avasheshagalu
ಬೆಂಗಳೂರು- ತಾಳಗುಪ್ಪ ಎಕ್ಸ್ ಪ್ರೆಸ್
ಮುಂಜಾನೆ 7:30ಕ್ಕೆ ತಾಳಗುಪ್ಪ ರೈಲ್ವೆ ಸ್ಟೇಷನ್ ತಲುಪಿತು. ರೈಲು ಗಾಡಿಯಿಂದ ಇಳಿದ ಪ್ರಭಾಶಂಕರ್,ವಿನುತಾ,
ಹೊರಬಂದು,
ತಾಳಗುಪ್ಪ ದಿಂದ ಜೋಗ್ ಫಾಲ್ಸ್ ಗೆ
ಹೋಗುವ BRKMS ಬಸ್ಸು ಹತ್ತಿದರು.
ಶಿವಮೊಗ್ಗ-ಹೊನ್ನಾವರ ರಾಜ್ಯ ಹೆದ್ದಾರಿಯ
ಹಿಡಿದು ಬಚ್ ಗಾರ್ ಘಾಟಿ
ಗಣೇಶಂಗೆ ಕೈ ಮುಗಿದು,
ಕಾರ್ಗಲ್ ದಾಟಿ
ಅರ್ಧ ಕಿಲೋಮೀಟರ್ ಪಯಣಿಸಿದರೆ,
ಒಂಟಿ ಮನೆ ಸರ್ಕಲ್,
ಬಂತೂಂತ ಕಂಡಕ್ಟರ್ ಹೇಳ್ದಾಗ,
ನಿಂತ ಬಸ್ಸಿಂದ ಪ್ರಭಾ ಶಂಕರ್ ಮತ್ತೆ
ವಿನುತ ಇಳಿದರು. ಇಳಿದು ಬಂದ
ವಿನುತಳ ಕಿವಿಯಲ್ಲಿ ಏನೋ ಹೇಳಿದ,
ಕುಳಕ್ ಅಂತ ಆಕೆ ನಕ್ಕಳು.
ಕೈ ಗಡಿಗಾರವ ನೋಡಿದ
ಬೆಳಗ್ಗೆ ಹತ್ತಾಗಿತ್ತು.
ಎಷ್ಟೆಲ್ಲಾ ಕಷ್ಟ ಪಟ್ಟು ಓದಿ
ಇನ್ಕಮ್ ಟ್ಯಾಕ್ಸ್ ಆಫೀಸರ್
ಆದ್ರೂವೆ, ಇನ್ನೂ
ಊರಲ್ಲಿರೋರು
ಒಂಟಿ ಮನೆ ಪ್ರಭಾ ಶಂಕರ್ ಅಂತ
ಕರೀತಾ ಇದ್ದಿದ್ದು ಅವನ ಹೆಸರೊಟ್ಟಿಗೆ
ಒಂಟಿ ಮನೆ ಅಂಟಿಕೊಂಡಿದ್ದು,
ಒಂದು ತರಹ ವಿಡಂಬನೆ.
ಒಮ್ಮೆಸುತ್ತ ಮುತ್ತ ನೋಡಿದ,
ಕವಲು ದಾರಿ,
ಜೋಗದ ಜಲಪಾತಕ್ಕೆ ಕರೆದೊಯ್ಯುವ
ರಸ್ತೆ ಒಂದಾದರೆ, ಇನ್ನೊಂದು ರಸ್ತೆ
ವೊಡನ್ ಬೈಲು ಸುರಂಗದ ಕಾಲುವೆಗೆ
ಕರೆದೊಯ್ಯುವ ರಸ್ತೆ ಯಾಗಿತ್ತು.
ಈ ಎರಡು ರಸ್ತೆಗಳು ಬೇರೆ ಬೇರೆಯಾಗುವ
ವ್ರತ್ತದ ಎದುರಿಗೇ ಸ್ವಲ್ಪ ಎತ್ತರದಲ್ಲಿ ಇತ್ತು,
ಆ ಒಂಟಿ ಮನೆ.
