ಐಪಿ, ಐಪಿಗೆ, ಐಪಿಗಾಗಿ,
ಐಪಿ,
ಐಪಿಗೆ,
ಐಪಿಗಾಗಿ,
ಪದ್ಮಶ್ರೀ ಪ್ರೊಫೆಸರ್ ಡಾಕ್ಟರ್ ಸುಬ್ಬಣ್ಣ ಅಯ್ಯಪ್ಪನ್
https://youtu.be/qDY5Vs6XL-g?si=W_DEbtA49JN_Padmashree H0hN
(ಮೇಲಿರುವ youtube ಲಿಂಕನ್ನು ಪ್ರೆಸ್ ಮಾಡ್ತಾ ಇರಿ,ಮೇಲೆ youtube ಚಿನ್ಹೆ ಕಾಣಿಸುತ್ತೆ, ಅದನ್ನ ಪ್ಲೇ ಮಾಡಿದರೆ ಪದ್ಮಶ್ರೀ ಸಮಾರಂಭ ಅದಕ್ಕೆ
ಅನುಗುಣವಾಗಿ ಬರೆದ blog ಓದಿ,
ಐಪಿ ನಮ್ಮ ಜೊತೆಯಲ್ಲೇ ಇದ್ದಾರೆ ಅನಿಸುತ್ತೆ).
ಐಪಿ ಯ ಬಗ್ಗೆ ಬರೆದಾಗ ಜೀವಂತವಾಗಿದ್ದ
ಐಪಿ ಓದಿ ನಕ್ಕು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಹಾಗೆಯೇ ಪಬ್ಲಿಸಿಟಿಗೆ ಅಂಜಿ ಈ ಬ್ಲಾಗನ್ನು ಪ್ರಚುರಿಸಲು ಸಂಕೋಚಪಟ್ಟರು.
ಆಗ ನಮಗೂ, ಯಾಕೆ ಅವರಿಗೂ ಗೊತ್ತಿರಲಿಲ್ಲ ನಮ್ಮನ್ನೆಲ್ಲ ಬಿಟ್ಟು ಹೋಗ್ತಾರೇಂತ...
ಇಂದು
ನಮಗೆಲ್ಲರಿಗೂ ಚಿರಪರಿಚಿತ ಐಪಿ
ನಮ್ಮೊಟ್ಟಿಗಿಲ್ಲ. ಐವತ್ತು ವರ್ಷಕ್ಕೂ ಹೆಚ್ಚು ಜೊತೆಗೆ ವಿದ್ಯಾಭ್ಯಾಸ, ಉದ್ಯೋಗ, ಎಲ್ಲಕ್ಕೂ ಹೆಚ್ಚಾಗಿ ಆತ್ಮೀಯ ಸಂಬಂಧ
ಡಾಕ್ಟರ್ ಸುಬ್ಬನ್ ಅಯಪನ್ ಎಂದು ಉದ್ಘೋಶಕ ಹೇಳಲು,
ಸ್ವಲ್ಪ ಕಸಿವಿಸಿಯಾಯ್ತು.
ಏನಪ್ಪಾ ಇದು?
ಪ್ರೊಫೆಸರ್ ಡಾಕ್ಟರ್ ಸುಬ್ಬಣ್ಣ ಅಯ್ಯಪ್ಪನ್ ರವರ ಹೆಸರು ಹೀಗೇ ಉಚ್ಚರಿಸುತ್ತಾ ಇದ್ದಾರೇಂತ,
ಆದ್ರೆ, ಇದ್ಯಾವ ಚಿಂತೆ ಇಲ್ಲದೆ,
ನಮ್ಮೆಲ್ಲರ ಅಚ್ಚು ಮೆಚ್ಚಿನ ಅಯ್ಯಪ್ಪನ್ ರವರು, ನಿಧಾನವಾಗಿ, ಆದ್ರೆ ದ್ರಢವಾಗಿ
ಕೆಂಪು ರತ್ನಗಂಬಳಿಯ ಮೇಲೆ ಹೆಜ್ಜೆಯಿಟ್ಟು, ಮಾನನೀಯ ಪ್ರಧಾನ ಮಂತ್ರಿಗಳ ಸಮಕ್ಷ, ಗಂಭೀರವಾಗಿ ನಡೆದು ಬಂದು,
ರಾಷ್ಟ್ರಪತಿಯವರ ಕರ ಕಮಲದಿಂದ,
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ಆ ದ್ರಶ್ಯ,
ಶ್ರೀಮತಿ ಉಮಾ ಅಯ್ಯಪ್ಪನ್ ರವರು, ಕೈ ಎತ್ತಿ ಚಪ್ಪಾಳೆ ತಟ್ಟಿದಾಗ ಮೈ ಜುಮ್ ಅಂತ ಅನ್ನಿಸ್ತು.
ಕಾಲಕಾಲಕ್ಕೂ ನಮ್ಮೆಲ್ಲರ ಜೀವವಿರುವವರೆಗೂ ಈ ದ್ರಶ್ಯ ಅವಿಸ್ಮರಣೀಯ.
ನಮ್ಮ ಅಯ್ಯಪ್ಪನ್ ರವರು ಮಾನನೀಯ ರಾಷ್ಟ್ರಪತಿಯವರ ಜೊತೆ ಏನೋ ಮಾತನಾಡಿದ ಹಾಗೇ ಭಾಸವಾಯ್ತು.
ಹಾಗಾದ್ರೆ, ಅವರು ಏನು ಮಾತನಾಡಿರಬಹುದು?
ನಮ್ಮ ನಿಮ್ಮ ಊಹೆ,
ಈ ಒಂದು ವಿಷಯದಲ್ಲಿ
ಸರಿಯಾಗಿ ಇದ್ದಿರಲೇಬೇಕು.
