ಈ ಪ್ರಯಾಣಕ್ಕೆಲ್ಲಿದೆ ಅಂತ?

ಬಹಳ ದಿನಗಳಿಂದ ಹುಡುಕ್ತಾ ಇದ್ದೀನಿ
ಸಿಗಲೇ ಇಲ್ಲಾ  
ಪುಸ್ತಕದ ಕಪಾಟು, ಅಲಮಾರಿ, 
ಸ್ಟೋರ್ ರೂಮ್, ಕಾರ್ಟನ್ ಡಬ್ಬಾ 
ಎಲ್ಲವನ್ನು ತಲೆಕೆಳಗೆ ಮಾಡಿ ಉರುಳಿಸಿ ಬೀಳಿಸಿ
ಹುಡುಕಿ ಹುಡುಕಿ ಸುಸ್ತಾಗಿದ್ದಾಯ್ತು
ನನಗೆ ಒಂದು ಸಂಶಯ 
ಹಳೆಯ ಪೇಪರ್ ಮಾರೋ ಕಬಾಡಿಗೇನಾದ್ರೂ
ಹಾಕಿದ್ಲೋ ಏನೋಂತ
ಆದ್ರೆ ಕೇಳೋದಿಕ್ಕೆ ಧೈರ್ಯ ಬರಲಿಲ್ಲಾ
ನಾಜೂಕಾಗಿ ಪತ್ನಿ ಗೀತಾಳನ್ನ ಕೇಳಿದೆ 
ಹಸಿರು ಬಣ್ಣದ ಈಗಲ್ ಡೈರಿ
ಪೊಲೀಸ್ ಹೆಡ್ ಕಾನ್ಸ್ಟೇಬಲ್ 
ತಿಮ್ಮಪ್ಪ ರವರ ವಿಳಾಸವ ಬರೆದಿಟ್ಟಿದ್ದೆ
ಆ ಡೈರಿ ಎಲ್ಲಾದ್ರೂ ನೋಡಿದ್ಯಾ?
ಎಲ್ ಹೊಯ್ತೋಂತ  ಗೊತ್ತಿಲ್ಲಾ
ನೋಡಿಲ್ಲವಲ್ರೀ...
H C ತಿಮ್ಮಪ್ಪನ ಹುಡುಕಲು
ಆ ತಿರುಪತಿ ತಿಮ್ಮಪ್ಪನೇ ದಾರಿ ತೋರಿಸ ಬೇಕು...
ಸೇವೆಯಲ್ಲಿದ್ದಾಗಲೇ  ಅವರನ್ನ ನೋಡಬೇಕೂಂತ 
ಅಂದುಕೊಂಡಿದ್ದೆ
ಅದು ಸಾಧ್ಯವಾಗಲಿಲ್ಲ
ಹತಾಶನಾಗಲಿಲ್ಲ ವಿಕ್ರಮಾದಿತ್ಯನ ತರಹ
ಬಿಡದೆ ಹೆಡ್ ಕಾನ್ಸ್ಟೇಬಲ್ ತಿಮ್ಮಪ್ಪನವರ
ಅನ್ವೇಷಣೆ ಜಾರಿ ಇಟ್ಟಿದ್ದೆ.
ಸೇವಾ ನಿವೃತ್ತನಾದ ಮೇಲೆ
ಮಾಡಲೇ ಬೇಕೆಂದು ಕೊಂಡ 
ಕೆಲವೊಂದು ಕಾರ್ಯಗಳು
ಮತ್ತೆ ನೋಡಲೇ ಬೇಕೆಂದು ಕೊಂಡ
ಪರ್ಯಟನೆಯ ಸ್ಥಳಗಳು
ಹಾಗೆಯೇ ಭೇಟಿಯಾಗಲೇ 
ಬೇಕೆಂದು ಕೊಂಡವರ ಸೂಚಿಯೊಂದು 
ತಯಾರು ಮಾಡಿಟ್ಟಿದ್ದೆ, 
ಭೇಟಿ ಮಾಡ ಬೇಕಾದವರ
ಆ ಲಿಸ್ಟ್ ನಲ್ಲಿ ತಿಮ್ಮಪ್ಪ ರವರ
ಹೆಸರು ಮೊದಲನೆಯದಾಗಿತ್ತು
ಸರಿ ಅವರ ವಿಳಾಸ ಇಲ್ಲದಿದ್ದರಿಂದ 
ಅವರಿದ್ದ ಶಿವಮೊಗ್ಗ ಜಿಲ್ಲೆಯ 
ಸಾಗರ ನೆನಪಿಗೆ ಬಂತು  
ಅದೇನೋ ಒಂದು ಉದ್ವೇಗ
ನೋಡಲೇ ಬೇಕೆನ್ನುವ ಹಂಬಲ
ಸರಿ ಮನೆಯಲ್ಲಿ  
ನಾನು ಬೆಳೆದು ಓದಿದ 
ಜೋಗ್ ಫಾಲ್ಸ್ ಸ್ಕೂಲ್ ನ 
ಮಿತ್ರರ ಪುನರ್ ಮಿಲನ 
ಕಾರ್ಯಕ್ರಮವಿದೇಂತ ನೆಪ ಹೇಳಿ 
ಹೊರಟೇ ಬಿಟ್ಟೆ ತಿಮ್ಮಪ್ಪನ ಹುಡುಕಲು..
2022 ನೇ ಡಿಸೆಂಬರ್ ತಿಂಗಳ ಒಂದು ದಿನ
ಒಬ್ಬನೇ ಬೆಂಗಳೂರಿನಿಂದ  
ಒಂದು ದಿನ ಮುಂಜಾನೆ 
ಏಳು ಘಂಟೆಗೆ ಮೆಜೆಸ್ಟಿಕ್ ನಿಂದ 
KSRTC ಬೆಂಗಳೂರು- ಜೋಗ್ ಫಾಲ್ಸ್
 ಬಸ್ ಹಿಡಿದು  ಹೊರಟ್ಟಿದ್ದಾಯ್ತು.
ಬೆಂಗಳೂರು - ತಾಳಗುಪ್ಪ ಎಕ್ಸ್ಪ್ರೆಸ್ ಟ್ರೈನ್ 
ಇದ್ರೂವೆ ದಿನವಿಡೀ ಊರುಗಳ, 
ಮಾವು,ಅಡಿಕೆ, ತೆಂಗಿನ ಮರಗಳ, 
ಹಸಿರು ತೆನೆಗಳ,ದನ ಕುರಿಗಳ
ತುಂಗಾ ನದಿಯ ಜುಳು ಜುಳೂಂತ 
ಹರಿವ ಪ್ರಕೃತಿ ಸೌಂದರ್ಯವ 
ಕಣ್ ತುಂಬಾ ತುಂಬಿಸಿ ಕೊಳ್ಳುವ 
ಒಂದು ನೆಪ್ಪಾಸೆಯಿಂದ (ಆಸೆಗೊಂದು ನೆಪ) 
ಬಸ್ಸು ಯಾತ್ರೆಯ ಆಯ್ಕೆ ಮಾಡಿದೆ.
ಅದು ಸುಳ್ಳಾಗಲಿಲ್ಲ, ಆಹ್ಲಾದಕರವಾಗಿತ್ತು
ಬಸ್ಸು ತುಮಕೂರು, ಚಿತ್ರದುರ್ಗವನ್ನು
ದಾಟಿ ಶಿವಮೊಗ್ಗದ ಮೀನಾಕ್ಷಿ ಭವನ 
ಹತ್ತಿರ ಮಧ್ಯಾಹ್ನ ಊಟಕ್ಕಾಗಿ ನಿಂತಿತು.
ಶಿವಮೊಗ್ಗದಲ್ಲಿ  ಹೋಟೆಲ್ ಒಂದರಲ್ಲಿ 
ಶುದ್ಧ ಶಾಖಾಹಾರಿ ಭೋಜನವ ತಿಂದು 
ಎಷ್ಟೋ ವರ್ಷಗಳಾಗಿತ್ತು. ಶಿವಮೊಗ್ಗದ
ಫೇಮಸ್ ಸೌತೆಕಾಯಿ ಹೋಳಿನ ಸಾಂಬಾರು, 
ಹುರುಳಿಕಾಯಿ ಪಲ್ಯ 
ಹುರಿದ ಆಲುಗಡ್ಡೆ, 
ಮೈಸೂರ್ ಟೊಮೇಟೊ ರಸಂ, 
ಗಟ್ಟಿ ಮೊಸರು,ತೆಂಗಿನಕಾಯಿ ಬರ್ಫಿ 
ಇದು ಶುಗರ್ 
ಅದು ತಿನ್ನಬೇಡಿನ್ನೋ ಯಾವೊಂದು
ನಿಯಂತ್ರಣವಿಲ್ಲದೇ 
ಒಂದು ಕೈ ನೋಡಿದ್ದಾಯ್ತು
ಬಾಯಿ ಚಪ್ಪರಿಸಿ ಉಂಡಿದ್ದಾಯ್ತು.
ನಿಮಗನಿಸಬಹುದು 
ಇವನು ತಿಮ್ಮಪ್ಪನ್ನ ಹುಡಕಕ್ಕೆ 
ಬಂದಿಲ್ಲಾಂತ ಕಾಣಿಸುತ್ತೆ. 
