ಅದ್ಲಾ ಬದ್ಲಿ
ಅದ್ಲಾ ಬದ್ಲಿ
ಕಾಲೇಜು ಮಿತ್ರರಾದ
ವೆಂಕಿ ಎನ್ನುವ ವೆಂಕಟೇಶ,
ಅಶು ಅನ್ನುವ ಅಶ್ವಥ್ಥ,
ಐಪಿ ಅನ್ನೋ ಅಯ್ಯಪ್ಪನ್
ಸುರೇಶ ಅದು ನಾನು,
ಮಂಗಳೂರಿನ ಫಿಶರೀಸ್ ಕಾಲೇಜ್ ನಲ್ಲಿ
ಮೊದಲು BFSc ನಂತರ,
ಮತ್ಸ್ಯ ವಿಜ್ಞಾನದಲ್ಲಿ ಸ್ನಾತ್ತಕೋತ್ತರ
MFSc ಡಿಗ್ರಿಯ ಮುಗಿಸಿ
Agricultural Research Service (ARS)ನ ಕಾಂಪಿಟಿಟಿವ್ ಪರೀಕ್ಷೆಯ ಪಾಸು ಮಾಡಿ
ICAR ನ ಮತ್ಸ್ಯ ವಿಜ್ಞಾನಿಗಳಾದೆವು.
ಕರ್ನಾಟಕದಲ್ಲಿ ಕೆಲಸ ಸಿಗದಿದದ್ದಾಗ,
ಹುಡುಗ್ರಗೆ ಏನೋ ಐಬು ಇರಬೇಕೂಂತ
ಕನ್ಫರ್ಮ್ ಆಗಿ ಹೇಳ್ತಿದ್ದ ಬಂಧುಗಳನೆಲ್ಲಾ
ಅಗಲಿ, ಪಶ್ಚಿಮ ಬಂಗಾಳದ
24 ಪರಗಣ ಜಿಲ್ಲೆಯ ಹೂಗ್ಲಿ ತೀರದ
ಬ್ಯಾರಕ್ ಪೋರ್ ನಲ್ಲಿ ಕೆಲಸಕ್ಕೆ ಸೇರ್ಕೊಂಡು
ಕಾಲೇಜು ಮಿತ್ರರಿಂದ ವಿಜ್ಞಾನಿ ಮಿತ್ರರಾದೆವು.
ವೆಂಕಿಗೆ ಬ್ಯಾರಕ್ ಪೋರ್ ನಲ್ಲೇ
ಡಾಕ್ಯುಮೆಂಟೇಷನ್ ಸೆಕ್ಷನ್ ನಲ್ಲಿ ಪದ ಸ್ಥಾಪನೆ.
ನನ್ನನ್ನು ಬೆಂಗಳೂರಿನಿಂದ ಸುಮಾರು 1432 ಕೀಲೋಮೀಟರ್ ದೂರದಲ್ಲಿದ್ದ ಓಡಿಸ್ಸಾದ ಕೌಶಲ್ಯಗಂಗಾ,ಭುಬನೇಶ್ವರ್ ಹತ್ತಿರ ಸ್ಥಾನಾಂತರಿಸಿದ್ದರು.ನನಗಾದ್ರೂ ಪರವಾಗಿಲ್ಲ
ಅಶ್ವಥ್ನನ್ನು ಕಾಕದ್ವೀಪದ ವಿಜ್ಞಾನಿಗಳಾಗಿ
ಕಾಕದ್ವೀಪದ ಹೆಸರು ಕೇಳಿರಲಾರಿರಿ
ಇರೋದೋ ಪೂರ್ವ ದಿಕ್ಕಿನಲ್ಲಿ
ಆದ್ರೆ ಹೆಸರು ಪಶ್ಚಿಮ ಬಂಗಾಲ ಅಲ್ಲಿಯ
ಸುಂದರ್ಬನದ ಸುಂದರವಾದ ದ್ವೀಪವೇ
ಕಾಕದ್ವೀಪ. ಬೆಂಗಳೂರಿನಿಂದ ಸುಮಾರು
1950ಕಿಲೋಮೀಟರ್ ದೂರದಲ್ಲಿ ಸ್ಥಾನಾಂತರಿಸಿದ್ದರು. ಐಪಿ ಅದ್ರಷ್ಟಶಾಲಿ,
ಅಯ್ಯಪ್ಪನ್ ರವರನ್ನು ಬೆಂಗಳೂರಿಗೆ ಸ್ಥಾನಾಂತರಿಸಿದ್ದರು.ಹೆಚ್ಚು ಕಮ್ಮಿ
ಅವರವರ ಹೊಸ ಸ್ಥಾನಕ್ಕೆ
ಹೊಂದಿಕೊಳ್ಳೋ ಪ್ರಯಾಸ
ಒಲ್ಲದ ಮನಸ್ಸಿನಿಂದ ಜಾರಿ ಇತ್ತು.
ಸರಿ ಹೊಂದಾಣಿಕೆಯ ಮೊದಲ ಹೆಜ್ಜೆ
ಒಳ್ಳೆಯ ಮನೆ, ಒಳ್ಳೆಯ ಮನೆ ಮಾಲೀಕ
ನಮಗೆ ದೊರಕಿದ.
ಅದು ದೊಡ್ಡ ಮನೆಯ ಒಂದು ಭಾಗ
ನಂಬರ್ 740, ಶಹೀದ್ ನಗರ
ಭುಬನೇಶ್ವರ್. ನಮಗೇ ಅಂದ್ರೆ
ನಾನು ಮತ್ತೆ ಜಾರ್ಜು ಹೌಸ್ ಮೇಟ್ಸ್.
ಮದ್ರಾಸಿನ ಜಾರ್ಜು ಮತ್ತೆ ನಾನು
ಮತ್ಸ್ಯ ವಿಜ್ಞಾನಿಗಳು
ನಮಗಾಗಿ
ಮತ್ಸ್ಯ ವಿಜ್ಞಾನ ದಲ್ಲಿ
ಶೋಧಿಸಲು ಏರ್ಪಡಿಸಿದ್ದ ಫೆಸಿಲಿಟಿ .
ಭುಬನೇಶ್ವರದ ಬಳಿಯಿದ್ದ ಕೌಶಲ್ಯಗಂಗಾದ
ಫ್ರೆಶ್ ವಾಟರ್ ಅಕ್ವಾ ಕಲ್ಚರ್ ರಿಸರ್ಚ್ ಅಂಡ್
ಟ್ರೈ ನಿಂಗ್ ಸೆಂಟರ್ FARTC.ನಲ್ಲಿತ್ತು.