ಅದೇನಂತೀರಾ
ಥ್ಯಾಂಕ್ಸ್.. ಥ್ಯಾಂಕ್ಸ್.. ಅಂತ
ಹೇಳ್ತಾ ಇರೋ ಐಪಿ,
ರಾಷ್ಟ್ರಪತಿಯ ಮುಗುಳ್ನಗೆ....
ಇದುವೇ ಇಬ್ಬರ ನಡುವಿನ ವಾರ್ತಾಲಾಪ.
ಸನ್ 2022 ರಲ್ಲಿ,
ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮಶ್ರೀ ಸಂಭ್ರಮದಲ್ಲಿ, ಪ್ರೊಫೆಸರ್ ಡಾಕ್ಟರ್ ಸುಬ್ಬಣ್ಣ ಅಯ್ಯಪ್ಪನ್ ರವರಿಗೆ ಕೃಷಿ, ಮತ್ಸ್ಯ, ಪಶು ಸಂಗೋಪನೆಯಲ್ಲಿ ಸಲ್ಲಿಸಿದ
ವಿಶಿಷ್ಟ ಸೇವೆಯನ್ನು ಕಂಡರಿತು
ಅವರಿಗೆ ಭಾರತದ ಉನ್ನತ ಪ್ರಶಸ್ತಿ
ಪದ್ಮಶ್ರೀ ನೀಡಿ ಗೌರವಿಸಿ ಸಮ್ಮಾನಿಸಿದರು.
ಐಪಿಗೆ ಪದ್ಮಶ್ರೀ ಪ್ರಾಪ್ತಿಯಾಗಿದ್ದು,
ನಮಗೆಲ್ಲಾ ಹೆಮ್ಮೆಯ ಹಾಗೂ ಹರುಷದ ವಿಷಯ.
ನಮ್ಮಂತಹ ಅನಾಕನೇಕ ಮಿತ್ರರು,ವಿಜ್ಞಾನಿಗಳು, ಹಿತೈಷಿಗಳು,ಕಾರ್ಯಕರ್ತರು, ಕೃಷಿ, ಮತ್ಸ್ಯ ಕ್ಷೇತ್ರದಲ್ಲಿ ದೇಶಕ್ಕಾಗಿ ಸಲ್ಲಿಸಿದ ಪರಿಶ್ರಮವ ಗೌರವಿಸಿ ಐಪಿಗೆ ನೀಡಿದ ಈ ಪಾರಿತೋಷ ನಮಗೇ ಸಿಕ್ಕಷ್ಟು ಸಂತೋಷ.
Professor Padmashree Dr. S. Ayyappan
ಐಪಿ ಎಂದು ನಮಗೆಲ್ಲಾ ಚಿರಪರಿಚಿತರಾದ ಡಾಕ್ಟರ್ ಅಯ್ಯಪ್ಪನ್, IP, Intelligent Prodigyಫಿಷರೀಶ್ ಕಾಲೇಜಿನಲ್ಲಿ ನಮ್ಮ ಜೊತೆಯಲ್ಲಿ BFSc., ನಂತರ MFSc.,ಓದಿದವರು, ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಮತ್ತೆ 1978ರಲ್ಲಿ ನಡೆದ Agricultural Scientists Recruitment Board ನ Agricultural Research Service ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಪ್ರಥಮ rank.
ಸಣ್ಣ ಪುಟ್ಟ ಉದ್ಯೋಗಗಳ ನಡುವೆ,
ಸೈಂಟಿಸ್ಟ್ ಎಸ್-1 ಉನ್ನತ ಹುದ್ದೆ,
ICAR ನ CIFRI, Barrackpore,
West Bengal ನಲ್ಲಿ ಪ್ರಾರಂಭಿಸಿದ ಜ್ಞಾನ, ವಿಜ್ಞಾನದ ಜೀವನ ಯಾತ್ರೆಯ
ಯಶಸ್ವಿ ಪದಾರ್ಪಣ,
ಸಭ್ಯ, ಸೌಮ್ಯ, ಸಹೃದಯಿ,
ಪರಿಶ್ರಮಿ, ಬುದ್ಧಿವಂತ, ದೂರದರ್ಶಿ
ಮತ್ಸ್ಯ ಕ್ಷೇತ್ರದ ಲೆಜೆಂಡ್.
ಈ ಯಶಸ್ವಿಯಾತ್ರೆಯ ನಡೆಸಲು
ಅಡ್ಡ ಬಂದ ಹಲವಾರು ಅಗ್ನಿ ಪರೀಕ್ಷೆಗಳು,
ಅಂತತೋಗತ್ವ ದೇಶದ ಉನ್ನತಿಗಾಗಿ
ಬ್ಲೂ ರೆವೆಲ್ಯೂಷನ್ ನ ಅರ್ಪಣ.
ಹಲವಾರು ಉತ್ಕ್ರಷ್ಟ ಸಂಶೋಧನೆಗಳು,
ಇನ್ನೂ ಹೆಚ್ಚು ಸಾಧಿಸಬೇಕೆಂಬ ಛಲ.
ಹಂತ ಹಂತವಾಗಿ ಮೆಟ್ಟಿಲು ಹತ್ತಿ
ಅತಿ ಉನ್ನತ ಸೋಪಾನವ
ತಲುಪಿದ ಡಾಕ್ಟರ್ ಅಯ್ಯಪ್ಪನ್
ICAR ನ Director General ಹಾಗೂ
Secretary, Department of Agricultural
Research and Education, DARE
ಭಾರತ ಸರ್ಕಾರದ ಸಚಿವರಾಗಿ ನೇಮಿಸಲ್ಪಟ್ಟರು.