ಹೇಳೋಕ್ಕೆ ಏನಿದೆ
ಊಟ ತನ್ನಿಚ್ಚೆ
ನೋಟ ಪರರಿಚ್ಚೆ
ಶಿವಮೊಗ್ಗ- ಸಾಗರದ ರಸ್ತೆ ಸೂಪರ್
ಮಲೆನಾಡ ಸ್ವಾಗತ ದ್ವಾರ
ರಸ್ತೆಯ ಅಕ್ಕ ಪಕ್ಕ ಹಸಿರು ತೋರಣ
ಅಲ್ಲಿಂದ ಹೊರಟ ಬಸ್ಸು ಕುಂಸಿ, 
ಆನಂದಪುರವ ದಾಟಿ  
ಮಧ್ಯಾಹ್ನ ಮೂರು ಘಂಟೆಗೆ 
ಸಾಗರದ ಹೊಸ ಬಸ್ ನಿಲ್ದಾಣವ ತಲುಪಿತು.
             ಸಾಗರದ ಹೊಸ ಬಸ್ ಸ್ಟಾಂಡ್
ಸುಮಾರು ಐವತ್ತು ವರ್ಷಗಳ ಹಿಂದೆ 
1972 ಅಕ್ಟೋಬರ್ ಮಂಗಳೂರು  ಫಿಶರೀಸ್ ಕಾಲೇಜಿನ 
ಒಂದು ಟ್ರೈಮಿಸ್ಟರ್ ಬಿಡುವಿನಲ್ಲಿ
ಕಾರ್ಗಲ್ ಮನೆಗೆ ಹೋಗುವ ರಸ್ತೆ ಯಲ್ಲಿ 
ಸಾಗರದ ಹಳೆಯ ಬಸ್ ಸ್ಟಾಂಡ್ನಲ್ಲಿ
ಮೊದಲು ತಿಮ್ಮಪ್ಪನವರನ್ನು ಭೇಟಿಯಾದ ಜ್ಞಾಪಕ 
ಅದನ್ನೇ 2022 ರಲ್ಲಿ ಪುನರಾವೃತ್ತಿಸಲು
ತಿಮ್ಮಪ್ಪರವರನ್ನು ಹುಡುಕಿ ಅವರ ಜೊತೆ 
ಸಮಯ ಕಳೆಯಲೇ ಬೇಕೆಂಬುದೇ
ಈ ಪ್ರಯಾಣದ ಮುಖ್ಯ ಧ್ಯೇಯ
ಅವರನ್ನ ಭೇಟಿ ಮಾಡಲೇಬೇಕೆಂದು 
ಏನೋ ಒಂದು ತರಹ ಜಿಜ್ಞಾಸೆ 
ಮರೆಯೋ ವ್ಯಕ್ತಿನಾ ಅವ್ರು,
ಅಥವಾ ಮರೆಯೋ ಮ್ಯಾಟರಾ ಅದು,
ಅವರ ಒಂದು ಕಿರು ಪರಿಚಯ
ಹ್ಯಾಗಿದ್ದರೂಂತ 
1972ರ ಸಾಗರ ಪೊಲೀಸ್ ಠಾಣೆಯ 
ಹೆಡ್ ಕಾನ್ಸ್ಟೇಬಲ್
ಶ್ರೀಯುತ ಮ. ತಿಮ್ಮಪ್ಪ ರವರ ಬಗ್ಗೆ
ಪುಟ್ಟ ಫ್ಲ್ಯಾಶ್ ಬ್ಯಾಕ್
ಒಳ್ಳೆಯ ಎತ್ತರದ ಮನುಷ್ಯ 
ಆರಡಿ ಇರಬಹುದೋ ಏನೋ
ಅತಿ ಕಪ್ಪು ಬಣ್ಣದ ಮಿರು ಮಿರುಂತಾ
ಹೊಳೆವ ಬೂಟುಗಳು ಕಾಲಲ್ಲಿ, ಹಾಗೆಯೇ
ಪಾದಗಳ ತಬ್ಬಿ ಹಿಮ್ಮಡಿಯಿಂದ 
ಮೊಣಕಾಲು ಸಂಧಿಯವರೆಗೂ 
ಎಳುದು ಟೈಟಾಗಿ ಹಾಕಿದ್ದ ಸಾಕ್ಸ್ ಗಳು
ಗಂಜಿ ಹಾಕಿ ಇಸ್ತ್ರಿ ಮಾಡಿ ತೊಟ್ಟ 
ಖಾಕಿ ನಿಕ್ಕರು,ಅದು ಸೊಂಟದಿಂದ
ಜಾರಿ ಹೋಗದಂತೆ 
ಬಿಗಿದಿದ್ದ ದಪ್ಪನೆಯ ಲೆದರ್ ಬೆಲ್ಟು 
ಅದರ ಮೇಲೆ ಇನ್ ಶರ್ಟ್ ಮಾಡಿದ
ಅಚ್ಚುಕಟ್ಟಾದ ಖಾಕಿ ಅಂಗಿ ಯುನಿಫಾರ್ಮ್.
ಎಡ ಭುಜದಿಂದ ಶೋಲ್ಡರ್ ಕ್ಲಿಪ್ ನಿಂದ ಜಾರಿ 
ಅಂಗಿಯ ಎಡ ಪಕ್ಕದ ಜೇಬಿನಿಂದ
ಪೋಣಿಸಿದ ಸಣ್ಣ ಹಗ್ಗದ ಮೊನೆಯಲ್ಲಿ
ನೇತಾಡುತಿದ್ದ ಶಿಲ್ಪಿ, 
ತಲೆಗೆ ಕಲಿಯುಗದ ಪೊಲೀಸ್ ಕಿರೀಟ 
ಅದೇ ಖಾಕಿ ಟರ್ಬನ್  ಪೇಟ ತರಹ
ಭಿನ್ನವಾದ ಟೋಪಿ
ಕೈಯಲ್ಲೊಂದು ಬೆತ್ತದ ಲಾಠಿ
ಹೈಟ್ ಗೆ ತಕ್ಕ ದೇಹ, ಅಜಾನಬಾಹು
ಕಂದು ಬಣ್ಣ ಅಂದ್ರೆ ಸ್ವಲ್ಪ ಹಾಲು 
ಹೆಚ್ಚು ಕಾಫಿ ಡಿಕಾಶನ್ ಮಿಶ್ರಿತ 
ತೇಜಸ್ಸಿನ ಆಕರ್ಷಕ ಮುಖ,
ಶಾರ್ಪ್ ಮೂಗು,
ಬಿಳಿ ಕಾಲ್ಗೇಟ್ ದಂತಗಳು,
ತೀಕ್ಷಣ ನೋಟ ಬೀರುವ ಕಣ್ಣುಗಳು,
ವಿಶಾಲವಾದ ಹಣೆ 
ಪೊಲೀಸರಿಗೇ ಮೀಸಲಾದ 
ನಾಗರಹಾವು ರಾಮಾಚಾರಿ ಮೀಸೆ
ತಿಮ್ಮಪ್ಪ  ಗಂಭೀರವಾಗಿ ಬೀಟ್ ನಲ್ಲಿ
ನಡೆದು ಬಂದರೆ,ಸ್ವಭಾವಿಕವಾಗೇ
ಸಜ್ಜನರ ಗೌರವ ಸ್ವಪ್ರೇರಿತ ಆದರೆ
ಕಳ್ಳ ಕಾಕರಿಗೆಲ್ಲಾ  ಭಯ, ನಡುಕ.
ಆ ಠೀವಿ, ಆ ಗತ್ತು,
ಒಟ್ಟಾರೆ ತಿಮ್ಮಪ್ಪ ಅಂದ್ರೆ ಪೊಲೀಸ್
ಪೊಲೀಸ್ ಅಂದ್ರೆ ತಿಮ್ಮಪ್ಪ
ಸಾಗರದ ಹೊಸ ಬಸ್ ಸ್ಟಾಂಡ್ನಲ್ಲಿ
ಇಳಿದು ಆಟೋ ರಿಕ್ಷಾ ಹಿಡಿದು 
ಸಾಗರ ನಗರ ಪೊಲೀಸ್ ಸ್ಟೇಷನ್ಗೆ ಹೋದೆ
ಅಲ್ಲಿ ನಗರ ಪೊಲೀಸ್ ಅಧೀಕ್ಷರನ್ನ ಭೇಟಿ
ಮಾಡಿ ಹೆಡ್ ಕಾನ್ಸ್ಟೇಬಲ್ ತಿಮ್ಮಪ್ಪ ನ ಬಗ್ಗೆ ವಿಚಾರಿಸಿದೆ 
ಎಲ್ಲರೂ ಹೊಸದಾಗಿ ನೇಮಿಸಲಾದವರು.
