ಡಾಕ್ಟರ್ ಮೇಧಾವಿ ಜೊತೆ ಒಂದು ದಿನ
ನಾನು ಮತ್ತೆ ನಮ್ಮಣ್ಣ
ಡಾಕ್ಟರ್ ಮೇಧಾವಿ
ಸೇವಾ ನಿವೃತ್ತರಾದ ಮೇಲೆ ಒಂದು ದಿನ
ಬೆಳಗ್ಗೆ ಎಂಟು ಘಂಟೆಗೆ ಬೆಂಗಳೂರಿನಿಂದ
ಅಣ್ಣನ ಕೆಂಪು ಕಲರ್ Swift ಕಾರಿನಲ್ಲಿ
ಕನಕಪುರ - ಚೆನ್ನಪಟ್ಟಣ ರಾಜ್ಯ ಹೆದ್ದಾರಿಯ
ಹಿಡಿದು ಹೋಗ್ತಾ ಇದ್ವಿ.
ಡಾಕ್ಟರ್ ಅಣ್ಣನ ಮಿತ್ರರು ದೇವರಾಜ್
ಗಾಡಿ ಓಡಿಸುತ್ತಿದ್ದರು.
ನನಗೆ ಅರವತ್ತಯಿದು ಅಂದ್ರೆ
ಡಾಕ್ಟರ್ ಅಣ್ಣಂಗೆ ಎಪ್ಪತ್ತು ವಯಸ್ಸು.
ಡಾಕ್ಟರ್ ಗಳಿಗೆಲ್ಲಿ ರಿಟೈರ್ಮೆಂಟು
ಡಾಕ್ಟರ್ ಮೇಧಾವಿ MBBS.,MS..OBG ಡಾಕ್ಟರ್
ಮಾಸ್ಟರ್ಸ್ ಇನ್ ಸರ್ಜರಿ, ಒಬಿಜಿ ಅಂದ್ರೆ
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ, ಆದ್ರೆ ಅವರನ್ನ
ಎಲ್ರೂ ಕರೆಯೋದು ಹೆರಿಗೆ ಡಾಕ್ಟರ್ ಅಂತ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ
ಫೇಮಸ್ಸು ಹೆರಿಗೆ ಸ್ಪೆಷಲಿಸ್ಟ್
ಲೇಡಿ ಡಾಕ್ಟರ್ ಇಲ್ಲದಿದ್ರೂವೆ
ಮೇಧಾವಿ ಡಾಕ್ಟರ್ ಸಾಕು
ಹೆರಿಗೆ ಸುಗಮವಾಗಿ ಮಾಡ್ತಾರೇಂತ ಹೆಸರು.
ಅದು ಅವನ ಕೈ ಗುಣ,
ಹಾಗೇನೇ ಲಾಪ್ರೊಸ್ಕಾಫಿಕ್ ಗರ್ಭ ನಿಯಂತ್ರಣ ಸರ್ಜೆರಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು
ಯಶಸ್ವೀ ಆಪರೇಷನ್ ಮಾಡಿ
ರೆಕಾರ್ಡ್ ಸ್ಥಾಪಿಸಿದ್ದಾರೆ.
ಆಶ್ಚರ್ಯ ಆದ್ರೆ ನಿಜ,
ನಾನು ಇದೇ ಫಸ್ಟ್ ಟೈಮ್
ಡಾಕ್ಟರ್ ಅಣ್ಣ ರವರ ಸನಿಹವಿದ್ದು
ಅವರ ಕೆಲಸ, ಅವರ ಮೇಲೆ
ಅಪಾರ ಪ್ರೇಮ ಗೌರವ ತೋರಿಸುವವರ
ನೋಡಿ ಸ್ವಲ್ಪ ಆಶ್ಚರ್ಯವೂ ಆಯ್ತು
ಅಣ್ಣ ಡಾಕ್ಟರೂಂತ ಗೊತ್ತು ಆದ್ರೆ ಇಷ್ಟು
ಪಾಪ್ಯುಲರ್ ಅಂತ ಗೊತ್ತಿರಲಿಲ್ಲ.
ಹೆರಿಗೆ ಮಾಡಿಸ್ಕೊಳ್ಳೋ
ಹೆಣ್ಣು ಮಕ್ಕಳಿಗಿಂತಲೂ ಮನೆಯವರು
ಊರವರು, ನರ್ಸಮ್ಮ, ಸ್ಟಾಫ್ ಎಲ್ಲರೂ
ಒಳ್ಳೇ ಡಾಕ್ಟರೂಂತ ಸರ್ಟಿಫಿಕೇಟ್ ಕೊಡೋದು
ಸ್ವಲ್ಪ ಅತಿ ಅನಿಸಿದರೂ ನಿಜವಾಗಿತ್ತು. ಜೊತೆಗೆ ಎಲ್ಲವೂ ಸರ್ಕಾರಿ ಆಸ್ಪತ್ರೆ ಗಳಲ್ಲಿ ಫ್ರೀ.ಆದ್ರೂವೆ ಎಲ್ಲಾ ಫ್ರೀ ಸಪ್ಲೈಯ್
ಔಷಧಗಳು ಫ್ರೀ ಸ್ಯಾಂಪಲ್ ಮಾತ್ರೆಗಳು
ಬಡವರಿಗೆ ಹಂಚಿ ಸಂತೋಷ ಪಡುತ್ತಿದ್ದರು.