ಪ್ರಪ್ರಥಮ ಬಾರಿಗೆ ಗೈರು ಕೃಷಿ ಕ್ಷೇತ್ರದ
ಮತ್ಸ್ಯ ವಿಜ್ಞಾನಿಯ ನೇಮಕ,
ಐಪಿಯವರ ಕಾರ್ಯಕ್ಷಮತೆ, ಕುಶಲತೆ,
ದಕ್ಷತೆಯ ಸೂಚಕ.
ಆದರೆ,
ಇಂದು ಅವರು ನಮ್ಮೊಟ್ಟಿಗಿಲ್ಲ.
ಕ್ಷಣ ಕ್ಷಣವು ಪರರ ಸೇವೆಗಾಗಿ ತಮ್ಮನ್ನೇ ಅರ್ಪಿಸಿಕೊಂಡ ಶ್ರೀಯುತ ಅಯ್ಯಪ್ಪನವರು
ಇಂದು ನಮ್ಮೊಡನಿಲ್ಲ ಅಂದ್ರೆ ನಂಬಲಾಗುತ್ತಿಲ್ಲ.
ಆ ಕರಾಳ ದಿನ, ಮೇ 10, 2025
ಐಪಿಯವರ ನಿಗೂಢ ಮೃತ್ಯು,
ಐಪಿಯನ್ನು ನಮ್ಮಿಂದ
ಬಲು ದೂರ ಕರೆದೊಯ್ದಿದೆ.
ನಮ್ಮೆಲ್ಲರ ಅಚ್ಚುಮೆಚ್ಚಿನ ಐಪಿ
ಈಗ ನಮ್ಮೊಟ್ಟಿಗಿಲ್ಲಾ...
ಬರೆಯಲು, ಹೇಳಲು, ವ್ಯಕ್ತಪಡಿಸಲು ಅಸಾಧ್ಯವಾದ ಎದೆ ಭಾರ.
ಏನೋ ಒಂದು ತರಹ ವೇದನೆ.
ಮನಸ್ಸು ಒಂದಲ್ಲಾ ಒಂದು
ಕಾರಣವ ಹುಡುಕುತ್ತಿದೆ
ಸುಳ್ಳು ಸಮಾಧಾನದತ್ತ.
ಅಸ್ಸಾಂ ನಲ್ಲಿ ಎಲ್ಲೋ
ಮೀಟಿಂಗ್ ಗೆ ಹೋಗಿರುತ್ತಾರೆ,
ಇಲ್ಲಾ
ಭುವನೇಶ್ವರ ನ ರಿವ್ಯೂ ಮೀಟಿಂಗ್
ಬರುತ್ತಾರೆ ಬಿಡು,
ಮನಸ್ಸು ಸಮಾಧಾನ
ಮಾಡ್ಕೊಳ್ಳುತ್ತೆ.
ನಂಬಕ್ಕಾಗುತ್ತಿಲ್ಲ,
ಸಾರಿ ಗುರು, ಸ್ವಲ್ಪ ಅರ್ಜೆಂಟ್ ಕೆಲಸ
ಹೋಗ್ಬಿಟ್ಟು ಬರುತ್ತೀನಿ ಅನ್ನೋ ಐಪಿ,
ಈ ಸಲ ಹೇಳಲೂ ಇಲ್ಲಾ...
ಮತ್ತೆ ವಾಪಸ್ಸು ಬರಲೂ ಇಲ್ಲಾ...
ಭೇಟಿಯಾಗೋದು ಸ್ವಲ್ಪ ವಿಳಂಬವಾದ್ರೆ
ಬಹುಶಃ ಅಮೇರಿಕಾ ಹೋಗಿದ್ದಾರೆ
ಅಂತ ಅಂದುಕೊಂಡಿದ್ದೀವಿ.
ಅವರು ಮತ್ತೆ ಬರುವವರೆಗೂ
ಅವರ ಬಗ್ಗೆಯ ದೊಡ್ಡ ಕಥೆಯನ್ನು
ಪುಟ್ಟದಾಗಿ ಹೇಳುವ ಪ್ರಯಾಸ.
ಎಲ್ಲಿಂದ ಶುರು ಮಾಡಲಿ?
ಕನ್ಫ್ಯೂಸ್ ಆಗ ಬೇಡಿ, ಮಲಯಾಳೀಂತ
ಕೇರಳದವರೋಂತ ಸಂದೇಹ ಬರೋದು ಸಹಜ
ಆದ್ರೆ ನಮ್ ಅಯ್ಯಪ್ಪ ನವರು ಶುದ್ಧ
AGMARK 100% ಕರ್ನಾಟಕದ ಅಚ್ಚ ಕನ್ನಡಿಗರು.
ಸುಬ್ಬಣ್ಣ ಮತ್ತು ಸುಶೀಲಮ್ಮ ದಂಪತಿಗಳು
ಶಬರಿಮಲೆ ಅಯ್ಯಪ್ಪನನ್ನು ಬೇಡಿ
ಹರಕೆ ಹೊತ್ಕೊಂಡು ಡಿಸೆಂಬರ್ 10, 1955
ರಂದು ಹುಟ್ಟಿದ ಮಗು...ನಮ್ಮ
ಅಳಕೆರೆಯ ಅಪರೂಪದ ಅಯ್ಯಪ್ಪನ್,
ಹೀಗೇ ಅಯ್ಯಪ್ಪನ್ ಹೆಸರು
ಖಾಯಂ ಆಯ್ತು.
ಬೇರೆಲ್ಲರಿಗೂ ಅಯ್ಯಪ್ಪನ್
ನಮಗೆಲ್ಲಾ
ನಮ್ಮ ಐಪಿ.
