ಅಂಬಿ ಹಾಗೂ ಬಾಡೂಟ
ಅಂಬಿ ಅನ್ನೋ ಅಂಬರೀಷ್ ಗೆ
ಈ ಮಾರ್ಚ್ ತಿಂಗಳು ಬಂದ್ರೆ
ಎಂಟು ವರ್ಷ ತುಂಬತ್ತೆ.
ಈ ಸಲ ಅಂಬಿಯ ಹುಟ್ಟು ಹಬ್ಬದ ಪಾರ್ಟಿ ಗ್ರಾಂಡ್
ಆಗಿ ಮಾಡೋಣಾಂತ ಅಮ್ಮ ಅಪ್ಪ ಹೇಳಿದ್ದರು.
ಅಪ್ಪ EB ಯಲ್ಲಿ ಲೈನ್ ಮ್ಯಾನ್ ಶಂಕರ್.
ಊರ ಜನರು ಕರೆಯುತ್ತಿದ್ದ
ಹೆಸರು ಪುಟ್ಟದಾಗಿ ಇ. ಬಿ. ಶಂಕರ್ ಅಂತ
ಅಮ್ಮ ಬೆಳಗೆದ್ದು ಮನೆ ಕೆಲಸ,
ಅಡಿಗೆ ಮಾಡಿ, ಬಟ್ಟೆ ಒಗೆದು,
ಸಂಸಾರವನ್ನ ಸಾಗಿಸುವ ಗ್ರಹಣಿ
ಶಾರ್ಟ್ ಆಗಿ ಹೌಸ್ ವೈಫ್ ಸುಶೀಲಮ್ಮ.
ಅಂಬಿಗೊಬ್ಬಳು ತಂಗಿ ಲಚ್ಚಿ ಅನ್ನೋ ಲಕ್ಷ್ಮೀಂತ
ಚಿಕ್ಕ ಮನೆ, ಚೊಕ್ಕ ಸಂಸಾರ.
ಅಂಬಿಯ ಚಡ್ಡಿ ಫ್ರೆಂಡ್ಸ್ ಕಮ್ ಕ್ಲಾಸ್ ಮೇಟ್ಸ್,
ಅವ್ರೇ ಇಟ್ಟುಕೊಂಡ ಹೆಸರು ಅಂಬಿ ಗ್ಯಾಂಗ್
ಅದರಲ್ಲಿ ಮುಖ್ಯವಾಗಿ ಮೂವರು
ನಾಣಿ ಎನ್ನುವ ನಾರಾಯಣ,
ಪೆದ್ದು ಎನ್ನುವ ರವಿ (ಕ್ಲಾಸ್ ಟೀಚರ್ ಪೆದ್ದು ಅಂತ ಕರೆದಿದ್ದರಿಂದ) ವೆಂಕಿ ಎನ್ನುವ ವೆಂಕಟಾಚಲ,
ಅವರಿದ್ದದ್ದೋ ಮೈಸೂರು ಮಂಡ್ಯದ
ನಡುವೆ ಇರೋ ಒಂದೂರು.
ಅದೇ ಊರಲ್ಲಿ
EB ಶಂಕರ್ ರವರ ಸಂಬಂಧಿಕರು
ಊರ ಹಿರಿಯೋರು ಮಹೇಂದ್ರರವರೂ ಇದ್ದರು.
ಊರಿನ ನಡುವೆ ದೊಡ್ಡ ಮನೆ, ದೊಡ್ಡ ಆಂಗಣ
ಊರಿನ ಮುಖ್ಯ ಮಹೇಂದ್ರರವರದ್ದು
ಅವರು ಊರಲ್ಲಿ ದೊಡ್ಡ ಜಮೀನ್ದಾರರು
ಸಾವಿರಾರು ಎಕರೆ ಭೂಮಿ ಮಾಲೀಕ
ತಾಯಿ ಕಾವೇರಿ ನದಿಯ ಸಿಂಚಿತ ಭೂಮಿ.
ಹಣ, ಕಾಸು, ಜಮೀನು ಎಲ್ಲಾ ಒಂದೆಡೆ ಸೇರಿದರೆ
ಪವರ್ ತಾನಾಗೇ ಹುಡುಕ್ಕೊಂಡ್ ಬರುತ್ತೇ.
ಅನ್ನೋದಕ್ಕೆ ಮಹೇಂದ್ರ ಉದಾಹರಣೆ
ಕಾಂಗ್ರೆಸ್ ನಲ್ಲಿದ್ದಾಗಲೂ ಮಂತ್ರಿ
ಜನತಾ ದಳದಲ್ಲಿದ್ದಾಗಲೂ ಮಂತ್ರಿ
ಬಿ ಜೆ ಪಿ ಯಲ್ಲಿಯೋ ಮಂತ್ರಿ
ಈಗ ಆಫರ್ ಬಂದಿದೆ ಕಾಂಗ್ರೆಸ್ ಮತ್ತೆ
ಸೇರ್ಕೊಳ್ಳಿಂತ..
ಹೀಗಿದ್ದಾಗ ಮಾರ್ಚ್ 12
ಅಂಬಿಯ ಹುಟ್ಟಿದಹಬ್ಬ
ಬಂದೇ ಬಿಡ್ತು
ಸ್ಕೂಲ್ ಭಾನುವಾರದ ಕಾರಣ ರಜೆ
ಬೆಳಗ್ಗೆ ಅಮ್ಮ ಅಪ್ಪ ಲಚ್ಚಿ ಜೊತೆ
ಅಂಬಿ ಸ್ಕೂಟರ್ ಹತ್ಕೊಂಡು
ಹತ್ತಿರದಲ್ಲೇ ಇದ್ದ
ಶ್ರೀ ವರದರಾಜ ಸ್ವಾಮಿ ದೇವಸ್ಥಾನಕ್ಕೆ ಹೋಗಿ
ಪೂಜಾ ಅರ್ಚನೆ ಮಾಡಿ
ದೇವಸ್ಥಾನದಲ್ಲಿ ಹೇಳಿ ಮಾಡಿಸಿದ್ದ
ಪುಳಿಯೋಗರೆ ಮತ್ತೆ ಸ್ವೀಟ್ ಪೊಂಗಲ್
ಎಲ್ಲರಿಗೂ ಹಂಚಿ ಅದನ್ನೇ ಮನೆಗೆ ತಂದು
ಸ್ವಲ್ಪಹಾರ ಮುಗಿಸಿ ಮಧ್ಯಾಹ್ನ ಹುಟ್ಟುಹಬ್ಬದ ಸಂಭ್ರಮಕ್ಕೆ ತಯ್ಯಾರಿ ಶುರುವಾಯ್ತು.