ಫಾರೆಸ್ಟ್ ಜಮೀನಿನಲ್ಲಿ
ಆ ಮನೆ ಕಟ್ಟಿದಾಗ
ಫಾರೆಸ್ಟ್ ಕಾನೂನಿನ ಯಾವೊಂದು
ನಿರ್ಭಂಧವೂ ಇರಲಿಲ್ಲಾ.
ಅಕ್ಕಪಕ್ಕದಲ್ಲಿ ಬೇರೆ ಯಾವುದೇ
ಮನೆಗಳು ಇರಲಿಲ್ಲಾ.
ಇತ್ತೀಚಿಗೆ
ಹಲವಾರು ಮನೆಗಳು,
ಟೀ,ಕಾಪಿ ಜೊತೆಗೇ
ದಿನಸಿ ಮಾರುತಿದ್ದ ಜೋಪಡಿ
ತರಕಾರಿ ಸುಬ್ಬಮ್ಮನ ಅಂಗಡಿ
ನಾಯಿ ಕೊಡೆಗಳ ತರಹ
ವ್ರತ್ತದ ಸುತ್ತಮುತ್ತಾ ಹುಟ್ಟಿಕೊಂಡವು.
ಸದ್ಯಕ್ಕೆ ಮನೆ ಮುಂದೆ ಕಾಣಿಸೋ
ಹಲಸಿನ ಮರ, ಕೈಗೆಟುಕುವ
ದೂರದಲ್ಲಿ ಮರವ ಹಬ್ಬಿ
ಜೋತು ಬಿದ್ದ ಹಲಸಿನ ಕಾಯಿಗಳು
ಮನೆ ಮುಂದೇನೆ ಭಾವಿ.
ಬೂದಿ ಬಣ್ಣದ ಬಾಗಿಲಮೇಲೆ
ಪ್ಲಾಸ್ಟಿಕ್ ಹೆಸರು ಪಟ್ಟಿ
ಪ್ರಭಾಶಂಕರ್ಂತ.
ಕದ ತಟ್ಟುವ ಮುಂಚೇನೇ
ಬಾಗಿಲ ತೆರೆದು
ಬಾ ಕಂದ ಬಾ..
ಅಂತ ಕಾಲಿಗೆ ಬಿದ್ದ ಸೊಸೆ ಮತ್ತು ಮಗನನ್ನ
ತಬ್ಬಿಕೊಂಡಳು ಸುಶೀಲಮ್ಮ
ಕುರ್ಚಿಯಿಂದ ಎದ್ದ ಅಪ್ಪ ಪ್ರಭು
ಪ್ರಭಾಶಂಕರನ ಕೈ ಹಿಡಿದು ಕೊಂಡರು,
ಆ ಒಂದು ಸ್ಪರ್ಶದಲ್ಲಿ ಮತ್ತೆ
ಸೊಸೆ ವಿನುತಳನ್ನು ಹೇಗಿದ್ದೀಯಮ್ಮ
ಎಂದು ಕೇಳುವದರಲ್ಲಿ
ಎಲ್ಲಾ ಭಾವನೆಗಳು ಅಡಗಿತ್ತು.
ಆಗಾಗ ಬೆಂಗಳೂರಿಂದ ಬಂದು ಅಪ್ಪನ್ನ,
ಅಮ್ಮನ್ನ ಕಂಡು, ನೋಡಿ ಹೋಗುತ್ತಿದ್ದರೂ
ಈ ಸಲ ಬಂದಿದ್ದು ಸ್ವಲ್ಪ ವಿಶೇಷ
ಯಾಕೇಂದ್ರೆ ಅರವತ್ತು ವರ್ಷ ತುಂಬಿ
ಸೇವಾನಿವ್ರತ್ತನಾದ ಮೇಲೆ
ಒಂಟಿ ಮನೆಯನ್ನು ಖಾಲಿ ಮಾಡಿ
ಅಮ್ಮ, ಅಪ್ಪ ನ್ನ ಬೆಂಗಳೂರಿಗೆ
ಕರೆದುಕೊಂಡು ಹೋಗಲು
ಪತ್ನಿ ಸಮೇತ ಬಂದಿದ್ದ.