1970 ರಿಂದ 1980 ರ ವರೆಗು
ಅದೊಂದು ಮರೆಯಲಾಗದ
ಚಿನ್ನದ ಕಾಲ
ಪದವಿ ಪೂರ್ವ ನ್ಯಾಷನಲ್ ಕಾಲೇಜು,
ಬಸವನಗುಡಿ, ಬೆಂಗಳೂರು.
PUC ಓದುತ್ತಿದ್ದಾಗ ಮೊಟ್ಟ ಮೊದಲ ಬಾರಿಗೆ
ಐಪಿಯ ಪರಿಚಯವಾಯ್ತು. ಐಪಿಯ
ವಿದ್ಯಾಭ್ಯಾಸ ನ್ಯಾಷನಲ್ ಹೈ ಸ್ಕೂಲ್ ನಲ್ಲಿ.
ಅಲ್ಲಿಂದ ಪಕ್ಕದಲ್ಲಿದ್ದ ನ್ಯಾಷನಲ್ ಕಾಲೇಜನ್ನು
ಸೇರಿ ಅಲ್ಲಿಂದ ಕೃಷಿ ವಿಶ್ವ ವಿದ್ಯಾಲಯದ
BFSc ಯನ್ನು ಮಂಗಳೂರಿನಲ್ಲಿ ಓದಲು ಮುಂದುವರೆದ ನಮ್ಮ ಪರಿಚಯ,
ಮಿತ್ರತ್ವದಲ್ಲಿ ಪರಿವರ್ತನೆ ಗೊಂಡಿತ್ತು.
1973 ಜನವರಿ ಪ್ರಾರಂಭವಿರಬೇಕು,
ಫಿಶರೀಸ್ ಕಾಲೇಜು, ಮಂಗಳೂರು
ಹಾಸ್ಟೆಲ್ ಪ್ರಾಂಗಣ,
ನಟಿಸಿದ ನಾಗರಹಾವು ಪಿಕ್ಚರ್
ಬಿಡುಗಡೆಯಾದ ಆ ದಿನಗಳು....
ಕಲ್ಪನೆಗೆ ರೆಕ್ಕೆ ಕಟ್ಟಿ ಹಾರಾಡಿದ
ಸ್ವಚ್ಛಂದ ದಿನಗಳು.
ಹಾವಿನ ದ್ವೇಷ, ಹನ್ನೆರಡು ವರುಷ,
ನನ್ನ ರೋಷ, ನೂರು ವರುಷ,
ಹಾಡನ್ನ ಬಲು ಜೋರಾಗಿ ಹಾಡ್ಕೊಂಡು
ಈ ರಾಮಾಚಾರಿ ನ
ಕೆಣಕೋ ಗಂಡು ಇನ್ನೂ ಹುಟ್ಟಿಲ್ಲ,
ಎದೆಯ ತಟ್ಟಿ,
ಇಲ್ಲದ ಮೀಸೆಯ ತಿರುವಿ...
ಆ ಗಂಡೇ ಹುಟ್ಟಿಲ್ಲಾ...
ಅಷ್ಟೊಂದು ಜೋರು ಶೋರಾಗಿ
ಒಬ್ಬ ಕಾಲೇಜು ಯುವಕ
ಕಂಡು ಬಂದರೆ ಆತ ಬೇರೆ ಯಾರೂ ಇಲ್ಲಾ
ಅವ್ರು
ನಮ್ಮ ಐಪಿ.
ಅಷ್ಟೊಂದು Gutsy,
ಅದಕ್ಕಾಗಿ ನೀವು ಅವರ ಬಗ್ಗೆ
ತಪ್ಪೆಣಿಕೆ ಮಾಡ್ಕೋ ಬೇಡಿ
ಮೈ ತುಂಬಾ ಬ್ರೈನು
ಅಷ್ಟು ಬುದ್ಧಿವಂತ, ಜೊತೆಗೆ
ಕನ್ನಡಿಗರ ಹಾಲ್ ಮಾರ್ಕ್,
ಮುಜುಗರ, ವಿನಮ್ರತೆ, ಪ್ರಾಮಾಣಿಕತೆ, ಪರಿಶ್ರಮ,
ಇವೆಲ್ಲವನ್ನು ಒಟ್ಟುಗೂಡಿದ ಮಿಶ್ರಣವೇ
ನಮ್ಮ ಐಪಿ.
ಅವರ ಜೊತೆಗೆ, Barrackpore ನಲ್ಲಿದ್ದಾಗ
ARS ಸೈಂಟಿಸ್ಟ್ ಗಳಾಗಿದ್ದ
ವೆಂಕಿ ಅನ್ನೋ ವೆಂಕಟೇಶ
ಅಶೂ ಅನ್ನೋ ಅಶ್ವಥ್
ಸೂರಿ ಅನ್ನೋ ಸುರೇಶ
ಫಿಶರೀಸ್ ಕಾಲೇಜಿನ ಹಳೆಯ
ಹಾಸ್ಟೆಲ್ ಮೇಟ್ ಗಳು
ಮಧ್ಯಾಹ್ನ ಲಂಚ್ ಟೈಮ್ ಊಟಕ್ಕೆ
ಗೆಸ್ಟ್ ಹೌಸ್ ಗೆ ಹೋದ್ರೆ
ಸಾಸುವೆ ಎಣ್ಣೆಯಲ್ಲಿ ಹುರಿದ ಆಲೂಗಡ್ಡೆ
ಇನ್ನೊಂದು ಹುರಿದ ಪಡವಲ್
ದಪ್ಪ ಸಿಪ್ಪೆಯ ತೊಂಡೆಕಾಯಿ
ಹಳದಿ ಬಣ್ಣದ ದಾಲು,
ಮೀನು ಹುರಿದ ಕೆಂಪು ಸಾರು
ವಾಕರಿಕೆ ಬರುವಂತಹ (ಸ್ಮೆಲ್ಲು)
ಸಾಸುವೆ ಎಣ್ಣೆಯ ವಾಸನೆ,
ಮೊಸರನ್ನ ತಿಂದು ಬದುಕಿಕೊಂಡೆವು.