ಅಂಬಿ ಗ್ಯಾಂಗ್ ನಾಣಿ, ಪೆದ್ದು ಮತ್ತೆ ವೆಂಕಿ
ಮನೆಗೆ ಬಂದಿದ್ದರು. ಅವರೆಲ್ಲಾ ಬಣ್ಣ ಬಣ್ಣದ
ರೋಲ್ ಪೇಪರ್ ನ್ನು ಕಿಟಕಿಯಿಂದ
ನಡುವಲ್ಲಿದ್ದ ಫ್ಯಾನ್ ಗೆ ಕಟ್ಟಿದ್ರು
ಹ್ಯಾಪಿ ಬರ್ತ್ಡೇ ಬ್ಯಾನರ್, ಬಲೂನ್ ಎಲ್ಲಾ ಕಟ್ಟಿ
ಅಂಬಿ ಬರ್ತ್ಡೇ ಸಂಭ್ರಮ ಶುರುವಾಯ್ತು.
ಮಂಡ್ಯ ದಿಂದ ಅವರಪ್ಪ
ಸ್ಪೆಷಲ್ ಆಗಿ ಆರ್ಡರ್ ಮಾಡಿ ತಂದಿದ್ದ
ಹನಿ ಡ್ಯೂ ಕೇಕ್, ಅದರೊಟ್ಟಿಗೆ ಅಂಬಿಗೆ
ತಂದಿದ್ದ ಹಳದಿ ಬಣ್ಣದ ಟೀ ಶರ್ಟ್
ಕಂದು ಬಣ್ಣದ ಚಡ್ಡಿ ಸಂಭ್ರಮಕ್ಕೆ
ಮೆರಗು ತಂದಿತ್ತು. ಹೊಸಬಟ್ಟೆ ಹಾಕ್ಕೊಂಡು
ಅಮ್ಮ,ಅಪ್ಪ, ಲಚ್ಚಿ, ಜೊತೆಗೆ ಫ್ರೆಂಡ್ಸ್
ಮುಂದೆ ಅಂಬಿ ಕೇಕ್ ಕಟ್ ಮಾಡಲು
ಶುಭಾಶಯಗಳನ್ನು ಹಂಚಿಕೊಂಡರು.
ಜೇನುತುಪ್ಪ ಕೇಕ್ ನಿಂದ ಸೋರಲು
ಕೈಯ ನಕ್ಕಿ ಕೊಂಡೇ ತಿಂದು ಮುಗಿಸಿದರು.
ಅಂಬಿಯ ತಂಗಿ ಲಕ್ಷ್ಮಿ ಕಲರ್ ಪೆನ್ಸಿಲ್ ನಿಂದ
ಬರೆದು ಕಲರ್ ಮಾಡಿದ್ದ ಬರ್ತ್ ಡೇ ಗ್ರೀಟಿಂಗ್ ಉಡುಗೊರೆಯಾಗಿ ಕೊಟ್ಟಳು. ತುಂಬಾ ಸುಂದರವಾಗಿ ಅಮ್ಮ, ಅಪ್ಪ, ಅಣ್ಣ ಮತ್ತು ಲಚ್ಚಿ ಕೈ ಕೈ ಹಿಡ್ಕೊಂಡ್ ನಿಂತಿದ್ದ ಡ್ರಾಯಿಂಗ್ ಅದು.
ನಾಣಿ ಪೆನ್ಸಿಲ್ ಬಾಕ್ಸ್,
ಪೆದ್ದು ಪಂಚತಂತ್ರ ಕಥೆ ಪುಸ್ತಕ,
ಮತ್ತೆ ವೆಂಕಿ ಕ್ಯಾಡ್ಬರಿ ಚಾಕಲೇಟ್ ಕೊಟ್ಟ್ರು.
ಎಲ್ರನ್ನೂ ಕೂರಿಸಿ ಬಾಳೆಲೆ ಹಾಕಿ
ಸುಶೀಲಮ್ಮ ಅಂಬಿಗೆ ಇಷ್ಟವಾದ
ಮಟನ್ ಪುಲವ್, ಚಿಕೆನ್ ಕಬಾಬ್
ಮಾಡಿದ್ದರು ಜೊತೆಗೆ ಶ್ಯಾವಿಗೆ ಪಾಯಸ
ಬೇಕು ಬೇಡಾನ್ನೋ ವರೆಗೂ ಬಡಿಸಿದ್ರು
ಇದೂ ಒಂದು ತರಹ ಬರ್ತ್ಡೇ ಬಾಡೂಟಾನೇ
ಅಂಬಿಯ ಬರ್ತ್ಡೇ ಮುಗಿಯುತ್ತಲೇ
ಯುಗಾದಿ ಹಬ್ಬ ಬಂತು. ಅಂಬಿ ಗ್ಯಾಂಗ್
ಯುಗಾದಿ ಹಬ್ಬದ ಹಿಂದಿನ ದಿನ
ಒಟ್ಟು ಗೂಡಿ ಪ್ಲಾನ್ ಒಂದ ಹಾಕಿದ್ರು
ಬೆಳಗ್ಗೆ ಒಂಬತ್ತು ಘಂಟೆಗೆ ಅಂಬಿ ಮನೆಯಲ್ಲಿ
ಮೀಟಿಂಗ್, ಆಮೇಲೆ ಈಟಿಂಗ್ಂತ,
ಅದಾದ ಮೇಲೆ ಕ್ರಿಕೆಟಿಂಗ್ಂತ.
ಯುಗಾದಿಯ ದಿನ ಪ್ರಾತಃ
ಅಂಬಿಯ ಹೊಸ ಚೆಕ್ ಶರ್ಟ್,
ಹೊಸ ಕಾಕಿ ನಿಕ್ಕರ್ ಆತನ,
ಅಂದವನ್ನ ಇನ್ನೂ ಹೆಚ್ಚಿಸಿತ್ತು.
