ್ಯಾಷನಲ್ ಕಾಲೇಜಿನ ಸಂಗಾತಿಗಳು.
ನಾವು ಓದುತ್ತಿದ್ದಾಗ 
ಫಿಶರೀಸ್ ಕಾಲೇಜಿನಲ್ಲಿ  
ಎರಡು ವಿರೋಧಾರ್ಥಿ ಗುಂಪುಗಳು 
ಒಂದು ನಾಚಿಮುತ್ತು ಗ್ಯಾಂಗ್ 
ಇನ್ನೊಂದು ವೆಂಕಿ ಗ್ಯಾಂಗ್  
ಕುಡಿಯೋರು ಬಡಿಯೋರ ಗುಂಪು
ನಾಚಿಮುತ್ತುದಾದ್ರೆ
ಅದನ್ನ ಪ್ರಶ್ನಿಸೋದು ಚಾಲೆಂಜ್ ಮಾಡೋದು 
ನ್ಯಾಯಕ್ಕಾಗಿ ಹೊರಾಡೋ ಗುಂಪು 
ವೆಂಕಿದು 
ನಾಚಿಮುತ್ತು ಗ್ಯಾಂಗ್ ನಲ್ಲಿ ಪಟ್ಟಾಭಿ, ಸ್ಟೀಫನ್, ಮ್ಯಾತ್ಯು, ಮತ್ತಿತರರು ಬೆಂಗಳೂರು, ಸೇಲಮ್ ನಾಮಕ್ಕಲ್ ನ ವಿಭಿನ್ನ ಕಾಲೇಜ್ ಗಳಲ್ಲಿ ಓದಿದವರು 
ವೆಂಕಿ ಗ್ಯಾಂಗ್ ನಲ್ಲಿ ನಾನು, ಐಪಿ, ಮಂಜು 
ಮತ್ತಿತರರು ಬಹುತೇಕ ಕರ್ನಾಟಕದ ವಿಭಿನ್ನ ಕಾಲೇಜುಗಳಲ್ಲಿಂದ ಬಂದವರು 
ಇದರಲ್ಲಿ ಇಂಟೆರೆಸ್ಟಿಂಗ್ ವಿಷಯ ಏನಂದ್ರೆ 
ವೆಂಕಿ ಗ್ಯಾಂಗ್ ನ ಮಿತ್ರರಾದ 
ನಾನು, ಐಪಿ, ಮಂಜು, ವೆಂಕಿ,ಎಲ್ರೂವೆ
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಓದಿದವರು. 
ನಾಚಿಮುತ್ತು ಗ್ಯಾಂಗ್ ರ ವಾದ ಊಟದಲ್ಲಿ ಬೀಫ್ ಸೇರಿಸಿಕೊಳ್ಳಬೇಕೆಂಬುದು.
ಆದ್ರೆ ನಮ್ಮ ವಾದ ಹಾಸ್ಟೆಲ್ ನಲ್ಲಿ ಬಹುತೇಕ ನಿವಾಸಿಗಳ ಇಚ್ಛೆಗನುಸಾರ ಊಟದ ವ್ಯವಸ್ಥೆ ಇರಬೇಕು. ಬೀಫ್ ಬಿಲ್ಕುಲ್ ಬೇಡಾನ್ನೋದೇ.  
ಅದಕ್ಕಾಗಿ ವಾದ ಪ್ರತಿವಾದಗಳನ್ನು ದಾಟಿ  
ಇನ್ನೇನೂ ಹೊಡಿಯೋ ಬಡಿಯೋ ಸ್ಥಿತಿ ಬಂತು, ಅಂದಾಗ ಹಾಸ್ಟೆಲ್ ವಾರ್ಡನ್ ಶೇಷಪ್ಪ 
ಬಂದು ಸ್ವಲ್ಪ ಕಟುವಾಗಿ ಮಾತಾಡಿ 
ನಾಚಿಮುತ್ತು ಗ್ಯಾಂಗ್ ಗೆ ಚೇತಾವಣಿ ಕೊಟ್ಟು 
ನಮಗೆಲ್ಲಾ ಆಶ್ವಾಸನೆ ಕೊಟ್ಟು ಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ನೋಡಿ HN ರವರ ಜೊತೆ ಇದ್ದ ಅನುಭವ ಹಂಚಿಕೊಳ್ತಾ ನನ್ನ ಪುರಾಣ ವನ್ನು ಒಸಿ ಜಾಸ್ತಿ 
ಸೇರಿಸ್ಬಿಟ್ಟೇ.