ಅರವತ್ತೇ ಆದರೂ
ಅಮ್ಮಂಗೆ
ಮಗ ಕಂದಾನೇ
ಮಗನಿಗೆ ಅಮ್ಮ ಅಮ್ಮಾನೇ
ಹೇಗೆ ಉರುಳಿ ಹೋಯಿತೋ
ದಿನಗಳು,ವಾರಗಳು,ತಿಂಗಳುಗಳು,
ವರ್ಷಗಳು, ದಶಕಗಳು
ಅರವತ್ತು ವರ್ಷಗಳ ಹಿಂದೆ
ನಡೆದಿದ್ದು,
ಅಂದ್ರೆ 1961ರ
ಜನವರಿ ತಿಂಗಳು ಇರಬೇಕು.
ದಿಢೀರ್ಂತ ಇದ್ದಕಿದ್ದ ಹಾಗೇ
ಗ್ರಾಮದಲ್ಲಿದ್ದ ಮನೆ
ಖಾಲಿ ಮಾಡಬೇಕೆಂಬ ನೋಟೀಸು
ಕಂದಾಯ ವಿಭಾಗದ ತಲಾಟಿ
ತಾಕೀತು ಮಾಡಿ,
ಅದರ ಪ್ರತಿ ಒಂದನ್ನ
ಬಾಗಿಲ ಮೇಲೆ ಅಂಟಿಸಿ ಹೋದ.
ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆಯ
ಇದಕ್ಕೆ ಮುಂಚೆ ಯಾರೂ ಕೇಳದ
ಯಾರ ತಗಾದೆಗೂ ಹೋಗದ
ಶರಾವತಿ ನದಿಯ ಎಡದಂಡೆಯ
ಮೇಲಿದ್ದ ಸುಂದರವಾದ
ಪುಟ್ಟ ಗ್ರಾಮವೇ
ತಲೆಕಳಲೆ ಗ್ರಾಮ.
ಶರಾವತಿ ನದಿಯ
ಅಡ್ಡಗಟ್ಟಿ ಜಲಾಶಯ ನಿರ್ಮಾಣಕ್ಕೆ
ಪ್ರಯುಕ್ತವಾದ ಜಮೀನು ಅರ್ಜಿತ
ಮಾಡಲಿದ್ದಾರೆಂದು ಉಲ್ಲೇಖಿಸಿ
ಅಂಟಿಸಿದ್ದೇ ಆ ಸೂಚನಾ ಪತ್ರ
ನಾಲಕ್ಕು ಬೀದಿ ಹಾಗೂ
ಒಂದಿಪ್ಪತ್ತು ಮನೆಗಳನ್ನೊಳಗೊಂಡ
ಸುಮಾರು ಐದು ತಲೆಮಾರಿನ ಮೂವತ್ತು
ಕುಟುಂಬಗಳಿದ್ದ ಗ್ರಾಮವೇ ತಲೆಕಳಲೆ.
ಮುಖ್ಯವಾಗಿ ಊರ ಹಿರಿಯರುಂತ
ಹೆಗ್ಡೆ ಯವರದು ದೊಡ್ಡ ಕುಟುಂಬ
ದೊಡ್ಡಪ್ಪ ಗೌಡ್ರ ಕುಟುಂಬ ಇನ್ನೊಂದು
ನಾಯಕರ ಕುಟುಂಬವೊಂದು
ಮತ್ತೆಲ್ಲಾ ಗದ್ದೆ, ತೋಟದಲ್ಲಿ ಕೆಲಸ ಮಾಡುತ್ತಿದ್ದ
ಭೂಮಿ ಇಲ್ಲದ ಶ್ರಮಿಕರ ಕುಟುಂಬಗಳು
ಅದರಲ್ಲೊಂದು
ಭಟ್ಕಳದ ಹಸನ್ ಕುಟುಂಬ
ಎಲ್ಲಾ ದಿನಸಿ ಸಾಮಾನುಗಳು
ಸಿಗುವಂತ ಕಾಕನ ಅಂಗಡಿ
ಮಂಗಳೂರಿನ ಅಂಥೋಣಿ ಲೋಪೀಸ್
ಮತ್ತಿನ್ನೊಂದು ಕುಟುಂಬ
ಅವರೇನು ಮಾಡ್ತಿದ್ರೂ
ಜ್ಞಾಪಕಕ್ಕೆ ಬರಲೇ ಇಲ್ಲಾ..
