ಮಂಜು. ಮಂಜು.. ಓ ಮಂಜೂ...

ಮಂಜು. ಮಂಜು.. ಓ ಮಂಜೂ
ಚೆನ್ನೈ ನಲ್ಲಿ ಒಂದು ಸಂಜೆ..
ನನ್ ಕೈಲಿದ್ದ
ಸೆಲ್ ಫೋನ್ ನಲ್ಲಿ 
ಯು ಟ್ಯೂಬ್ ನೋಡ್ತಾ ಕೇಳ್ತಾ 
ಉತ್ತರ ಕ್ಯಾಲಿಫೋರ್ನಿಯದ 
ಕನ್ನಡ ಒಕ್ಕೂಟ ಆಯೋಜಿಸಿದ್ದ
ಮೈಸೂರು ಅನಂತಸ್ವಾಮಿಯವರ 
ಹಳೆಯ ಸಂಗೀತ ಕಚೇರಿಯ ವಿಡಿಯೋ 
ಹಾಡು ಹಿತವಾಗಿ ಸೋಂಕಲು
ಆ ಹಾಡಿನ ಜೊತೆ ನಾನೂ ಹಾಡುತ್ತಾ.. 
ಭೂಮಿನ್  ತಬ್ಬಿದ್ ಮೋಡ್ ಇದ್ದಂಗೇ 
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೇ
ಸಾಫಾಗ್ ಹಳ್ಳ ತಿಟ್ಟಿಲ್ದಂಗೇ
ಮಡಿಕೇರಿ ಮೇಲ್ ಮಂಜು
ಮಂಜು,... ಓ ಮಂಜೂಂತ
ಗುಣುಗುತ್ತಾ ಗುಣುಗುತ್ತಾ...
ಮೆಲಕು ಹಾಕಲು ಪ್ರೆರೇಪಿಸಿತು..
ಸುಮಾರು ಐವತ್ತು ವರ್ಷಗಳ ಹಿಂದೆ
ಹಾಡಿದ ಈ ಹಾಡು
ನೆನಪಿನ ಸರಪಳಿಯ...ಕಳಚಿಕೊಂಡು
ಅಂದ್ರೆ 1973-74 ರ ಸೆಪ್ಟೆಂಬರ್
ತಿಂಗಳಿರಬೇಕು, ಮಂಗಳೂರಿನ
ಫಿಷರೀಸ್ ಕಾಲೇಜ್ ಗೆ ಕರೆದೊಯ್ತು
ಮ್ಯೂಸಿಕ್ ಕಾಂಪಿಟಿಷನ್,
ಅಂದ್ರೆ ಇದ್ದದ್ದರಲ್ಲೇ ದೊಡ್ಡ 
ಕ್ಲಾಸ್ ರೂಮೇ ಸಭಾಗ್ರಹ
ಕಾಲೇಜ್ ಸ್ಟೂಡೆಂಟ್ಸ್ ಗಳೇ
ಹಾಡು ಕೇಳೋ ಶೋತ್ರಗಳು
ಪ್ರೊಫೆಸರ್ ಗಳೇ ಜಡ್ಜ್ ಗಳು
ಮಡಿಕೇರಿ ಮೇಲ್ ಮಂಜು
ಮಂಜು,ಮಂಜು... ಓ ಮಂಜು...
ಮೈಕ್ ಮುಂದೆ ಹಾಡ್ತಾ ಇರೋ
ಮುಖ್ಯ ಗಾಯಕ ಹಾಡಿಗೆ ತಕ್ಕ ಹಾಗೆ 
ಮಂಜು ಅನ್ನೋ ಗಾನಕೋಗಿಲೆ 
ನಮ್ಮ ಮಂಜುನಾಥ್. 
ಕೋರಸ್ ನಲ್ಲಿ ನಾವೆಲ್ಲಾ ಜೊತೆಯಲ್ಲಿ 
ಮಂಜು ಮಂಜೂಂತ ಧ್ವನಿ ಗೂಡಿಸಬೇಕು 
ಅಷ್ಟೇ ನಮ್ಮ ಪಾತ್ರ, 
ಒಬ್ಬೊಬ್ಬರೇ ಹಾಡೀಂತಂದ್ರೆ 
ಶಬ್ದ ಇರಲಿ, 
ಉಸಿರು ಕೂಡಹೊರಬರದು. 