ಬೆಂಗಳೂರಿಗೆ ನೆಲೆಯಾಗಿ ಇರಲು ಬಂದ ಅಪ್ಪ ಅಮ್ಮ ಅಕ್ಕ ತಂಗಿಯರಿಗೆ ಹೊಂದಿ ಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು 
ಅದೊಂದು ಗುರುವಾರ 
ಮನೆಯಲ್ಲಿ ದಿಢೀರ್ ಅಂತ 
ಶ್ರೀ ಸತ್ಯಸಾಯಿಬಾಬಾ ರ ಗುಂಗುರು ಕೂದಲಿನ ಫೋಟೋ ದೇವರ ಕೋಣೆ ಯಲ್ಲಿ ನೋಡಿ 
ಯಾರು ತಂದಿದ್ದು ಎಂದು ಕೇಳಲು ಸಜಂತಕ್ಕ ಹೇಳಿದ್ರು ಬಹಳ ಪವರ್ಫುಲ್ ದೇವ್ರು,   
ತಿರುಜ್ಞಾನಮ್ ಮನೆಯಲ್ಲಿ ಫೋಟೋದಿಂದ 
ವಿಭೂತಿ ಬರುತ್ತಿದೆ. ಅದನ್ನ ಕಣ್ಣಾರೆ ನೋಡಿ 
ಈ ಫೋಟೋ ತಂದೇಂತ. ನೋಡಕ್ಕಾ 
ಇದನ್ನೆಲ್ಲಾ ನಂಬ ಬೇಡಾಂತ ಹೇಳ್ದೆ.
HN ಹೇಳಿದ್ದು ಜ್ಞಾಪಕಕ್ಕೆ ಬಂತು.
ಪ್ರಶ್ನಿಸದೆ ಒಪ್ಪಬೇಡಿ, 
ಶ್ರೀ ಸತ್ಯಸಾಯಿಬಾಬಾ 
ಪವಾಡ ಪುರುಷರು.
ಶೂನ್ಯದಿಂದ ಆತ್ಮಲಿಂಗ 
ಸ್ಪಟಿಕ, ವಾಚ್ಗಳು ವಿಭೂತಿ ಪ್ಯಾಕೆಟ್ ಗಳು 
ಬರೀ ಕೈ ನಿಂದ ತಮ್ಮ ಭಕ್ತರಿಗೆ ನೀಡುತ್ತಾರೆ 
ಅದಕ್ಕೆ HN ಸತ್ಯಸಾಯಿಬಾಬಾರನ್ನ ಬರೀ ಕೈ ಯಲ್ಲಿ ಕುಂಬಳಕಾಯಿ ತರಿಸಿ ಎಂದು ಪ್ರಶ್ನಿಸಿದ್ದರು.
ಅದಲ್ಲದೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ 
ಪವಾಡ ಮತ್ತು ಪರೀಕ್ಷಿಸಿ ನೋಡಬಹುದಾದ ಮೂಢನಂಬಿಕೆಗಳ ತನಿಖಾ ಸಮಿತಿ ಯನ್ನು ನೇಮಿಸಿದ್ದರು. ಶ್ರೀ ಸತ್ಯ ಸಾಯಿಬಾಬಾರ 
ಅನನ್ಯ ಭಕ್ತರೊಬ್ಬರನ್ನು ಗವರ್ನರ್ ಆಗಿ 
ಸರ್ಕಾರ ನೇಮಿಸಿದಾಗ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪದಕ್ಕೆ ರಾಜೀನಾಮೆ ಕೊಟ್ಟು ಮತ್ತೆ 
ನ್ಯಾಷನಲ್ ಕಾಲೇಜಿನಲ್ಲಿ 
ಲೆಕ್ಚರರ್ ಆಗಿ ಫಿಸಿಕ್ಸ್ ಪಾಠವ 
ನಡೆಸಲು ಬಂದವರು ನಮ್ಮ HN.