ಭತ್ತ, ಕಬ್ಬು, ಅಡಿಕೆ ಮುಖ್ಯ ಫಸಲು.
ಮಲೆನಾಡ ಹೆಂಚಿನ ಮನೆಗಳು
ತೆಂಗು, ಅಡಿಕೆ ಎಲೆಗಳ ಒಣ ಭತ್ತದ
ಹೊದಿಕೆ ಗುಡಿಸಲುಗಳು,
ಗುಡ್ಡ, ಬೆಟ್ಟ ನದಿ, ಹಸಿರು ಗದ್ದೆ
ಬಳುಕುತ್ತಾ ಹರಿವ ಶರಾವತಿ
ರಮ್ಯ, ರಮಣೀಯ, ಕಣಿವೆ
ನಮ್ಮೂರೇ ಚಂದ, ನಮ್ಮೂರೇ ಅಂದಾಂತ
ಹೇಳೋವ್ರ ಮುಂದೆ ತಲೆಕಳಲೆ
ತನ್ನದೇ ಆದ ಸೌಂದರ್ಯವ ಉಳಿಸಿಕೊಂಡಿತ್ತು.
ಪ್ರಭಾ ಶಂಕರ್ ನ
ಅಪ್ಪ ಪ್ರಭು (ಹೆಸರಿಗಷ್ಟೇ ಪ್ರಭು)
ದೊಡ್ದಪ್ಪಗೌಡ್ರ ಬಲಗೈ
ಕಾರ್ಗಲ್ ನ ಮುಖ್ಯ ಬೀದಿಯಲ್ಲಿದ್ದ
ಶ್ರೀ ರಾಮ ಭವನ ಹೋಟೆಲೊಂದರಲ್ಲಿ
ಮಾಣಿ, ಅಡಿಗೆ ಭಟ್ರು, ಸರ್ವರ್
ಪಂಪು ಸೆಟ್ ರಿಪೇರಿ ಮಾಡೋರು
ಎಲ್ಲಾ ಕೆಲಸವನ್ನ ಬಲ್ಲವ
ಅಮ್ಮ ಸುಶೀಲ ಮನೆಗೆಲಸದ ಜೊತೆ
ಹಾಲು ಮಾರಿ ನಾಲಕ್ಕು ಕಾಸು
ಸಂಪಾದಿಸುತಿದ್ದಳು
ಮತ್ತೆ ಅಕ್ಕ ಸುಮನ ಮದುವೆಗೇಂತ
ಕಾಯ್ತಿರೋಳು, ಆಕೆ ಅಮ್ಮನ ಬಲಗೈ
ಐದಾರು ವರ್ಷಗಳ ಬಾಲಕ
ಪ್ರಭಾಶಂಕರ್
ಚಿಕ್ಕ ಚೊಕ್ಕ ಕುಟುಂಬ
ಸಂತೋಷವಾಗಿದ್ದರು.
ಹತ್ತಿರದಲ್ಲೇ ಇದ್ದ ಪ್ರಾಥಮಿಕ ಶಾಲೆ
ಸೇರಿದ ಪ್ರಭಾಶಂಕರನಿಗೆ ಮೊಟ್ಟ ಮೊದಲು
ಪರಿಚಯವಾಗಿದ್ದು,
ಪ್ರೈಮರಿ ಸ್ಕೂಲ್ ಹೆಡ್ ಮಾಸ್ಟರ್
ರಾಮಣ್ಣನವರ ಮಗಳು ವಿನುತಾನೆ,
ಅದೂ ಅತ್ತು ರಂಪ ಮಾಡಿ ಸ್ಕೂಲ್ ಗೆ
ಹೋದವನ್ನ ಕಿಲ ಕಿಲವೆಂದು ನಗಿಸಿ,
ಜೀವನಸಂಗಾತಿಯಾಗಿದ್ದು ಒಂದು ದೊಡ್ಡ ಕಥೆ.