ಅಂಬಿ ಗ್ಯಾಂಗ್ ಹೇಳಿಟ್ಟಂಗೆ
ಎಲ್ಲರೂ ಬೇಗ ಬೇಗ ತಯ್ಯಾರಾಗಿ
ಹೊಸ ಬಟ್ಟೆ ತೊಟ್ಟು ಕೊಂಡು
ಒಂಬತ್ತು ಘಂಟೆಗೆ, ಟಾಣ್ಂತ,
ಅದೂನೂವೆ ಅವರಪ್ಪ ಶಂಕರ್
ಮನೆಯಿಂದ ಹೊರ ಹೋದರೂಂತ
ನಿಶ್ಚಿತವಾದ ಮೇಲೆ ಹಾಜರಾದರು.
ಅಂಬಿ ಅಮ್ಮಂಗೆ ಹೇಳಿಟ್ಟಿದ್ದ,
ಫ್ರೆಂಡ್ಸ್ ಬರುತ್ತಾರೇಂತ
ಸುಶೀಲಮ್ಮ ಎಲ್ಲರಿಗೂ ಕೆಳಗೆ ಕೂರಿಸಿ
ಬಾಳೆಲೆಯ ಮೇಲೆ ಒಬ್ಬಟ್ಟು ಬಡಿಸಿ ತುಪ್ಪ ಸುರಿದ್ರು.
ಚಪ್ಪರಸಿ ತಿಂದು,ಇನ್ನೂ ಬೇಕು ಬೇಕೂಂತ
ಪೂರಾ ಕಾಲಿ ಮಾಡ್ಬಿಟ್ರು
ನಾಣಿ, ಪೆದ್ದು ಮತ್ತೆ ವೆಂಕಿ.
ತಿಂದ ಸ್ಪೀಡ್ ನಲ್ಲೇ
ಕ್ರಿಕೆಟ್ಟೂಂತ ಬ್ಯಾಟ್, ಬಾಲ್, ಸ್ಟಂಪ್ಸ್,
ಹಿಡ್ಕೊಂಡ್ ಊರ ನಡುವೆ ಇದ್ದ ಮಹೇಂದ್ರರ ಮನೆಯ ಬಗಲಲ್ಲಿದ್ದ ಕಾಲಿ ಗ್ರೌಂಡನಲ್ಲಿ.
ಯುಗಾದಿ ಕ್ರಿಕೆಟ್ ಟೂರ್ನಮೆಂಟ್ ನ್ನ
ಸ್ಟಾರ್ಟ್ ಮಾಡೇ ಬಿಟ್ರು ಅಂಬಿ ಗ್ಯಾಂಗ್.
ಹೊತ್ತು ಹೋಗಿದ್ದು ಗೊತ್ತೇ ಆಗಲಿಲ್ಲಾ.
ಬೆಳಗ್ಗೆ ಗಂಜಿ ತಿಂದು ಅಡ್ಜಸ್ಟ್ ಆದ ಹೊಟ್ಟೆ
ಓಬ್ಬಟ್ಟು ಗೆ ಒಗ್ಗಲಿಲ್ಲಾ
ಎಲ್ರು ಗದ್ದೆ ಕಡೆ ಓಡಿಯೇ ಬಿಟ್ರು.
ಹಾಗೆಯೇಆಟ ಆಡಿಕೊಂಡು
ಬೇವು ಬೆಲ್ಲಾ ತಿನ್ಕೊಂಡು
ಸಿಹಿ ಹೆಚ್ಚು ಕಹಿ ಕಮ್ಮಿ
ಯುಗಾದಿಯ ದಿನ ಕಳೆದು ಹೋಯಿತು.
ಅದರ ಮರುದಿನ
ವರ್ಷ ತೊಡಕು,
ಬೆಳಗ್ಗೆ 7ಘಂಟೆಗೇ ಅಂಬಿನಾ ಎಬ್ಬಿಸಿದ
ಅವರಪ್ಪ ಶಂಕರ್ ಜೊತೆ ಸ್ಕೂಟರ್ ನಲ್ಲಿ
ಮಟನ್ ಶಾಪ್ ಗೆ ಹೋದ್ರೆ ಅಲ್ಲಿ ದೊಡ್ಡ ಕ್ಯೂ
ಅಪ್ಪ ಯಾಕಪ್ಪ ಇಷ್ಟು ಜನ.
ಇವತ್ತು ವರ್ಷತೊಡಕು ಅದಕ್ಕೆ
ನಿನ್ನೆ ಬರೀ ಸ್ವೀಟ್ ತಿಂದಿದ್ದರಿಂದ ಇವತ್ತು
ಖಾರಕ್ಕೋಸ್ಕರ ಮಾಂಸ ಅಂದ್ರು
ಅರ್ಥವಾಗಲಿಲ್ಲ ಅಂಬಿಗೆ.
ಆದರೆ ಅದರ ಹಿಂದೆ ಕಥೆಯೊಂದು
ಹೀಗೂ ಓಡ್ತಾ ಇತ್ತು. ಕ್ಯೂ ನಲ್ಲಿ ನಿಂತಿದ್ದ
ಹಿರಿಯರೊಬ್ಬರು ಈ ರೀತಿ
ವಿವರಣೆಯ ಕೊಟ್ರು.
ಹೊಸ ವರ್ಷ=ಹೊಸತು +ದಡಗು= ಹೊಸತೊಡಕು
ಇದರಲ್ಲಿ ದಡಗು ಅಡಗು ಪದದಿಂದ ಬಂದದ್ದು
ಅಡಗು ಅಂದ್ರೆ ಹಳೆಗನ್ನಡದಲ್ಲಿ ಬಾಡು
ಬಾಡು ಅಂದ್ರೆ ಮಾಂಸ
ಯಾರು ಡಿಸೈಡ್ ಮಾಡಿದ್ರೋ ಗೊತ್ತಿಲ್ಲಾ
ಈ ವ್ಯಾಖ್ಯಾನ ಸರಿನೋ ಇಲ್ಲವೋ
ಯಾವುದು ಹೇಗೋ
ವರ್ಷ ತೊಡಕು ಮಟನ್ ತಿನ್ನಲೇ ಬೇಕು
ವರ್ಷವಿಡೀ ಏನೊಂದೂ ತಂಗು ತಡೆಯಿಲ್ಲದೇ ನಿರ್ವಿಗ್ನವಾಗಿರಲಿ ಎಂದು ಹಾರೈಸಲು ಈ ವರ್ಷತೊಡಕು. ಆ ಪಾಯಿಂಟ್ ಹಂಗೆ ಇದ್ದು ಬಿಡ್ತು
ಮಟನ್ ತಿಂದ್ರೇನೇ ಎಲ್ಲವೂ ನಿರ್ವಿಗ್ನ.