ನಮ್ ಪಕ್ಕದ್ ಮನೆ
ಸಿಸಿರ್ ಸಾಹೂ M.com
ವಯಸ್ಸು 22,
ನಿರುದ್ಯೋಗಿ
ಮಹೇಶ್ವರ್ ಸಾಹೂ ರವರ ಎರಡನೇ ಮಗ ,
ಅದೇನು ನಂಟೋ,
ನಮ್ ಜೊತೆ ಅವನೂ
ಅವನ್ ಜೊತೆ ನಾವೂ
ಅದು ಒಂದು ತರಹ ಸಿಂಬೈಯೋಟಿಕ್
ರಿಲೇಶನ್ ಶಿಪ್.
ನಮ್ಮ ಮನೆಯಿಂದ ಕೌಶಲ್ಯಗಂಗಾ
ರಿಸರ್ಚ್ ಸ್ಟೇಷನ್
ಹದಿನಾರು ಕಿಲೋಮೀಟರು ದೂರ
ಅವರವರ ಕೆಪಾಸಿಟಿಗೆ ಅನುಗುಣವಾಗಿ
ಕೌಶಲ್ಯಗಂಗಾ ಹೋಗಿ ಬರಲು
ರೂಮ್ ಮೇಟ್ ಜಾರ್ಜು
ಲ್ಯಾಂಬ್ರೆಟ್ಟ ಸ್ಕೂಟರ್ ಖರೀದಿಸಿದ.
ನಾನೊಂದು ಲೂನಾ ಮೊಪೆಡ್ ಕೊಂಡ್ಕೊಂಡೆ.
ಶುರುವಾಯ್ತು
ಹೊಸ ಪಯಣ
ಹೊಸ ಜೀವನ
ಹೀಗೇ ಏನೂ ಏರು ಪೇರು ಇಲ್ಲದೆ
ಸಾಗುತಿದ್ದ ಲೈಫ್ ನ ಮೆರಗು ಹೆಚ್ಚಿಸಿವುದಕ್ಕೆ
ಯಾರಿಗೂ ಸೂಚನೆ ನೀಡದೆ ಮಿತ್ರರಾದ
ವೆಂಕಿ ಮತ್ತೆ ಅಶು ಹೇಳ್ದೆ ಕೇಳ್ದೆ
ಜೂಲೈ ತಿಂಗಳ ಮೊದಲ್ನೇ ವೀಕ್ಎಂಡ್
ಅಪರಾಹ್ನ ಸಂಬಳ ಕೈಗೆ ಬಂದೊಡನೆ
ತಡ ಮಾಡದೆ ಸಂಜೆ ರೈಲ್ ಗಾಡಿ ಹತ್ತಿ
ಹೌರಾ ದಿಂದ ಭುಬನೇಶ್ವರ್
ರಾತ್ರಿ 1ಘಂಟೆಗೆ ಬಂದಿಳಿದರು.
ಯಾರಿಗೂ ಸೂಚನೆ ನೀಡದೆ ಬಂದದ್ದರಿಂದ ಉಳಿಯಲು ಮತ್ತೆ ಮನೆಯ ಹುಡುಕಲು ಸಜ್ಜಾದಾಗ, ವೆಂಕಿ ಜೊತೆಗೆ ಪಯಣಿಸಿ
ಪರಿಚಿತರಾದ ಭುಬನೇಶ್ವರದ ಕನ್ನಡಿಗ
ಲೀಡಿಂಗ್ ಉದ್ಯಮಿ ಶ್ರೀನಾವ್ಡಾ ರವರು,
ಬನ್ನಿ ಮಾರಾಯ್ರೆ,
ಸುರೇಶ್ ರವರು ನಂಗೂ ಗೊತ್ತುಂಟು
ಎಂದು ಹೇಳಿ ಅವರ ಮನೆಗೆ
ಉಳಿಯಲು ರಾತ್ರಿ 2 ಘಂಟೆಗೆ ಕರೆದುಕೊಂಡುಹೋದ್ರು.
ಕನ್ನಡಕ್ಕೆ ಒಂದು ಜೈ.
ಕನ್ನಡಿಗರಾದದ್ದಕ್ಕೆ ಇನ್ನೊಂದು ಜೈ .
ರಾತ್ರಿ ಉಳ್ಕೊಳಕ್ಕೆ ಜಾಗ,
ಬೆಳಗ್ಗೆ ಒಳ್ಳೆ ಟಿಫನ್ ಕೊಟ್ಟು,
ಸತ್ಕರಿಸಿದ ನಾವ್ಡಾರವರಿಗೆ ಮತ್ತೊಂದು ಜೈ
ಇದನ್ನ ಮರು ದಿನ ನಾವ್ಡಾ ರವರೂ ಹೇಳಿದರು, ವೆಂಕಿನೂ ಹೇಳ್ದ.
ವೆಂಕಿ ಮತ್ತೆ ಅಶುರವರಿಗೆ ಪೂರಿ ರಥ ಯಾತ್ರ ನೋಡಬೇಕೆಂಬ ಆಸೆ,
ಪ್ರತಿವರ್ಷದನುಸಾರ
ಆಷಾಡದ ಶುಕ್ಲ ಪಕ್ಷದ ದ್ವಿತೀಯ ದಿನದಂದು
ಅಂದ್ರೆ ಜೂಲೈ ಒಂದನೇ ತಾರೀಕು
ಪೂರಿ ನಿವಾಸಿ ಲಾರ್ಡ್ ಜಗನ್ನಾಥರ
ರಥ ಯಾತ್ರೆ ಪ್ರಾರಂಭವಾಗಿ ಬಿಟ್ಟಿತ್ತು.
ಅದಕ್ಕಾಗಿ ಲಕ್ಷ ಲಕ್ಷಾಂತರ ಭಕ್ತರು
ದರ್ಶಿಸಲು, ಪೂರಿಗೆ ಬರ ತೊಡಗಿದ್ದರು.
ಕಾಲರಾ ಸಾಂಕ್ರಾಮಿಕ ರೋಗ
ಸೋಂಕದಿರಲೆಂದು ವೇಕ್ಸಿ ನೇಶನ್
ಕಡ್ಡಾಯ ಮಾಡಿದ್ದರು. ಪೂರಿಯ ಪ್ರವೇಶಿಸುವ ಮುನ್ನ ಚುಚ್ಚುಮದ್ದು ಹಾಕಿರಬೇಕು.
ಇಲ್ಲವೇ ಚುಚ್ಚು ಮದ್ದು ಹಾಕಿದ್ದ ಪುರಾವೆಗೆ ಪ್ರಮಾಣ ಪತ್ರ ತೋರಿಸಬೇಕು. ಅಲ್ಲೇ ಹೋಗಿ ಹಾಕಿಸಿ ಕೊಳ್ಳೋಣ ವೆಂದು ಪ್ರೈವೇಟ್ ಬಸ್ನಲ್ಲಿ
ನಾನು, ವೆಂಕಿ ಅಶು ಮತ್ತೆ ಸಿಸಿರ್ ಹೊರಟ್ವಿ.
ರಸೂಲ್ ಗಂಜ್ ನಿಂದ 15ಕಿ.ಮಿ.ದಾಟಿರಬೇಕು...
