ಅಜಗಜಾಂತರ

ಅಜಗಜಾಂತರ 
ಅನೇಕನೇಕ ಗಣೇಶನ ಗುಡಿಗಳ ದರ್ಶಿಸಿರಬಹುದು ನೋಡಿರಬಹುದು
ನಾವೆಲ್ಲಾ ನೋಡದೇ ಇರೋ ಗಣೇಶನ ಗುಡಿ ಒಂದಿದೆ...
ಇಂಡೋನೇಷ್ಯಾದ ಜಾವಾ ದ್ವೀಪದ ಆಗಾಗ  ವಿಸ್ಫೋಟಿಸೋ ವೊಲ್ಕನೋಗಳು ತುಂಬಿರುವ ಮೌಂಟ್ ಬ್ರಮೋ ಕ್ಷೇತ್ರದಲ್ಲಿದೆ 
ಆ ಗಣೇಶನ ಗುಡಿ. 
ಸಾವಿರಾರು ಅಡಿಗಳ ಆಳದಲ್ಲಿ
ವೋಲ್ಕನೋ ವಿಸ್ಫೋಟಿಸಿ
ವಿಶಾಲವಾದ ಹಳ್ಳವಾಯ್ತು 
ವೋಲ್ಕನೋ ವಿಸ್ಫೋಟಿಸಿದ ಮುಖದ್ವಾರದಲ್ಲಿ ಗಣೇಶನ
ಮುಕ್ತಾಕಾಶ ಗುಡಿ ಸಮುದ್ರ ತಳದಿಂದ ಸುಮಾರು 7000 
ಅಡಿಗಳ ಎತ್ತರದಲ್ಲಿದೆ.
700 ವರ್ಷಕ್ಕಿಂತಲೂ 
ಅಧಿಕ ಹಳೆಯದಾದ ಗುಡಿಯ
ಗಣೇಶ ವೋಲ್ಕನೋಗಳಿಂದ 
ಕಾಪಾಡ್ತಾನೇಂತ ಅಲ್ಲಿಯ ಹಿಂದೂ ಆದಿವಾಸಿಗಳ ನಂಬಿಕೆ 
ಮೇಲೆ ಬರೆದಿರುವ ಪ್ರಸ್ತಾವನೆಗೂ 
ಕೆಳಗೆ ಬರೆದಿರೋ ಬ್ಲಾಗ್ ಗೂ 
 ಸಂಬಂಧ ಹುಡುಕಬೇಡಿ... 
ಹಾಗೇ ಸುಮ್ಮನೇ 

ಎಲ್ಲರ ಮನೆಯಲ್ಲಿಯು ಇರುವಂತೆ 
ನಮ್ಮ ಮನೆಯಲ್ಲೂ ಇತ್ತು, ಇದೆ...
ಏನೂಂತೀರ ?
ಕಾಲುಮಣೆ 
ಹಾಂ  ಸ್ಟೂಲ್ ಕಣಪ್ಪ 
ಅದೇ ಹಳೆಯ ಕಾಲದ 
ನಾಲಕ್ಕು ಕಾಲಿನ ಮರದ ಸ್ಟೂಲ್,
ನಮ್ಮ ಮನೆ ಸ್ಟೂಲ್ ಸ್ವಲ್ಪ ಭಿನ್ನ 
ಅದರ ವಿಶಿಷ್ಟತೆಯ ಬಗ್ಗೆ 
ವಿಚಾರ ಹಂಚಿ ಕೊಳ್ಳಲು 
ಪುಟ್ಟದೊಂದು ಆಸೆ 
ಮೊಣಕಾಲು ಎತ್ತರದ ಕಾಲುಮಣೆ,
ಅಂತಿಂತ ಮಣೆಯಲ್ಲಪ್ಪ ಅದು 
ಬೀಟೆ ಮರದ್ದು ಮಣೆ 
ಹೀಗೇ ಅದಕ್ಕೊಂದು ಹಿಸ್ಟರಿ, 
ಜಾಗ್ರಫಿ,ಎಲ್ಲವೂ ಇದೆ. 