ಅಂಬಿ ಒಂದು ಘಂಟೆಗೂ ಹೆಚ್ಚು ಕ್ಯೂನಲ್ಲಿ ನಿಂತು ತಂದ ಮಟನ್, ಚಿಕೆನ್, ಅಮ್ಮನ ಕೈ ಪಕ್ವದಲ್ಲಿ
ಬೆಂದು ಇನ್ನೂ ಹೆಚ್ಚು ಟೇಸ್ಟಿಯಾಗಿತ್ತು.
ರಾಗಿ ಮುದ್ದೆಗೂ ಮಟನ್ ಸಾಂಬಾರ್ ಗೂ
ಜೋರಾಗಿತ್ತು ಕಾಂಬೊ.ಯಾವ ತಡಕು ತೊಡಕು ಇಲ್ಲದೆ ಸ್ಮೂತಾಗಿ ಜೋರಾಗಿ ನಡೆದಿತ್ತು ಸಂಭ್ರಮ.
ಆಶ್ಚರ್ಯ ಆದ್ರೆ ನಿಜ, ವರ್ಷ ತೊಡಕು
ವೆಜಿಟೇರಿಯನ್ ಊಟಕ್ಕೆ ಹೇಳೋದಿಲ್ಲ, ಯಾಕೋ ಗೊತ್ತಿಲ್ಲಾ
ವಿವಾಹ ಭೋಜನ
ಇದೆಲ್ಲದರ ನಡುವೆ ಏಪ್ರಿಲ್ ತಿಂಗಳಲ್ಲಿ
ಊರ ಮುಖ್ಯರಾದ ಮಹೇಂದ್ರರ
ಮಗನ ಮದುವೆ ಮೈಸೂರಿನಲ್ಲಿ ನಿಶ್ಚಯವಾಗಿತ್ತು
ಮದುವೆಗೆ CM, ಕೇಂದ್ರದ ಮಂತ್ರಿಗಳು,
ರಾಜ್ಯದ ಮಂತ್ರಿಗಳು, MP ಗಳು, MLA ಗಳು,
ಸಿನಿಮಾ ನಟ ನಟಿಯರು ಎಲ್ರೂವೆ ಬಂದು ಭಾಗವಹಿಸಿ ವಧು ವರರನ್ನು ಆಶೀರ್ವದಿಸಿದರು.
ವಿವಾಹ ಭೋಜನ ಐವತ್ತುಕ್ಕೂ ಹೆಚ್ಚು ವ್ಯಂಜನಗಳು
ಎಲ್ಲಾ ಶುದ್ಧ ಶಾಖಾಹಾರಿ vegetarian ಐಟಂಗಳು.
ಆಡಂಬರಕ್ಕೆ, ವಿಜೃಂಭಣೆಗೆ ಏನೂ ಕೊರತೆ ಇರಲಿಲ್ಲಾ.
ಮಹೇಂದ್ರರ ಮಗನ ಮದುವೆ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆದು ಮುಗಿಯಿತು.
ಬೀಗರ ಊಟ
ಮಹೇಂದ್ರರ ಮಗನ ಕಡೆಯಿಂದ ಊರಿನೋರಿಗೆ
ರಿಸೆಪ್ಶನ್ ಮತ್ತೆ ಬೀಗರಊಟಕ್ಕೆ ಏರ್ಪಾಡು ಮಾಡಲಾಗಿತ್ತು. ಸಾಧಾರಣವಾಗಿ ಮದುಮಗನ
ಕಡೆಯಿಂದ ನೀಡುವ ಔತಣವೇ ಬೀಗರ ಊಟ
ಇನ್ನೂ ಮೂರು ದಿನಗಳಲ್ಲಿ ಬೀಗರ ಊಟ
ಯಾರ್ ಯಾರನ್ನು ಕರೆಯೋದು
ಎಷ್ಟು ಜನ, ಕೇಟರಿಂಗ್ ನವ್ರು, ಕುರ್ಸಿ ಟೇಬಲ್ಲು
ಲೋಟ ನೀರು ಶಾಮಿಯಾನ ಹೀಗೇ ಒಂದಾ ಎರಡಾ ಹಲವಾರು ಪ್ರಶ್ನೆಗಳು, ವ್ಯವಸ್ಥೆ, ಮಟನ್, ನಾಟಿ ಕೋಳಿ, ಚಿಕೆನ್, ಮೊಟ್ಟೆ ಸಪ್ಲೈ
ಮತ್ತೆ ತಿಂದು ಮುಗಿಸಿದ ಆಹಾರ ವೇಸ್ಟ್, ಎಲುಬು ಎಂಜಲೆಲೆ, ಎಲ್ಲವನ್ನೂ ಡಿಸ್ಪೋಸ್ ಮಾಡಬೇಕಾದ ಅನಿವಾರ್ಯ ಅದಕ್ಕೊಂದು ದೊಡ್ಡ ಹಳ್ಳವ ಅಗೆದು ರೆಡಿ ಮಾಡಿದ್ದರು.
ಬೆಳಗ್ಗೇನೇ EB ಶಂಕರ್, ಮಹೇಂದ್ರರ ಮನೆಗೆ ಹೋಗಿ ವಿದ್ಯುತ್ ಪೂರೈಕೆ, ಸಮಾರಂಭಕ್ಕೆ ಬೇಕಾದ ಲೈಟಿಂಗ್ ವ್ಯವಸ್ಥೆಗಳ ನಿರ್ಧಾರ, ಅವಶ್ಯವಾದ ಅನುಕೂಲತೆಗಳ ಮಾಡಿಕೊಟ್ಟು ಮನೆಗೆ ಬಂದಿದ್ದಾಯ್ತು.
ನಮ್ಮ ಅಂಬಿ ಗ್ಯಾಂಗ್ ಈ ಎಲ್ಲಾ ಸಿದ್ಧತೆಗಳನ್ನ ನೋಡ ಬೇಕಾದ ಪರಿಸ್ಥಿತಿ. ಯಾಕೆಂದ್ರೆ ಇವರ ಕ್ರಿಕೆಟ್ ಗ್ರೌಂಡೇ
ಬೀಗರ ಊಟಕ್ಕಾಗಿ ಅತಿಕ್ರಮಿಸಿ ಗೂಟ ಹೊಡೆದು ಟೆಂಟುಗಳು ಆಕ್ರಮಿಸಿತ್ತು. ಸಮಾರಂಭ ಮುಗಿದ ಮೇಲೆ ಹಳ್ಳವನೆಲ್ಲ ಮುಚ್ಚಿ ಸರಿ ಮಾಡಿ ಕೊಡ್ತೀವಿಂತ
ಕಂಟ್ರಾಕ್ಟರ್ ಆಶ್ವಾಸನೆ.