ರಸ್ತೆಯ ಬಲಗಡೆ ಮೊಟ್ಟ ಮೊದಲು ಕಂಡಿದ್ದು.
ಸಣ್ಣದಾದ ಧವಳಗಿರಿಬೆಟ್ಟ ಅದರ ಮೇಲೆ
ಗೌತಮ ಬುದ್ಧನ ಪೀಸ್ ಪಗೋಡಾ, ಅದರ ಬಗಲಲ್ಲೇ ಹರಿಯುತ್ತಿರುವ ದಯಾ ನದಿ.
ಮೌರ್ಯ ಚಕ್ರವರ್ತಿ ಸಾಮ್ರಾಟ್ ಅಶೋಕ
ದಾಳಿಯಿಟ್ಟ ಕಳಿಂಗ ಪ್ರದೇಶದ ಮಹಾರಾಜ
ಹೋರಾಡಿದ ರಣಭೂಮಿ.
ಈ ದಯಾ ನದಿ ತೀರದಲ್ಲಿ,
ದಯಾ ದಾಕ್ಷಿಣ್ಯವಿಲ್ಲದೆ ಮಡಿದ ಸುಮಾರು1,50,000ಕ್ಕೂ ಹೆಚ್ಚಾದ ಯೋದ್ಧರು.
ಸಾಮ್ರಾಟ್ ಅಶೋಕ ಪಶ್ಚಾತಾಪ ಪಟ್ಟು ಬೌದ್ಧ ಧರ್ಮಕ್ಕೆ ಪರಿವರ್ತನೆ ಯಾದ ಕ್ಷೇತ್ರ.
ಅದರ ಜ್ಞಾಪಕಾರ್ಥವಾಗಿ ಕಟ್ಟಿದ್ದೇ
ಈ ಶಾಂತಿ ಪಗೋಡ, ಶಾಂತಿ ಸ್ತೂಪ
ಅದರ ಬಲ ಭಾಗದಲ್ಲಿ
ಏನೂ ನಡೆಯದಿದ್ದ ಹಾಗೇ ಶಾಂತವಾಗಿ ಹರಿದು ಹೋಗುತಿದ್ದ ನದಿಯ ಹೆಸರೇ ದಯಾ.
ಎಂತಹ ವಿಡಂಬನೆ.
ಹಾಗಾದ್ರೆ ನಡೆದು ಮಡಿದು ಸಮಾಪ್ತಿಗೊಂಡ
ಯುದ್ಧದ ಅರ್ಥವೇನು?ಸಂಶಯವಾಗೇ ಉಳಿಯಿತು.
ದಯಾ ನದಿ ಸೇತುವೆಯ ದಾಟಿದೊಡನೆ ಕಾಣೋದೇ, ನಾವುಕೆಲಸ ಮಾಡುತಿದ್ದ ಕೌಶಲ್ಯಗಂಗಾದ ಮತ್ಸ್ಯ ಪರಿಶೋಧನಾ ಕೇಂದ್ರ.ಇನ್ನೂ ಅದೇ ರಸ್ತೆ ಯಲ್ಲಿ ಮುಂದುವರಿದಾಗ ಬರುವ ಊರು ಪೀಪ್ಲಿ.
Applique (ಬಟ್ಟೆಯ ಮೇಲೆ ಬಣ್ಣ ಬಣ್ಣದ ವಿನ್ಯಾಸ ಉಳ್ಳ ಬಟ್ಟೆಯ ಸೇರಿಸಿ ಹೊಲಿದು
ವಿಶಿಷ್ಟ ಗೊಳಿಸುವ ಕಲೆಯೇ ಅಪ್ಲೀಕ್ )
ಅನ್ನುವ ಈ ವಿಶಿಷ್ಟವಾದ ಕಲಾಕೃತಿಯ
ನಿರ್ಮಿಸಲು ಹೆಸರುವಾಸಿಯಾದ ಪೀಪ್ಲಿಯ ನೇಕಾರರಿಗೆ ಪೂರಿ ಮಹಾರಾಜ ಒಪ್ಪಿಸಿದ್ದರು.
ಜಗನ್ನಾಥ ರಥಯಾತ್ರೆಯಲ್ಲಿ
ಮೂರು ರಥಗಳ ಅಲಂಕಾರಕ್ಕೆ
ಬೇಕಾದ ಬಣ್ಣ ಬಣ್ಣದ ಬಟ್ಟೆಗಳ
ಕೆನೊಪಿ ಹೊದಿಸುವ ಹೆಮ್ಮೆ ಪೀಪ್ಲಿಯವರದ್ದು.
ಪೂರಿ ಜಗನ್ನಾಥ ಮಂದಿರ ನಿರ್ಮಾಣಿಸಿದ
ಮಹಾರಾಜಾರೇ ನೇಕಾರರನ್ನು ಪೀಪ್ಲಿಯಲ್ಲಿ
ನೆಲೆಗೊಳಿಸಿದ್ದವರೂ ಕೂಡ .
ಅಲ್ಲಿಂದ ಮುಂದೆ ಹಾಗೇ ಗಾಡಿಗಳ ಸಾಲು
ಟೋಲ್ ಟ್ಯಾಕ್ಸ್ ಕಟ್ಟಿ ಮುಂದೆ ಹೋದೆವು
ಪೂರಿಯ ಸೀಮೆಯ ತಲುಪಿ ಇನ್ನೇನೂ
ಪೂರಿ ನಗರದೊಳಗೆ ಪ್ರವೇಶಿಸ ಬೇಕು
ಅಂದಾಗ ಮೆಡಿಕಲ್ ಟೀಮ್ ಬಂದು
ವೇಕ್ಸಿನೇಶನ್ ಬಗ್ಗೆ ಒಡಿಯಾದಲ್ಲಿ ಕೇಳ್ತಾ ಇದ್ರು.
ನಮಗೆ ನಮ್ಮ ಆಲ್ ರೌಂಡರ್, ನಮ್ಮ
ಮ್ಯಾನ್ ಫ್ರೈಡೇ, ಸಿಸಿರ್ ಜೊತೆಯಲ್ಲಿದ್ದ.
ಅವರೊಟ್ಟಿಗೆ ಹೋದವ್ನು,
ಐದೇ ನಿಮಿಷದಲ್ಲಿ ವಾಪಸ್ ಬಂದ.
ಕೋಣು ಹೇಳೆಮು? ಏನಾಯ್ತುಂತ?
ಗೊತ್ತಿದ್ದ ಒಡಿಯಾ ದಲ್ಲಿ ಕೇಳ್ದೆ,
ಸಿಸಿರ್ ಹೇಳ್ದ
ನಿಜ ಹೇಳ್ದೆ, ಬಿಟ್ ಬಿಟ್ಟರೂಂತಂದ.