ಹ್ಞೂ ಹ್ಞೂಗುಟ್ಟುವ  
ನಾವೆಲ್ಲರೂ ಸಹ ಗಾಯಕರು, 
ಗುಂಪಲ್ಲಿ ಗೋವಿಂದಾನ್ನೋರು..
ನಾನೊಮ್ಮೆ ಮನೆಯಲ್ಲಿ ಜೋರಾಗಿ
ಆಕಾಶವೇ ಬೀಳಲಿ ಮೇಲೆ ನಾನೆಂದೂ ನಿನ್ನವನೇ ಎಂದು ಕಷ್ಟ ಪಟ್ಟು
ಹಾಡುತ್ತಾ ಇದ್ದದ್ದನ್ನು ನೋಡಿ ನಮ್ ದೊಡ್ಡಪ್ಪ  ಬಾಯಿ ಚಲನೆಯು ನಿಂತದ್ದನ್ನು ಕಂಡು ಹಾಡು ಮುಗಿಯಿತೂಂತ ಅರಿತು 
ಚೆನ್ನಾಗಿ ಹಾಡ್ತಾನೆ... 
ಆದ್ರೆ ರಾಗ ಇಲ್ಲಾಂತ ಹೇಳ್ ಬಿಟ್ರು, ಇಷ್ಟಕ್ಕೂ 70 ವರ್ಷಕ್ಕೂ ಹೆಚ್ಚಾದ ದೊಡ್ಡಪ್ಪಂಗೆ ಕಿವಿ ಸ್ವಲ್ಪ ಮಂದ... 
ಹೀಗಿತ್ತು ನನ್ನ ಹಾಡೋ ಚರಿತ್ರೆ...
 ನಾನು ಸುರೇಶ, ಲಚ್ಚಿ,,ಅಶ್ವಥ್,ಮಂಜು
 ವಿಜಯ್.ಕೊಂಡಾ,ಹಾಡು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ಪಾರಿತೋಷವೆಲ್ಲಾ
ಈಗ ನಮ್ಮ ಕಾಲೇಜ್ ಪ್ರಾಂಗಣದ ಸಭಾಗ್ರಹದ ಗಾಜಿನ ಗೂಡಲ್ಲಿ  ಶೋಭಿಸುತ್ತಾ ಇರೋದು ನಮಗೆಲ್ಲರಿಗೂ
ಹೆಮ್ಮೆಯ ವಿಷಯ. 
ಅದಿರಲಿ, 
ಮಂಜು ಬಗ್ಗೆ ಹೇಳಬೇಕೂಂತಂದ್ರೆ 
ಎಲ್ಲಿಂದ ಶುರು ಮಾಡಲಿ 
ವರ್ಷ 1970-71 ಇರಬೇಕು 
ನಾನು ಪಿ.ಯು.ಸಿ. ಓದುತಿದ್ದ
ಬೆಂಗಳೂರು  ನ್ಯಾಷನಲ್ ಕಾಲೇಜಿನಲ್ಲಿ 
ಮಂಜೂ ನ ಮೊಟ್ಟ ಮೊದಲು 
ನೋಡಿದ ನೆನಪು,
ಆದ್ರೆ ಪರಿಚಯವಾಗಿದ್ದು 
ಬೆಂಗಳೂರು ಫಿಷರೀಸ್ ಕಾಲೇಜಿನ ಮೊದಲ್ನೇ ವರ್ಷ. 
ನೀರಲ್ಲೇ ಹುಟ್ಟಿ ಬೆಳೆದ ಮೀನು ಮರಿಗೆ
ಈಜಲು ಕಲಿಸೋದು ಅನಾಗತ್ಯ
ಆದ್ರೆ ಮತ್ಸ್ಯ ವಿಜ್ಞಾನವ ವೃತ್ತಿಗಾಗಿ ಅಧ್ಯಯನಿಸುವ ವಿದ್ಯಾರ್ಥಿಗಳಿಗೆ 
ಈಜಲು ತಿಳಿದಿರಬೇಕು ಮತ್ತೆಲ್ಲರಿಗೂ ಪಿ.ಟಿ.