ನಮ್ಮಣ್ಣ ಡಾಕ್ಟರ್ ಮೇಧಾವಿ.
ಯಾವಾಗಲೂ ಸೇವೆಗೆ ತತ್ಪರರಾಗಿ ಇರುತಿದ್ದರು. ಬರಿಗಾಲ ಬೇರ್ ಫುಟ್ ಡಾಕ್ಟರು.
ಇಪ್ಪತ್ತೆಂಟು ಗ್ರಾಮಗಳಲ್ಲೂ ಸುಪ್ರಸಿದ್ಧ
ಹೆರಿಗೆ ಡಾಕ್ಟರ್ ಅಂತ ಚಿರ ಪರಿಚಿತರಾಗಿದ್ದರು.
ನಮ್ಮಣ್ಣ ಡಾಕ್ಟರ್ ಮೇಧಾವಿ.
ಊರಲ್ಲಿ ಎಲ್ರೂ ನಮಸ್ಕಾರ ಡಾಕ್ಟ್ರೇ
ಅಂದ್ರೆ ಹೆಮ್ಮೆ ಅನಿಸುತಿತ್ತು ನನಗೆ.
ಇದಲ್ಲವೇ ನಿಜವಾದ ಸೇವೆ.
ಪ್ರಯಾಣ ಮುಂದುವರಿಯುತಾ ಇತ್ತು
ದಿಢೀರ್ಂತ
ಪಕ್ಕದಲ್ಲಿ ದೇವಸ್ಥಾನ ಕಾಣಿಸಿತು.
ಅದರರ್ಥ, ನೀವು ಕನಕಪುರದಿಂದ
ಸುಮಾರು ಇಪ್ಪತ್ತೆರಡು ಕಿ. ಮೀ.
ಪಯಣಿಸಿದ್ದೀರಾ ಎಂದು.
ಹಾಗೆಯೇ,
ಮುಖ್ಯ ರಸ್ತೆಯಿಂದ
ಬಲಕ್ಕೆ ತಿರುಗಿದರೆ
ಕಾಣಲು ಸಿಗೋದು
ದೇವಸ್ಥಾನದ ಹೆಬ್ಬಾಗಿಲು
ಅದನ್ನ ಪ್ರವೇಶಿಸಿದರೆ
ದೇವಿ ಕಬ್ಬಾಳಮ್ಮನ ದೇವಸ್ಥಾನ,
ಪಕ್ಕದಲ್ಲೇ ಕಬ್ಬಾಳಮ್ಮನ ಗುಡ್ಡ .
ಬೆಂಗಳೂರು ದಕ್ಷಿಣ ಜಿಲ್ಲೆಯ
ಸಾತನೂರ್ ಹೋಬಳಿಯ
ಪ್ರಸಿದ್ಧ ಗ್ರಾಮವೇ
ಕಬ್ಬಾಳ ಗ್ರಾಮ.
ಅಂದು ಗ್ರಾಮದ ಆಸ್ಪತ್ರೆ ಯಲ್ಲಿ
ಕುಟುಂಬ ನಿಯಂತ್ರಣ ಯೋಜನೆಯ ಕ್ಯಾಂಪ್,
ಸರ್ಕಾರಿ ಆಸ್ಪತ್ರೆಯವರು ಆಯೋಜಿಸಿದ್ದರು.
ಅದರಲ್ಲಿ ಭಾಗವಹಿಸಿ ಆಪರೇಷನ್
ಮಾಡಲು ಡಾಕ್ಟರ್ ಮೇಧಾವಿಯವರನ್ನು
ಆಮಂತ್ರಿಸಿದ್ದರು.. ಆದ್ರೆ ನಮ್ಮಣ್ಣ
ಬಲವಂತವಾಗಿ ಮೊದಲು ದೇವಿ ಕಬ್ಬಾಳಮ್ಮನ
ದರ್ಶನ ಮಾಡಿ ಕೊಂಡು ಹೋಗೋಣವೆಂದು
ನನ್ನನ್ನೂ ಕರೆದುಕೊಂಡು ಬಂದಿದ್ದರು.
ದೇವಿ ಕಬ್ಬಾಳಮ್ಮನ ಸ್ಥಳ ಪುರಾಣದ ಬಗ್ಗೆ
ಪುಟ್ಟ ಕಥೆಯೊಂದ ನಮ್ಮಣ್ಣ ವಿವರಿಸುತ್ತಾ ಹೋದರು.