ಅದೆಲ್ಲಾ ಕ್ಷಣದಲ್ಲಿ ಬಂದು ಹೋದ
ಫ್ಲಾಶ್ ಬ್ಯಾಕ್ ಸವಿ ನೆನಪುಗಳು.
ಸದ್ಯಕ್ಕೆ
ಅಮ್ಮ, ಅಪ್ಪ, ಪ್ರಭಾಶಂಕರ್, ವಿನುತ
ಜೀಪ್ ಒಂದನ್ನ ಬಾಡಿಗೆಗೆ ಕೊಂಡು
ತಲೆಕೆಳಲೆ ಗ್ರಾಮಕ್ಕೆ ಕೊನೆಗೊಮ್ಮೆ
ನೋಡುವ ಇಚ್ಛೆಯಿಂದ ಪಯಣಿಸಿದರು.
ಹೋಗ್ತಾ ಹೋಗ್ತಾ ನೆನಪಿನಲೆಯ
ಸುರುಳಿ ಬಿಚ್ಚಿಕೊಂಡಿತು.
1963 ರ ಜನವರಿ ಪ್ರಾರಂಭದಲ್ಲಿ
ತಲೆಕಳಲೆ ಬ್ಯಾಲೆನ್ಸಿಂಗ್ ರಿಸರ್ವಾಯರ್
ನಿರ್ಮಾಣ ಕಾರ್ಯ ಮುಗಿದು
ಜಲಾಶಯ ನೀರನ್ನು ಸಂಗ್ರಹಿಸುತ್ತಾ
ತುಂಬಿದೊಡನೆ ಉಕ್ಕಿನ ಶಟರ್ ಹಾಕಲು
ರಭಸದಿಂದ ಊರ ತುಂಬಿದ ನೀರು
ಬರೀ ನೀರೇ ನೀರು ...
ಮೇಲೆ, ಕೆಳಗೆ, ಬದಿಗೆ ಎಲ್ಲೆಡೆ ನೀರು
ಮನೆ, ಊರೇಲ್ಲಿದೇಂತ ಹುಡುಕುವಷ್ಟರಲ್ಲಿ
ಅರೆ ಇದೇನಿದು...
ಪ್ರಭಾ ಶಂಕರ್ ಮನೆಯೊಳಗೆ ನೀರು
ಹೊರಗೆ ನೀರು ಸುತ್ತ ಮುತ್ತ ನೀರೇ ನೀರು
ಊರೆಲ್ಲೂ ಕಾಣೆ,
ನಲವತ್ತು -ಐವತ್ತಕ್ಕೂ ಹೆಚ್ಚು ಅಡಿಗಳ ಆಳದಲ್ಲಿ
ನೀರಿನಡಿ ಹೂತು ಹೋದ
ಮನೆಗಳಿದ್ದ ನಿಶಾನೆಗಳು, ಕಾಲುವೆಗಳು
ಗದ್ದೆಗಳು, ಅರ್ಧಮರ, ಗಿಡಗಳು
ದನ ಕರುಗಳ ಕಟ್ಟಿ ಹಾಕಿದ್ದ ಗೂಟಗಳು.
ಊರವಿರಿದ್ದ ಮನೆಗಳು,
ಹತ್ತಿರದ ಪ್ರೈಮರಿ ಸ್ಕೂಲಿದ್ದ
ಚಿಹ್ನೆಗಳು ಇಂದೂ ಹೇಳುತ್ತಿದೆ
ಒಂದಾನೊಂದು ಕಾಲದಲ್ಲಿ...