ಪುಲ್ಲಯ್ಯ ದೇಗಾ ಪಿ ಟಿ ಮೇಷ್ಟ್ರು
ನಮ್ಮನ್ನೆಲ್ಲ ಪ್ರತಿ ಮಂಗಳವಾರ  ಹೆಬ್ಬಾಳದಿಂದ ಬೆಂಗಳೂರ ಹಲಸೂರು ಕೆರೆಯ ಪಕ್ಕದಲ್ಲಿದ್ದ ಹೋಮ್ ಗಾರ್ಡ್ಸ್ ನ ಕೊಳಕ್ಕೆ ಕರೆದೊಯ್ದು ಹತ್ತಡಿ ಆಳವಿದ್ದ ದೊಡ್ಡ ಭಾವಿಯ ತೋರಿಸಿ ಧುಮಕಲು 
ಆಜ್ಞಾಪಿಸಿದೊಡನೆ ಒಂದು ಹತ್ತು ಹದಿನೈದು ಸಹಪಾಠಿಗಳು ದುಡುಮ್ಂತ ನೀರಲ್ಲಿ ಬಿದ್ದೇಬಿಟ್ರು. ಈಜಲು ಬರದಿದ್ದ ನಮ್ಮಂತವರನ್ನ ಖಡ್ಡಾಯವಾಗಿ
ಹಚ್ಚ ಹಸಿರು ನೀರಲ್ಲಿ ಹಗ್ಗಕಟ್ಟಿ ತಳ್ಳಿ ಬಿಡೋರು. ನೀರು ಮೂಗು ಬಾಯೊಳಗೆ
ಹೋಗಿ ನೀರ ನುಂಗಲಾಗದೆ ಹಾಗೆಯೇ ಶ್ವಾಸವನ್ನು ಬಿಡಲಾಗದೆ ತತ್ತಳಿಸಿ 
ಕೈಯನ್ನು ಮತ್ತೆ ಕಾಲನ್ನು ಹಾಗೇ ಜಾಡಿಸಿ
ಹೊರ ಬಂದರೆ ನಮ್ಮ ಮಂಜು ನನ್ನನ್ನು ಕೈ ಹಿಡಿದು ಎತ್ತಿ ಬಿಟ್ಟ ಜ್ಞಾಪಕ ರಪ್ಪನೆ 
ಮುಖಕ್ಕೆ ರಭಸದಿಂದ ಹೊಡಿಯಿತು.
ಮಂದಹಾಸ, ಮುಗುಳ್ನಗೆಯ ಧನಿ,
ಬಂಗಾರದ ಮನುಷ್ಯ ಹೀಗೆ ಕನ್ನಡದಲ್ಲಿ ಇರೋ ಗುಣವಾಚಕಗಳು ಎಲ್ಲಾ ಒಬ್ಬರಿಗೇ ಅನ್ವಯಸುತ್ತೇಂತಂದ್ರೆ ಅದು ನಮ್ಮ ಬೂದಿಗೆರೆ ಮುತ್ತಪ್ಪನವರ ಮಗ ಮಂಜುನಾಥ್ ರವರಿಗೆ ಮಾತ್ರ.
ಗುಣ 24 ಕ್ಯಾರೆಟ್ ಚಿನ್ನ... 
ಸಾಧಾರಣ, ಸರಾಸರಿ ಎತ್ತರ,
ಆದ್ರೆ ಕುಳ್ಳಾಂತ ಹೇಳೋಕ್ಕಾಗಲ್ಲ
ಇನ್ನೂ ಸ್ವಲ್ಪ ಹೈಟ್ ಇದ್ದಿದ್ರೆ ಸಿನಿಮಾ ರಂಗದವರು ಎತ್ತುಕೊಂಡು ಹೋಗಿಬಿಟ್ಟೋರು,
ನಮ್ಮ ಅದ್ರಷ್ಟ, ಸರಾಸರಿ ಎತ್ತರದ 
ನಮ್ಮ ಆಕಾರಕ್ಕೆ ಅನುಕೂಲವಾಗಿದ್ದರಿಂದ
ಸಿನಿಮಾದ ನಷ್ಟ ನಮಗೆ ಅದ್ರಷ್ಟ
ಮಂಜುವಿನ ಸಾನಿಧ್ಯ ದೊರಕಿತು.