ಕಬ್ಬಾಳು ಗ್ರಾಮದಲ್ಲಿ, ಕಬ್ಬಾಳಿ ಎನ್ನುವವಳು
ರಂಗಪ್ಪಣ್ಣನ್ನ ಮದುವೆಯಾಗಿ ಸಂತೋಷವಾಗಿದ್ದಳು.
ಆದ್ರೆ ಆಕೆಗೆ ಒಂದೇ ಒಂದು ಕೊರೆ
ಮಕ್ಕಳಾಗಲಿಲ್ಲವೆಂದು.
ಪಕ್ಕದ ಗ್ರಾಮದಲ್ಲಿದ್ದ
ಅಕ್ಕ ಬಿಸಿಲಮ್ಮಮತ್ತೆ ಅವಳ ಮಕ್ಕಳನ್ನು
ಆಗಾಗ ಹೋಗಿ ನೋಡಿ ಪ್ರೀತಿ ಮಾಡಿ
ಉಡುಗೊರೆಯೆಲ್ಲಾ ಕೊಟ್ಟು ಬರುತ್ತಿದ್ದಳು.
ಒಮ್ಮೆ ಕಬ್ಬಾಳಿ ಉಡುಗೊರೆಯೊಂದಿಗೆ
ಅಕ್ಕ ಬಿಸಿಲಮ್ಮನ ಮನೆಗೆ
ಬರುವದನ್ನ ದೂರದಿಂದ ನೋಡಿ
ಪಕ್ಕದ್ಮನೆಯವಳ ಚಾಡಿ ಮಾತ ಕೇಳಿ
ಮಕ್ಕಳನ್ನು ಕೋಳಿಗೂಡೆಯ ಕೆಳಗೆ
ಮಗುಚಿ ಬಚ್ಚಿಟ್ಟಳು.
ಇದನ್ನರಿತ ಕಬ್ಬಾಳಿ
ಗೂಡೆಯೊಳಗೇನಿದೆ ಎಂದು ಕೇಳಲು
ಏನಿಲ್ಲಾ ಬರೀ ಕಲ್ಲು ಎಂದು ಸುಳ್ಳು ಹೇಳಿದಳು.
ಅದರೊಳಗಿರುವುದು ಕಲ್ಲೇ ಆಗಲಿ
ಎಂದು ಶಾಪ ಕೊಟ್ಟ ತಕ್ಷಣ
ಬಿಸಿಲಮ್ಮನ ಮಕ್ಕಳು ಕಲ್ಲಾದರು.
ಬಿಸಿಲಮ್ಮ ಗೋಳಾಡಿದಳು
ಕಬ್ಬಾಳಮ್ಮನ ಮನಸ್ಸು ಕಲ್ಲಾಗಿತ್ತು.
ನಂತರ ಗುಡ್ಡದ ಮೇಲೆ ಹೋಗಿ
ನೆಲಸಿದಳು. ಬಿಸಿಲಮ್ಮ ಹೋಗಿ ಬೇಡಿ
ಕೊಂಡ ಮೇಲೆ ಮಕ್ಕಳು ವಾಪಸ್ಸು ಬಂದ್ರೂಂತ
ಕಥೆ. ಮಕ್ಕಳು ಬೇಕೂನ್ನವವರು ಕಬ್ಬಾಳಮ್ಮನ ಬೇಡಿಕೊಳ್ಳಲು ಬರುತ್ತಾರೆ.
ಗುಡ್ಡದ ಮೇಲೆ ಇರುವ ಒರಿಜಿನಲ್
ಕಬ್ಬಾಳಮ್ಮನ ದೇವಸ್ಥಾನ ನೋಡಿರೋರು
ವಿರಳ...
ಯಾರಾದ್ರೂ ಹರಕೆ ಹೊತ್ಕೊಂಡವರು
ಅಥವಾ
ಬೆಟ್ ಕಟ್ಟಿದ್ರೆ ಬೆಟ್ಟ ಹತ್ತೋರು
ಅಥವಾ
ಅಡ್ವೆಂಚರ್ ಕ್ಲಬ್ ನ ಉತ್ಸಾಹಿಗಳು
ಅಥವಾ
ಆಡು, ಮೇಕೆ, ಕುರಿಕಾಯೋರು
ಇವರುಗಳಷ್ಟೇ ಹತ್ತಿರಬಹುದು
ಯಾಕೇಂದ್ರೆ ಗುಡ್ಡ ಹತ್ತೋದು ಕಷ್ಟ,
ರಸ್ತೆಯಿಲ್ಲ, ಮೆಟ್ಟಿಲುಗಳೂ ಇಲ್ಲಾ
ಆ ಗುಡ್ಡದ ಮೇಲೆ ಕಬ್ಬಾಳಮ್ಮನ
ದೇವಸ್ಥಾನ ಹ್ಯಾಗೆ ಬಂತು
ಆ ಕಬ್ಬಾಳಮ್ಮನಿಗೇ ಗೊತ್ತು.