ಬಂಗಾಲಿ ಊಟ ಒಗ್ಗದೆ
ಬಾಡಿಗೆ ಮನೆಗೆ ಶರಣು ಹೋದೆವು.
ನಮ್ಮ ಅದೃಷ್ಟ,
ಐಪಿಯವರ ಮನೆಯ ಮೇಟ್ ಆಗಿ
ಅಡಿಗೆ ಮಾಡಲು ಪ್ರಾರಂಭಿಸಿದೆವು.
ನನಗೆ ಗೊತ್ತು ಅಡಿಗೆ ಹೇಗೇ
ಮಾಡೋದುಂತ ಮುಂದೆ ಬಂದರು,
ನಮ್ಮ ಐಪಿ.
ಇಡ್ಲಿ ದೋಸೆ ಪೂರಿ ಇದೆಲ್ಲವೂ
ಸರ್ವ ಸಾಮಾನ್ಯವಾಗಿ ಎಲ್ರ ಮನೆಯಲ್ಲೂ
ಬೆಳಗಿನ breakfast ಆದ್ರೂವೆ
ಐಪಿಗೆ ಗೊತ್ತಿದ್ದು,
ವಿಶ್ವ ವಿಖ್ಯಾತವಾದ ಉಪ್ಪಿಟ್ಟು.
ಸರಿ, ಐಪಿ ಅವರಮ್ಮನ ಜೊತೆ STD ಯಲ್ಲಿ
ಮಾತನಾಡಿ ಮಾಡುವ ವಿಧಾನ ಕಲಿತು,
ಉಪ್ಪಿಟ್ಟು ಮಾಡೇ ಬಿಟ್ಟರು.
ಸ್ವಲ್ಪ ಅಂಟು ಅಂಟಾಗಿತ್ತು... ಕಷ್ಟ ಪಟ್ಟು ತಿಂದ್ವಿ.
ಇದರಲ್ಲಿ ರವಿವಾರ ಅಂದ್ರೆ,
ಬೆಳಗ್ಗೆನೇ ಹಾಜಿರಿ ಹಾಕುತ್ತಿದ್ದರು,
Dr. ಸುರೇಂದ್ರ ಪಾಲ್ ಎಕನಾಮಿಸ್ಟ್,
ಐನ್ ಸ್ಟೈನ್ ತರಹ ಕೂದಲು,
ಬಂದ್ರೆ ಕುಂತ್ರೆ ವಟವಟಾಂತ
ನಾನ್ ಸ್ಟಾಪ್ ಮಾತಾಡ್ತಾನೆ ಇರೋರು
ನಮ್ ಹತ್ತಿರ ಇದ್ದೇ ಇತ್ತಲ್ಲಾ ಐಪಿಯ ಅಂಟಾಸ್ತ್ರ.
Dr ಪಾಲ್ ನೀವು ಖಂಡಿತವಾಗಲೂ
ಉಪ್ಪುಮ ತಿನ್ಲೇ ಬೇಕೂಂತ ತಿನ್ನಿಸಿ,
ಅಂಟಿಸ್ ಬಿಡ್ತಿದ್ವಿ.
ಈಗ ನೆನಸ್ಕೊಂಡ್ರೂ ನಗು ಬರುತ್ತೆ...
Dr ಪಾಲ್ ಈಗಿಲ್ಲ.
ಅವರ ಆತ್ಮಕ್ಕೆ ಶಾಂತಿ ದೊರಕಲಿ.
ಕಷ್ಟ ಪಟ್ಟು ಅರೆದ ಇಡ್ಲಿಯ ಹಿಟ್ಟು,
ಇಡ್ಲಿ, ದೋಸೆ ಸರಿಬರದೇ,
ಏನು ಮಾಡೋದೂಂತ ಯೋಚಿಸ್ತಿದ್ದಾಗ,
ಐಪಿ ಐಡಿಯಾ, ಕೊಟ್ರು.
ಗುರು, ಈ ಹಿಟ್ಟ ನ್ನ ವೇಸ್ಟ್ ಮಾಡೋದು ಬೇಡ
ಸಂಡಿಗೆ ಮಾಡೋಣಂತ.
ಸ್ವಲ್ಪ ಉಪ್ಪು, ಜೀರಿಗೆ ಮತ್ತೆ ಮೆಣಸನ್ನು ಕುಟ್ಟಿ
ಮಿಶ್ರಣವ ಹಾಕಿ, ಬೇಯಿಸಿ, ತಣ್ಣಗಾದ
ನಂತರ ಪಾತ್ರೆ ಯೊಂದರಲ್ಲಿ ಹಿಟ್ಟ ತಗಂಡು
ಮಹಡಿ ಯ ಮೇಲೆ ಒಣಗಿಸಲು
ಐಪಿದು ಒಂದು ಹಳೆಯ ಬಿಳಿ ಪಂಚೆಯ
ಮೇಲೆ ಸಣ್ಣ ವಡೆ ಗಾತ್ರದಲ್ಲಿ ಸಂಡಿಗೆ
ಇಟ್ಕೊಂಡು ಹೋದ್ರೆ ಅರವತ್ತು ಸಂಡಿಗೆ ಬಂತು.
ಐಪಿ ಪಂಚೆ ಬಾರ್ಡರ್ ತನಕ.