ಮದ್ದೂರಿನಿಂದ ಪ್ರಕಾಶ್ ಕೇಟರಿಂಗ್ ಬಾಡೂಟ ಸ್ಪೆಷಲಿಸ್ಟ್. ಬಂದು ಸ್ಥಳ ನಿರೀಕ್ಷಣೆ ಮಾಡಿ
ಅವರ ಟೀಮಿನ 100 ಜನ ಅಡುಗೆಯವರು,
100 ಜನ ಸಪ್ಲೈ ಮಾಡಲು
100ಜನ ಕ್ಲೀನ್ ಮಾಡಲು
ಮತ್ತೆ ಒಟ್ಟಿಗೇ 1000 ಜನ ಕೂತ್ಕೊಂಡು ಊಟಮಾಡಲು ವ್ಯವಸ್ಥೆ.
ಒಂದು ದಿನ ಹಿಂದೇನೇ
ಅವರ ಟೀಮ್ ಬಂದಿಳಿದು
ಪಾತ್ರೆ ಪಡಗಗಳನ್ನು
ಶಬ್ದವಿಲ್ಲದೆ ಇಳಿಸಿದರು.
ಅವರ ಟೀಮ್ಗಾಗಿ ರಾತ್ರಿ ಒಂದು ಸಾರು
ಎರಡು ಪಲ್ಯ ತಿಳಿಸಾರು ಮಜ್ಜಿಗೆ
500 ಜನಕ್ಕೆ ಮಾಡಿ ಮುಗಿಸಿದ್ದರು.
ಮದುವೆ ಊಟ ಯಾವಾಗಲೂವೆ ಶಾಖಾಹಾರಿ. ಬೀಗರ ಊಟ 100% ಮಾಂಸಾಹಾರಿ.
ಮದುಮಗಳ ಬಳಗದವರನ್ನ ವಿಶೇಷವಾಗಿ ಉಪಚರಿಸಿ ಅನ್ಯೋನತೆಯ ಹೆಚ್ಚಿಸಲು
ಇದೊಂದು ಔಪಚಾರಿಕತೆ.
ಮದುವೆ ವೆಜಿಟೇರಿಯನ್ ಊಟಕ್ಕಿಂತಲೂ
ಬೀಗರ ಊಟದ ಖರ್ಚು ಹೆಚ್ಚು.
ಅದಕ್ಕೆ ಕಾರಣ,
ಮದುವೇಂತಂದ್ರೆ ಫ್ಯಾಮಿಲಿಗೆ
ಒಬ್ಬರೋ ಇಬ್ಬರೋ ಬರುತ್ತಾರೆ
ಅದೇ
ಬೀಗರ ಊಟಾಂತಂದ್ರೆ ಒಂದು ಮನೆಗೆ
4-5 ಜನ ಖಂಡಿತ, ಪೂರಾ ಕುಟುಂಬ ಬರ್ತಾರೆ.
ಇದೆಲ್ಲಾ ಧ್ಯಾನದಲ್ಲಿಟ್ಟುಕೊಂಡು
ಮಹೇಂದ್ರ ರವರ ಅನುಮಾನ
ಹತ್ತು ಹದಿನೈದು ಸಾವಿರ ಜನರಿಗೆ
ಬಾಡೂಟ ಮೆನು ಮತ್ತೆ
ಅದಕ್ಕಾಗೋ ಅವಶ್ಯಕತೆಗಳ ಪೂರೈಸಲು
EB ಶಂಕರ್ ಗೆ ಜಿಮ್ಮೆದಾರಿ ಕೊಟ್ಟಿದ್ದರು.
ಬಾಡೂಟ ಚೆಫ್ ಪ್ರಕಾಶರ ಜೊತೆ ಕುಳಿತು
ಮೊದಲು ಮೆನು ಡಿಸೈಡ್ ಮಾಡಿದರು.
ಅದರ ಪ್ರಕಾರ
ಆರು ಟನ್ ಮಟನ್ (600ಕುರಿಗಳು)
ಏಳು ಟನ್ ಚಿಕೆನ್, ಎರಡು ಟನ್ ಮೀನು
25000 ಮೊಟ್ಟೆಗಳು ಹೀಗೇ ಬಲ್ಕಾಗಿ ಆರ್ಡರ್ ಮಾಡಿದ್ದಾಯ್ತು.
EB ಶಂಕರ್ ಅಂಬಿ ಗ್ಯಾಂಗ್ ಗೆ ಮೆನು ಬಗ್ಗೆ
ವಿಸ್ತ್ರಿತವಾಗಿ ವಿವರಿಸಿ ಕುತೂಹಲ ಕೆರಳಿಸಿದ್ದರು
ಅಂಬಿಗಾಗ್ಲೇ ಕನಸಲ್ಲಿ ಕಬಾಬು.
ಬೀಗರ ಊಟದ ದಿನ ಬೆಳಗ್ಗೆ 11 ಘಂಟೆಗೆ
ಮಾತು ಕೊಟ್ಟ ಹಾಗೇ ಚೆಫ್ ಪ್ರಕಾಶ್ ರವರು
ಎಲ್ಲಾ ಐಟಂಗಳನ್ನು ರೆಡಿ ಮಾಡಿದ್ದರು.
ಮಹೇಂದ್ರ ರವರಿಗೆ ತಿಳಿಸಿದ್ದಾಯ್ತು.
11.30am ಗೆ ಬೀಗರ ಊಟ ಆರಂಭಿಸೋಣ.
ಸಂಜೆ 4.00pm ಕ್ಕೆ ಎಲ್ಲಾ ಕ್ಲೋಸ್ ಮಾಡೋಣ,
ಎಂದು ಗ್ರೀನ್ ಸಿಗ್ನಲ್ ಕೊಟ್ರು.
ಊರಾದ್ರೂವೆ
ಜನತಾ ಸಂಯಮ ಕಳೆದುಕೊಳ್ಳದೆ
ಎಲ್ಲರೂ ತಾಳ್ಮೆಯಿಂದ ಸಾಲಾಗಿ
ಕುರ್ಚಿಗಳನ್ನು ಆಕ್ರಮಿಸುತ್ತಾ ಹೋದರು.