ಎಲ್ಲಾ ಹೊಸಾ ಪೇದೆಗಳು 
ಎಲ್ರಿಗೂ ತಿಮ್ಮಪ್ಪ ನವರು ಒಬ್ಬ ಲೆಜೆಂಡ್ 
ಅಂತ ಮಾತಾಡಿಕೊಂಡಿದ್ದು ಗೊತ್ತು
ಆದ್ರೆ ಎಲ್ಲಿಯವರು ಎಲ್ಲಿದ್ದಾರೆ ಗೊತ್ತಿಲ್ಲಾ
ಯಾರೂ ನೋಡಿರಲಿಲ್ಲ  
ಒಂದು ಅನುಮಾನ ಬಹುಷಃ ನಿವೃತ್ತರಾಗಿ 
ಇಲ್ಲೇ ಎಲ್ಲೋ ನಿವಾಸಿತ್ತಿರುತ್ತಾರೇಂತ 
ಆದ್ರೂವೆ ರೈಟರ್ ನ ಕರೆದು 
1972-73 ರ ಠಾಣೆಯ ಪದಸ್ಥಾಪನೆ ವಿವರವನ್ನು ನೋಡಿದೆ. ತಿಮ್ಮಪ್ಪರವರ ಹೆಸರಿತ್ತು, ಆದ್ರೆ ವಿಳಾಸ ಇರಲಿಲ್ಲ. 
ಲೇಖ ಶಾಖದ ಸುಬ್ಬಣ್ಣ ಹೇಳಿದ್ರು, 
ಸಾರ್, ನೀವು ಟ್ರೆಜರಿ ಆಫೀಸ್ ನಲ್ಲಿ ವಿಚಾರಿಸಿದರೆ  
ನಿವೃತ್ತರಾದವರ ಪೆನ್ಷನ್ ವಿವರಣೆಯಲ್ಲಿ 
ವಿಳಾಸ ಖಂಡಿತ ಸಿಗತ್ತೇಂತ 
ಸರಿ ನಿರಾಶನಾಗಿ ಧನ್ಯವಾದಗಳ ತಿಳಿಸಿ 
ಹೊರಡಲು ಅನುವಾದೆ. 
ಅಷ್ಟರಲ್ಲಿ ಠಾಣೆಯ ರೈಟರ್ ಓಡೋಡಿ
ಬಂದು ತಿಮ್ಮಪ್ಪನವರ ವಿಳಾಸವ ನೀಡಿದ.
ಪೊಲೀಸ್ ಠಾಣೆ ಯ ಸ್ಟಾಕ್ ರೆಜಿಸ್ಟರ್ ನಲ್ಲಿ
ಸ್ಥಾನಾಂತರದ ಸಮಯ 
ಶ್ರೀಯುತ ತಿಮ್ಮಪ್ಪ ನವರು ಸೈಕಲ್ 
ವಾಪಸ್ಸು ಮಾಡಿದ ಉಲ್ಲೇಖವಿತ್ತು
HC ತಿಮ್ಮಪ್ಪ ನವರ ವಿಳಾಸವ ನೋಡಿದೆ
ಸ್ಪಷ್ಟ,ಸುಂದರವಾದ, ಮುತ್ತು ಮುತ್ತಾದ ಅಕ್ಷರಗಳು...
ಶ್ರೀ ಮ. ತಿಮ್ಮಪ್ಪ
S/O ಸೀ. ಮರಿಯಪ್ಪ
ಸಿಗಂದೂರ್
ಕರೂರ್ ಹೋಬಳಿ 
ಸಾಗರ ತಾಲೂಕ 
ಶಿವಮೊಗ್ಗ ಜಿಲ್ಲೆ.
ಹಾಗಿದ್ರೆ ತಿಮ್ಮಪ್ಪ ಸಿಗಂದೂರ್ ನಲ್ಲೇ
ಮನೆ ಮಠ ಮಾಡ್ಕೊಂಡು ವಾಸಿಸುತ್ತಿರಬೇಕು, 
ಸಂಜೆಯಾದದ್ದಿರಿಂದ
ಬೆಳಿಗ್ಗೆ ಸಿಗಂದೂರ್ ಹೋಗುವಾಂತ
ನಿರ್ಣಯಿಸಿ ರಾತ್ರಿ ಸಾಗರದ PWD ನಿರ್ವಹಣೆಯಲ್ಲಿದ್ದ 
ವಿಶ್ರಾಂತಿ ಗ್ರಹಕ್ಕೆ ಹೋದೆ. 
ಸ್ವಚ್ಛ ವಾಗಿತ್ತು.
ಶುಭ್ರಾವಾದ ಚಾದರ,ಹಾಸಿಗೆ,
ಹೊದಿಕೆ ಎಲ್ಲಾ ಇದ್ದೂ ನಿದ್ದೆ ಬರಲಿಲ್ಲಾ
ತಿಮ್ಮಪ್ಪನವರನ್ನು ಕಾಣ ಹಂಬಲಿಸಿ
ಏನೋ ಒಂತರಾ ಕುತೂಹಲ,
ಏನ್ ಕೇಳಬೇಕು
ಏನ್ ಮಾತಾಡಬೇಕು
ಹಲವಾರು ಪ್ರಶ್ನೆಗಳು
ರಾತ್ರಿ ಇಡೀ ಅದೇ ಗುಂಗು 
ಹೇಗೂ ಬೆಳಗ್ಗೆ ಎದ್ದು ಸಿಗಂದೂರ್ ಗೆ 
ಹೋಗುವ ಮುನ್ನ ಸ್ವಲ್ಪ ಸಮಯ ಇದೆಯಲ್ಲಾಂತ 
ಯಾಕೀ ಹುಡುಕಾಟಾಂತ
ಅದಕ್ಕಾದ ಕಾರಣವ 
ಇನ್ನೊಂದು ಮುಖ್ಯ
ಪ್ರಯಾಣದ ವ್ರತ್ತಾಂತ ಹಂಚಿ ಕೊಳ್ಳುತ್ತಿದ್ದೇನೆ
1972 ರ ಅಕ್ಟೋಬರ್ ತಿಂಗಳಿರಬೇಕು
ಮಂಗಳೂರಲ್ಲಿದ್ದ ಫಿಶರೀಸ್ ಕಾಲೇಜಿನ 
ಒಂದು ಟ್ರೈಮಿಸ್ಟರ್  ಬಿಡುವಿನಲ್ಲಿ  
ಮಂಗಳೂರಿನಿಂದ ಕಾರ್ಗಲ್ಗೆ ಹೋಗ ಬೇಕಿತ್ತು 
ಕಾಲೇಜು ಸೇರಿ
ಮನೆಗೆ ಮೊದಲ ಬಾರಿ ಹೋಗುವ
ಉತ್ಸಾಹದಲ್ಲಿ ಹಂಪನಕಟ್ಟೆಯಿಂದ 
ಜೋಗಫಾಲ್ಸ್ ಗೆ ಹೋಗುವ ಡೈರೆಕ್ಟ್ ಬಸ್ಸನ್ನು 
ಮಿಸ್ ಮಾಡ್ ಬಿಟ್ಟೆ.
ಅದರಲ್ಲಿ ಹೋಗಿದ್ದರೆ ಒಂದೇ ಬಸ್ಸು
ನೇರವಾಗಿ ಜೋಗದ ಬಳಿ ಇರುವ 
ಕಾರ್ಗಲ್ ಕಾಲೋನಿಗೆ  
ಹೋಗ ಬಹುದಿತ್ತು. 
ನನ್ನ ಬಳಿ ಇದ್ದ ದುಡ್ಡಲ್ಲಿ 
ಬಸ್ ಚಾರ್ಜ್ ಹಾಗೂ 
ಊಟದ ಖರ್ಚಿಗೆ ಕರೆಕ್ಟಾಗಿತ್ತು.
ಆಗಲೇ ಬೆಳಿಗ್ಗೆ ಒಂಬತ್ತು ಗಂಟೆಯಾಗಿತ್ತು 
ಅಲ್ಲಿದ್ದ ಮ್ಯಾನೇಜರ್ ಹೇಳಿದ್ರು
ನೋಡಿ, ಇಲ್ಲಿಂದ ಮೊದಲು ಶಿವಮೊಗ್ಗಕ್ಕೆ
ಹೋಗಿ ಅಲ್ಲಿಂದ ಜೋಗಕ್ಕೆ ಬಸ್
ಕನೆಕ್ಷನ್ ಸಿಗತ್ತೇಂತ.