ಅದೇನು ನಿಜಾನೋ ಅಂದದಕ್ಕೆ
ಇವರೆಲ್ಲಾ ಸೈಂಟಿಸ್ಟುಗಳು ಕಾಲರ ತಡೆಗಾಗಿ
ಮುನ್ನೆಚ್ಚರಿಕೆ ಕ್ರಮಗಳನ್ನು ಪರೀಕ್ಷಿಸಲು
ಬಂದಿದ್ದಾರೆ ಅಂತಂದೆ ಬಿಟ್ಬಿಟ್ರು.
ವೇಕ್ಸಿನೇಶನ್ ರೂಮನ್ನು ನೋಡಿದ್ವಿ.
ಬಹಳ ಅಧ್ವಾನವಾಗಿತ್ತು. ಅಲ್ಲೇನಾದ್ರೂ
ವೇಕ್ಸಿನೇಶನ್ ಹಾಕ್ಕೊಂಡ್ರೆ
ಕಾಲರ ಬರೋದು ನಿಶ್ಚಯ
ಅಂದ್ಕೊಂಡು
ಸಿಸಿರ್ ಹೇಳ್ದಂಗೆ ಒಪ್ಕೊಂಡು
ನಾವು ಅದನ್ನ ಹೆಚ್ಚಲು ಬಿಡಲಿಲ್ಲಾ.
ನಾವು ಹೋಗಿ ಪೂರಿ ಸೇರಿದಾಗ
ಮಧ್ಯಾಹ್ನ 12 ಘಂಟೆ.
ದೇವ್ರು ದೇವಸ್ಥಾನ ದಲ್ಲಿಲ್ಲಾ ,
ಅವ್ರು ಯಾತ್ರೆಗೆ ಹೊರಟವ್ರೆ.
ಅದಕ್ಕೆ, ರಥಯಾತ್ರೆಯ ಸಮಯದಲ್ಲಿ
ದೇವಸ್ಥಾನಕ್ಕೆ ಹೋಗುವದು ವ್ಯರ್ಥ
ಎಂದು ರಥ ಯಾತ್ರೆಯಲ್ಲಿಯೇ
ದೇವರ ದರ್ಶಿಸುವ ಉದ್ದೇಶದಿಂದ
ಬಸ್ ಸ್ಟಾಂಡ್ ನಿಂದ ಗ್ರಾಂಡ್ ರೋಡ್ ಗೆ
ನಡ್ಕೊಂಡೇ ಹೋದೆವು.
ಬಲು ಜೋರಾಗಿಯೇ ಹಸಿವಾಗಿತ್ತು.
ಅಲ್ಲಿದ್ದ ಅಗ್ರವಾಲ್ ಹೋಟೆಲ್ನಲ್ಲಿ
ಬಹಳ ರಶ್ ಇತ್ತು.ಇದ್ದದ್ದರಲ್ಲಿ ಸ್ವಲ್ಪ
ಸುಮಾರಾಗಿತ್ತು. ಬೇರೆ ಹೋಟೆಲ್
ಹುಡುಕ್ಕೊಂಡು ಹೋಗುವಷ್ಟು
ತ್ರಾಣಿ ಇರಲಿಲ್ಲಾ.
ಊಟ ಮಾಡುವವರ
ಹಿಂದೆ ನಿಂತು ಸೀಟು ಖಾಲಿಯಾದೊಡನೆ
ಕುಳಿತು ಕೊಂಡು ಊಟ ಮಾಡಿ
ಅನುಭವಿಸಿದವರಿಗೇ ಗೊತ್ತು.
ನಿಂತವನಿಗೂ ಕಷ್ಟ,
ಊಟವ ಮಾಡುತಿದ್ದವನಿಗೂ ಕಷ್ಟ,
ಮಹಾಪ್ರಸಾದ ಎಂದು ದಾಲ್ ಬಾತ್ ಕೊಟ್ಟ್ರು
ಆಲೂ ಪೂರಿ, ಪಡವಲ್, ಬೇಂಗನ್,
ದಾಲ್ ಚಾವಲ್ ಒಂದು ರಸಗುಲ್ಲ ಕೂಡಿದ
ವೆಜ್ ಥಾಲಿ ಮೀಲ್ಸ್ ತಿಂದು ಮುಗಿಸಿದ್ವಿ.
ವರ್ಷಕ್ಕೊಮ್ಮೆ ಮೂಲ ಮಂದಿರದಿಂದ
ಲಾರ್ಡ್ ಜಗನ್ನಾಥ, ಅಣ್ಣ ಬಲಭದ್ರ ಮತ್ತೆ ತಂಗಿ ಸುಭದ್ರಾ ದೇವಿಯರ ಜೊತೆ
ಗುಂಡೀಚ ದೇವಿಯ ಮಂದಿರಕ್ಕೆ
ಹೋಗಿ ಬರುವ ಯಾತ್ರೆಯೇ ರಥಯಾತ್ರೆ.
ಪೂರಿ ಲಾರ್ಡ್ ಜಗನ್ನಾಥನ ದೇವಸ್ಥಾನವನ್ನು
ಮಹಾರಾಜ ಇಂದ್ರದ್ಯುಮ್ನ ಕಟ್ಟಿಸಿದ.
ಅವರ ಧರ್ಮಪತ್ನಿ ಗುಂಡೀಚ ದೇವಿಯ
ಅನನ್ಯ ಭಕ್ತಿಯ ಮೆಚ್ಚಿ ಲಾರ್ಡ್ ಜಗನ್ನಾಥ್
ಆಕೆಯೇ ಕಟ್ಟಿದ ದೇವಿಯ ದೇವಸ್ಥಾನಕ್ಕೆ ಹೋಗಿ ಎಂಟು ದಿನಗಳು
ಗುಂಡೀಚ ಮಂದಿರದಲ್ಲೇ ವಾಸ .
ವಾಪಸ್ಸು ಎಂಟನೇ ದಿನ ಮೂಲ ಸ್ಥಾನಕ್ಕೆ ಬರುವ ರಿಟರ್ನ್ ಟ್ರಿಪ್ ನ್ನು ಬಹುದಾ ಯಾತ್ರ ವೆಂದು ಕೊಂಡಾಡುತ್ತಾರೆ.
ಲಂಚ್ ಮುಗಿಸ್ಕೊಂಡು ರಥಗಳ ನೋಡಲು ಹೊರಟೆವು.ಭವ್ಯವಾದ ಮೂರು ರಥಗಳ ನೋಡಿ ಲಕ್ಷಗಟ್ಲೆ ಭಕ್ತರು ಒಕ್ಕುರಲಲ್ಲಿ
ಜೈ ಜಗನ್ನಾಥ್ ಎಂದು ಘೋಷಿಸಲು
ಆ ಘೋಷಣೆ ಗಗನವ ಭೇದಿಸರಬೇಕು.