ಪರಿಚಯ ಸ್ನೇಹಕ್ಕೆ ಪರಿವರ್ತನೆಯಾಗಿ ಬೆಳೆದಿದ್ದು ಮಂಗಳೂರ ತೊಕ್ಕೊಟ್ಟು ಹಾಸ್ಟೆಲ್ನಲ್ಲಿ, ಅದರ ಮುಖ್ಯವಾದ ಹೆಗ್ಗುರುತು 
ಲ್ಯಾಟೆರೈಟ್ ಕಲ್ಲು ಇಟ್ಟಿಗೆಯ ಭಾವಿ 
ನೀರು ಬತ್ತಿ ಕೆಸರಾಗುವ ವರೆಗೂ ನಿವಾಸಿಗಳಾದ ನಾವು ನೀರ ಸೇದಿ 
ಸ್ನಾನ ಮಾಡಿ ಬಟ್ಟೆ ಒಗೆಯಲು ಉಪಯೋಗಿಸುತ್ತಿದ್ದ
ಹಾಸ್ಟೆಲ್ ಪರಿಸರದ ಜೀವಂತ 
ಸಾಮೂಹಿಕ ಭಾವಿ, 
ಮಂಜುರವರ 
ಸ್ತುಪ್ತ ಪ್ರತಿಭೆ ಯನ್ನು ಹೊರತಂದಿತು.
ಬಟ್ಟೆ ಒಗೆಯುವ ಶಬ್ದಗಳ ನಡುವೆ 
ಇಂಪಾದ ಹಾಡು
ಒಲವೇ ಜೀವನ ಸಾಕ್ಷಾತ್ಕಾರ 
ಒಲವೇ ಮರೆಯದ ಮಮಕಾರ 
ಹಾಡು ಕೇಳಿದೊಡನೆ
ಎಲ್ಲಾ ಶಬ್ದಗಳು ಸ್ಥಬ್ದ, 
ಹಾಡು ಮುಗಿಯುವ ವರೆಗೂ 
ಶ್ರೀ ಕ್ರಷ್ಣನ ಮುರಳೀ ಗಾನ ಕೇಳಿ 
ಹ್ಯಾಗೆ ಹಸು ಕರುಗಳು ಮಂತ್ರ ಮುಗ್ದರಾಗುತಿದ್ದವೋ ಹಾಗೇ ನಮಗೂ ಅದೇ ಅನುಭವ... ಸ್ವಲ್ಪ ಅತಿಯಾಯ್ತಾ... ಆದ್ರೆ ಆ ಹಾಡು
ರುಜು ಪಡಿಸಿತು ಮಂಜುನಾಥ್ 
ಒಬ್ಬ ಪ್ರತಿಭಾಶಾಲಿ ಗಾಯಕನೆಂದು
ಆದ್ರೆ ನಿಜವಾಗಲೂ ಸುಶ್ರಾವ್ಯ ಕಂಠ..
ಅಷ್ಟೇ, ಕಾಲೇಜಿನ ಯಾವೊಂದು ಕಾರ್ಯಕ್ರಮವಾಗಲಿ, ಸರಸ್ವತಿ
ವಂದನವಾಗಲಿ, ಜನ ಗಣ ಮನ ವಾಗಲಿ, ಮಂಜು ಹಾಡಲೇ ಬೇಕು.
ಅದಕ್ಕಿಂತಲು ಮುಖ್ಯವಾಗಿ 
ಜೊತೆಗೆ ನಾವೆಲ್ಲಾ ಇದ್ರೆ 
ಹಾಗೇ ಹ್ಞೂಗುಟ್ಟಿದ್ರೆ ಸಾಕು
ಹಾಡಿಗೊಂದು ಗಮ್ಮತ್ತು ಬರುತ್ತಿತ್ತು.
ಆದ್ರೆ  ಮಿತ್ರತ್ವ ಘನಿಷ್ಟವಾಗಿದ್ದು
ಗೋರಿಗುಡ್ಡದ ಹೊಸ ಹಾಸ್ಟೆಲ್ ಪರಿಸರದಲ್ಲಿ
ರಜೆ ದಿನಗಳಲ್ಲಿ ಎಲ್ಲರೂ ಜೊತೆಗೂಡಿ ಮಂಗಳೂರು ನಗರದ ಹಂಪನ್ ಕಟ್ಟೆಗೆ
ಹೋಗಿ ಸಿನಿಮಾ ನೋಡಿ ವಾಪಸ್ಸು
ಕಂಕನಾಡಿ ಬಸ್ ಸ್ಟಾಂಡ್ ನಲ್ಲಿಳಿದು
ಹಾಸ್ಟೆಲ್ ಗೆ ಹೋಗೋ ದಾರಿಯುದ್ದಕ್ಕೂ
ಕನ್ನಡ ಹಿಂದಿ ಸಿನಿಮಾ ಹಾಡುಗಳ ಹಾಡಿಕೊಂಡು ನಾವು ಸಹಗಾಯಕರಾಗಿ ಪ್ರೇರಿತರಾಗಿದ್ದು ಹೀಗೇ ಇದ್ದಿರಬೇಕು. 