ಒಂದು ದಿವಸ ಪೂರ್ತಿ ಬಿಸಿಲಲ್ಲಿ ಒಣಗಿದ
ಸಂಡಿಗೆಯ ಮೂಸಲು ಸಹ
ಕಾಗೆಗಳು ಬರಲಿಲ್ಲಾ.
ವೆಂಕಿ ನನಗೆ ಸಮಾಧಾನ ಹೇಳ್ದ,
ಬೆಂಗಾಲಿ ಕಾಗೆಗಳು,
ಮೀನು ಮಾಂಸ ತಿನ್ನೋವು,
ಸಂಡಿಗೆ ತಿನ್ನೋಕೆ ಯಾಕೆ ಬರುತ್ತೆ.
ಮಂಗಳವಾರ ನಾವೆಲ್ಲರೂ ಆಫೀಸ್ ಗೆ ಹೋದಾಗ ಭಯಂಕರ ಸುಂಟರಗಾಳಿ ಬಂದು
ಸಂಡಿಗೆ ಪಂಚೆ
ಕಣ್ಣಿಗೆ ಕಾಣದಷ್ಟು
ದೂರ ಹಾರಿ ಹೋಯ್ತು.
ಅದರ ಜೊತೆ ನಮ್ಮಇಡ್ಲಿ ಕನಸ್ಸೂ ಸಹ.
ಹಾಗೂ ಹೀಗೂ ಹೇಗೋ ಹೋಗ್ತಾ ಇತ್ತು ಲೈಫ್.
ನಾನೂ ಸಹ ಮಾಸ್ಟರ್ ಚೆಫ್ ಆದೆ.
ನಾನು ಮಾಡಿದ್ದು ಹೇಗೇ ಇದ್ರೂ
ಎಲ್ರು ಇಷ್ಟ ಪಟ್ಟೋ, ಇಲ್ಲಾ ಕಷ್ಟ ಪಟ್ಟೋ,
ತಿಂದು ಅಡ್ಜಸ್ಟ್ ಮಾಡಿಕೊಂಡ್ರು,
ಅನ್ನೋದೇ ಸತ್ಯ.
ಪಾಪ, ಐಪಿಗೆ ಮೀನು ಹಾಕೋಕೆ
ಮುಂಚೆ ತೆಗೆದಿಟ್ಟ ಸಾರು,
ನಮಗೆ ಬೇರೆ ಅವರಿಗೆ ಬೇರೆ,
ಸ್ವಲ್ಪ ಊಟ ಮಾಡುಂತ ಬಲವಂತ ಮಾಡಿದ್ರೆ,
ರಜನಿಕಾಂತ್ ತರಹ ಒಂದೇ ಒಂದು ಡೈಲಾಗ್
ಹೇಳ್ತಾ ಇದ್ದ.
ಊಟ ತನ್ನಿಚ್ಚೆ, ನೋಟ ಪರರಿಚ್ಚೆ...
ಐಪಿಯ ಅನುಭವದ ಇನ್ನೊಂದು ಘಟನೆ
ವಾರದಲ್ಲಿ ಎರಡು ವಾರ ನಮಗೆಲ್ಲಾ ಬಹಳ ಇಷ್ಟ
ಒಂದು ಶನಿವಾರ, ಇನ್ನೊಂದು ಭಾನುವಾರ.
ಅದೊಂದು ಭಾನುವಾರ ಬೆಳಗ್ಗೆ 10ಘಂಟೆ
ನಮ್ಮ ಐಪಿ ಒಗೆದ ಬಟ್ಟೆಗಳ
ಗಂಟು ಕಟ್ಟಿ ಇಸ್ತ್ರಿ ಹಾಕಲು
ಹೆಗಲ ಮೇಲೆ ಹಾಕ್ಕೊಂಡು
ಹೊರಟೇ ಬಿಟ್ಟ.
ಅವನ ಹತ್ತಿರ ನಮಗೆಲ್ಲಾ
ಕಲಿತು ಕೊಳ್ಳಬೇಕಾದ ಒಂದು ವಿಷಯ
ಅದೇನಂದ್ರೆ ಒಂದು ಕೆಲಸ ಕೈಯಲ್ಲಿ ತೆಗೊಂಡ್ರೆ
ಅದನ್ನ ಮುಗಿಸದೇ ಬಿಡ್ತಿರಲಿಲ್ಲ.
ದಾರಿಯಲ್ಲಿ ಇಸ್ತ್ರಿ ಹಾಕೋ ಅಂಗಡಿ
ಎಲ್ಲಿದೆ ಅಂತ ವಿಚಾರಿಸಿ ಕೊಂಡು ಹೋಗ್ತಿದ್ದಾಗ ಎದುರು ದಿಕ್ಕಿನಿಂದ ಇನ್ನೊಬ್ಬ
ಅವನ ಹೆಗಲ ಮೇಲೆ ಬಟ್ಟೆ ಗಂಟು
ಹೊತ್ತಿಕೊಂಡು ಬರುತಿದ್ದ, ಅವನ್ನ ನೋಡಿ
ಸಂತೋಷವಾಯ್ತು ಐಪಿಗೆ.
ಅವನೂ ನಿಂತ
ಐಪಿ ನೂ ನಿಂತ
ಐಪಿ ನ ನೋಡಿ ಅವನು ಕೇಳೇ ಬಿಟ್ಟ
ನಿಮ್ದು ಇಸ್ತ್ರಿ ಅಂಗಡಿ ಎಲ್ಲಿದೇಂತ.