ತಿರುಮಕೂಡಲ ನರಸೀಪುರದ 
ಅರಣ್ಯ ಕ್ಷೇತ್ರದಲ್ಲಿ ಬೆಳೆದ 
ರೋಸ್ ವುಡ್ಡೇ ಈ ಬೀಟೆ ಮರ 
ಹ್ಯಾಗೆ ಒರಿಸ್ಸಾ ಸಾಮ್ರಾಜ್ಯದ ಆದಿವಾಸಿ ರಾಜ ಇಂದ್ರದುಮ್ನ ನ 
ಕನಸ್ಸಲ್ಲಿ ದೇವ್ರು ತೋರಿ 
ಹತ್ತಿರದ ಘನ ದಂಡಕಾರಣ್ಯದಲ್ಲಿ  ರೆಂಬೆಗಳೇ ಇಲ್ಲದ ಉದ್ದನೆ ಆಕಾಶ ನೋಡಿ ಬೆಳೆದ ಒಳ್ಳೆಯ ಗಾತ್ರದ 
ನೀಲಿ ಬಣ್ಣದ ತೇಗಿನ ಮರ ಸಮುದ್ರದಿಂದ ತೇಲಿ ಬರುತ್ತೆ 
ಅದರಿಂದ ಲಾರ್ಡ್ ಜಗನ್ನಾಥ 
ಲಾರ್ಡ್ ಬಲಭಧ್ರ ಹಾಗೂ 
ದೇವಿ ಸುಭಧ್ರ ದೇವರುಗಳ 
ಆಕ್ರುತಿಗಳ ಮಾಡಿ ಅವರನ್ನ 
ಪುರಿ ಸಮುದ್ರ ತಟದಲ್ಲಿ 
ದೇವಸ್ಥಾನ ಸ್ಥಾಪಿಸಲು ಪ್ರೇರೇಪಿಸಿದನಂತೆ.
ಈ ಸ್ಟೂಲ್ ಗೆ ಅಥವಾ ಅದರ ಮೂಲ 
ಬೀಟೆ ಮರಕ್ಕೆ ಅಷ್ಟೆಲ್ಲಾ ದೊಡ್ಡ ಇತಿಹಾಸವೇನಿಲ್ಲಾ. ಅಪ್ಪನಿಗೆ 
ಕನಸೆಲ್ಲಾ ಬರುತ್ತಾನೇ ಇರಲಿಲ್ಲಾ 
ನಿದ್ದೆ ಚೆನ್ನಾಗೇ ಮಾಡ್ತಿದ್ರು.
ಅಪ್ಪ ಟಿ. ನರಸೀಪುರದಲ್ಲಿ ಇಂಜಿನಿಯರಾಗಿದ್ದಾಗ 
ಕಬಿನಿ ನದಿಯ ಪ್ರವಾಹದಲ್ಲಿ 
ಕೊಚ್ಚಿಕೊಂಡು ಬಂದ ಕಪ್ಪು ಬಣ್ಣದ ರೋಸ್ ವುಡ್ ಮರಗಳು 
ಕಾಲ ಕ್ರಮೇಣ ಅರಣ್ಯ ವಿಭಾಗದ ಹರಾಜಿನಲ್ಲಿ 
ಕಮ್ಮಿ ಬೆಲೆಯಲ್ಲಿ 
ಒಳ್ಳೆಯ ಬೀಟೆ ಮರಗಳ 
ತುಂಡುಗಳನ್ನು ಸಾ ಮಿಲ್ಲುಗಳ
ಮೂಲಕ ರೀಪರ್ ಗಳಾಗಿಸಿ 
ಮಿತ್ರರಾದ ಫಾರೆಸ್ಟ್ ರೇಂಜರ್ 
ರಾಮಸ್ವಾಮಿಯವರು ಒದಗಿಸಿದ್ದರು 
ತಲಕಾಡಿನ ಬಡಗಿ ಚೆಲುವರಾಜನಿಂದ ತೊಟ್ಟಿಲು, ಮಕ್ಕಳಿಗೆ ನಡೆಯೋಗಾಡಿ ಮೂರುಚಕ್ರದ್ದು, ಸ್ಟೂಲ್, ಖುರ್ಚಿ, ಟೇಬಲ್,  ಮಾಡಿಸ್ಕೊಂಡ್ರು
ನಮಗೆಲ್ಲರಿಗೂ ಇಷ್ಟವಾದದ್ದು 
ಅಚ್ಚುಮೆಚ್ಚು ಕಪ್ಪು ಮಿಶ್ರಿತ ಗುಲಾಬಿ ಬಣ್ಣದ ರೋಸ್ ವುಡ್ ಸ್ಟೂಲ್ 
ನಾಲಕ್ಕು ಕಾಲುಳ್ಳ ಮಣೆ 
ಕುಳಿತುಕೊಳ್ಳಲು ಅನುಕೂಲವಾದದ್ದು, 
ಎದ್ದು ಅದರ ಮೇಲೆ ನಿಂತರೆ 
ಬಲ್ಬ್ ಬದಲಿಸಲು, 
ಕ್ಯಾಲೆಂಡರ್ ತಗಲಿಸಲು 
ಜೇಡರ ಬಲೆಯ ಬಿಡಿಸಲು 
ಧೂಳು ಒರಸಲು ಉಪಯುಕ್ತವಾಗಿತ್ತು. 