ಒಮ್ಮೆ ಇದು ಅತಿಯಾಗಿ
ನಮ್ಮ ಜೂನಿಯರ್ ಗಳು 
ಈ ವಿಷಯದಲ್ಲಿ ಸೀನಿಯರ್ ಗಳು ಅಂದ್ರೆ
ನಾಗರಹಾವು ಚಿತ್ರದ  ಅಂಬರೀಷ್ ಅಂತ ಅಂದ್ಕೊಂಡು ಹೋಗೋ ಬರೋ ವೆಲೆಂನ್ಸಿಯದ ಹುಡುಗಿಯರನ್ನು
ಏ ಬುಲ್ ಬುಲ್ಂತ  ಚುಡಾಯಿಸಿ 
ಹಾಸ್ಟೆಲ್ ಹುಡುಗರಿಗೂ ಲೋಕಲ್ ಹುಡುಗರಿಗೂ ದೊಡ್ಡ ರಗಳೆಯಾಗಿದ್ದುಂಟು
ಆಗ ನಮ್ಮನೆಲ್ಲಾ ಕಾಪಾಡಿದ್ದು ನಮ್ಮ ಡೈರೆಕ್ಟರ್ HPC ಶೆಟ್ಟಿ ಯವರು.
ಹೀಗೇ ಬೀದಿ ಗಾಯಕರಾಗಿದ್ದ ನಾವು ಮಂಜುನಾಥ್ ಜೊತೆ ಸೇರಿ ನಾನು, 
ಅಶ್ವಥ್, ವಿಜಯ್ ಸಹ ಗಾಯಕರಾದೆವು.
ಹೂವಿನೊಡನೆ ನಾರೂ ಸೇರಿ 
ದೇವರ ಹಾರವಾದೆವು.
ಬೆಂಗಳೂರು ವಸಂತ ನಗರದಲ್ಲಿದ್ದ 
ನಮ್ಮ ಮನೆಯಲ್ಲಿ ಮಂಜು 
ಒಂದು ರಾತ್ರಿ ಉಳಿದಿದ್ದು ಹಾಡಿದ್ದು
ಇವತ್ತಿಗೂ ಅಕ್ಕ ಅಣ್ಣ ಮನೆಯಲ್ಲಿ 
ಎಲ್ರುವೇ ನೆನಪಿಸಿ ಕೊಳ್ತಾರೆ       
ಜೋಗುಳದ ತರಹ ಮಂಜು ಹಾಡಿದ
ಬಾರೇ ಬಾರೆ ಚೆಂದದ ಚೆಲುವಿನ ತಾರೆ
ಬಾರೇ ಬಾರೆ ಒಲವಿನ ಚಿಲುಮೆಯ ಧಾರೆ
ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ
ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ
ಐವತ್ತಕ್ಕೂ ಹೆಚ್ಚು ವರುಷಗಳು ಉರುಳಿ ಹೋದರೂ ಉರುಳಿ ಹೋಗದೆ
ಉಳಿದಿದ್ದು ಈ ನೆನಪು. 
ಹಾಗೇನೇ 
(ಬೂದಿಗೆರೆ ದ್ರಾಕ್ಷಿತೋಟದಲ್ಲಿ ದಾಳಿ
ಆಗ ಐಪಿಯು ನಮ್ಮೊಟ್ಟಿಗೆ ಇದ್ದರು)
ನಾವೆಲ್ರು ಒಮ್ಮೆ ಬೂದಿಗೆರೆಗೆ ಹೋಗಿ
ಮಂಜುವಿನ ಮನೆಯಲ್ಲಿ ಉಳಿದಿದ್ದು
ದಟ್ಟವಾದ ಮಂಜು ಕವಿದಿದ್ದ 
ಆ ಮುಂಜಾನೆ ಆ ದ್ರಾಕ್ಷಿ ತೋಟಕ್ಕೆ ಹೋಗಿದ್ದು ಹುಳಿ ದ್ರಾಕ್ಷಿ ತಿಂದು
ಮೈ ಜುಮ್ಮಂದಿದ್ದು. ಮತ್ತೊಮ್ಮೆ
ಬೂದಿಗೆರೆ ಮೇಲ್ ಮಂಜುಂತ ಹಾಡಿದ್ದು
ದ್ರಾಕ್ಷಿ ತೋಟದಷ್ಟೇ ಹಚ್ಚ ಹಸಿರಾಗಿ 
ಇಂದಿಗೂ ನೆನಪಿನಾಳದಲ್ಲಿದೆ.