ಐಪಿ ಕಕ್ಕಾ ಬಿಕ್ಕಿ
ನಹೀ ನಹೀ ನಹೀಂತ
ಆತನಿಗೆ ತಿಳಿ ಹೇಳೋಷ್ಟಕ್ಕೆ ಸಾಕಾಯ್ತು
ಈ ಘಟನೆಯನ್ನು ಐಪಿ ಹಂಚಿ ಕೊಂಡಾಗ
ನಾವೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾಯ್ತು.
ಇದನ್ನೇ ವೃತ್ತಿ ಬಾಂಧವ್ಯಂತ
ಐಪಿನ ಚುಡಾಯಿಸುತ್ತಿದ್ವಿ.
NAARM ರಾಜೇಂದ್ರನಗರ ಹೈದ್ರಾಬಾದ್ ನಲ್ಲಿ
ಪ್ರಶಿಕ್ಷಣಕ್ಕಾಗಿ ಹೋಗಿದ್ದೆವು.
ಐಪಿ ಹಾಗೂ ನಾರಾಯಣಪ್ಪ ಹೈದೆರಾಬಾದ್
ಹಾಸ್ಟೆಲ್ನಲ್ಲಿ ಮೆಸ್ಸ್ ಸೆಕ್ರೆಟರಿ ಗಳಾಗಿದ್ದರು.
ಐಪಿ ಯ ಬಗ್ಗೆ ನಾರಾಯಣಪ್ಪ ಒಮ್ಮೆ ತಮ್ಮ
ಅನುಭವ ಹೇಳ್ತಾ ಇದ್ದರು
ಐಪಿ ಮತ್ತೆ ಅವರು ಹಾಸ್ಟೆಲ್ ಗೆ ಬೇಕಾದ ತರಕಾರಿ ತರಲು ಮಾರ್ಕೆಟ್ ಗೆ ಹೋಗಿದ್ದರು
ನಾರಾಯಣಪ್ಪ ಬೇಕೂಂತಲೇ
ಬನ್ನಿ ಐಪಿ, ಮೆಸ್ಸ್ ದುಡ್ಡಲ್ಲಿ ಹೋಟೆಲ್ ಗೆ ಹೋಗಿ
ದೋಸೆ ತಿಂದು ಕಾಪಿ ಕುಡಿದು ಹೋಗೋಣ ಅಂದಿದ್ದಕ್ಕೆ ಸಕತ್ತು ಕೋಪ ಮಾಡ್ಕೊಂಡು
ಕಟ್ ಅಂಡ್ ರೈಟಾಗಿ ಹೇಳ್ಬಿಟ್ಟರು
ಅದೆಲ್ಲಾ ಸಾಧ್ಯ ಇಲ್ಲಾಂತ.
ಇದೆಲ್ಲಾ ಕಾಮನ್ ಅಪ್ಪಾ ಅಂತ ಹೇಳಿದ್ದಕ್ಕೆ
ಬೇಕಿದ್ರೆ ನನ್ನ ದುಡ್ಡು ಕೊಡ್ತೇನೆ
ಹೋಗಿ ಕಾಪಿ ಕುಡಿದು ಬನ್ನಿ ಅಂತಂದ್ರು
ಇದು ಪ್ರಾಮಾಣಿಕತೆಗೆ ಪ್ರಮಾಣ ಎಂದು
ಈ ದಿನಕ್ಕೂ ನೆನಸ್ಕೊಂಡು ಹೇಳ್ತಾ ಇರುತ್ತಾರೆ.
ಐಪಿ ಯಂತವರು ಈಗೆಲ್ಲಾ ಬಹಳ ವಿರಳ.
ಹೀಗೇ ಐಪಿ ವಯಲಿನ್ ಕಲಿತಿದ್ದು,
ಮೂಗೊಳಗೆ ನೀರಬಿಟ್ಟು ತೆಗೆಯುವ
ಯೋಗ ಕಲೀತೀನಿಂತ ಹೋಗಿದ್ದು.
ಕಿಡ್ನಿ ದಾನ ಮಾಡ್ತೀನಿಂತ ಹೌರಾ ಹಾಸ್ಪಿಟಲ್ ಗೆ
ಹೋಗಿ ಆ ಪೇಷಂಟ್ ತೀರ್ಕೊಂಡಿದ್ದು.
ಹೀಗೇ ಹಲವಾರು ಘಟನೆಗಳು
ಬರೆಯಲು ಹೇಳಲು ಇಷ್ಟವಿದ್ದರೂ
ದುಃಖ ಉಮ್ಮಳಿಸುತ್ತೆ
ಕಾಲಚಕ್ರ ಉರುಳಿದ ಹಾಗೇ
ನಾವೆಲ್ಲರೂ ಬೇರೆ ಬೇರೆ ದಿಕ್ಕಿನಲ್ಲಿ
Dr. ಭೈರಪ್ಪ ವೆಂಕಟೇಶ್,
National University of Singapore ನಲ್ಲಿ,
ನಾನು ಕೆ.ಸುರೇಶ, ಮಧ್ಯ ಪ್ರದೇಶದ ಪ್ರಶಾಸಕೀಯ ಸೇವೆಯಲ್ಲಿ ಭೋಪಾಲಕ್ಕೆ, ನ.ಅಶ್ವಥ್ ನಾರಾಯಣ ರೆಡ್ಡಿ, Bank of India ದಲ್ಲಿ ಉನ್ನತ ಹುದ್ದೆಗಾಗಿ ಬೆಂಗಳೂರಿಗೆ
ಅವರವರ ಜೀವನಯಾತ್ರೆಯ
ಮುಂದುವರೆಸಿದೆವು.