ಸ್ವಲ್ಪ ಹತ್ತಿರದಿಂದ ನೋಡಲೆಂದು ಹೋದರೆ
ಲಕ್ಷಗಟ್ಲೆ ಜನ ಸಮೂಹ,
ರಥಕ್ಕೆ 50 ಮೀಟರ್
ಉದ್ದನೆಯ ಹಾಗೂ ದಪ್ಪದಾದ
ಹಗ್ಗವ ಕಟ್ಟಿದ್ದರು
ದಪ್ಪನೆಯ ಹಗ್ಗ ಮುಟ್ಟಲು, ಹಗ್ಗ ಎಳೆಯಲು,
ಭಕ್ತಜನರ ನೂಕು ನುಗ್ಗಲು,
ಎಳೆಯುತ್ತಾ ಎಳೆಯುತ್ತಾ
ಜೈಜಗನ್ನಾಥ್ ಅನ್ನೋ ಘೋಷಣೆ
ಅದರ ನಡುವೆ ಹಾಹಾಕಾರ
ಬದಿಯಲ್ಲಿ ನಿಂತಿದ್ದ
ವಯಸ್ಸಾದ ಬಿಳಿ ಸೀರೆಯನ್ನುಟ್ಟ ವಿಧವೆಗಳು
ಭಾರಿ ರಥ ಚಕ್ರಗಳ ಮುಂದೆ ದಿಢೀರ್ ಅಂತ ಬಿದ್ದರು.
ಬ್ರೇಕ್ ಇಲ್ಲದ ರಥ ಇನ್ನೇನು ರಥ ಚಕ್ರ ಹತ್ತಬೇಕು ಅನ್ನುವ ವೇಳೆಗೆ ಜೊತೆಗೆ ಬರುತ್ತಿದ್ದ
ವಾಲಂಟಿಯರ್ಸ್ ಅವರನ್ನ ಕಾಪಾಡಿ
ನಮ್ಮೂರಲ್ಲಿ ಡ್ರೈವರ್ ಗಳ ಭಾಷೆಯಲ್ಲಿ
ಮನೆಯಲ್ಲಿ ಹೇಳ್ಬಿಟ್ಟು ಬಂದೀಯ
ಬರ್ತಾಬಾಯಲ್ಲಿ ಅಕ್ಕಿ ಕಾಳ್
ಹಾಕ್ಕೊಂಡ್ ಬಂದೀಯ
ಅನ್ನೋದಕ್ಕೆ
ಸಮನಾಗಿ ಓಡಿಯಾದಲ್ಲಿ ಬೈದು
ತಮ್ಮನ್ನೇ ಮಾಯ್ದು ಕೊಳ್ಳಲು,
ಜೀವ ತ್ಯಾಗಿಸಲು, ಈಸಿ ಮುಕ್ತಿಗಾಗಿ
ಬಿದ್ದ ಭಕ್ತರನ್ನು ಎಬ್ಬಿಸಿ ರಸ್ತೆಯನ್ನು
ರಥ ಯಾತ್ರೆಗೆ ಅನುಕೂಲವಾಗಿ
ಮಾಡಿಕೊಡುತ್ತಿದ್ದರು .
45 ಅಡಿ ಎತ್ತರದ ರಥ ಲಾರ್ಡ್ ಜಗನ್ನಾಥ್ ರದು
44 ಅಡಿ ಎತ್ತರದ ರಥ ಬಲಭದ್ರರದು ,
43 ಅಡಿ ಎತ್ತರದ ರಥ ಸುಭದ್ರಾರದು.
ರಥದ ಮೇಲೆ ವಿರಾಜಿಸಿದ್ದರಿಂದ ಅವರು
ನಾಲ್ಕೂ ದಿಕ್ಕಲಿದ್ದ ಭಕ್ತ ಜನ ಸಮೂಹವ
ನೋಡುತಿದ್ದರು. ಅವರಷ್ಟೇ ಅಲ್ಲ
ಸುದರ್ಶನ, ಮದನ ಮೋಹನ,
ಶ್ರೀ ದೇವಿ ಹಾಗೂ ಭೂದೇವಿ
ರಥ ಯಾತ್ರೆಯಲಿ ಜೊತೆಗೇ ಇರುವದರಿಂದ
ಭಕ್ತರು ತಲೆ ಬಾಗಿಯಲ್ಲ
ತಲೆಯೆತ್ತಿ ಎಲ್ಲಾ ದೇವರ ದರ್ಶಿಸುತಿದ್ದರು.
ಮತ್ತೊಮ್ಮೆ
ನಾಲ್ಕೂ ದಿಕ್ಕಿನಿಂದ ಭಕ್ತ ಸಮೂಹ
ಜೈ ಜಗನ್ನಾಥ್ ಎಂದು ಘೋಷಿಸಲು
ಅದೊಂದು ಅನುಭೂತಿ ಅನುಭವ.
ಸಂಜೆ 4ಘಂಟೆ ಯಾಗಿತ್ತು
ಬೀಚ್ ಬಹಳ ಸುಂದರ ಹೋಗೋಣ ವೆಂದು
ಅಶ್ವಥ್ ನ ಸಲಹೆಯ ಎಲ್ರು ಆಮೋದಿಸಿದರು
ಸಿಸಿರ್ ಹೇಳ್ದ, ಸುಂದರವೇನೋ ok ಆದ್ರೆ
ಬೀಚ್ ಮರಳ ಮೇಲೆ ಲಕ್ಷ ಗಟ್ಟಲೆ ಜನರು
ಹ್ಯಾಗೆ ಉಪಯೋಗಿಸಿರುತ್ತಾರೋ ಎಂದು
ಸಣ್ಣ ಬಾಂಬ್ ಹಚ್ಚಿಬಿಟ್ಟ.
ರಶ್ ಬಹಳ ಇರುವದರಿಂದ ವಾಪಸ್ಸು
ಬಸ್ ಹಿಡಿದು ಈಗ ಭುಬನೇಶ್ವರಕ್ಕೆ
ಹೊರಟ್ರೆ ರಾತ್ರಿ 9ಘಂಟೆಗೆ
ತಲುಪಬಹುದು ಎಂದ.
ಅಷ್ಟೇ,
ಸೈಕಲ್ ರಿಕ್ಷಾ ಹಿಡಿದು ಬಸ್ ಸ್ಟಾಂಡ್ ಗೆ
ಹೋದ್ವಿ. ಪ್ರೈವೇಟ್ ಬಸ್ಸುಗಳೆಲ್ಲಾ
ಯಾತ್ರಿಗಳನ್ನ ಬಲವಂತವಾಗಿ ಎಳದ್ಕೊಂಡು
ಬಸ್ ಒಳಗೆ ಕೂರಿಸ್ತಿದ್ರು
ತುಂಬಾ ರಶ್ ಇತ್ತು.