ಇದ್ರೂವೆ
ಗುಡ್ಡದ ಮೇಲಿನ ಪುಟ್ಟದಾದ
ಕಬ್ಬಾಳಮ್ಮನ ದೇವಸ್ಥಾನ.
ಕಟ್ಟಿರಬೇಕಾದದ್ದಕ್ಕೆ
ಪುರಾವೆ ಹುಡುಕುತ್ತಿದ್ದಾರೆ.
ಯಾಕೇಂದ್ರೆ ದೇವಸ್ಥಾನ ಇನ್ನೂ ಇದೆ.
ಪ್ರಯತ್ನ ಮುಂದುವರಿಯುತಿದೆ.
ದೇವಿ ಕಬ್ಬಾಳಮ್ಮನ ಬೇಡಿಕೊಂಡ
ಖೈದಿಯೊಬ್ಬ ತಳ್ಳಿಯು ಜೀವಂತವಾಗಿ
ಉಳಿದದ್ದರಿಂದ ಆತ ದೇವಸ್ಥಾನವ
ಗುಡ್ಡದ ತಪ್ಪಲಲ್ಲಿ ಕಟ್ಟಿ ಪೂಜಿಸಲು
ಭಕ್ತರು ಇದೊಂದು
ಪವಾಡವೆಂದರು.
ಗುಡ್ಡವ ಹತ್ತಲು ದರ್ಶಿಸಲು
ದುಷ್ಕರವಾದದ್ದರಿಂದ
ಊರ ಹಿರಿಯರ ಕನಸ್ಸಲ್ಲಿ
ದೇವಸ್ಥಾನವ ಗುಡ್ಡದ ಮಡಿಲಲ್ಲಿ
ಕಟ್ಟಬೇಕೆಂಬ ದೇವಿಯ ಆಜ್ಞೆಯ
ಪಾಲಿಸುತ್ತಾ, ಈಗ ದೇವಿ ನೆಲೆಸಿರುವ
ಶ್ರೀ ಕ್ಷೇತ್ರದ ದೇವಿ ಕಬ್ಬಾಳಮ್ಮನ
ದೇವಸ್ಥಾನವ ಕಟ್ಟಿದರೆಂದು ಪ್ರತೀತಿ.
ದೇವಿಗೆ ಮೀಸೆ ಇರೋ ದೇವತೆ ಪ್ರಾಯಶಃ
ದೇವಿ ಕಬ್ಬಾಳಮ್ಮ ಒಂದೇ ಇರಬೇಕೇನೋ
ಬೇಡಿಕೊಳ್ಳೋರು, ದರ್ಶಿಸುವವರು
ಅಕ್ಕಪಕ್ಕದ ಗ್ರಾಮಗಳಲ್ಲದೆ
ದೂರದಿಂದಲೂ ಹೆಚ್ಚುಸಂಖ್ಯೆಯಲ್ಲಿ
ದರ್ಶನಾರ್ಥಿಗಳು, ಭಕ್ತರು ಬರತೊಡಗಿದ್ದರು.
ನಮಣ್ಣ ದೇವಿ ಕಬ್ಬಾಳಮ್ಮನ ಅನನ್ಯ ಭಕ್ತ
ಆಕೆಯ ಆಶೀರ್ವಾದದಿಂದಲೇ
ಎಂತಹ ಒಂದು
ಕಠಿಣ ಹೆರಿಗೆಯಾದರೂ ಒಮ್ಮೆ
ಡಾಕ್ಟರ್ ಮೇಧಾವಿ ಬಳಿ ಬಂದು
ಕಾಪಾಡಿ ಅಂದ್ರೆ ಸಾಕು
ಬೆಂಗಳೂರಿನ
ವಾಣಿವಿಲಾಸ ಹೆರಿಗೆ ಆಸ್ಪತ್ರೆಗೆ ಕಳಿಸದೆ
ಹಾರೋಹಳ್ಳಿಯ ಆಸ್ಪತ್ರೆ ಯಲ್ಲೇ
ಸುಗಮವಾಗಿ ಹೆರಿಗೆ ಮಾಡಿ ಕೈಯಲ್ಲಿ
ಅಳುವ ಮಗುನ್ನ ಕೊಟ್ಟು
ಎಲ್ಲರನ್ನೂ ಸಂತೋಷದ
ಕಡಲಲ್ಲಿ ತೇಲಬಿಟ್ಟು ಮಾಯವಾಗುತ್ತಿದ್ದ
ಮಾಯಾವಿ ಡಾಕ್ಟರ್ ಮೇಧಾವಿ.