ರಿಸೆಪ್ಶನ್ ಗೆ ವಧುವರರು ಬಂದವರು
ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.
ಫಸ್ಟ್ ಸಾವಿರ ಜನರ ಪಂಕ್ತಿಯಲ್ಲಿ
ಅಂಬಿ ಗ್ಯಾಂಗ್ ಅವರಮ್ಮ ಲಚ್ಚಿ ಎಲ್ರೂ ಕೂತಿದ್ದರು. EB ಶಂಕರ್ ವ್ಯವಸ್ಥೆ ಯ ಸುಗಮವಾಗಿ ನಡೆಸಲು ಮಾರ್ಗದರ್ಶನ ನೀಡುತಿದ್ದರು.
ಬಾಳೆಲೆ, ಬಿಸ್ಲೇರಿ ವಾಟರ್ ಬಾಟಲ್ ಇಟ್ಕೊಂಡು
ಮುಗಿಸೋದ್ರೊಳಗೆ
ಬಿಸಿ ಬಿಸಿ ಮುದ್ದೆ, ಅದಕ್ಕಿಂತಲೂ ಬಿಸಿ
ಬೋಟಿ ಗೊಜ್ಜು ಹಾಕ್ಕೊಂಡ್ ಹೋದ್ರು.
ಕೈ ಹಸಿಯಾಗಿದ್ದಾಗಲೇ
ತಟ್ಟೆ ಇಡ್ಲಿ,ಮಟನ್ ಕುರುಮ,
ಯಾವಾಗ ಬಡಿಸ್ಕೊಂಡ್ ಹೋದ್ರೋ
ಗೊತ್ತೇ ಆಗಲಿಲ್ಲಾ.
ತಿನ್ನೋರಿಗೋ ಬಡಿಸೋರಿಗೂ
ಸರಿಯಾದ ಪೈಪೋಟಿ,
ನಂತರ ರಾಯ್ತಾ, ಈರುಳ್ಳಿ, ಸೌತೆಕಾಯಿ ಸಲಾಡ್
ಜೊತೆಗೆ ಮಟನ್ ಬಿರಿಯಾನಿ
ಎಗ್ ಮಸಾಲಾ ಬಡಿಸಿದರು,
ಬಿಸಿ ಬಿಸೀ ಹಾಗೂ ಗಮ ಗಮಾನ್ನೋ
ಬಿರಿಯಾನಿ ಟೇಸ್ಟೇ ಬೇರೆ
ಸೈಡ್ ಡಿಶ್ ಅಂತ, ಚಿಕೆನ್ ಕಬಾಬ್
ಚಿಲ್ಲಿ ಚಿಕನ್, ಫಿಶ್ ಕಭಾಬ್, ಬಡಿಸಿದ್ರು
ವೆಜ್ಟೇಬಲ್ ಪುಲೊವ್ ವೆಜಿಟೇರಿಯನ್ ಗಳಿಗಾಗಿ
ಸ್ವೀಟ್ ಫಿರ್ನಿ ದ್ರಾಕ್ಷಿ ಗೋಡಂಬಿ,(ಅನ್ನದ ಕೀರು)
ಅನ್ನ, ರಸಂ, ಮಜ್ಜಿಗೆ,
ಐಸ್ ಕ್ರೀಮ್, ಬಿಸ್ಲೇರಿ ವಾಟರ್ ಬಾಟಲ್.
ಎಲ್ರಿಗೂ ಸಾಕು ಸಾಕೂನ್ನೋ ವರೆಗೂ ಬಡಿಸಿದ್ದಾಯ್ತು
ಬಾಳೆ ಹಣ್ಣು, ಬೀಡಾ ಹೋಗ್ತಾ ಕೈಯಲ್ಲಿ ಕೊಟ್ರು
ಐಸ್ ಕ್ರೀಮ್ ಸವಿಯುತ್ತಾ ಮರೆಯಲಾಗದ ಬೀಗರ ಊಟದ ಸವಿನೆನಪುಗಳೊಂದಿಗೆ
ಊರವರು ಅಂಬಿ ಗ್ಯಾಂಗ್ ಹೊರ ಬಿದ್ದರು.
ಯಾವಾಗ ಬಾಡೂಟ ನೆನಪಾದ್ರೂ
ಬೀಗರ ಊಟದ ಚಿತ್ರ
ಕಣ್ಣ ಮುಂದೆ ಕಲರ್ ಫಿಲಂ ಓಡುತ್ತೆ.
ಇದಕ್ಕೆ ಮುಂಚೆನೂ ಬೀಗರ ಊಟ ಮಾಡಿದ್ರು
ಬರೀ ಮಟನ್ ಬಿರಿಯಾನಿ
ಬೋಟಿ ಗೊಜ್ಜು ಮುದ್ದೆಯಷ್ಟೇ,
ಆದ್ರೂವೆ ಈ ಬೀಗರ ಊಟ ಭಿನ್ನ
ವಿವಿಧ ವೆರೈಟಿ ವ್ಯಂಜನಗಳು,
ಟೇಸ್ಟ್ ಬೇರೇನೇ.
ನಾಲಿಗೆಯಿಂದ ರುಚಿ ಹೊರಟು ಹೋದ ಮೇಲೂ
ಮನಸ್ಸಿನಲ್ಲಿ ಆಳವಾಗಿ
ಬೀಗರ ಊಟ ಉಳಿದು ಹೋಯ್ತು.
ಬೀಗರು ಹೊರಟು ಹೋದ್ರು
ಅಡಿಗೆಯವರು ಹೊರಟು ಹೋದ್ರು
ಊರನ್ನು ಮತ್ತೆ ಯತಾವತ್ತಾಗಿ ಹಳೆಯ ಸ್ಥಿತಿಗೆ ತರಲು ಹೆಚ್ಚು ಪ್ರಯಾಸ ಬೇಡವಾಗಿತ್ತು.
ಆದ್ರೆ ಕ್ರಿಕೆಟ್ ಪ್ಲೇ ಗ್ರೌಂಡ್ ಅಲ್ಲಲ್ಲಿ ಗೂಟ ಹೂಳಿದ್ದ
ಹಳ್ಳ ಹಾಗೇ ಇತ್ತು. ತುಂಬಲೂ ಇಲ್ಲಾ
ಸರಿ ಮಾಡಲೂ ಇಲ್ಲಾ.