ಇಂಟರ್ ಕಾಲೇಜ್ ಸಿಂಗಿಂಗ್ ಕಾಂಪಿಟಿಷನ್ REC ರೀಜನಲ್ 
ಇಂಜಿನಿಯರಿಂಗ್ ಕಾಲೇಜು
ಸುರತ್ಕಲ್ ನಲ್ಲಿ ನಡೆಯಲು
ಅದಕ್ಕಾದ ತಯ್ಯಾರಿಯಲ್ಲಿ ಒಂದಾದೆವು
ಪ್ರತಿಸ್ಪರ್ಧೆ ಜೋರಾಗಿತ್ತು ನಮ್ಮ 
ಗೋಲ್ಡನ್ ವಾಯ್ಸ್ ಮಂಜುರವರನ್ನು
ಅಖಾಢದಲ್ಲಿ ಇಳಿಸಿದ್ದಾಯ್ತು.
ನಮಗೆಲ್ಲರಿಗೂ ಮಂಜುವಿನ ಹಾಡಲ್ಲಿ
ಒಂದು ಕಮ್ಮಿ ಕಾಣಿಸ್ತು...
ಹಾಡ್ತಾರೆ, ರಾಗ, ಕಂಠ ಎಲ್ಲವೂ ಚೆನ್ನಾಗಿದೆ
ಆದ್ರೂವೇ ಏನೋ ಒಂದು ಕಮ್ಮಿ
ಯೋಚಿಸಿದ್ವಿ ಗೊತ್ತಾಗಿ ಹೋಯ್ತು
ಹಾವ ಭಾವ ಇಲ್ಲಾಂತ... ಎಲ್ರು
ಐಡಿಯಾ ಕೊಟ್ಟಿದ್ದೇ ಕೊಟ್ಟಿದ್ದು.
ಮಂಜು ಹಾಡಬೇಕಾದ್ರೆ ಸ್ವಲ್ಪ ತಲೆ 
ಈ ಕಡೆ ಆ ಕಡೆ ಆಡಿಸಿ ಭಾವ ತಾನಾಗೇ
ಬರುತ್ತೇಂತ ಹೇಳಿ ಬಲವಂತವಾಗಿ 
ಹಾಡಿಸಿದೆವು ಅವನು ಹಾವ ಭಾವದಿಂದ ಹಾಡಿದ ಹಾಡು ಈಗ ನೆನೆಸ್ಕೊಂಡ್ರೂ
ನಗು ತಡೆಯಲಾಗೋಲ್ಲ
ಆ ಹಾಡು ಶುಭಮಂಗಳ ಚಿತ್ರದ
ಸೂರ್ಯಂಗೂ ಚಂದ್ರಂಗು ಬಂದಾರೆ
ಮುನಿಸು....
ಕಾಲೇಜಿನ ಓದು ಒಂದು ಹಂತಕ್ಕೆ
ಮುಗಿಯಲು ಬಂದಾಗ ಫೇರ್ ವೆಲ್ ಕಾರ್ಯಕ್ರಮದಲ್ಲಿ ನಾವು ಹಾಡಿದ 
ದೋಣಿ ಸಾಗಲಿ, 
ಮುಂದೆ ಹೋಗಲಿ,
ದೂರ ತೀರವ ಸೇರಲಿ,
ಈ ಹಾಡು ಹಾಡಿದಾಗ, 
ಪುರಸ್ಕಾರವೇನೋ ದೊರಕಿತು, ಆದ್ರೆ,  
ನಾವೆಲ್ಲರೂ ಬೇರೆ ಬೇರೆ ದಾರಿ ಹಿಡಿದು ದೂರ ತೀರವ ಸೇರ್ತೀವೀಂತ ಅಂದುಕೊಂಡಿರಲಿಲ್ಲಾ. 