ಬಸ್ಸುಗಳ ನಡುವೆ ಪೈಪೋಟಿಯಲ್ಲಿ
ಬಸ್ ಒಂದರಲ್ಲಿ ಎಡ ಪಕ್ಕದ ಕೊನೆಯ
4 ಸೀಟ್ ಗಳು ನಮಗೆ ಸಿಕ್ಕಿತು.
ವಿಂಡೋಸೀಟು ನನಗಾಯ್ತು,
ಪಕ್ಕ ವೆಂಕಿ,ಅಶು ಮತ್ತೆ ಸಿಸಿರ್
ಓಡಿ ಬಂದು ಹತ್ತಿದ ಕೊನೆಯ ಯಾತ್ರಿಕರು
ಬಾಂಗ್ಲಾ ಕಪಲ್, ಬಸ್ಸು ಈಗ ತುಂಬಿತು.
ಸಿಸಿರ್ ಪಕ್ಕ ಇದ್ದ ಎರಡು ಖಾಲಿ
ಸೀಟು ಗಳಲ್ಲಿ ಅಡ್ಜಸ್ಟ್ ಆಗಿ ಹೋದರು
ಕಂಡಕ್ಟರ್ ನ ರೈ ರೈಟ್ ಬಳಿಕ
ಗಾಡಿ ಹೊರಟಿತು. ನಮ್ಮ ಬಸ್ಸನ್ನು
ಓವರ್ ಟೇಕ್ ಮಾಡಿ ಇನ್ನೊಂದು ಬಸ್
ಮುನ್ನುಗ್ಗಿ ತ್ತು.
ನಮ್ಮ ಬಸ್ಸು ಡ್ರೈವರ್ ಗೆ
ತಲೆಗೆ ಹತ್ತಿದ ರೋಷ ಪಾದಕ್ಕೆ ಟ್ರಾನ್ಸ್ ಫರ್ ಆಗಿ
ಆಕ್ಸಿಲೇಟರ್ ಅದುಮಿದ ಮರುಕ್ಷಣ ಬಸ್ಸು
ಬುರ್ರಂತ ಮುಂದೆ ಹೋಯ್ತು.
ಹೀಗೆಯೇ,
ನಾ ಮುಂದೆ, ತಾನು ಮುಂದೇನ್ನುವ ರೇಸ್ ನಲ್ಲಿ
ಪೂರಿಯ ಸೀಮಾಎಲ್ಲೆಯ ತಲುಪಿದೆವು.
ಟೋಲ್ ನಲ್ಲಿ ಬಸ್ ಒಂದು ನಿಮಿಷ ನಿಲ್ತು.
ಈ ರೇಸ್ ನ ಗಡಿಬಿಡಿಯಲ್ಲಿ
ಸಿಸಿರ್ ನ ಪಕ್ಕ ಕುಳಿತಿದ್ದ
ಬಂಗಾಲಿಬಾಬುವಿನ
ಪತ್ನಿಗೆ ಸ್ವಲ್ಪ ವಾಕರಿಕೆ, ವಾಂತಿ
ಮಾಡೋ ಸಿಂಪ್ಟಮ್ ಕಾಣಲು
ಬಂಗಾಲಿ ಬಾಬು
ನಾ ಕುಳಿತಿದ್ದ ಕಾರ್ನರ್ ಸೀಟ್ ಆಕೆಗಾಗಿ
ಬೇಕೆಂದು ರಿಕ್ವೆಸ್ಟ್ ಮಾಡಿಕೊಂಡಾಗ
ಅದೇನ್ ಕಾರಣವೋ
ಇಲ್ಲಾಂತ ಹೇಳೋಕೆ ಅಥವಾ
ರೆಫ್ಯೂಸ್ ಮಾಡಕ್ಕೆ
ಮನಸ್ಸಾಗಲಿಲ್ಲ.
ಒಪ್ಪಿಕೊಂಡು
ನಾನು ಕೂತಿದ್ದ ಬಸ್ಸಿನ ಕೊನೆಯ
ಸೀಟ್ ನ್ನು ಒಲ್ಲದ ಮನಸ್ಸಿನಿಂದ ಬಿಟ್ಟು ಕೊಟ್ಟೆ
ಎಲ್ರೂ ಮತ್ತೊಮ್ಮೆ ಅಡ್ ಜಸ್ಟ್ ಮಾಡಿ
ಕೂತು ಕೊಂಡ್ವಿ.
ಆಕಿ, ಆಕಿ ಗಂಡ ಬಂಗಾಲಿ ಬಾಬು, ನಾನು,
ಪಕ್ಕ ವೆಂಕಿ,ಅಶ್ವಥ್ ಹಾಗು ಸಿಸಿರ್
ಅದಾದ್ ಮೇಲೆ ಉಳಿದ ಎರಡು ಸೀಟಲ್ಲಿ
ಒರಟಾದವ್ರು ಇಬ್ಬರು,
ಯಾವೂರೊ ಗೊತ್ತಾಗ್ಲಿಲ್ಲ
ಮತ್ತೆ
ಬಸ್ಸು ಹೊರಟಿತು.
ಅದ್ರಷ್ಟವಷ ಪೈಪೋಟಿಗೆ
ಮುಂದೆ ಯಾವ ಬಸ್ಸೂ ಇರಲಿಲ್ಲಾ.
ನಮ್ಮ ಬಸ್ಸಿನ ಡ್ರೈವರಿಗೆ ಅದೇನ್
ಭೂತ ಹಿಡಿದಿತ್ತೋ ಅಥವಾ ಕೆಲಸದ ಒತ್ತಡವೋ
ಯಾರೂ ಇಲ್ಲದ ಖಾಲಿ ರಸ್ತೆಯಲ್ಲೂ
ಅತಿ ವೇಗವಾಗಿ ಬಸ್ಸು ಹೋಗ್ತಿತು.
ಎಂಟನೇ ಕಿಲೋಮೀಟರ್ ಮೈಲುಗಲ್ಲುನ್ನು ದಾಟಿರಬೇಕು, ಎದುರಿಗೆ ಬಂದ ಟ್ರಕ್
ಗಾಡಿಯ ಓಡಿಸ್ತಿದ್ದವ ನಮ್ಮ ಡ್ರೈವರ್ ಗೆ ಅಪ್ಪನಿರಬೇಕು.