ನಮ್ಮೆಲ್ಲರ ಸೌಭಾಗ್ಯ
ನಾವು ಒಮ್ಮೆ ಅವರ ಜೊತೆಗೆ ಕ್ಲಾಸ್ ರೂಮ್ನಲ್ಲಿ ಒಟ್ಟಾಗಿ ಕುಳಿತಿದ್ದು ಹಾಸ್ಟೆಲ್ನಲ್ಲಿ ಒಟ್ಟಾಗಿ ಊಟ ಮಾಡಿದ್ದು, ನಂತರ Barrackpore ನಲ್ಲಿ ಕಳೆದ ಬಾಡಿಗೆ ಮನೆ ದಿನಗಳು. ಹೀಗೇ...
ಅವರಿದ್ದ ಕಾಲದಲ್ಲಿ ನಾವೂ ಇದ್ವಿ
ಅನ್ನೋದು ಹೆಮ್ಮೆ,
ಹಾಗೂ ಚಿರಸ್ಮರಣೀಯ..
ಐಪಿ ಬಂಗಾರದ ಮನುಷ್ಯ
ಅರ್ಥಾತ್ ಚಿನ್ನದಂತ ಮನುಷ್ಯ
ತುಂಬಿದ ಕೊಡ ತುಳುಕ್ಕಲ್ಲ ಅಂತಾರಲ್ಲ
ಅದಕ್ಕೆ ಜೀವಂತ ಉದಾಹರಣೆ
ನಮ್ಮ ಐಪಿ
ಇದನ್ನೆಲ್ಲಾ ಐಪಿ ಕೇಳ್ದಾಂತ ಇಟ್ಕೊಳ್ಳಿ
ಎರಡೂ ಅಂಗೈ ನ ಬೆಸದು
ಬೇಡಾ ಗುರು ಬೇಡಾಂತ
ಹೇಳೋ ಮುಗ್ಧ
ನಮ್ಮ ಐಪಿ
ರೂಲ್ಸ್ ಮತ್ತೆ ಶಿಸ್ತು ವಿಷಯದಲ್ಲಿ
ಉಕ್ಕಿನ ಮನುಷ್ಯ ಅಂದ್ರೆ
ಕಬ್ಬಿಣದಷ್ಟು ಕಟು.
ನಮ್ಮ ಐಪಿ.
ಮತ್ತವರ ಸಮಸ್ಯೆಗಳು
ತನ್ನ ಸಮಸ್ಯೆ ಎಂದುಕೊಂಡು
ನಿರಾಕರಿಸಲು ಪ್ರಯತ್ನಿಸುವ ವಿಷಯದಲ್ಲಿ
ಕರಗಿ ಹೋಗೋ ಐಸ್ ಮನುಷ್ಯ.
ನಮ್ಮ ಐಪಿ.
ಥ್ಯಾಂಕ್ಸ್ ಹೇಳೋದು ಐಪಿಯ
ಆಜನ್ಮ ಸಿದ್ಧ ಹಕ್ಕು
ಹುಟ್ಟಿದ ತಕ್ಷಣ ನರಸಮ್ಮಂಗೇ
ಥ್ಯಾಂಕ್ಸ್ ಹೇಳ್ದವನು
ನಮ್ಮ ಐಪಿ
ಸ್ವಲ್ಪ ಅತಿಯಾಯ್ತಲ್ಲ್ವಾ.
ಥ್ಯಾಂಕ್ಸ್ ( ಅದು ಐಪಿ ಯ ವಾಯ್ಸ್).
ಅಮೇರಿಕಾದಿಂದ ಬಂದ ತಕ್ಷಣವೇ
ಕೊಲ್ಕೋತ್ತ ಹೋಗಿದ್ದಾರೆ.
ಈಗ ಬರುತ್ತೀನಿಂತ ಹೇಳಿ ಹೋಗಿದ್ದಾರೆ
ಅವರ ಮೊಮ್ಮಗಳು ಅನಘಾ ಕೇಳ್ತಾ ಇದ್ದಾಳೆ
ತಾತಾ ಎಲ್ಲಮ್ಮ? ಯಾವಾಗ ಬರುತ್ತಾರಮ್ಮ?
ಅದಕ್ಕೆ ಅವರಮ್ಮ ದೇವರ ಹತ್ತಿರ ಹೋಗಿದ್ದಾರೆ
ಬರುತ್ತಾರಮ್ಮ...
ನಾವೆಲ್ಲರೂ ಕಾಯುತ್ತಾ ಕುಳಿತಿದ್ದೀವಿ...
ಐಪಿ, ಐಪಿಗೆ, ಐಪಿಗಾಗಿ...
(ಬನ್ನಿ, ಐಪಿ ನೆನಸಿದ್ದನ್ನ, ಬಯಸಿದ್ದನ್ನ ಪೂರ್ಣಯಿಸುವ ಜಿಮ್ಮೆದಾರಿ ನಮ್ಮೆಲ್ಲರದ್ದು)
Beautiful memories 😍
ಪ್ರತ್ಯುತ್ತರಅಳಿಸಿWhat a deeply moving tribute! It is so heartwarming to read how much a friend can miss another after their demise, and especially about the beautiful bond you both shared — as expressed in the blog, it’s truly a heavy loss to bear. Thank you so much for letting us know about such a great soul like ಪ್ರೊಫೆಸರ್ ಡಾಕ್ಟರ್ ಸುಬ್ಬಣ್ಣ ಅಯ್ಯಪ್ಪನ್, and the never-fading bond of friendship that you both cherished. The blog took us through a beautiful wave of emotions. Both of you were equally lucky to have had each other. ✨🦋
ಪ್ರತ್ಯುತ್ತರಅಳಿಸಿLet ಪ್ರೊಫೆಸರ್ ಡಾಕ್ಟರ್ ಸುಬ್ಬಣ್ಣ ಅಯ್ಯಪ್ಪನ್'s legacy live on!