( 1975 ಬ್ಯಾಚ್ ಕಾಲೇಜ್ ಫೇರ್ ವೆಲ್  ಗ್ರೂಪ್ ಫೋಟೋ)  
ಕಾಲೇಜು ಮುಗಿದು ಉದ್ಯೋಗವೆನ್ನುವ ಪಯಣವ ತೊಡಗಿದಾಗ
ಮುಖ್ಯ ಗಾಯಕ, ಗುಂಪು ಗಾಯಕರು, ಚಿಲ್ಲಾ ಪಿಲ್ಲಿಯಾಗಿ ಚದುರಿ ಹೋದೆವು.  
ಈಗಿರುವ ಪೀಡಿಗೆ ದೊರಕಿದ, ದೊರಕಿರುವ
ಅವಕಾಶಗಳು ಮಂಜುಗೇನಾದ್ರುವೇ ಸಿಕ್ಕಿದ್ದರೆ ದೇಶ ವಿದೇಶಗಳಲ್ಲಿ ಅವರ ಕಾನ್ಸೆರ್ಟ್ ಗಾಗಿ(ನಮ್ಮೂರ ಸಂಗೀತ ಕಚೇರಿಗಳಿಗೆ ಸಮಾನ) ಲಕ್ಷೋಪಲಕ್ಷ ರಸಿಕರು ನೋಡೋಕೆ ಕೇಳೋಕೆ ಹಾತೊರೆಯುತ್ತಿರೋರು.. ನಾವೂ
ಒಂದು ಗಿಟಾರ್, ಕೀಬೋರ್ಡ್ 
ಏನಾದ್ರುವೇ ಜೊತೆಗೆ ತಗಲ್ ಹಾಕ್ಕೊಂಡು
ಹೊರಟು ಬಿಡ್ತಿದ್ದೆವೋ ಏನೋ..
ಹೇಳ್ತಾರಲ್ಲ ಏನು ಆಗಬೇಕೂಂತ 
ನಿಶ್ಚಯವಾಗಿರುತ್ತೋ ಅದೇ ಆಗುತ್ತೇಂತ.
ಮಂಜುರವರು ಉದ್ಯೋಗ ನಿಮಿತ್ತ
ಕೃಷಿ ವಿತ್ತ ನಿಗಮದಲ್ಲಿ ಮುಂಬೈ ನಗರಕ್ಕೆ ಹೋದರು. ನಾನು, ವೆಂಕಿ, ಐಪಿ, ಅಶ್ವಥ್ ಉದ್ಯೋಗವ ನಂಬಿದ್ದರಿಂದ ನಮ್ಮನ್ನು ಅದ್ರಷ್ಟ /ವಿಧಿ ಕೊಲ್ಕತ್ತಾದ ಬಳಿ ಇರುವ 
ಬ್ಯಾರಕ್ ಪುರ್ ಮತ್ಸ್ಯವಿಜ್ಞಾನ ಕೇಂದ್ರಕ್ಕೆ ಕರೆದೊಯ್ಯಿತು. ಕೆಲವರು ಮಂಗಳೂರು ಮತ್ತಿತರರು ಲಕ್ಷ್ಮಿ, ವಿಜಯ್, ಕೊಂಡಾ ಹೆಚ್ಚಿನ ಅಧ್ಯಯನಕ್ಕೆ ವಿದೇಶಕ್ಕೆ ಪಯಣಿಸಿದರು.   
ಹೀಗೇ ಹಾಡಿನ ಅಧ್ಯಾಯ ಮುಗೀತು ಅಂದುಕೊಂಡಿದ್ದಾಗ 
ಕಾಲೇಜು,ಉದ್ಯೋಗ  
ಮದುವೆ...ಮಕ್ಕಳು ಮರೀಂತ 
ಜೀವನದ ಮುಖ್ಯ ಭಾಗವನ್ನು
ಯಶಸ್ವಿಯಾಗಿ ನಿರ್ವಹಿಸಿ 
ನಾವೆಲ್ಲರೂ ಈಗ ಸುದ್ರಡವಾಗಿ
ಜೀವನ ಪ್ರಯಾಣದ 
ಮುಂದಿನ ಹೆಜ್ಜೆ ಇಟ್ಟಿದ್ದೇವೆ
ಏನದು?