ದೇವಿ ದರ್ಶನಕ್ಕೆ ಹಾಗೂ ಹರಕೆಯ
ಪೂರೈಸಲು ಕನಕಪುರದ ಹತ್ತಿರದಲ್ಲಿದ್ದ
ಬೇಕುಪ್ಪೆಯ ರಾಜಣ್ಣ, ಪುಟ್ಟಮ್ಮ
ಪರಿವಾರದವರೂ ಸಹ ಬಂದಿದ್ದರು.
ನಮ್ಮ ಡಾಕ್ಟರ್ ನ ಕಂಡೊಡನೆ
ನಮಸ್ಕಾರ ಮಾಡಿ ಮಕ್ಕಳ
ಪರಿಚಯ ಮಾಡಿಸಿದರು.
ಅವರಿಗಿಬ್ಬರು ಗಂಡು ಮಕ್ಕಳು.
ಡಾಕ್ಟ್ರೇ
ಇಪ್ಪತ್ತೈದು ವರುಷಗಳ ಹಿಂದೆ
ನೀವು ಪ್ರಸೂತಿ ಮಾಡಿ ಹುಟ್ಟಿದ ಮಕ್ಕಳು
ಕೆಂಪಣ್ಣ ಮತ್ತೆ ಕರಿಯಣ್ಣ.
ಹೆಸರಿಗೂ ಬಣ್ಣಕ್ಕೂ ಅದೊಂತರಹ ನಂಟು.
ರಾಜಣ್ಣ ಮೊದಲೇ ನಿರ್ಣಯಿಸಿದ್ದ.
ಅದೇ ಕಪ್ಪಾಗಿದ್ದವನು ಕೆಂಪಣ್ಣ.
ತುಸು ಕೆಂಪಾಗಿದ್ದವನು ಕರಿಯಣ್ಣಾಂತ
ಹೆಸರಿಟ್ಟು ಹೆಮ್ಮೆ ಪಟ್ಟುಕೊಂಡ.
ಅದ್ಯಾಕೋ ಕಪ್ಪಾಗಿರೋವ್ನ ಕೆಂಪಣ್ಣಂತ
ಹೆಸರಿಟ್ಟಿದ್ಯಾ ಅದಕ್ಕೆ ರಾಜಣ್ಣ ಹೇಳ್ದ
ನಮ್ ತಾತನ ಹೆಸರು ಕೆಂಪಣ್ಣಾಂತ
ಮೊದಲು ಹುಟ್ಟುವ ಮಗನಿಗೆ
ಕೆಂಪಣ್ಣಾಂತ ಹೆಸರಿಡಲು ತೀರ್ಮಾನಿಸಿದ್ದೆ.
ಎರಡನೇ ಮಗ ಕರಿಯಣ್ಣ
ಯಾಕೇಂದ್ರೆ ಒಂದೇ ಮನೆಯಲ್ಲಿ
ಎರಡು ಕೆಂಪಣ್ಣ ಇರಲು ಸಾಧ್ಯವಿಲ್ಲಾಂತ
ರಾಜಣ್ಣ ಹೇಳಿದ್ದು ಅರ್ಥವಾಯ್ತು.
ಅವರ ಹಿಂದಿದ್ದ ರಾಜಣ್ಣನ ಸಂಸಾರ
ಪುಟ್ಟಮ್ಮ ಡಾಕ್ಟರ್ ಮೇಧಾವಿಯವರ ನೋಡಿ
ನಮಸ್ಕಾರ ಮಾಡಿ ರಾಜಣ್ಣನ
ಹಿಂದೆ ಹೋಗಿ ನಿಂತು ಕೊಂಡರು.
ಹಿರಿಯ ಮಗ ಕೆಂಪಣ್ಣನ ಮದುವೆ
ಮುಗಿದು ಸೊಸೆ ಶಾಂತನ್ನ ಕರೆದುಕೊಂಡು
ಹರಕೆ ಪೂರೈಸಿದ್ದಕ್ಕೆ ಕಬ್ಬಾಳಮ್ಮನಿಗೆ
ಪೂಜೆ ಮಾಡಲು ಬಂದಿದ್ದರು.
ಭೈರಮಂಗಲದ ಶಿವಣ್ಣನ ಮಗಳು ಶಾಂತ
ಈಗ ಬೇಕುಪ್ಪೆ ರಾಜಣ್ಣನ ಸೊಸೆ.
ಬೀಗರ ಊಟಕ್ಕೆ ಶಿವಣ್ಣನವರೂ ಬಂದಿದ್ದರು.
ಶಿವಣ್ಣನೂ ಡಾಕ್ಟರ್ ಮೇಧಾವಿಯರನ್ನು ಗುರುತಿಸಿ
ಇಪ್ಪತ್ತು ವರುಷಗಳ ಹಿಂದೆ ಜ್ಞಾಪಿಸಿದರು.