ಹೀಗೇ ಊರ ಹಾಗು ಹೋಗುಗಳ ನಡುವೆ
ಹೊಸದಾಗಿ
ದೇವಸ್ಥಾನಕ್ಕೊಂದು ಬಸವಪ್ಪ ಪ್ರಥ ಶುರುವಾಯ್ತು. ಮೊದ ಮೊದಲು ಕೋಲೆ ಬಸವಣ್ಣ ನ
ಜೊತೆ ಓಲಗ ಊದ್ಕೊಂಡು
ಮನೆ ಮನೆಗೆ ಬಂದು
ಭಿಕ್ಷಾಟನೆ ಮಾಡಿ ಜೀವನವ ಓಡಿಸ್ತಿದ್ದರು.
ಇತ್ತೀಚೆಗೆ ಬಸವಣ್ಣನೊಬ್ಬನ್ನು
ಪ್ರತಿ ದೇವಸ್ಥಾನ್ಕಕೆಂದು ನಿಗದಿ ಮಾಡಿ
ಪೂಜೆ ಪುನಸ್ಕಾರ ವೆಲ್ಲಾ ಶುರುವಾಗಿದೆ.
ಬಸವಪ್ಪಂಗೆ ಒಳ್ಳೆ ಟ್ರೈನಿಂಗ್ ಕೊಟ್ಟು
ಪೂಜೆ ಮಾಡುವಾಗ ಭವ್ಯವಾಗಿ
ತಲೆ ಆಡಿಸೋದು ನೋಡಿ
ದೇವಸ್ಥಾನಕ್ಕೆ ಬರುವವರ ಸಂಖ್ಯೆಯು ಹೆಚ್ಚಾಯ್ತು.
ಅದಲ್ಲದೆ ಭೂಮಿ ಪೂಜೆಗೆ, ಬಸವಪ್ಪ ಬೇಕು
ಗ್ರಹಪ್ರವೇಶ ಪೂಜೆ ಬಸವಪ್ಪ ಬೇಕು.
ಟ್ಯೂಬ್ ವೆಲ್ ಪೂಜೆ ಬಸವಪ್ಪ ಬೇಕು.
ಮನೇ ನಲ್ಲಿ ಯಾವ್ದಾದರೊಂದು
ಫಂಕ್ಷನ್ ಅಂದ್ರೆ
ಬಸವಪ್ಪ ಬೇಕೇ ಬೇಕು.
ಆದ್ರೆ ಈ ಬಸವಪ್ಪಂದು ವಿಚಿತ್ರ ಹ್ಯಾಬಿಟ್ಟು,
ಯಾರಾದ್ರೂ ಕುಡುಕರನ್ನು ಕಂಡ್ರೆ
ಅಟ್ಟಿಸಿಕೊಂಡು ಹೋಗಿ ಗುದ್ದುಬಿಡೋದು,
ಮದ್ಯಪಾನ ಅಂಗಡಿ ಕಂಡ್ರೇನೇ
ಬಸವಪ್ಪನಿಗೆ ಕೋಪ, ಅಂಗಡಿಗೇ
ನುಗ್ಗಿ ದ್ವಂಸ ಮಾಡಿ ಶಾಂತವಾಗೋದು.
ಇದೇನೋ ವಿಶೇಷವಾದ ಟ್ರೈನಿಂಗ್ ಇರಬೇಕು. ಆದ್ದರಿಂದ ತಪ್ಪು ಮಾಡಿದೋರನ್ನ ದಂಡಿಸ್ತಾನೆ ಅನ್ನೋ ರೀತಿ ಕಥೆ ಹುಟ್ಟಿಸಿಬಿಟ್ರು.
ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯ
ಬಸವಪ್ಪನಿಗೆ ನೀಡುವ ದಾನದಿಂದ ಕೈ ಗೊಳ್ಳಲಾಗಿದೆ.
ಅಂದ್ರೆ ಎಷ್ಟು ಫೇಮಸ್ ನೋಡಿ ಬಸವಪ್ಪ.
ಅದೊಂದು ಭಾನುವಾರ
ಎಲ್ಲರೂ ಸೇರುವ ಮಾರುಕಟ್ಟೆ ಯಲ್ಲಿ
ಶ್ರೀ ವರದರಾಜ ಸ್ವಾಮಿಗಳ ರಥೋತ್ಸವಕ್ಕೆ
ತಯ್ಯಾರಿ ನಡೆಯುತ್ತಿತ್ತು.
ಸ್ವಲ್ಪ ಜಾಸ್ತಿ ಜನರೇ ಸೇರಿದ್ದರು.
ಆ ರಸ್ತೆಯಲ್ಲಿ ಬಂದ ಬಸವಪ್ಪ
ಅದು ಹೆಂಗೆ ಕಂಡು ಹಿಡಿಯಿತೋ
ನಾಲ್ಕೈದು ಜನ ಕುಡುಕರು
ಅಲ್ಲಿಯ ಬೋಂಡಾ ಬಜ್ಜಿಯಂಗಡಿ
ಮುಂದೆ ತಕರಾರು ಮಾಡುವದ ಕಂಡು
ರಭಸದಿಂದ ಅವರತ್ತ ನುಗ್ಗಿ ಬಂತು
ಅದರಲ್ಲೊಬ್ಬ ಅದೇ ಊರಿನ ರಮೇಶ
ಸಿಕ್ ಹಾಕಿಕೊಂಡು ಬಿಟ್ರು.
ಆ ನೂಕು ನುಗ್ಗುಲಲ್ಲಿ ರಮೇಶ
ಗಂಭೀರವಾಗಿ ಪೆಟ್ಟಾದುದರಿಂದ
ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ
ಕರೆದುಕೊಂಡು ಹೋದರು.
ವಿಶೇಷ ಪ್ರಯತ್ನಗಳು
ರಮೇಶನನ್ನು ಕಾಪಾಡಲು ಸಾಧ್ಯ ವಾಗಲಿಲ್ಲ.
ಊರೇ ಶೋಕದಲ್ಲಿತ್ತು.
ರಮೇಶನು EB ಯಲ್ಲಿ
ಶಂಕರ್ ಜೊತೆ ಲೈನ್ ಮ್ಯಾನ್ ಕೆಲಸ ಮಾಡುತಿದ್ದ.
ಅವರ ಮಗ ನಾಣಿ ನಮ್ಮ ಅಂಬಿ ಗ್ಯಾಂಗ್.