ಆದರೆ ಸರಿಯಾಗಿ ಪ್ರತಿ ವರ್ಷ 
ಭಾದ್ರಪದ ಶುಕ್ಲದ ಚೌತಿಯಂದು 
ಆ ಕಾಲು ಮಣೆಗೆ  ಶಾಪವೋ 
ಪಾಪವೋ ವಿಮೋಚನೆ ಆಗ್ತಿತ್ತು 
ಸ್ಟೂಲ್ ಜನ್ಮ ಫಲವ ಪಡೆಯುತ್ತಿತ್ತು 
ತ್ರತೀಯ ಅಂದ್ರೆ ಚೌತಿಗೆ ಒಂದು ದಿನ ಹಿಂದೆ ಮಣೆಗೆ ಸೋಪು ಶಾಂಪೂ ಹಾಕಿ ನೀರಲ್ಲಿ ಸ್ನಾನ ಮಾಡಿಸಿ ಗಣೇಶ ಕೂರಿಸುವದಕ್ಕೆ ತಯ್ಯಾರಿ ನಡೆದಿತ್ತು.
ಗೌರಿ ಪೂಜೆ ಇದ್ರೂವೇ 
ಅಷ್ಟೊಂದು ಮುಖ್ಯತ್ವ ಇರಲಿಲ್ಲಾ
ಗೌರಿ ಹೂವು ಮಳೆಗಾಲ ಮುಗಿದ ತಕ್ಷಣ 
ಸಸಿ ಗಿಡವಾಗಿ, ಗಿಡ ಗುಲಾಬಿ, ನೇರಳೆ, ಬಿಳಿ ಬಣ್ಣದ ಹೂಗಳ ಬಿಡಲು, 
ಆ ಹೂಗಳು ಗಣೇಶನ ಪಾದ ಸೇರಲು 
ಎಣಿಸಿ ಹದಿನೈದೇ ದಿನಗಳಷ್ಟೇ ಆಗ್ತಿತ್ತು 
ಗೌರಿ ಹೂಗಳು ಗಣೇಶಂಗೆ ಶ್ರೇಷ್ಠ. 
ಬದನೆ ಹೂವಿನ ಬಣ್ಣದ ಎಕ್ಕ ಹೂಗಳು 
ಅದರಿಂದಾದ ಎಕ್ಕದ ಹೂವಿನ ಹಾರ 
ಗರಿಕೆ ಹುಲ್ಲು ಅತಿ ಶ್ರೇಷ್ಠ 
ಇವೆಲ್ಲವೂ ಬೇಕೇ ಬೇಕು. 