ಭೈರಮಂಗಲದಲ್ಲಿದ್ದಾಗ ನೀವು ಹೆರಿಗೆ ನೋಡಿ
ಹುಟ್ಟಿದವಳೇ ಈ ಶಾಂತ
ಈಗ ಡಾಕ್ಟರ್ ಮೇಧಾವಿ ಗೆ ಡಬಲ್ ಕುಶಿ
ಯಾರಾದ್ರೂ 20 ವರುಷದೊಳಗೆ ಆ ಊರಲ್ಲಿ
ತಿರುಗಾಡಿದರೆ ಅಥವಾ ಅಡ್ಡಾಡಿದ್ರೆ ಖಂಡಿತವಾಗಲೂ ಅವರೆಲ್ಲಾ ಡಾಕ್ಟರ್ ಮೇಧಾವಿಯವರು ಪ್ರಸೂತಿ ಮಾಡಿ ಈ ಲೋಕಕ್ಕೆ ಪರಿಚಯಿಸಿದವರು.
ಅಷ್ಟೊಂದು ಪ್ರಸಿದ್ಧಿ.
ದೇವಿಯ ದರ್ಶನದ ಬಳಿಕ
ನಮ್ಮೆಲ್ಲರನ್ನೂ ಪಕ್ಕದಲ್ಲೇ ಇದ್ದ
ತಡೆ ಹೊಡೆಯೋ ಸ್ಥಳಕ್ಕೆ
ಕರೆದುಕೊಂಡು ಹೋದರು.
ಬೇಕಿದ್ರೆ ಕೈಗೆ ತಾಯ್ತಾ ಕಟ್ಟಿಸ್ಕೊಂಬೋದು,
ಹಾಗೆಯೇ ಏನಾದ್ರೂ ತಪ್ಪು ಮಾಡಿದರೆ
ಬೆನ್ನಿಗೆ ಲಾಠಿಯಿಂದ ಎರಡು ಏಟು ಬಿದ್ದರೆ
ತಪ್ಪಿಗೆಲ್ಲಾ ತಕ್ಕ ಪ್ರಾಯಶ್ಚಿತವಾಯ್ತೆಂದು
ನಂಬಿಕೆ, ಸಾಲಾಗಿ ಮಲಗಿರೋರ ಮೇಲೆ
ಬಸವೇಶ್ವರನ ಕಾಲು ತುಳಿದು ಹೋದರೆ
ಸಂಪೂರ್ಣ ಪ್ರಾಯಶ್ಚಿತ್ತವಂತೆ. ರಾಜಣ್ಣ ಪಾರ್ಟಿ
ಬಡಿಸ್ಕೊಂಡು, ತುಳಿಸಿಕೊಂಡು ಹೊರಬಿದ್ದರು.
ನನಗಂತೂ ವಿಸ್ಮಯ ಕೇಳಿಯೇ ಬಿಟ್ಟೆ
ರಾಜಣ್ಣ ಯಾಕೆ? ದುಡ್ದುಕೊಟ್ಟು
ಬಡಿಸ್ಕೊಳ್ಳೋದು, ಬಹಳ ತಪ್ಪು ಮಾಡಿದ್ದ್ಯ
ಅದೆಲ್ಲಾ ಪರಿಹಾರ ಸಾರ್ ಅಂದ
ತಡೆ ಹೊಡೆಯೋರ ಸಂಪಾದನೆ
ಬಿರ್ಸಾಗೇ ನಡೀತಿತ್ತು.
ರಾಜಣ್ಣ ಬೀಗರ ಊಟಕ್ಕೆ
ಘನಿಷ್ಟ ಇಷ್ಟ ಮಿತ್ರರು, ಸಂಬಂಧಿಕರು,
ಬೀಗರು ಎಲ್ಲರನ್ನು ಆಹ್ವಾನಿಸಿದ್ದರು.
ಅವರ ಆಹ್ವಾನವನ್ನು ತಳ್ಳಿ ಹಾಕಲಾಗಲಿಲ್ಲ
ಪೂಜೆಯ ನಂತರ
ಹತ್ತಿರದಲ್ಲೇ ಇದ್ದ ಛತ್ರದಲ್ಲಿ
ಡಬಲ್ ಕುರಿಗಳ ಕಡಿದು
ಬಾಡೂಟಕ್ಕೆ ವ್ಯವಸ್ಥೆ ಯಾಗಿತ್ತು.
ಮಟನ್ ಬಿರಿಯಾನಿ, ಮಟನ್ ಸಾಂಬಾರು,
ಜೊತೆಗೆ ರಾಗಿ ಮುದ್ದೆ, ಕಾಂಬಿನೇಶನ್
ಜೋರಾಗಿತ್ತು.ನಾಟಿ ಕೋಳಿ ಬಲಿ ಕೊಟ್ಟು
ಮಾಡಿದ್ದ ಚಿಕನ್ ಫ್ರಾಯ್ ಸೂಪರ್ ಟೇಸ್ಟ್.