ಇಲ್ಲೊಂದು ಪ್ರಾಚೀನ ನಾಗರೀಕತೆ ಇತ್ತೂಂತ..
ನೀರಲ್ಲಿ ಮುಳುಗಿದ ತಲೆಕಳಲೆ ಗ್ರಾಮದ ಚಿತ್ರ.
ಏನಾಯಿತಪ್ಪ ಈ ಊರಿಗೆ?
ಉಸಿರು ಹಿಡಿದು ಮೇಲೆ ಬಂದು ನೋಡಿದರೆ
ಸಮುದ್ರದ ತರಹ ನೀರಿನ ಜಲಾಶಯ.
ಶರಾವತಿ ನದಿಯ ಅಡ್ಡಗಟ್ಟಿ
ತಲೆಕಳಲೆ ರಿಸರ್ವಾಯರ್ /ಜಲಾಶಯ
ನಿರ್ಮಾಣದ ಕಾರಣ
ತಲೆಕೆಳಗಾದ ಜೀವ, ಜೀವನ
ಮನೆ, ಕೃಷಿ ಭೂಮಿ
ಎಲ್ಲವೂವೆ
ಈಗ ಜಲಮಗ್ನ.
ಮನೆ, ಮಠ, ಜಮೀನು
ಎಲ್ಲವನ್ನೂ ಕಳೆದು ಕೊಂಡು
ನಿರ್ಗತಿಕ, ನಗ್ನ.
ತಲೆಕಳಲೆ ಜಲಾಶಯ ನಿರ್ಮಾಣದಿಂದ
ಮುಳುಗಿ ಹೋದ ಮೂರು ಗ್ರಾಮಗಳು
ಈಗ
ಮೂರು ಪದಗಳಲ್ಲಿ ಅಡಗಿ ಹೋಗಿತ್ತು
ವಿಕಾಸ,
ವಿವಶ,
ವಿನಾಶ.
ತಲೆಕಳಲೆ ಗ್ರಾಮ ಹೆಸರಿಗೆ ತಕ್ಕ ಹಾಗೇಯೇ
ಅದ್ರಷ್ಟ ರೇಖೆ ತಲೆಕೆಳಗಾಗಿತ್ತು.
ಪಾಲುದಾರರು, ಹಿತಕಾಂಕ್ಷಿಗಳು
ಯಾರಿವರೂಂತ ತಲೆ ಕೆಡಿಸ್ಕೊಳ್ಳಬೇಡಿ,
ಅವರೇ ಸ್ಟೇಕ್ ಹೋಲ್ಡರ್ಸ್
Stake Holders ಅವರನ್ನ
ಏನು ಬೇಕಾದ್ರೂ ಕರೀರಿ,
ಅವರ ಜೊತೆ
ಯಾರೂ ಮಾತನಾಡಲಿಲ್ಲ,
ಸಮಸ್ಯೆಗಳನ್ನು ಪರಿಹರಿಸಲಿಲ್ಲ
ಪ್ರಭಾಶಂಕರ್ ನ ತಂದೆ ಪ್ರಭು
ಹೋಗಿ ವಿಚಾರಿಸಿದ್ದಕ್ಕೆ ಅವರ ಮಾತನ್ನು
ಪರಿಗಣಿಸಲೂ ಇಲ್ಲಾ, ಪರೀಕ್ಷಿಸಲೂ ಇಲ್ಲಾ,
ಯಾರೋ? ಎಲ್ಲೋ? ಸಂಬಂಧವೇ
ಇಲ್ಲದ ವ್ಯಕ್ತಿಗಳು,
ದಿಢೀರ್ಂತ ನಿರ್ಣಯಿಸಿದ್ದು.
ಯಾರ್ ಯಾರ ಜೀವನವನ್ನು
ಆಡಿಸಿ ಬೀಳಿಸಿ ಉರುಳಿಸಿ ಹೋಗುತ್ತೋ
ಆಗ ಗೊತ್ತಿರಲಿಲ್ಲಾ...