ಮನೆ ಕೆಲಸ ಹಾಗೂ ಅಮ್ಮಂಗೆ 
ಸಹಾಯ ಮಾಡಲು ಚಂದ್ರು 
ಜೊತೆಗೆ ಇರುತ್ತಿದ್ದ. ಅವನೊಟ್ಟಿಗೆ 
ಮನೆ ಹಿಂದೆಯಿದ್ದ ಕಾಡಲ್ಲಿ ಎಕ್ಕದಹೂವ ಮತ್ತೆ ಗೌರಿ ಹೂವ ತರಲು ಹೋದಾಗ 
ಕಪ್ಪು ದಟ್ಟವಾದ ಕೂದಲು ತುಂಬಿದ 
ಕರಡಿಯೊಂದು ನೆಲವ ಮೂಸಿ ನಡೆದು ಬರುತಿತ್ತು, ಅದು ನಮ್ಮನ್ನು ನೋಡುವ 
ಮುಂಚೆ ನಾವು ಒಂದೇ ಓಟ
ಮನೆಗೆ ಬಂದು ನಿಟ್ಟುಸಿರು ಬಿಟ್ಟಿದ್ದಷ್ಟೇ 
ಇನ್ನೂ ಹಚ್ಚ ಹಸಿರಾಗಿ ಮನಸ್ಸಲ್ಲಿ 
ಬೇರೂರಿದೆ. 500 ಮನೆಗಳಿಗೂ 
ಹೆಚ್ಚಾಗಿ ಜೀವಂತವಾಗಿದ್ದ 
ಕಾರ್ಗಲ್ ಕಾಲೋನಿಯಲ್ಲಿ ನಾವು 
ನಮ್ಮ ಮನೆಯಲ್ಲಿ 
ಆಚರಿಸಿದ ಆಚರಿಸುತಿದ್ದ 
ಗಣೇಶನ ಹಬ್ಬ 
ಮರೆಯುವಂತದ್ದೇ ಇಲ್ಲಾ
ಯಾರ ಮನೆ ಗಣೇಶನ 
ಅಲಂಕಾರ ಮತ್ತೆ ಡೆಕೋರೇಷನ್ ಚೆನ್ನಾಗಿದೇನ್ನೋ ಪೈಪೋಟಿ.
ನಮ್ಮ ಮನೆಯಲ್ಲಿ ಬೇರೇ ಹಬ್ಬ ಆಚರಿಸ್ತೀವೋ ಇಲ್ಲವೋ 
ಗಣೇಶನ ಹಬ್ಬವಂತೋ ನಮಗೆ 
ಬಲು ದೊಡ್ಡ ಮನೆ ಹಬ್ಬ. 
ಮುಂಗಾರು ಮಳೆ ನಿಂತ ನಂತರ 
ಹಬ್ಬಗಳು ಗಣೇಶನ ಹಬ್ಬದಿಂದ
ತೊಡಗಿ ಮತ್ತೆಲ್ಲಾ ದಸರಾ, ದೀಪಾವಳಿ 
ಹಬ್ಬಗಳು ಒಂದೊಂದಾಗಿ ಬರುತಿತ್ತು 
ಗಣೇಶನ ಹಬ್ಬ ಹ್ಯಾಗೆ ನಮ್ಮ ಮನೆಯ ನರ ನಾಡಿಗಳಲ್ಲಿ ಒಂದಾಗುತ್ತಿತ್ತು ನೋಡಿ 
ನಮ್ಮ ಮನೆ ಹೆಂಚಿಂದ್ದು, ಸರ್ಕಾರದ್ದು
ಇದ್ದದ್ದರಲ್ಲೇ ಸ್ವಲ್ಪ ದೊಡ್ಡ ಕೋಣೆ 
ಮನೆಯ ದೊಡ್ಡ ಹಾಲ್ ನಲ್ಲಿ 
ಗಣೇಶನ್ನ ಕೂರಿಸಲು ಆಯ್ಕೆ 
ಮಾಡಿದ್ದಾಯ್ತು. ರಾತ್ರಿಯಿಡೀ 
ನಾವೆಲ್ಲಾ ಒಂದೊಂದು ಕೆಲಸ
ಹಂಚಿಕೊಂಡು  ಶೃಂಗಾರಿಸಲು 
ನನ್ನ ಪಾಲಿಗೆ ಬಣ್ಣ ಬಣ್ಣದ 
ಕಾಗದದ ರಿಬ್ಬನ್ ಗಳ 
ಸುತ್ತಿದ್ದೇ ಸುತ್ತಿದ್ದು 
ದೊಡ್ಡ ಹಾಲಿನ ನಡುವಿನ ಪಂಕಕ್ಕೆ 
ಒಂದು ಕೊನೆ, ಇನ್ನೊಂದು ಕೊನೆ ನಾಲಕ್ಕೂ ಸೈಡಿನ ಗೋಡೆಗಳಿಗೆ ಸಮನಾಗಿ ಅನ್ನದ ಗೋಂದಿನಿಂದ ಅಂಟಿಸೋದು ಹೀಗೇ ಕೋಣೆ 
ತುಂಬಾ ಕಾಗದದ ಬಣ್ಣ ಬಣ್ಣದ 
ರಿಬ್ಬನ್ ತೋರಣ ಅಂಟಿಸಿದ್ದಾಯ್ತು. 