ಶ್ಯಾವಿಗೆ ಪಾಯಸ
ಅಲ್ಟಿಮೇಟಾಗಿತ್ತು.
ಅಲ್ಲಿಂದ ಕುಟುಂಬ ನಿಯಂತ್ರಣ ಯೋಜನೆಯ ಕ್ಯಾಂಪ್ ಗೆ ಹೊರಟೆವು.
ನಾನು ಆಸ್ಪತ್ರೆಯ ಡಾಕ್ಟರ್ ಕೋಣೆಯಲ್ಲಿ ಕುಳಿತಿದ್ದೆ.
ಡಾಕ್ಟರ್ ಮೇಧಾವಿ ಆಪರೇಷನ್ ಥಿಯೇಟರ್ ನಲ್ಲಿ ಸರ್ಜರಿಯನ್ನು ಯಶಸ್ವಿಯಾಗಿಮುಗಿಸಿ ಕೊಂಡು ಆಸ್ಪತ್ರೆಯ ಸಿಬ್ಬಂದಿಗಳಿಗೆ ನಿರ್ದೇಶಿಸಿ
ನಾವೆಲ್ಲಾ ಬೆಂಗಳೂರಿಗೆ ಹೊರಡಲು
ರಾತ್ರಿ ಎಂಟು ಘಂಟೆಯಾಯ್ತು.
ರಸ್ತೆಯಲ್ಲಿ ಕನಕಪುರದ ವಾಸು ಹೋಟೆಲ್
ಹತ್ತಿರ ಕಾರು ನಿಲ್ಲಿಸಿ ಹೊರ ನೋಟಕ್ಕೆ
ಸಾಧಾರಣವಾಗಿ ಕಂಡ ಹೋಟೆಲ್
ಒಳಗೆ ಹೋದ್ರೆ ಜನರಿಂದ ತುಂಬಿತ್ತು.
ಕೌಂಟರ್ ಹತ್ತಿರ ಡಾಕ್ಟರ್ ಅಣ್ಣ ನಿಂತೊಡನೆ
ಹೋಟೆಲ್ ಭಟ್ರು, ಬನ್ನಿ ಡಾಕ್ಟ್ರೇಂತ ಆಹ್ವಾನಿಸಿ
ಕಣ್ಣ ಮುಂದೆ ಬಿಸಿಬಿಸಿಯಾಗಿ ಹಾಕಿದ
ಗರಿ ಗರಿ ಮಸಾಲೆ ದೋಸೆ,
ಫ್ರೆಶ್ ಕಾಯಿ ಚಟ್ನಿ ತಂದು ಕೊಟ್ರು.
ತುಂಬಾ ಚೆನ್ನಾಗಿತ್ತು.
ನಿಂತುಕೊಂಡೇ ತಿಂದ್ವಿ.
ದುಡ್ಡು ಕೊಡಲು ಹೋದಾಗ ಸ್ವೀಕರಿಸಲಿಲ್ಲ
ಡಾಕ್ಟ್ರೇ, ನನ್ನ ಮಗಳ ಹೆರಿಗೆ
ನೀವೇ ನೋಡಿದ್ದು
ದೇವ್ರು ನೀವು ಅಂದರು.
ಬಲವಂತ ಮಾಡಿ ದುಡ್ಡು ಕೊಟ್ಟು ಹೊರ
ಬಂದ್ವಿ..
Swift ಕಾರಿಗೆ ಪೆಟ್ರೋಲ್ ಹಾಕಲು
ಹಾರೋಹಳ್ಳಿ ಪೆಟ್ರೋಲ್ ಪಂಪ್
ಹತ್ತಿರ ನಿಲ್ಲಿಸಿ ಪೆಟ್ರೋಲ್ ಹಾಕಿ ದುಡ್ಡು
ಕೊಡಲು ಓನರ್ ಓಡಿ ಬಂದು ಕಾರ್ ಹತ್ತಿರ ನಿಂತುಕೊಂಡು, ಡಾಕ್ಟ್ರೇ ನೀವೇನೂ ಕೊಡಬೇಡಿ
ಮಗಳು, ಮೊಮ್ಮಗಳ ಹೆರಿಗೆಯ ಕ್ಷೇಮವಾಗಿ
ನಡೆಸಿ ಕೊಟ್ಟವರು ನೀವು ಎಂದು, ಎಷ್ಟೇ ಹೇಳಿದರೂ
ದುಡ್ಡು ತಗೊಳ್ಳೇ ಇಲ್ಲಾ..
ಇದೇನಪ್ಪಾ ಊರ ತುಂಬಾ
ಹೊಸ ರಕ್ತ ಸಂಬಂಧ..