ಸರಿ, ಬಸ್ಸು ಹತ್ತಿ ವಿಂಡೋ ಸೀಟ್ ಬಳಿ ಕುಳಿತು ಕೊಂಡೆ, 
ಡಬಲ್ ಹಾರ್ನ್ ಬಾರಿಸಿ
ಶಿವಮೊಗ್ಗದತ್ತ ಬಸ್ಸು ಪ್ರಯಾಣ ತೊಡಗಿತು
ಮಂಗಳೂರಿನ ಕರಾವಳಿ ಪ್ರದೇಶ ದಿಂದ 
ಪಶ್ಚಿಮ ಘಟ್ಟದ ತಪ್ಪಲಲ್ಲಿ 
ಹುಳಿಕಲ್ ಘಾಟ್ ನ ಹೇರ್ ಪಿನ್ 
ಬೆಂಡುಗಳುಳ್ಳ ರಸ್ತೆ ಗಳನ್ನು ಅನಾಯಾಸವಾಗಿ  
ಸ್ಟೇರಿಂಗ್ ನ್ನು
ಒಮ್ಮೆ ಬಲಕ್ಕೆ ಒಮ್ಮೆ ಎಡಕ್ಕೆ ತಿರುಗಿಸಿ 
ಗಾಡಿಯ ನಡೆಸುವ ವೈಖರಿ
ಅಂದುಕೊಂಡೆ ಕಠಿಣ ವಾದ 
ಘಾಟ್ ರಸ್ತೆಯ ಹತ್ತಲು
ಬಸ್ಸು ಚಾಲಕನ ನೈಪುಣ್ಯತೆ
ಒಂದಾದರೆ ಘಾಟ್ ಹತ್ತುವ ಮುಂಚೆ
ನಿರ್ವಿಗ್ನ ವಾಗಿ
ಘಾಟ್ ಪಾರು ಮಾಡಲು 
ಗಣೇಶನಿಗೆ ಕೈ ಮುಗಿದು ತೆಂಗಿನಕಾಯಿ
ಒಡೆದು ಸಮರ್ಪಿಸಿ
ಬೇಡಿ ಕೊಳ್ಳುವದು ಇನ್ನೊಂದು. 
ಅಂತೂ ಇಂತೂ
ಕ್ಷೇಮವಾಗಿ ಜಗತ್ತಿನ ಅತಿ 
ಸುಂದರ ತಾಣ ಆಗುಂಬೆಯ ಸೇರಿದೆ.
          ಆಗುಂಬೆಯ ವಿಹಂಗಮ ದ್ರಶ್ಯ
ಕಣ್ಣ ಮುಂದೆಯೇ 
ಸುಲಿದು ಮಾರಲಿಟ್ಟ 
ಅಂಬಲಿ ಹಲಸಿನ ಹಣ್ಣ ರಸಭರಿತ  
ಸೊಳೆಯನ್ನು  ಕೊಂಡು ತಿಂದೆ. 
ಅದರ ಸ್ವಾದದ ಸವಿ ಅಧ್ಭುತವಾಗಿತ್ತು.
ಸೂರ್ಯ ಉದಯವಾಗಲಿ ಅಥವಾ 
ಅಸ್ತಮವಾಗಲಿ ರಮಣೀಯ ದ್ರಶ್ಯಕ್ಕೆ 
ಹೆಸರುವಾಸಿಯಾದ ಆಗುಂಬೆಯನ್ನು
ನೋಡಿದ್ದು ಇದೇ ಮೊಟ್ಟ ಮೊದಲು 
ಆಗುಂಬೆಯ ಪಶ್ಚಿಮ ಘಾಟ್
ಪರ್ವತ ಶ್ರೇಣಿಗಳ ಹಾಗೂ 
ಕಣಿವೆಗಳನ್ನು ಅವಾಕ್ಕಾಗಿ 
ನೋಡ್ತಾ ನೋಡ್ತಾ 
ಜಗವಿದು ಜಾಣ 
ಚೆಲುವಿನ ತಾಣ 
ಎಲ್ಲೆಲ್ಲೂ ರಸದೌತಣ 
ಹಾಡು ಏತೇಚ್ಚೆಯಾಗಿ ಗುಣ್ ಗುಣಿಸಲು
ಶಿವಮೊಗ್ಗ ಬಂದಿದ್ದು ಗೊತ್ತೇ ಆಗಲಿಲ್ಲಾ.. 
ಮಧ್ಯಾಹ್ನ ಎರಡು ಘಂಟೆ ಯಾಗಿತ್ತು.
ಬಸ್ಸಿಂದ ಇಳಿದು ಜೋಗ್ ಫಾಲ್ಸ್ ಗೆ 
ಹೋಗುವ ಬಸ್ಸ ಹುಡುಕಲು 
BRKM ಸರ್ವಿಸ್ ಬರೀ ಸಾಗರಕ್ಕಿತ್ತು 
ಸಾಗರ ದಿಂದ ದುರ್ಗಾ ಮೋಟಾರ್ ಸರ್ವಿಸ್ಸು 
ಜೋಗಫಾಲ್ಸ್ ಗೆ  ಸಂಜೆ ಆರು ಘಂಟೆಗೆ 
ಕೊನೆಯ ಬಸ್ಸು ಇದೇಂತ ಹೇಳಿದ ಮೇಲೆ 
ತಡ ಮಾಡದೆ
ಶಿವಮೊಗ್ಗ ಸಾಗರ ಬಸ್ಸ ಹಿಡಿದು ಕುಳಿತ್ತಿದ್ದಾಯ್ತು. 
ಟಿಕೆಟ್ ನೆನಸಿದ್ದಕ್ಕಿಂತಲೂ ದುಬಾರಿಯಾಗಿತ್ತು. 
ಈಗ ಬಂತು ಫಜೀತಿ 
ಕೈಲಿದ್ದ ಹಣ ಟಿಕೆಟ್ ಗೆ ಸರಿಯಾಗಿತ್ತು
ಅಂದ್ರೆ ಶಿವಮೊಗ್ಗ ದಿಂದ ಸಾಗರಕ್ಕೆ 
ಹೋಗುವ ಬಸ್ಸಿನ ಪ್ರಯಾಣಕ್ಕೆ ಸರಿ ಹೋಯ್ತು. 
ಜೇಬು ಎಲ್ಲಾ ಹುಡುಕಿ ನೋಡಿದ್ದಾಯ್ತು 
ಆಗ ಅರಿವಾಯ್ತು
ಎಲ್ಲೋ ಲೆಕ್ಕಾಚಾರ ಏರುಪೇರಾಗಿದೇಂತ
ಅಲ್ಲಿಂದ ಕಾರ್ಗಲ್ ಗೆ ಹೇಗೆ
ಹೋಗೋದು ಅನ್ನೋ ಹೊಸ ಚಿಂತೆ
ಮನವ ಕಾಡ ತೊಡಗಿತ್ತು. 
ಹಸಿವಿದ್ದೂ  ಊಟ ಮಾಡಲಿಲ್ಲ.
ಚಿಂತೆಯ ಸವಾರಿ, ಸೌಂದರ್ಯದ ಸವಾರಿಗಿಂತ
ಮಿಗಿಲಾಗಿತ್ತು
ಸೂಪರ್ ರೋಡು 
ಸೂಪರ್ ಸೀನರಿ 
ಯಾವದೂನುವೆ
ಪುಕ್ಕಲು ಮನಸ್ಸಿಗೆ ಸಾಂತ್ವನ ನೀಡಲಿಲ್ಲ.
ಡವ ಡವಾಂತ ಬಡ್ಕೊಳ್ಳುತಿದ್ದ ಹೃದಯಕ್ಕೆ 
ಗೊತ್ತೇ ಆಗಲಿಲ್ಲಾ ಸಾಗರದ  ಬಸ್ ಸ್ಟಾಂಡ್ ಬಂದಿದ್ದು. 
ಸಂಜೆ ಐದಾಗಿತ್ತು...
ಕೈಯಲ್ಲಿ ಲಗೇಜ್ 
ಕಿಸೆಯಲ್ಲಿ ಪೈಸೆ ಇಲ್ಲಾ
ಏನು ಮಾಡೋದೂಂತ ತೋಚಲಿಲ್ಲಾ
ಹೋಗಿ ಸೇರ್ತೀನೋ ಇಲ್ಲವೋ
ಆರು ಘಂಟೆ ಬಸ್ಸಿಗೆ ಹೋಗಬೇಕು 
ಯಾರಾದ್ರೂ ಪರಿಚಯದವ್ರು
ಸಿಕ್ರೆ ಅವರ ಸಹಾಯ ಕೇಳ ಹುದೂಂತ. 
ಸ್ಟ್ಯಾಂಡಲ್ಲಿ ದುರ್ಗಾ ಮೋಟಾರ್ ಸರ್ವಿಸ್ 
ಬಸ್ಸು ನಿಂತಿತ್ತು.  ನೋಡಿದೆ 
ಒಂದು ಹತ್ತು ಹನ್ನೆರಡು ಪ್ರಯಾಣಿಕರು ಇದ್ದಿರಬೇಕು.
ಪರಿಚಯದವರು ಯಾರೂ ಕಾಣೆ
ಕಂಡಕ್ಟರ್ ಕಾರ್ಗಲ್ ಜೋಗ ಹೋಗೋವ್ರು
ಬನ್ನಿ ಬನ್ನೀಂತ ಜೋರಾಗಿ ಅರುಚುತಿದ್ದ.
ಅವನ ಹತ್ತಿರ ಹೋಗಿ 
ಕಾರ್ಗಲ್ ಟಿಕೆಟ್ ಬೆಲೆಯೆಷ್ಟು ಅಂತ ಕೇಳ್ದೆ 
ಹದಿನೈದು ರೂಪಾಯಿಯೆಂದ. 