ರಾತ್ರಿ ಹನ್ನೆರಡು ಘಂಟೆಗೆ ಸರಿಯಾಗಿ 
ಅಮ್ಮನ ಮರದ ಪೆಟ್ಟಿಗೆ ಹೊರಗೆ ಬಂತು 
ಅದರೊಳಗಿಂದ ಎಂಬ್ರಾಯಿಡ್ರಿ ಕಸೂತಿ ಮಾಡಿದ ಪರದೆ, ಟೇಬಲ್ ಕ್ಲಾತ್ ಮತ್ತೆ ಬೆಳ್ಳಿ ದೀಪ ಸ್ಥಂಭಗಳು, ಕಾಮಾಕ್ಷಿ ದೇವಿಯ ದೀಪ, ಆರತಿ ತಟ್ಟೆ, ಹಣ್ಣುಗಳು 
ಜೋಡಿಸಿಡಲು ಬೆಳ್ಳಿ ಟ್ರೇ, ತೀರ್ಥದ ಚೊಂಬು ಎಲ್ಲವೂ ಹೊರಬಂತು. ಎಲ್ಲವನ್ನು ಅಚ್ಚುಕಟ್ಟಾಗಿ ತೊಳೆದು ತಂದಿಡಲು ಸುಜಾತಕ್ಕನಿಗೆ 
ಈ ಕೆಲಸ ನಿಶ್ಚಯವಾಗಿತ್ತು 
ಎರಡಡಿ ಎತ್ತರದ ಮರಪೆಟ್ಟಿಗೆ ಪಶ್ಚಿಮಾಭಿಮುಖವಾಗಿ ಗಣೇಶ
ನಮ್ಮನ್ನು ಆಶೀರ್ವಾದಿಸಲು  
ಗಣೇಶನ ವಿಗ್ರಹವಿಡಲು 
ಯೋಗ್ಯವೆಂದು ನಡುವಿನಲ್ಲಿ 
ಗೋಡೆಗೆ ತಳ್ಳಿಟ್ಟಿದ್ವಿ.
ಪೆಟ್ಟಿಗೆ ಮೇಲೊಂದು ಬಿಳಿ 
ಟೇಬಲ್ ಕ್ಲಾತ್ ಅದರಲ್ಲೇ ನಡುವೆ 
ಅಮ್ಮ ಬಿಡಿಸಿದ್ದ  ರೆಕ್ಕೆ ಪಂಕ ಗರಿಯ 
ಸುಂದರ ನವಿಲಿನ ಕಸೂತಿ 
ಅದರ ಮೇಲೆ ನಮ್ಮ ಮನೆಯ 
ಮ್ಯಾನ್ ಆಫ್ ದಿ ಮ್ಯಾಚ್ 
ನಾಲಕ್ಕು ಕಾಲಿನ ಮಣೆ 
ಸ್ಟೂಲ್ ನ್ನು 
ಉಲ್ಟಾ ಪುಲ್ಟಾ ಮಾಡಿ 
ನಾಲಕ್ಕೂ ಕಾಲುಗಳು 
ಆಕಾಶ ನೋಡಲು 
ನಡುವಿದ್ದ ಚೌಕಾಕರದ 
ಸಮತಟ್ಟಾದ ನಡು ಸ್ಥಳ   
ದೇವರನ್ನು ಕೂರಿಸಲು 
ಉಚಿತ ವಾಗಿತ್ತು 
ಒಂದೊಂದು ಕಾಲಿಗೆ ರಟ್ಟಿನಿಂದಾದ ಅರಮನೆಯ ಕಂಬಗಳ ಹೋಲುವಂತಹ 
ಡಿಸೈನ್ ಕತ್ತರಿಸಿ ಅದರ ಮೇಲೆ ಚಿನ್ನದ ಬಣ್ಣದ ಚಿನ್ನಾರಿಗಳನ್ನು ಗೋಂದಿನಿಂದ 
ಅಂಟಿಸಿ ಟ್ವಾಯ್ನ್ ದಾರದಿಂದ ಕಾಲಿಗೆ ಕಟ್ಟಿ ಮರ ಎಲ್ಲೂ ಕಾಣಿಸದಿದ್ದ ಹಾಗೇ 