ಪ್ರಭಾ ಶಂಕರ್ ಗೆ ಜ್ಞಾಪಕಕ್ಕೆ ಬಂದಿದ್ದು
ಸುಮನಕ್ಕ ಅಳುತ್ತಾ ಇದ್ದದ್ದು,
ಅಮ್ಮನೂ ಅವಳೊಟ್ಟಿಗೆ
ಬಿಕ್ಕಳಿಸುತ್ತಿದಿದ್ದದ್ದು.
ಅಪ್ಪ ಸಾಮಾನುಗಳನ್ನು
ಲಾರಿಯಲ್ಲಿ ಇಡುತಿದ್ದದ್ದು.
ಜನ ಸಮೂಹ ಇತ್ತಿಂದ ಅತ್ತ
ಅತ್ತಿಂದ ಇತ್ತ ನಡೆದಾಡುತ್ತಿದ್ದಿದ್ದು
ಈ ಕಳೇಬರದಲ್ಲಿ ಉಚ್ಚ ಸ್ಥಾಯಿಯಲ್ಲಿ,
ದನ ಕರುಗಳ ಆಕ್ರಂದನ,
ಕಿವಿಯಲ್ಲಿ ಇನ್ನೊವೆ ಗುಂಯ್ಗುಟ್ಟುತ್ತಿದೆ.
ಎಲ್ಲವೂವೆ ಕಣ್ಣಮುಂದೆ, ಈಗ
ನಡೆದುಹೋದ ಹಾಗೇ ಇತ್ತು.
ಊರಿಗೆಲ್ಲಾ ಬೆಳಕು ಕೊಟ್ಟು
ಕತ್ತಲೆಯಲ್ಲೇ ತಮ್ಮ ಜೀವನವನ್ನು
ಮುಡಿಪಾಗಿಟ್ಟವರಿಗೆ ಉಳಿದಿದ್ದು
ಎಲ್ಲೆಲ್ಲೂ ಬರೀ ನೀರು.
ಏನಾಯಿತು?
ಏನಾದರು?
ಜೀಪ್ ವಾಹನ ಚಾಲಕ ಬ್ರೇಕ್ ಹಾಕಲು
ವಾಸ್ತವಕ್ಕೆ ಮರಳಿತು ಪ್ರಭಾ ಶಂಕರನ ಮನಸ್ಸು.
ತಲೆಕಳಲೆಯ ಹಿನ್ನೀರಿನ
ತೀರದಲ್ಲಿ ಹೋಗಿ ಜೀಪ್ ನಿಲ್ಲಿಸಿದ.
ತಲೆಕಳಲೆ ಗ್ರಾಮ ತನ್ನ ಹೊಸ ರೂಪವ
ಹೊದ್ದು ಪರ್ಯಟನ ಸ್ಥಳವಾಗಿ
ಪರಿವರ್ತನೆಯಾದದ್ದು ಒಳ್ಳೇದೇ
ಅನಿಸಿದರೂ ಏನೋ ಒಂದು ತರಹ
ಹೇಳಲು ತಿಳಿಯದ ಶೂನ್ಯತೆ ಕಾಡುತಿತ್ತು.