ಬರೀ ಹದಿನೈದು ರೂಪಾಯಿಗಾಗಿ 
ನನ್ನ ಪ್ರಯಾಣ ನಿಂತಿದೆ 
ಇನ್ನೂ ಮೂವತ್ತು ನಿಮಿಷಗಳಲ್ಲಿ 
ಬಸ್ಸು ನನ್ನನ್ನು ಬಿಟ್ಟು ಹೊರಟು ಬಿಟ್ರೆ 
ಯಾರೂ ಗೊತ್ತಿಲ್ಲದ
ಸಾಗರದಲ್ಲಿ ಏನು ಮಾಡಲಿ 
ಎಲ್ಲಿ ಉಳಿಯೋದು 
ಏನಾದ್ರೂ ಮಾಡಿ
ಹೇಗಾದ್ರೂ ಆ ಬಸ್ಸ ಹಿಡಿದು 
ಹೋಗಲೇಬೇಕಂತ ಹೋಗಿ 
ಕಂಡಕ್ಟರ್ ಗೆ ನನ್ನ ಕಷ್ಟ ಹೇಳಿದೆ 
ಎಲ್ಲವನ್ನು ಕೇಳಿದ ಆತ
ಸಾಧ್ಯ ಇಲ್ಲಾಂತ ಕೈಯ ಒದರಿದ.
ಮತ್ತೊಮ್ಮೆ ಅವನಿಗೆ ನಂಬಿಕೆ ಬರಲೀಂತ
ಕಾರ್ಗಲ್ ತಲುಪಿದ ತಕ್ಷಣವೇ 
ಸೋಡಾ ಫ್ಯಾಕ್ಟರಿ ರಮೇಶಣ್ಣ ನ ಕೇಳಿ 
ಬಸ್ ಸ್ಟಾಂಡ್ ನಲ್ಲೇ ಹಣ ಕೊಡ್ತೇನೇಂತ
ಹೇಳಿಯೂ ಆತ ಒಪ್ಪಿಕೊಳ್ಳಲಿಲ್ಲಾ.
ಕೈ ಕೈ ಯ ಬೆಸೆಯುತ್ತ ಅತ್ತ ಇತ್ತ ನೋಡತ್ತಲಿದ್ದೆ
ಆಗ ಅವರನ್ನ ನೋಡಿದೆ 
ಪೊಲೀಸ್ ಯುನಿಫಾರ್ಮ್ ನಲ್ಲಿ 
ಗಂಭೀರವಾಗಿ ಕೈಯಲ್ಲಿ ಲಾಠಿ ಯೊಂದಿಗೆ
ಬಸ್ ಸ್ಟ್ಯಾಂಡ್ ನೊಳಗೆ ನಡೆದು 
ಬರುತ್ತಿದ್ದದ್ದನ್ನು ಕಂಡೆ
ಅವರು ನಡೆದ ಹಾದಿಯಲ್ಲಿ ಜನರು 
ತಾವಾಗೇ ರಸ್ತೆ ಬಿಟ್ಟು 
ದೂರ ತಳ್ಳಿ ನಿಂತು ಕೊಂಡರು 
ಭಯದಿಂದಲೊ ಅಥವಾ ಗೌರವವೊ
ಏನೋ ಒಂದು ಮೊಂಡು ಧೈರ್ಯ, 
ಎಲ್ಲಿಂದ ಬಂತೋ ಏನೋ 
ಅವರ ಬಳಿ ಹೋಗಿ, 
ಸಾರ್ ಅಂತ 
ಶುರು ಮಾಡಿ 
ನನ್ನ ವಿಷಮ ಪರಿಸ್ಥಿತಿಯನ್ನು ವಿವರಿಸಿದೆ
ಒಮ್ಮೆ ತೀಕ್ಷಣ ವಾಗಿ ನೋಡಿ 
ನನ್ನಲ್ಲಿ ಏನ್ ಕಂಡ್ರೋ ಏನೋ
ಅವರ ಚಡ್ಡಿ ಜೇಬಿನಿಂದ ಪರ್ಸ್ 
ಒಂದ ತೆಗೆದು ಅದರಿಂದ ಹತ್ತು 
ರೂಪಾಯಿಯ ಒಂದು ನೋಟು 
ಐದು ರೂಪಾಯಿಯ ಇನ್ನೊಂದು ನೋಟು 
ಮೊತ್ತ ಹದಿನೈದು ರೂಪಾಯಿಗಳ ಕೊಟ್ಟು 
ಟಿಕೆಟ್ ತೆಗೊ ಹೋಗೋಂತ ಹೇಳಿದರು
ಧೈರ್ಯ ಮಾಡಿ ಕೇಳೇ ಬಿಟ್ಟೆ
ಸಾರ್  ನಿಮ್ಮ ಹೆಸರು ಸಾರ್ 
ಈ ಹಣ ನಾನು ಕಾರ್ಗಲ್ ಗೆ 
ಹೋದ ತಕ್ಷಣ ಮನಿ ಆರ್ಡರ್ 
ಮಾಡ್ತೇನೆ ಅಂದೆ.
ನನ್ನ ಹೆಸರು ಹೆಡ್ ಕಾನ್ಸ್ಟೇಬಲ್ ತಿಮ್ಮಪ್ಪ
ಮತ್ತೆ ನೀನು ಸಾಗರ ಬಂದಾಗ ಕೊಟ್ರೆ ಸಾಕು, 
ಅಂತ ಹೇಳಿ ಬೆನ್ನ ತಟ್ಟಿ ಬಸ್ಸಲ್ಲಿ ಹತ್ತಿಸಿ  
ಕಂಡಕ್ಟರ್ ಗೆ ಈ ಹುಡುಗನ್ನ
ಕಾರ್ಗಲ್ ಕಾಲೋನಿಯಲ್ಲಿ ಜಾಗ್ರತೆಯಾಗಿ
ಸೇರಿಸಿ ಅಂತ ಗುಡುಗಿದರು.
ನನಗರಿವಿಲ್ಲದೇನೆ
ಕಣ್ಣಂಚಿನಲಿ ಕಣ್ಣೀರ ಹನಿ 
ಕೈಗಳಲ್ಲಿ ನಡುಕ, ಭಾವುಕನಾದೆ
ಗದ್ಗದಿತನಾಗಿ ಅವರಿಗೆ ಮನಸ್ಸಾರೆ ಧನ್ಯವಾದಗಳ ಹೇಳಿ 
ಕಂಡಕ್ಟರ್ ಕೈಗೆ ಹದಿನೈದು ರೂಪಾಯಿಗಳನ್ನು ಕೊಟ್ಟೆ 
ಹಸಿರು ಬಣ್ಣದ  ಟಿಕೆಟ್ ಹರಿದು ಕೊಟ್ಟ.
ಕಾಲರ್ ಎತ್ತಿ, ಬಸ್ ಒಳಗೆ ಕಾಲಿಟ್ಟೆ
ಬಂದ ಬಿರುಸ್ಸಲ್ಲೇ ಅವರು ಅಲ್ಲಿಂದ ಹೊರಟು ಹೋದರು
ನನಗೋಸ್ಕರಾನೇ ದೇವರು ಕಳುಹಿಸಿ ಕೊಟ್ಟ
ಆಪತ್ಬಂಧು
ಸಂಜೆ ಏಳು ಘಂಟೆಗೆ ಕಾರ್ಗಲ್ ಕಾಲೋನಿ ತಲುಪಿದೆ.   
ನನ್ನ ಕಂಡು ಮನೆಯಲ್ಲಿ ಎಲ್ಲರಿಗೂ ಸಂತೋಷ, 
ನಾನೂ ಧೀರ್ಘವಾದ ನಿಟ್ಟುಸಿರ ಬಿಟ್ಟೆ.
ಅಮ್ಮನಿಗೆ ನಡೆದುದ್ದನ್ನು ವಿವರವಾಗಿ ಹೇಳ್ದೆ
ಆಗ ನಮ್ಮಮ್ಮ ನನ್ನ ಬಲ ಕೈಯ 
ಉಂಗುರದ ಬೆರಳಿಗೆ 
ಬಂಗಾರದ ಉಂಗುರವ ಹಾಕಿ 
ಇದು ಯಾವಾಗಲು ನಿನ್ನೊಡನಿರಲಿ 
ಯಾವ ಕಷ್ಟ ಬಂದರೂ
ಇದು ನಿನ್ನ ಕಾಪಾಡಲಿ. 
ಎಂದು ಹರಸಿದರು. 
ಅಪ್ಪ ತಿಮ್ಮಪ್ಪನ ವಿಳಾಸಕ್ಕೆ 
ಮನಿ ಆರ್ಡರ್ ಮಾಡಿದರು.
ಊರೂ ಹೆಸರೂ ಗೊತ್ತಿಲ್ಲದ
ಪರಿಚಯವೇ ಇಲ್ಲದ ಒಬ್ಬನಿಗೆ
ಸಹಾಯ ಮಾಡೋದು 
ಅದೂನೂವೆ ಆರ್ಥಿಕ ಸಹಾಯ ಮಾಡೋದು 
ಅನ್ನೋದು ವಿರಳ. 