ದಾರಿದೀಪವಾಗಿ
ಶ್ರೀಯುತ ಲಕ್ಷ್ಮಣ್ ರೆಡ್ಡಿಯವರಂತೂ
ಪತ್ನಿ ಸಮೇತ ತೀರ್ಥಯಾತ್ರೆಯ ರಸ್ತೆ ತೋರಿಸಿದ್ದರೆ, ನಮ್ ಮಂಜುರವರು
ಪತ್ನಿಯ ಜೊತೆ ಜೊತೆಯಲೀಂತ
ಹಾಡಿಕ್ಕೊಂಡು ದೇಶ ವಿದೇಶಗಳ ಪರ್ಯಟನೆಯ ಮೂಲಕ ಜೀವನದ ಮತ್ತೊಂದು ಅಧ್ಯಾಯಕ್ಕೆ ದಾರಿ ದೀಪವಲ್ಲ ದೊಡ್ಡ ಸರ್ಚ್ ಲೈಟ್ ಹಾಕಿ ಬೆಳಕು ಚೆಲ್ಲಿದ್ದಾರೆ.
ಉಳಿದವರು ಕಾತುರದಿಂದ ಮಂಗಳೂರಿನತ್ತ  ಪ್ರಯಾಣಕ್ಕಾಗಿ
ಕಾಯುತ್ತಿದ್ದಾರೆ...
ಅಂತದ್ದೇನಪ್ಪ ವಿಶೇಷ
1975 ರಲ್ಲಿ BFSc ಓದಿ ಮುಗಿಸಿದ
ನಮ್ಮ ಬ್ಯಾಚ್ ನವರು, ಅಂದ್ರೆ
ಫಿಷರೀಸ್ ಕಾಲೇಜಿನ ಸಹಪಾಠಿಗಳು
2025 ರಲ್ಲಿ ಡಿಗ್ರೀ ಮುಗಿಸಿ ಐವತ್ತು ವರ್ಷಗಳು ತುಂಬಿದ್ದನ್ನು ಆಚರಿಸಲು
ಗೋಲ್ಡನ್ ಜುಬಿಲೀ ಸಂಭ್ರಮದಲ್ಲಿ 
ಭಾಗವಹಿಸಲು ಹೊರಟಿದ್ದೀವಿ.
ನಾವೆಲ್ಲರೂ ಗೋಲ್ಡನ್ ಗ್ರಾಜುಎಟ್ಸ್
ಅದಿರಲಿ ನಮ್ಮೆಲ್ಲರ ಅಚ್ಚುಮೆಚ್ಚಿನ
ಗೋಲ್ಡನ್ ಗಾಯಕ ಮಂಜುನಾಥ್ರವರು
ಬರ್ತಾ ಇದ್ದಾರೆ ನಮಗೆಲ್ಲರಿಗೂ ಇಷ್ಟವಾದ
ಮಡಿಕೇರಿ ಮೇಲೆ ಮಂಜು ಹಾಡು ಹಾಡ್ತಾರೆ
ಈ ಸಲ ಗುಂಪಾಗಿ ಜೊತೆ ಗೂಡಿ 
ಕೋರಸ್ ಹಾಡಲು ಹ್ಞೂ ಗುಟ್ಟಲು
ಬಹಳ ಗುಂಪು ಗಾಯಕರಿದ್ದಾರೆ.
ರೆಡಿ ನಾ 
ಒನ್, ಟು, ಥ್ರೀ...
ಮಂಜು.
ಮಂಜು..
ಮಂಜು...
ಮಂಜು ಹಾಡದೆ ಮೌನವಾಗಿದ್ದ ಆ ಕ್ಷಣ
 ಇತ್ತೀಚಿಗೆ ತೆಗೆದ ಮಂಜುನಾಥ್ ರವರ   ಚಿತ್ರ ಅಂದ್ರೆ,20ನೇವಯಸ್ಸಲ್ಲಿ ಅವರು   ಹ್ಯಾಗಿದ್ದಿರಬೇಕು. 



ಕಾಮೆಂಟ್‌ಗಳು

  1. Such a light-hearted and humorous read! 😊 Every song you mentioned had me picturing how it might sound in Manju Sir’s voice — even without having heard him, that’s the kind of wonderful imagery your writing creates. It’s truly heartwarming to see how friendships evolve through different stages of life and how deeply they shape who we are. Yet another delightful blog on friendship that never fails to entertain and touch the heart! ✨

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.