ಅಪ್ಪ,ಅಮ್ಮನ್ನ ನಿಧಾನವಾಗಿ ಇಳಿಸಿ
ವಿನುತಳನ್ನ ಕರೆದುಕೊಂಡು ಅಲ್ಲೇ
ನಿಲ್ಲಿಸಿದ್ದ ಮೋಟಾರ್ ಬೋಟ್ನಲ್ಲಿ
ಕುಳಿತು ಒಂದು ರೌಂಡ್
ಬೋಟ್ ಸಫಾರಿಯ ತೊಡಗಲು
ವಿಶಾಲವಾದ ತಲೆಕಳಲೆ
ಬ್ಯಾಲೆನ್ಸಿಂಗ್ ಜಲಾಶಯದ
ವಿಹಂಗಮ ದ್ರಶ್ಯ ಅಧ್ಭುತವಾಗಿತ್ತು
ಜುಳು ಜುಳುಂತ ಹರಿಯುತಿದ್ದ
ಶರಾವತಿಯ ಮಂಜುಳ ನಾದವೆಲ್ಲಿ
ನದಿಯ ಪ್ರವಾಹವ ಅಡ್ಡಗಟ್ಟಿ
ಕಟ್ಟಿದ ಬ್ರಹತ್ ಜಲಾಶಯದ
ನೀರವ ಮೌನವ ಬೇಧಿಸುವ ಈ
ಮೋಟಾರ್ ಬೋಟಿನ ಇಂಜಿನಿನ
ಡುಗ್ ಡುಗಿಯ ಪ್ರತಿಧ್ವನಿಯೆಲ್ಲಿ
ಜಲವಿದ್ಯುತ್ ಉತ್ಪತ್ತಿಸುವ
ಜನರೇಟರ್ ಮಶೀನಿನ ಕರ್ಕಶವೆಲ್ಲಿ
900ಅಡಿ ಪ್ರಪಾತದ ಭೋರ್ಗೆರೆಯುತ್ತಿದ್ದ
ಜೋಗದ ಜಲ ಪ್ರಪಾತದ ಶಬ್ದವೆಲ್ಲಿ.
ಲಗೋರಿ, ಕುಂಟಾಬಿಲ್ಲೆ, ಮರಕೋತಿ
ಬುಗುರಿ, ಚಿನ್ನಿ ದಾಂಡು ಆಡುತಿದ್ದ
ಮಕ್ಕಳ ಚಿಲ್ಲಾಟಗಳ ಶಬ್ದವೆಲ್ಲಿ?
ಈಗ ಹೇಳಲು ಉಳಿದಿರುವವು
ನಮ್ಮ ಬೋಟಿನ
ಕೆಳಗೆ ಅಡಗಿದ್ದ
ಸ್ಮೃತಿ ಚಿನ್ಹೆಗಳು ಮಾತ್ರ
ಪ್ರಭಾ ಶಂಕರನ ಮನದಾಳದಲ್ಲಿ
ಒಂದು ಕುಂಟು ನೆಪ, ಆಸೆ, ಉತ್ಸುಕತೆ...
ಏನಾದ್ರೂವೆ ಕಾಣಿಸುತ್ತಾ
ನೀರೋಳಗೆ ಕಣ್ಣು ಬಿಟ್ಟು ಇಣುಕಿ
ನೋಡಿದ, ಕಂಡಿದ್ದು...
ಬರೀ ನೀರು.. ಇನ್ನಷ್ಟು ಹೆಚ್ಚು ನೀರು,
ಅಚ್ಚು ನೀಲಿ ಬಣ್ಣದ ನೀರು...
ಯಾರಿಗೂ ಕಾಣದ, ಕೇಳದ
ತಲೆಕಳಲೆ ಗ್ರಾಮದವರ
ನೀರಲ್ಲೇ ಮುಳುಗಿಹೋದ
ಸುಖ, ಸಂತೋಷ, ಕನಸ್ಸುಗಳು,
ನೋವು, ನಲಿವು, ಯಾತನೆಗಳು,
ಬಿಟ್ಟು ಹೋದ ವಾಸಿಸುವರಿಲ್ಲದ ಮನೆಗಳು
ದನಗಳಿಲ್ಲದ ಕೊಟ್ಟಿಗೆಗಳು
ಎಲೆ ಹೂವುಗಳಿಲ್ಲದ ಮರಗಳು,
ಮಕ್ಕಳಿಲ್ಲದ ಶಾಲೆಗಳು,
ದೇವರಿಲ್ಲದ ಗಣೇಶನ ಗುಡಿ,
ವೀರಗಲ್ಲುಗಳು, ಬಿಡದಿಗಳು
ಇದೀಗ ಇವೆಲ್ಲವೂ
ಇತಿಹಾಸದ ಪುಟಗಳಲ್ಲಿ
ಅಳಿದು ಉಳಿದ
ಅವಶೇಷಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