ಏನೊಂದು ಅಪೇಕ್ಷೆಯು ಇಲ್ಲದೆ 
ಸಹಾಯ ಮಾಡಿದ
ಹೆಡ್ ಕಾನ್ಸ್ಟೇಬಲ್ ತಿಮ್ಮಪ್ಪ 
ಹ್ಯಾಗಾದ್ರೂ
ಅವರನ್ನ ಒಮ್ಮೆ ಖಂಡಿತವಾಗಲು
ನೋಡಲೇಬೇಕೆಂಬುದು ನನ್ನ ಇಚ್ಛೆ 
ಸೇವಾ ನಿವ್ರತ್ತನಾದ ನಂತರ 
ಆ ಇಚ್ಛೆ ಪ್ರಬಲವಾಗಿ
ಮೂರ್ತ ರೂಪ ಗೊಂಡಿತು
ಅಂದು ಮರೆಯಾದ ತಿಮ್ಮಪ್ಪ
ಮತ್ತೆ ಸಿಗ್ತಾರೋ ಇಲ್ಲವೋ
ಕೊನೆ ಪ್ರಯಾಸ.. (ವರ್ತಮಾನಕ್ಕೆ )
ಸಿಗಂದೂರಿಗೆ ಹೊರಟೆ...
ಸಾಗರ ಹಳೆಯ ಬಸ್ ಸ್ಟಾಂಡ್
ಬೆಳಗ್ಗೆ 9:00ಕ್ಕೆ ಪ್ರೈವೇಟ್ ಬಸ್ ಹತ್ತಿದೆ
ಸಿಗಂದೂರ್ ಎಕ್ಸ್ಪ್ರೆಸ್ ಅಂತ 
ಪ್ರೈವೇಟ್ ಬಸ್ಸು
ಸಾಗರದಿಂದ 42ಕಿಲೋಮೀಟರ್ ದೂರದಲ್ಲಿದ್ದ ಸಿಗಂದೂರ್
ಎರಡು ಘಂಟೆಯ ಪ್ರಯಾಣ.
ಸಿಗಂದೂರ್ ಗೆ ಬಸ್ ಹತ್ತಿದಾಗ 
ಹೇಳಿದ್ರು, 30 ಕಿಲೋಮೀಟರಷ್ಟೇ ರಸ್ತೆ ಪ್ರಯಾಣ.
ಅಲ್ಲಿಂದ ಮುಂದೆ ಬಸ್ಸು ಸರ್ವಿಸ್ ಇಲ್ಲಾಂತ. 
ಬಸ್ಸು ಹಟಾತ್ತನೇ ನಿಂತಂಗಾಯ್ತು 
ಅದಾಗಲೇ ಸಮಯ ಬೆಳಗ್ಗೆ ಹತ್ತಾಗಿತ್ತು
ಸಿಗಂದೂರ್ ಹೋಗೋವ್ರು 
ಇಲ್ಲೇ ಇಳಿದು ಕೊಳ್ಳಿಂತ ಕೂಗಿದ.
ಇಳಿದದ್ದು ಹೊಳೆ ಬಾಗಿಲು ಗ್ರಾಮ .
ಇಳಿದು ನೋಡಿದರೆ ಎಲ್ಲೆಡೆ 
ನೀರೇ ನೀರು 
ಶರಾವತಿ ನದಿಯ 
ಸಾಗರದ ಕಡೆಯ ತಟದಿಂದ
ದೂರದಲ್ಲಿದ್ದ ಮತ್ತೊಂದು ತಟ
ಕಾಣಿಸಿತು ಒಂದು ಪರ್ಯಾಯ ದ್ವೀಪ 
ಸಿಗಂದೂರ್ 
ಮೂರೂ ಕಡೆ ಶರಾವತಿ 
ನದಿಯ ನೀರು, 
ನೆಲ ಮತ್ತೊಂದು ಕಡೆ 
Barge ಒಂದು ಶರಾವತಿ ನದಿಯ
ಹಿನ್ನೀರನ್ನು ಪಾರು ಮಾಡಲು 
ನನಗಾಗಿಯೇ ಕಾದಿದ್ದಂಗೆ ತಯಾರಾಗಿತ್ತು
ಶರಾವತಿ ನದಿಯ ವಿರುದ್ಧ 
ಲಿಂಗನಮಕ್ಕಿ ಆಣೆಕಟ್ಟಿದ ಮೇಲೆ 
ಹಲವಾರು ಗ್ರಾಮಗಳು,
ಗದ್ದೆ, ತೋಟಗಳು
ನೀರಿನಡಿ ಮುಳುಗಿದವು 
ಆವಾಗಮನ ಅವರುದ್ದ ವಾಗಿ 
ಸಿಗಂದೂರ್ ಮತ್ತೆ ಸುಮಾರು 
42 ಗ್ರಾಮಗಳ ಸಂಪರ್ಕ 
ಸಾಗರದಿಂದ ಕಡಿದು ಹೋಯಿತು.
ಈಗ ಕರ್ನಾಟಕ ಸರ್ಕಾರದ 
ಬಂದರು ಮತ್ತೆ ಜಲಸಾರಿಗೆ 
ಇಲಾಖೆಯ ದ್ವಾರ 
ಬೆಳಗ್ಗೆ 8.00 ರಿಂದ
ಸಂಜೆ 5.00ಘಂಟೆಯ ವರೆಗೆ
Barge ಸರ್ವಿಸ್ ನಿಂದ ಸಂಪರ್ಕ
ಮತ್ತೊಮ್ಮೆ ಸ್ಥಾಪಿಸಲಾಗಿತ್ತು.
ಇದರಲ್ಲಿ ಯಾತ್ರಿಗಳಲ್ಲದೆ 
ಬಸ್, ಜೀಪ್, ಕಾರು
ಮೋಟಾರ್ ಸೈಕಲ್ಗಳ ಹೊತ್ತು 
ಸುಮಾರು
ಒಂದೋ ಒಂದೂವರೇನೋ ಕಿಲೋಮೀಟರಷ್ಟು ದೂರದ
ಅರ್ಧ ಘಂಟೆ ಯ ಸವಾರಿ
             ಲಿಂಗನಮಕ್ಕಿ ಜಲಾಶಯದ ಹಿನ್ನೀರು
ಆಳವಾದ ಹಸಿರು ನೀಲಿ ಬಣ್ಣ
ಮಿಶ್ರಿತ ನದಿಯ ನೀರಿನ ಮೇಲಿನ
ಈ ಪ್ರಯಾಣ ಮರೆಯಲಾಗದ 
ಒಂದು ಅಭೂತಪೂರ್ವ ಅನುಭವ
ಇತ್ತ ಲಿಂಗನಮಕ್ಕಿಯ ಜಲಾಶಯವ 
ತುಂಬಿ ನಿಂತ ಹಿನ್ನೀರು 
ಅತ್ತ 
ಜಲಾಶಯದಿಂದ ಹರಿವ ನದಿ
ಒಂದು ಜೋಗದ ಜಲಪಾತಕ್ಕೂ
ಇನ್ನೊಂದು ಜಲ ವಿದ್ಯುತ್ ಕೇಂದ್ರಕ್ಕೂ
ಇವೆರಡರ ನಡುವೆ
ನಮ್ಮೂರು 
ಕಾರ್ಗಲ್ ಕಾಲೋನಿ
ನಾನು ಓದಿ ಬೆಳೆದ ಊರು...
ನನಗಂತೂ ಆಶ್ಚರ್ಯದ ಮೇಲೆ ಆಶ್ಚರ್ಯ.
ಸಿಗಂದೂರ್ ಎಲ್ಲೋ ಸಿಂಗಪೂರ್
ತರಹ ಅಂತ ಅಂದುಕೊಂಡಿದ್ದೆ.
ಜಲಾಶಯ,  ಮುಳುಗಿದ ಗ್ರಾಮಗಳು
ಮೇಲ್ ದಂಡೆಯ ಬಗ್ಗೆ
ನನಗೇಕೆ ಇದರ ಬಗ್ಗೆ ಏನೂ ಗೊತ್ತಿರಲಿಲ್ಲ
ಯಾರೂ ಹೇಳಿರಲಿಲ್ಲಾ
ಶರಾವತಿ ನದಿಯ ಜಲಾಶಯವ
ಪಾರು ಮಾಡಿ Barge ನಿಂದ
ಕಳಸವಳ್ಳಿ ಗ್ರಾಮ ಬಂದಿದ್ದು
ಗೊತ್ತೇ ಆಗಲಿಲ್ಲಾ
ಅಲ್ಲಿಂದ
ಜೀಪಿನ ಮೂಲಕ  ಹತ್ತು ಕಿಲೋಮೀಟರು
ಪ್ರಯಾಣ ಮಾಡಿದರೆ 
ತುಮರಿ ಗ್ರಾಮ ಅದನ್ನ ಅಂಟಿಕೊಂಡ
ಸಿಗಂದೂರ್ ಬಂದೇ ಬಿಡ್ತು
ಸ್ವಲ್ಪ ದಟ್ಟವಾದ ಕಾಡು
18ನೇ ಶತಮಾನದ
ದೇವಿ ಚೌಡೇಶ್ವರಿಯ ಪ್ರಸಿದ್ಧ ದೇವಸ್ಥಾನ 
ಸಿಗಂದೂರಿಯೇಶ್ವರಿ ಎಂದೂ ಪ್ರಬಲ.
ಶ್ರೀ ಕ್ಷೇತ್ರ, ಶಕ್ತಿ ಕೇಂದ್ರವಾಗಿ ಪೂಜಿಸಲು
ಭಕ್ತರ ಶ್ರದ್ದೆ ಹೆಚ್ಚಾಯಿತು.