ಟರ್ನಿಂಗ್ನಲ್ಲಿದ್ದ ನಮ್ಮ ಬಸ್ಸು
ಬಲದ್ಕಡೆಯಿಂದ ಡಿಕ್ಕಿ ಹೊಡಿಯೋ
ತರಹ ಬಂದ ಟ್ರಕ್ ನಿಂದ
ಕಾಪಾಡುವಷ್ಟರಲ್ಲಿ
ನಮ್ಮ ಬಸ್ಸಿನ ಎಡದ ಕಡೆಯ ಕೊನೆ
ರಸ್ತೆ ಬದಿಯಿದ್ದ ಆಲದ ಮರಕ್ಕೆ
ತಗುಲಿ ಡಮಾರ್ ಅನ್ನೋ ಶಬ್ದ ಕೇಳಿಸ್ತು
ಬಸ್ಸು ಒಂದು ಕಡೆ ಗಿರ್ರನೆ ವಾಲಿತು
ಗಾಜು ಒಡೆದ ಟೊಳ್
ನಮ್ಮ ಮೇಲೆಲ್ಲಾ ಗಾಜಿನ ಪುಡಿ
ಮರು ಕ್ಷಣ ಕರ್ಕಶ ವಾಗಿಕೇಳಿ ಬಂದ
ಅಮಾಕು ಬಚಾವ್ ಬಂಗಾಲಿ ಭಾಷೆಯೋ
ಇಲ್ಲಾ ಓಡಿಯಾ ಭಾಷೆಯೋ
ಆದ್ರೆ ನೋವಿನ ಭಾಷೆ ಎಲ್ರದೂ ಒಂದೇ ಆಗಿತ್ತು
ಕುಯ್ಯೋ ಮುರ್ರೋವೋ
ಕಾಪಾಡಿ ಕಾಪಾಡಿಯೋ
ಬಚಾವ್ ಬಚಾವ್ ಅನ್ನೋದೊ
ಒಂದೇ ಹಾಹಾಕಾರ.
ನನಗೇನೂ ಆಗಿರಲಿಲ್ಲ.
ಪಕ್ಕದಲ್ಲಿದ್ದ ಬಂಗಾಲಿ ಬಾಬುವಿನ
ಎಡದ ಕೈಗೆ ಬಲವಾದ ಪೆಟ್ಟು,
ಬಂಗಾಲಿ ಹೆಣ್ಣ ಕೈ ಮುರಿದಿತ್ತೋ ಏನೋ
ಕೈ ಜೋಲುತಿತ್ತು.ಮುಖವಿಡೀ ರಕ್ತ
ಒರೇ ಬಾಬಾ ಎಂದು ವಿಲಾಪಿಸುತಿದ್ಲು .
ಬಂಗಾಲಿ ಬಾಬು ಮೋರೆಗಾಚಿ
ಅಂತ ನೋವಿನಿಂದ ಚಿಲ್ಲಾಡ್ತಾ ಇದ್ದರು
ತಕ್ಷಣ ಜೊತೆಗಿದ್ದ ವೆಂಕಿ ನ ನೋಡ್ದೆ
ಅಶ್ವಥ್ ಮತ್ತೆ ಸಿಸಿರ್ ಯಾರಿಗೂ
ಏನ್ ಡ್ಯಾಮೇಜ್ ಇರಲಿಲ್ಲಾ
ಎಲ್ರೂ ಫಿಸಿಕಲಿ ಕ್ಷೇಮ,
ಮೆಂಟಲಿ ಶಾಕಿಂಗ್, ಆಗಿತ್ತು.ಅನಿಸಿತ್ತು pll
ಯಾಕೇಂದ್ರೆ ಯಾರೂ
ಒಂದು ಮಾತು ಆಡಿರಲಿಲ್ಲ
ಇನ್ನೂ ಯಾರಿಗೂ ಹೆಚ್ಚೇನೂ ಆಗಿರಲಿಲ್ಲ
ಬಾಂಗ್ಲಾ ಕಪಲ್ಸ್ ಗೆ ಗಾಯ ಕೈ ಮುರಿವು
ತಲೆ ಮೇಲೆ ಇದ್ದ ಗಾಜಿನ ಪುಡಿಯನ್ನು ಒದರಿ
ಬಸ್ಸಿಂದ ಇಳಿಯಲು ಪ್ರಯತ್ನ ಪಟ್ರೆ ಬಸ್ಸಿನ ಬಾಗಿಲ ಕದ ಜಾಮ್ ಆಗಿತ್ತು. ಇಷ್ಟರಲ್ಲೇ ಊರ ಜನ ಓಡಿ ಬಂದು ಗುದ್ದಲಿಯಿಂದ ಬಾಗಿಲ ಹಿಂಜೆಸ್ ಒಡೆದು
ಡೋರ್ ಓಪನ್ ಮಾಡಿದ್ರು ಎಲ್ರುವೇ
ದೊಪ ದಪಾಂತ ಹೊರಗಿಳಿದ್ರು
ನಾವು, ಪೆಟ್ಟಾದ ಬಾಂಗ್ಲಾ ಕಪಲ್ ಕೆಳಗಿಳಿದ್ವಿ.
ಅವರಿಗಾದ ಗಾಯ ಪೆಟ್ಟು ಎಲ್ಲವನ್ನು
ಅವಲೋಕಿಸಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು
ಹೋಗಬೇಕಂತ ನಿರ್ಣಯಿಸಿದೆವು.
ಅದಕ್ಕಾಗಿ ಪೂರಿಯ ದಿಕ್ಕಿಗೆ ಹೋಗ್ತಿದ್ದ
ಖಾಲಿ ಜೀಪೊಂದು ಸಿಗ್ತು.
ಸಿಸಿರ್ ಡ್ರೈವರ್ ಹತ್ತಿರ ಮಾತಾಡಿ
ಎಲ್ರು ಹತ್ಕೊಂಡು ಆಸ್ಪತ್ರೆಗೆ ಹೋಗುವ
ಏರ್ಪಾಡು ಮಾಡಿದ. ಅದಕ್ಕಾಗಿ ಆದ ಖರ್ಚುನ್ನು
ನಾವೆಲ್ರುವೆ ಹಂಚ್ಕೊಂಡ್ವಿ.
ಹೋಗೋ ರಸ್ತೆಯಲ್ಲಿ
ನೋವಿನ ನಡುವೆ
ಬಾಂಗ್ಲಾ ಬಾಬು ತನ್ನ ಪರಿಚಯ್ಸಿಕೊಂಡರು
ಅವರು ಏರ್ಫೋರ್ಸ್ ನಲ್ಲಿ ಫ್ಲೆಯಿಟ್ ಲೆಫ್ಟ್ ನಂಟು
ಪೂರಿ ಗೆ ಟೂರ್ ಬಂದಿದ್ದರು
ಎಲ್ಲಾ ಮುಗಿಸಿ ಕೊಂಡು ವಾಪಸ್ಸು ಕೊಲ್ಕತ್ತಾ ಹೋಗುವಾಗ ಹೀಗಾಯ್ತಂತ
ಹೇಳುತ್ತಿದ್ದಾಗ ಆಸ್ಪತ್ರೆ ಬಂತು
ಗಡಿಯಾರ ಸರಿಯಾಗಿ ಸಂಜೆ 6 ಘಂಟೆ ತೋರಿಸ್ತಿತ್ತು
ಎಮರ್ಜೆನ್ಸಿ ಕ್ಯಾಶುಯಲ್ಟಿ ಯಲ್ಲಿ ಬಂಗಾಲಿ ಕಪಲ್ ತುರ್ತು ಚಿಕಿತ್ಸೆಗೆ ಕರೆದುಕೊಂಡು ಹೋದ್ರೆ
ಅಲ್ಲಿದ್ದ ಡಾಕ್ಟರ್
ಇದು ಆಕ್ಸಿಡೆಂಟ್ ಕೇಸ್
ಅದೂ ಅಲ್ಲದೆ ಪೊಲೀಸ್ ಕೇಸ್ ಬೇರೆ
ಮೊದಲು ಪೊಲೀಸ್ ಪರ್ಮಿಷನ್ ತಗೊಂಬನ್ನಿ
ಆಮೇಲೆ ನೋಡೋಣಾಂತ ಹೇಳ್ಬಿಟ್ರು.