ವ್ಯವಹಾರ, ಚಿಕಿತ್ಸೆ, ಅಕ್ಕರೆ ಇವೆಲ್ಲವನ್ನೂ
ಹೊಂದಿದ್ದ ನಮ್ಮ ಅಣ್ಣ
ಡಾಕ್ಟರ್ ಮೇಧಾವಿಯ ಕಂಡು
ಹೆಮ್ಮೆಯಿಂದ ಕಣ್ಣು ತೇವವಾಗಿತ್ತು.
ಮತ್ತೆ ಹೊರಟ್ವಿ..ಅಷ್ಟರಲ್ಲಿ...
ಇಸ್ಮಾಯಿಲ್ ಓಡಿ ಬಂದು ಕಾರನ್ನು ನಿಲ್ಲಿಸ್ದ
ಅವನ ಬೇಗಮ್ ಮುಂತಾಜ್ ನ
ಡೆಲಿವೆರಿ ನೋಡಿದ್ದು ನಮ್ಮ ಡಾಕ್ಟರ್ ಅಣ್ಣಾನೆ
ಡಾಕ್ಟ್ರೇ ಇವತ್ತು ಬೆಳಗ್ಗೆ ಹಿಡಿದಿದ್ದು ದೊಡ್ಡ
ಕಾಟ್ಲಾ ಮೀನು, ಡಿಕ್ಕಿ ತೆಗೀರಿ, ಹಿಂದೆ ಡಿಕ್ಕಿಯಲ್ಲಿ
ಮೀನು ಇಡ್ತೀನಿ ತೆಗೆದುಕೊಂಡು ಹೋಗಿ ಎಂದು ಡಿಕ್ಕಿಯಲ್ಲಿಟ್ಟು ಸಲಾಂ ಹೇಳಿ ಹೊರಟ.
MG ರೋಡ್ ಹತ್ತಿರ
ಟ್ರಾಫಿಕ್ ಪೋಲೀಸ್ ಕಾರನ್ನು ನಿಲ್ಲಿಸಿ
ಮದ್ಯ ಪಾನ ಸೇವಿಸಿ ಗಾಡಿ ಓಡಿಸೋದ್ರ ಶೋಧನೆಗಾಗಿ (Drunken driving)
ಕಿಟಕಿ ಇಳಿಸಲು,
ಪೊಲೀಸ್ ಪೇದೆ ಬ್ರೇತ್ ಅನಲೈಸರ್ ನ
ಊದಲು ನೆಗೆಟಿವ್ ತೋರಿಸಿತು
ಮೀನಿನ ವಾಸನೆಯ ಪತ್ತೆ ಹಚ್ಚಿ
ಇನ್ಸ್ ಪೆಕ್ಟರ್ ಗೆ ತಾಕೀತು ಮಾಡಿದ
ಸರಿ ಡ್ರೈವಿಂಗ್ ಲೈಸನ್ಸ್ ಮತ್ತೆ
RC ಬುಕ್ ತೆಗೀರಿ ಅಂದ
ಮಾರಿ ಕಣ್ಣು ಹೋರಿ ಮ್ಯಾಲೆ
ಅನ್ನೋ ಹಾಗೇ ಪೇದೆ ಕಣ್ಣು ಮೀನಿನ್ ಮ್ಯಾಲೆ ಇತ್ತು, ಮೀನು ಕೈ ಮಾರಿದ
ಮ್ಯಾಲೆ, RC ಬುಕ್ಕೂ ಕೇಳಲಿಲ್ಲಾ
ಲೈಸನ್ಸೂ ನೋಡಲಿಲ್ಲಾ
ಆರಾಮಾಗಿ ಬಂದು ಸೇರಿದ್ವಿ
ಸ್ನಾನ ಮಾಡಿ, ನಡೆದದ್ದನ್ನ
ನೆನಸ್ಕೊಂಡು ನಗುನಗ್ತಾ
ನಿದ್ದೆ ಹೋದ್ವಿ...
ಡಾಕ್ಟರ್ ಮೇಧಾವಿ ಯವರ ಜೊತೆ
ಕಳೆದ ಆ ಒಂದು ದಿನ
ಮರೆಯಲಾಗದ ದಿನವಾಯ್ತು..
What a delightful read! 😊
ಪ್ರತ್ಯುತ್ತರಅಳಿಸಿIt’s truly heartwarming to witness the pride you feel for your accomplished sibling. The way you brought that day to life made every moment unfold as if we were right there with you. The “Brother’s Day Out” felt breezy and joyful to follow. Thank you for setting such inspiring sibling goals for all of us.
👏 With deep admiration for Dr. Medhavi—your story beautifully showcases the essence of humble service, remarkable skill, and genuine love. The entire blog was a treat to read.
Thank you for sharing this lovely slice of life!