ಅದರ ಹೆಬ್ಬಾಗಿಲ ಮುಂದೆ ನಿಂತು
ದೇವಿ ದರ್ಶನ ಮುಗಿಸಿ ಮತ್ತೆ ತಿಮ್ಮಪ್ಪನ
ಹುಡುಕುವ ಕಾರ್ಯ ಕೈಗೆತ್ತಿ ಕೊಂಡೆ.
ತಿಮ್ಮಪ್ಪನವರ ಮನೆ 
ಹಳೆಯ ದೇವಸ್ಥಾನದ ಹಿಂದೆ ಇರುವ
ಬೀದಿಯಲ್ಲಿದೆ ಎಂದು ದೇವಸ್ಥಾನದ
ಪೂಜಾರಿ ತಿಳಿಸಿದರು. ಎಲ್ಲವೂವೆ
ಸ್ವಲ್ಪ ಅಪರೂಪ,ಅಸಹಜ,ಆಕಸ್ಮಿಕ 
ಆದ್ರುವೇ ಒಂದು ಸಮಾನತೆ ಕಂಡು ಬಂತು
ಚೌಡೇಶ್ವರಿ ದೇವಿ
ದುಷ್ಟರ ದಂಡಿಸುತ್ತಾಳೆ, 
ಅದಕ್ಕಾಗಿಯೇ ಸಿಗಂದೂರಲ್ಲಿ
ಕಳ್ಳ ಕಾಕರಿಂದ ಊರನ್ನು ಮುಕ್ತ ಮಾಡಿ
ಮತ್ತೆ ತನ್ನನ್ನು ನಂಬಿ ಮೊರೆ ಹೋದವರಿಗೆ
ಅಲ್ಲೇ ನೆಲಸಿ ನ್ಯಾಯವ ನೀಡುತ್ತಾಳೆ 
ಎಂದು ವಿಶ್ವಾಸ, ಅದಕ್ಕೇ 
ಚೌಡೇಶ್ವರಿ ಅಂದ್ರೆ ಭಯ, ನಡುಕ.
ನಮ್ಮ ಹೆಡ್ ಕಾನ್ಸ್ಟೇಬಲ್ ತಿಮ್ಮಪ್ಪನವರು
ಸಹ ಕಳ್ಳ ಕಾಕರಿಗೆ ಸಿಂಹಸ್ವಪ್ನ
ಅವರನ್ನು ಕಂಡರೆ ಹೆದರಿಕೆ, 
ತಪ್ಪಿತಸ್ತರಿಗೆ ತಕ್ಕ ದಂಡನೆ 
ತಪ್ಪು ಒಪ್ಪಿಗೆಗೆ ಅವರ ಒಂದು 
ನೋಟವೇ ಸಾಕು. 
ಸಿಗಂದೂರ್ ದೇವಿ ಚೌಡೇಶ್ವರಿಯ ದೇವಸ್ಥಾನ 
ಅದರ ಹಿಂದಿನ ಬೀದಿಯಲ್ಲಿ 
ಹೆಡ್ ಕಾನ್ಸ್ಟೇಬಲ್ ತಿಮ್ಮಪ್ಪ ನವರ ಮನೆ.
ಹೆಂಚಿನ ಮನೆ, ತೋಟ, 
ಹಿಂಬದಿ ಅಡಿಕೆ ಮರಗಳ ತೋಪು 
ಹೊರ ಆಂಗಣದಲ್ಲಿ 
ಒಂದು ಮರದ ಕುರ್ಚಿಯಲ್ಲಿ ವಿರಾಜಿಸಿದ್ದರು.
ಶುಭ್ರವಾದ ಬಿಳಿಯ ಪಂಚೆ
ಬಿಳಿಯ ಜುಬ್ಬಾ
ಬಿಳುಪಲ್ಲಿ ಅದಕ್ಕೂ ಮಿಗಿಲಾದ
ತಲೆಯ ಕೂದಲು  ಸುಣ್ಣದ ಬಿಳಿ
ಗೆರೆ ಬಿದ್ದ ತೇಜಸ್ಸಿನ ಮುಖ
ಅದೇ ಠೀವಿ, ಅದೇ ಗತ್ತು,
ನಮ್ಮ ಹೆಡ್ ಕಾನ್ಸ್ಟೇಬಲ್ 
ತಿಮ್ಮಪ್ಪನವರಿಗೆ ಒಂದು
ಎಂಬತ್ತು ಎಂಬತ್ತೈದು 
ತುಂಬಿರಬೇಕೂಂತ ಅನಿಸುತ್ತೆ.
ವಯಸ್ಸು ಒಂದು ಸಂಖ್ಯೆ ಅಷ್ಟೇ
ನಾನು ಅವರ ಮುಂದೆ ಹೋಗಿ ನಿಂತೆ
ಅವರು ಗುರುತು ಹಿಡಿಯಲಿಲ್ಲ. 
ಅವರಿಗೆ ನಾನೊಬ್ಬ ಸೇವಾ ನಿವೃತ್ತ
IAS ಅಧಿಕಾರಿಯೆಂದು ಪರಿಚಯ ಮಾಡಿಕೊಂಡೆ.
ಅವರಿಗೆ ಸಾಗರದ ಹಳೆಯ ನೆನಪುಗಳನ್ನು ಜ್ಞಾಪಿಸಿದೆ 
ಮತ್ತೆ ಅವರು ಮಾಡಿದ ಧನಸಹಾಯಕ್ಕೆ 
ಧನ್ಯವಾದಗಳ ಅರ್ಪಿಸಿ 
ಬೆಂಗಳೂರಿಂದ ತಂದಿದ್ದ 
ಗಂಧದ ಮಾಲೆಯ ಹಾಕಿ 
ಆಶೀರ್ವಾದ ಪಡೆದುಕೊಂಡೆ. 
ಎದುರಿಗೇ ಇದ್ದ ಕುರ್ಚಿ ಯಲ್ಲಿ ಕುಳಿತುಕೊಳ್ಳಲು ಹೇಳಿದರು.
ಔಪಚಾರಿಕೆಯ ಮಾತುಕತೆಗಳು
ನಂತರ ಸಿಗಂದೂರ್ ದೇವಿ ಚೌಡೇಶ್ವರಿಯ ಸ್ಥಳ ಪುರಾಣ ಶ್ರೀ ಕ್ಷೇತ್ರದ
ಇತಿಹಾಸವನ್ನು  ವಿವರವಾಗಿ ಹೇಳಿದರು
ಮಧ್ಯಾಹ್ನ ಒಂದು ಘಂಟೆ ಯಾಗಿತ್ತು. 
ಅವರು ಮನೆಯಲ್ಲಿ ಊಟಕ್ಕೆ ಆಹ್ವಾನಿಸಿದಾಗ 
ಇಲ್ಲವೆಂದು ಹೇಳಲು ಸಂಕೋಚಿಸದೆ 
ಹೌದು ಎಂದು ಒಪ್ಪಿದೆ
ಸಿಗಂದೂರ್ ನಲ್ಲಿ ಒಳ್ಳೆಯ 
ಹೋಟೆಲ್ ಇಲ್ಲದಿದ್ದದ್ದು ಇನ್ನೊಂದು ಕಾರಣ
ಅವರು ಶ್ರೀಮತಿ ಸುಶೀಲಮ್ಮನವರ
ಪರಿಚಯ ಮಾಡಿದರು.
ಬಾಳೆಲೆಯ ಮೇಲೆ ಬಿಸಿಬಿಸಿ ಅನ್ನವನ್ನು
ಬಡಿಸಿದರು, ಸೌತೆಕಾಯಿ ತಂಬುಳಿ 
ಮಾವಿನ ಮಿಡಿ, ಭರ್ಜರಿ ಕಾಂಭೋ
ಮತ್ತೊಮ್ಮೆ ಅವರ ಋಣಿಯಾದೆ.
ಊಟವ ಮುಗಿಸಿ 
ಅವರನ್ನು ಬೆಂಗಳೂರು ಬರಲು ಆಹ್ವಾನಿಸಿದೆ. 
ಅವರಿಗೆ ನಾನು ಬಂದು ಭೇಟಿಯಾಗಿದ್ದು  
ಸಂತೋಷವ ನೀಡಿತೋ ಏನೋ 
ಆಗಾಗ ಬರ್ತಾ ಇರೀಂತ ಹೇಳಿದರು
ಆತ್ಮೀಯರೊಬ್ಬರನ್ನು ಅಗಲಿಹೋಗುವ ಅನುಭವ
ಒಲ್ಲದ ಮನಸ್ಸಿನಿಂದ ಹೊರಡಲು ಅನುವಾದೆ.
ಅಪರಾಹ್ನ 3ಘಂಟೆಯಾಗಿತ್ತು
ಸಿಗಂದೂರ್ ನಿಂದ ಈಗ ಹೊರಟರೆ 
ಸಾವಕಾಶವಾಗಿ ಕಳಸವಳ್ಳಿಯ ಸೇರಿ
ಸಂಜೆ 5 ಕ್ಕೆ ಮುಂಚೆ Barge ಹತ್ತಿ 
ಹೊಳೆಬಾಗಿಲಿನಲ್ಲಿ ಬಸ್ ಹಿಡಿದು 
ಸಾಗರ ತಲುಪಿ ರಾತ್ರಿ 10 ಘಂಟೆಗೆ  
KSRTC ಯ ಡೀಲಕ್ಸ್ ಬಸ್ ಹಿಡಿದು ಬೆಂಗಳೂರು 
ಮರುದಿನ ಬೆಳಗ್ಗೆ ಸೇರುವ ಪ್ಲಾನ್.