ಇಂದು ನಮಗೆಲ್ಲರಿಗೂ 
ಅರವತ್ತು ವರ್ಷಗಳು ದಾಟಿದೆ. 
ನಾವೆಲ್ಲಾ ಒಂದಲ್ಲ ಒಂದು 
ಪ್ರತಿಷ್ಟಿತ ಪದವಿಗಳಲ್ಲಿದ್ದು
ನಿವೃತ್ತರಾಗಿದ್ದೇವೆ.
HN ಈಗ ನಮ್ಮೊಡನಿಲ್ಲ.  
ಆದ್ರೆ ಅವರು ನಮಗಾಗಿ ಬಿಟ್ಟು ಹೋದ 
ಸರಳತೆ, ಸಹಜತೆ, ನ್ಯಾಯಪರತೆ, 
ಹ್ಯಾಗೋ ನಮ್ ಜೊತೆ ನಮ್ಮೊಟ್ಟಿಗೇ
ಅಂಟಿಕೊಂಡು ಬಂದು ಬಿಟ್ಟಿದೆ.
ಅದು ನ್ಯಾಷನಲ್ ಕಾಲೇಜಿನ ಕೊಡುಗೆಯೋ?
ಅಥವಾ HN ರವರದ್ದೋ?
ಅರರೆ...ಅದೆರಡೂ ಒಂದೇ ಅಲ್ವೇ  
Dr.B.ವೆಂಕಟೇಶ್, Dr. S.ಅಯ್ಯಪ್ಪನ್, 
M.ಮಂಜುನಾಥ್, Dr RR ಮೋಹಿತೆ,
K S ಉದಯಕುಮಾರ್, K.ಸುರೇಶ ... ನಾವೆಲ್ಲರೂವೇ 
HN ರವರ ಹುಡುಗ್ರು. 
ಹಾಗಲ್ಲ 
ಸರಳತೆ, 
ಸಹಜತೆ, 
ನ್ಯಾಯ ಪರತೆ 
ಸೈನ್ಟಿಫಿಕ್ ಟೆಂಪೆರ್ 
ಇರೋರು 
ಎಲ್ರುವೇ ಯಾವ ಕಾಲೇಜ್ 
ಆದ್ರೆ ಏನು 
ಎಲ್ಲಿಂದ ಬಂದಿದ್ದರೇನು ಅವರೆಲ್ಲರೂವೆ 
HN ರವರ ಹುಡುಗ್ರೇ  

ಕಾಮೆಂಟ್‌ಗಳು

  1. ನನ್ ಕ್ಲಾಸ್ಮೇಟ್ ರೂಮ್ ಮೇಟ್ ದಿವಂಗತ ಶ್ರೀ ಕೆ. ಎಸ್. ಉದಯಕುಮಾರ್ ರವರ ಬಗ್ಗೆ ಯಾಕೆ ಮರೆತನೋ? ಬಹುಮುಖ ಪ್ರತಿಭಾ ಶಾಲಿ ನ್ಯಾಷನಲ್ ಕಾಲೇಜು ವಿದ್ಯಾರ್ಥಿ BFSc ಮುಗಿಸಿ IIM Ahmedabad ನಲ್ಲಿ MBA ಮಾಡಿ ಸ್ವತಂತ್ರರಾಗಿ ಉದ್ಯಮ ನಡೆಸಿ ಸಾಧಿಸಿದವರು. ಈಗ ನಮ್ಮೊಡನಿಲ್ಲ. ನಮನ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.