ಅವನಿಗಿದ್ದ ದುರಭ್ಯಾಸ ಕುಡಿಯೋದು
ಅದು ಜೀವ, ಜೀವನ,
ಹಾಳು ಮಾಡಲು ಸಾಕಲ್ಲವೇ
ಪೋಸ್ಟ್ ಮೊರ್ಟೆಮ್ ಎಲ್ಲಾ ಮುಗಿಸಿ
ನಾಣಿ ಮನೆಗೆ ಶವವಾಗಿ
ಹಿಂತಿರುಗಿದ್ದ ರಮೇಶ.
ನಾಣಿ ಮತ್ತೆ ಅವರಮ್ಮನ
ಆಕ್ರಂದ ನೋಡಲು ಅಸಾಧ್ಯವಾಗಿತ್ತು.
ನಾಣಿಗೆ ಏನೂಂತ ಸಾಂತ್ವನ ಹೇಳೋದು.
ಅಂಬಿ ಗ್ಯಾಂಗ್ ಗೆ ಇದೆಲ್ಲವೂ ಹೊಸದು.
ಎಲ್ಲಾ ಮರಣೋತ್ತರ ಕಾರ್ಯವನ್ನ
ದುಃಖವ ತೋರಿಸದೆ
EB ಶಂಕರ್ ನೆರವೇರಿಸುತಿದ್ದ.
ಶವ ದಹನ ಮುಗಿಸಿ
ಮೂರನೇ ದಿನ ರಮೇಶನ ಅಸ್ಥಿ
ಹಾಗೂ ಮೂಳೆಗಳನ್ನು
ಒಂದು ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿ,
ನಾಣಿಯ ಜೊತೆ ಸೇರಿ ಅಂಬಿ ಹಾಗೂ ಶಂಕರ್ ಶ್ರೀರಂಗಪಟ್ಟಣಕ್ಕೆ ಹೋಗಿ
ಕಾವೇರಿ ತೀರದಲ್ಲಿ ಅಸ್ಥಿ ವಿಸರ್ಜನೆ ಮಾಡಿ
ಎಡೆ ಹಾಕಿ, ದಾಸಯ್ಯನ್ಗೆ ಊಟ ಮಾಡಿಸಿ,
ಮನೆಗೆ ಹಿಂತಿರುಗಿದರು.
ಒಬ್ಬೊಬ್ಬರ ಮನೆಯಿಂದ
ನಾಣಿ ಮನೆಗೆ ನಿರಂತರವಾಗಿ
ಹನ್ನೊಂದು ದಿನಗಳು ಬೆಳಗ್ಗೆ, ಮಧ್ಯಾಹ್ನ ರಾತ್ರಿ
ಒಂದು ಹೊತ್ತು ಶಾಖಾಹಾರಿ ಊಟದ ವ್ಯವಸ್ಥೆ
ಊರಲ್ಲಿದ್ದ ನೆಂಟರು ಬಂಧುಗಳು
ಸ್ವೇಚ್ಚೆಯಾಗಿ ಮುಂದೆ ಬಂದು ನೇರವೇರಿಸಿಕೊಟ್ಟರು.
ಅಯ್ನೋರು ಬಂದು ದೈವ ಸಮಾರಾಧನೆಯ
ನಿರ್ವಿಗ್ನವಾಗಿ ನಡೆಸಿಕೊಟ್ರು.
ಹನ್ನೊಂದನೇ ದಿನದ ನಂತರ ಒಂದು ದಿನ
ಅವರವರ ಶಕ್ತಿಗೆ ಅನುಗುಣವಾಗಿ ಊರ ಜನರಿಗೆ
ಬಾಡೂಟ ಹಾಕಬೇಕು ಅದಕ್ಕಾಗಿ ಸಾಲ ಗೀಲಾ
ಮಾಡಿಯಾದ್ರೂ ಸಂತೋಷ ಪಡಿಸಬೇಕು.
ರಮೇಶ ನ ಹಿತೈಷಿಗಳು, ಬಂಧು ಮಿತ್ರರು,
ಸಂಬಂಧಿಕರು, ಎಲ್ಲರೂ ಬಂದಿದ್ದರು.
ಅಂಬಿಗೆ ಮೊದಲ ಬಾರಿಗೆ ಬಾಡೂಟದ
ಬಗ್ಗೆ ತಿರಸ್ಕಾರ ಭಾವ ಮೂಡಿತು.
ಮುದ್ದೆ ಜೊತೆ ಬೋಟಿ ಗೊಜ್ಜು
ಗಂಟಲ್ಲೊಳಗೆ ಇಳಿಯಲಿಲ್ಲ.
ನಾಣಿನ ನೋಡಿ ದುಃಖ ಉಮ್ಮಳಸಿ ಕೊಂಡು ಬಂತು
ಪೆದ್ದು, ವೆಂಕಿಗೂ ಇದೇ ಕಸಿವಿಸಿ..
ಹುಟ್ಟಿದಾಗ ಸಂತೋಷಕ್ಕಾಗಿ ಬಾಡೂಟ,
ವರ್ಷ ತೊಡಕುಗೆ ಬಾಡೂಟ,
ಮದುವೆ ಬೀಗರ ಊಟ ಮೂಲತಹ್ ಬಾಡೂಟ,
ಸತ್ತವರಿಗಾಗಿ ಬಾಡೂಟ,
ಈ ಪ್ರಶ್ನೆ ಅಂಬಿ ನಲ್ಲಾ ನಮ್ಮನ್ನೂ ಕಾಡುತಿತ್ತು...
ನಿಮಗೇನಾದ್ರೂ ಗೊತ್ತಿದ್ರೆ ಹೇಳಿ..
ಮಂಡ್ಯ ಮೈಸೂರ್ ಜಿಲ್ಲೆ ಗಳಲ್ಲಿ ಬಾಡೂಟ ವಿಶೇಷ ಎಲ್ಲಿಂದ ಮತ್ತೆ ಹೇಗೇ ಪ್ರಾರಂಭವಯ್ತೋ ಏನೋ? ಬನ್ನೂರ್ ಕುರಿಗಳು ಬ್ರಾಂಡ್ ಇದಕ್ಕೇಂತ ಮೀಸಲು
ಪ್ರತ್ಯುತ್ತರಅಳಿಸಿA beautifully grounded write-up—it felt like anyone could relate to at least one of the characters, each carrying their own weight and importance. You’ve beautifully captured all the instances where ಬಾಡೂಟ plays a role, and the writing carried as many flavours as the ಬಾಡೂಟ itself! And as always, your titles are spot on—couldn’t imagine of a better one! 🙌😄
ಪ್ರತ್ಯುತ್ತರಅಳಿಸಿ