ಮನಸ್ಸು ಹೆಡ್ ಕಾನ್ಸ್ಟೇಬಲ್ ತಿಮ್ಮಪ್ಪ ರನ್ನ
ಭೇಟಿಯಾದ ಸ್ಮರಣೆ ಯನ್ನು ಮೆಲಕು ಹಾಕುತಿತ್ತು 
ಸರಿಯಾಗಿ ಸಂಜೆ 4 ಘಂಟೆಗೆ 
ಕಳಸವಳ್ಳಿ ಯಲ್ಲಿ barge ಹತ್ತಿ 
ನದಿಯ ಮೇಲಿನ ಪ್ರಯಾಣ 
ಪ್ರಾರಂಭವಾಯ್ತು.
ತಂಪಾದ ತಂಗಾಳಿ ಮೈಯ ಸೋಂಕಿ 
ಹಿತವಾದ ಸಂಜೆಯ ಬಿಸಿಲು 
ನೀರ ಮೇಲೆ ಹೊಂಗಿರಣ ಗಳ ಬೀರಿ 
ಹೊಸ ಲೋಕಕ್ಕೆ  ಕರೆದುಕೊಂಡು ಹೋದ ಹಾಗಿತ್ತು
ಈ ಪ್ರಯಾಣ ಹೀಗೇ ಸಾಗುತ್ತಾನೆ ಇರಲಿ
ಮಂಗಳೂರಿನಿಂದ ಕಾರ್ಗಲ್ 
ಮತ್ತೆ ಬೆಂಗಳೂರಿನಿಂದ ಸಿಗಂದೂರ್
ಒಂದಕ್ಕೊಂದು ಹಮ್ಮಿ ಕೊಂಡು 
ಮರೆಯಲಾಗದ ಪ್ರಯಾಣದ 
ಅನುಭವವನ್ನು ನೀಡಿತು....
ಕುಟುಂಬ ಸಮೇತ ಮತ್ತೊಮ್ಮೆ
ಸಿಗಂದೂರಿಯೇಶ್ವರಿ ದರ್ಶನ,
HC ಶ್ರೀಯುತ ತಿಮ್ಮಪ್ಪನವರ ಭೇಟಿ
ಮಾಡಲು ಸಿಗಂದೂರ್ ಪ್ರಯಾಣ
ಖಂಡಿತವಾಗಲು.... ಜಾರಿ ಇರುತ್ತೆ. 
ಫಿಶರೀಸ್ ಕಾಲೇಜಿನ ಮಿತ್ರರಾದ
ಮಂಜು, ವಿಜಯ್ ಸುಧೀರ ಅಶ್ವಥ್ 
ನಾವೆಲ್ಲರೂ ಸೇರಿ ಹಾಡಿದ 
ದೋಣಿ ಸಾಗಲಿ
ಮುಂದೆ ಹೋಗಲಿ
ದೂರ ತೀರವ ಸೇರಲಿ ಹಾಡು ತಾನಾಗೇ
ಮನಸ್ಸಿನಾಳದಲ್ಲಿ ಕೇಳ ಬಂತು
ಕುವೆಂಪು ರವರ ಈ ಸುಂದರ ಕವನ
ಪೂರ್ತಿ ಸಾರವ ಹಿಂಡಿ ಕೊಟ್ಟಿತ್ತು
ನಾವು ಲೀಲಾ ಮಾತ್ರ ಜೀವರು
ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ, ಇಂದು ಇಂದಿಗೆ, 
ಇರಲಿ ನಾಳೆಯು ನಾಳೆಗೆ...


 
ಜೂಲೈ 2025 ರಂದು ಹೊಳೆಬಾಗಿಲಿನಿಂದ
ಕಳಸವಳ್ಳಿಗೆ ಹೊಸ ಸೇತುವೆಯ ಲೋಕಾರ್ಪಣ ಈಗ barge ಮೂಲಕ ಹೋಗುವ ಅವಶ್ಯಕತೆ ಇಲ್ಲಾ.
ವಿಹಂಗಮ ದ್ರಶ್ಯಕ್ಕೆ ವಿಕಾಸದ ದ್ರಷ್ಟಿ ಬೊಟ್ಟು.



ಕಾಮೆಂಟ್‌ಗಳು

  1. Excellent write up which broughtmemoirs of the incidents happened 50 years back..the description of the the reality of each n everstep is comnandable whovh happens that you are also traveling along.Your words of kannada isexceptinally Outstanding n many worded am reading first time as north karnataka languais completely different. Overall it's SPICY FOR READER

    ಪ್ರತ್ಯುತ್ತರಅಳಿಸಿ
  2. My eyes teared. INCESSANTLY. For the love of gratitude in your having flowed over the pages. Your heart extended into the fingers to narrate it's deep depth. Sir, Lucky to have been in the group to have savored your unfathomable knowledge, wisdom, scripting ವೈಖರಿ. ನನಗೆ ಆನಂದ ಭಾಷ್ಪವ ಅನುಗ್ರಹಿಸಿದ ತಮಗೆ ನಾನೆಷ್ಟು ೞುಣಿಎಂದು ನಾನೇ ಅಳೆಯಲಾರೆ. ಸದಾ ಕ್ರುತಙ್ಞ. Truly a great read. Please check which year you took to this journey. Was ir 2022 or 2025? Or did I understand correctly: that you planned to meet that super soul HC ತಿಮ್ಮಪ್ಪ ನವರು in 2022 but traveled in 2025! Very best Regards, Ramaiah..

    ಪ್ರತ್ಯುತ್ತರಅಳಿಸಿ
  3. ತೃಟಿ ಸರಿಪಡಿಸಿದ್ದಾಯ್ತು
    2022 ರ ಡಿಸೆಂಬರ್ ತಿಂಗಳಲ್ಲಿ ಭೇಟಿಯಾಗಿದ್ದು

    ಪ್ರತ್ಯುತ್ತರಅಳಿಸಿ
  4. ನಿವೃತ್ತಿಯ ನಂತರ ಒಂದು ಕಷ್ಟಕರ ಸನ್ನಿವೇಶದಲ್ಲಿ ಸಹಾಯ ಮಾಡಿದ ವ್ಯಕ್ತಿಯನ್ನು ಹುಡುಕುತ್ತ ಹೊರಟ ಸುಂದರ ಚಿತ್ರಣ ಈ ಬ್ಲಾಗ್. ಓದಲು ಕುಳಿತಾಗ ಬ್ಲಾಗ್ನ ವಿಸ್ತಾರದ ಬಗ್ಗೆ ಒಮ್ಮೆ ಕಣ್ಣಾಯಿಸಿದೆ . ಸೂರಿ ಇಷ್ಟೊಂದು ದೊಡ್ಡದಾಗಿ ಬರೆದಿದ್ದಾರೆಂದು ಓದಲು ಕುಳಿತೆ. ಕಥೆಯ ಕೊನೆ ಬಂದಿದ್ದೇ ತಿಳಿಯಲಿಲ್ಲ. ಎಂದಿನಂತೆ ಸೂರಿಯವರು ಬರೆಯುವ ಶೈಲಿ ಅಮೋಘ. ಸೂರಿಯವರು ಕಾರ್ಗಲ್ ಸುತ್ತಮುತ್ತ ಕಳೆದ ದಿನಗಳು, ಸಿಗಂದೂರ ಹಿಂನೀರಿನ ಸೌಂದರ್ಯ, ತಿಮ್ಮಪ್ಪನವರ ವ್ಯಕ್ತಿತ್ವ ಎಲ್ಲವೂ ರಸದೂತಣದಂತೆ ಸುಂದರವಾಗಿ ಮೂಡಿ ಬಂದಿದೆ. ಇಷ್ಟೊಂದು ಸವಿಸ್ತಾರದ ಚಿತ್ರಣಕ್ಕೆ ಸೂರಿಯವರಿಗೆ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  5. Thank you Sir. Additional information n photo of Sigandhur Bridge connects to the present as well. PLEASE enrich us from your knowledge fountain.

    ಪ್ರತ್ಯುತ್ತರಅಳಿಸಿ
  6. It is so gratifying to read a journey filled with so much gratitude and warmth. Through your writing, we as readers were also able to deeply feel the gratitude to ತಿಮ್ಮಪ್ಪ ರವರು. We felt emotional when you were emotional, we felt anxious when you were anxious, and we felt that beautiful relief mixed with gratitude when you met ತಿಮ್ಮಪ್ಪ ರವರು. We were so much tied to the story that every emotion was felt by us just as intensely as you experienced it. This is truly the best incident so far that can be quoted as a reminder of never forgetting to be grateful. Thank you for sharing this piece of emotional gratitude — it touched the heart in the most sincere and unforgettable way. ✨🙌

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.