ನಾವೆಲ್ಲರೂವೆ ಡಾಕ್ಟರ್
ಹತ್ತಿರ ಹೋಗಿ ರಿಕ್ವೆಸ್ಟ್ ಮಾಡ್ಕೊಂಡ್ವಿ
ಮೊದಲು ಪೇಶೆಂಟ್ ನ ಅಟೆಂಡ್ ಮಾಡೀಂತ.
ಡಾಕ್ಟರೂ ಮನಸ್ಸು ಬದ್ಲಾಯ್ಸಿ
ಕೈಗೆ ಶುಶ್ರೂಷೆ ಪ್ರಾರಂಭಿಸಿದರು
ಕೈಗೆ ಕಟ್ಟು,
ಆಕೆಗೊಂದು,
ಬಾಬುಗೊಂದು,
ಹೀಗೇ ಇಬ್ಬರಿಗೂ ಜೋಡಿ ಕಟ್ಟು.
ಹಾಗೂ ಹೀಗೂ ಟ್ರೀಟ್ಮೆಂಟ್.
ಎಲ್ಲಾ ಮುಗಿಸೋಕೆ ರಾತ್ರಿ 8 ಘಂಟೆಯಾಯಿತು.
ಔಷದಿ ಉಪಚಾರ ಲೊಟ್ಟು ಲೊಸ್ಕೂಂತ
ಧನರಾಶಿ ಖರ್ಚಾಯ್ತು
ಅದನ್ನೆಲ್ಲಾ ಶುದ್ಧ ದೇಶೀ ಅಗ್ ಮಾರ್ಕ್
ಕನ್ನಡಿಗರೇ ಖರ್ಚು ಮಾಡಿದ್ವಿ .
ಅದೂನೂವೆ ಸರ್ಕಾರಿ ಆಸ್ಪತ್ರೆ ಯಾಗಿದ್ರೂವೆ
ಬಾಂಗ್ಲಾ ಬಂಧುಗಳು ಹತ್ರ
ಒಂದು ಪೈಸೆ ಕೂಡ ಇಲ್ಲಾ
ಆ ರಾತ್ರಿ 11ಘಂಟೆಗೆ
ಭುಬನೇಶ್ವರ್ ನಿಂದ ಕೊಲ್ಕತ್ತಾ ಹೋಗಲು
ಟ್ರೈನ್ ರಿಸರ್ವೇಶನ್ ಟಿಕೆಟ್ ಬಿಟ್ರೆ
ಏನೂ ಇರಲಿಲ್ಲಾ.
ಬಾಂಗ್ಲಾ ಬಾಬು ನಮ್ಮ ಹತ್ತಿರ
ಸ್ವಲ್ಪ ಧನ ಸಹಾಯ ಕೇಳಿದ್ರು
ನಾವು ಕೊಲ್ಕತ್ತಾ ಹೋಗಿ ಸೇರಿದೊಡನೆ
ನಿಮ್ಮ ಹಣ ವಾಪಸ್ಸು
ನಿಮಗೆ ಮನಿ ಆರ್ಡರ್ ಮಾಡ್ತೀನಿ
ಅಂತ ಅವರ ಅಡ್ರೆಸ್ ಕೊಟ್ರು
ಮತ್ತೆ ನಮ್ಮೆಲ್ಲರ ಅಡ್ರೆಸ್ ಬರ್ಕೊಂಡ್ರು.
ನಾವೆಲ್ಲರೂ ನಮ್ಮಿಂದಾದ
ಧನ ಸಹಾಯ ಮಾಡಿ
ಪೂರಿ ಯಿಂದಲೇ ಕೊಲ್ಕತ್ತಾಗೆ ಹೋಗುವ
ಜಗನ್ನಾಥ್ ಎಕ್ಸ್ ಪ್ರೆಸ್ ಟ್ರೈನ್ ನಲ್ಲಿ ಕೂರಿಸಿ
ನಾವು ಪ್ರೈವೇಟ್ ಬಸ್ ಹಿಡಿದು
ರಾತ್ರಿ 10ಘಂಟೆಗೆ ಭುಬನೇಶ್ವರಕ್ಕೆ ಹೊರಟ್ವಿ.
ಅವಾಗ ಯೋಚಿಸ್ತಾ ಬಂದೆ.
ವೆಂಕಿ, ಅಶು ಯಾರೂಂತ ಗೊತ್ತಿಲ್ಲದೇ
ಮನೆಗೆ ಕರೆದುಕೊಂಡು ಹೋಗಿ
ಅತಿಥಿ ಸತ್ಕಾರ ಮಾಡಿದ
ಶ್ರೀ ನಾವ್ಡಾ ರವರು ಜ್ಞಾಪಕಕ್ಕೆ ಬಂದರು.
ದೇವರ ಸಾನಿಧ್ಯಕ್ಕೆ,
ಪೂರಿಯ ರಥ ಯಾತ್ರೆಗೆ
ನಮ್ಮನ್ನೆಲ್ಲಾ ದರ್ಶನಕ್ಕಾಗಿ ಕರೆದು ತಂದ ಜಗನ್ನಾಥ
ನಾನು ಬಸ್ಸಲ್ಲಿ ಕುಳಿತಿದ್ದ ಎಡ ಪಕ್ಕದ ಕೊನೆಯ ಕಾರ್ನರ್ ಸೀಟ್ ನ್ನು ಅದ್ಲಾ ಬದ್ಲಿ ಮಾಡಿದ್ದು
ನನ್ನ ಹಾಗೂ ನನ್ನ ಮಿತ್ರರನ್ನ ನಿಶ್ಚಿತವಾದ
ದುರ್ಘಟನೆ ಯಿಂದ ಕಾಪಾಡಿದ್ದು
ಬಾಂಗ್ಲಾ ಬಂಧುಗಳಿಗಾದ ದುರ್ಘಟನೆ
ಪೂರ್ವನಿಶ್ಚಿತವೋ
ಅಥವಾ
ಪೂರ್ವನಿಯೋಜಿತವೋ
ಅಥವಾ
ಆಕಸ್ಮಿಕವೋ
ಅಥವಾ
ಅದ್ಲಾ ಬದ್ಲಿ ಅದ್ರಷ್ಟವೋ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