ಅರಮನೆಯ ಸಿಂಹಾಸನ ಗಣೇಶನಿಗಾಗಿ
ಕಾಯುತ್ತಾ ಇತ್ತು. ಸಾಧಾರಣ ಸ್ಟೂಲ್ ಗೆ 
ಇಷ್ಟೊಂದು ಬುರುಡೆನಾ 
ಆದ್ರೆ ನೋಡಿ ಆ ಸ್ಟೂಲ್ 
ಮಾಡಿದ ಪುಣ್ಯ ಇರಬೇಕು 
ಹಬ್ಬದ ದಿನ ತನ್ನ ಮಡಿಲಲ್ಲಿ ಗಣೇಶನ್ನ ದಿನವಿಡೀ ಕೂರಿಸಿ ಕೊಳ್ಳುತ್ತಿದ್ದದ್ದು 
ಎಲ್ಲರೂ ಗಣೇಶನ ಜೊತೆಗೇ 
ಸ್ಟೂಲ್ ಗೂ ಕೈ ಮುಗೀತಿದ್ದದ್ದು 
ಅದರ ಜೀವನ ಸಾರ್ಥಕ ಅನಿಸುತ್ತಿತ್ತು 
ಇದೆಲ್ಲಾ ಹ್ಯಾಗೆ ಶುರುವಾಯ್ತುಂತಂದ್ರೆ
1959ರ ಗಣೇಶನ ಹಬ್ಬ 
ಕಾರ್ಗಲ್ ನಲ್ಲಿ 
ಪಕ್ಕದ್ಮನೆ ರಾಮನಾಥ್ ಮತ್ತೆ 
ಅವರ ಮಗಳು ಸಾವಿತ್ರಿ 
ಗಣೇಶನ ಹಬ್ಬದ ದಿವಸ ಬೆಳಗ್ಗೆ 
ನಮ್ಮಣ್ಣ ಮೇಧಾವಿಗೆ 
ಪಂಚೆ ಉಡಿಸಿ ಮಾರ್ಕೆಟ್ ಗೆ ಕರೆದುಕೊಂಡು ಹೋದರು 
ಅಲ್ಲಿ ಅವನು ಮಣ್ಣಲ್ಲಿ ಮಾಡಿದ 
ಅಂದ ಚಂದದ ಪುಟ್ಟ ಬಣ್ಣಹಚ್ಚಿದ 
ಗಣೇಶನ ವಿಗ್ರಹವ ಎತ್ಕೊಂಡ  
ಸಾವಿತ್ರಿ ಮತ್ತೊಂದನ್ನ ಎತ್ಕೊಂಡ್ಲು 
ನಮ್ಮ ಮನೆಗೆ ಒಂದು ಗಣೇಶ 
ಅವರ ಮನೆಗೆ ಒಂದು ಅಂತ 
ಅದಕ್ಕಾದ ಹಣವನ್ನ 
ರಾಮನಾಥ್ ರವರು ಕೊಟ್ರು 
ಬೆಳ್ಳಿ ತಟ್ಟೆಯಲ್ಲಿ ಸ್ವಲ್ಪ ಹಳದಿ ಮಿಶ್ರಿತ 
ಅಕ್ಷತೆ ಕಾಳು ಹರಡಿ 
ಗಣೇಶನ್ನ ಅದರ ಮೇಲೆ ಕೂರಿಸಿ 
ಮನೆಗೆ ಕರೆದುಕೊಂಡು ಬಂದ್ರು 
ಅಮ್ಮನಿಗಾಗಲಿ ಅಪ್ಪನಿಗಾಗಲಿ 
ಗೊತ್ತೇ ಇರಲಿಲ್ಲಾ 
ಗಣೇಶ ಬಂದಾಂತ ಉತ್ಸಾಹದಿಂದ 
ನಾವೆಲ್ಲಾ ಕಿರುಚಲು 
ಪುಟ್ಟ ಗಣೇಶನ ಬಾ ಬಾ ಅಂತ
ಸಂತೋಷದಿಂದ ಬರಮಾಡಿಕೊಂಡ್ರು 
ಆಗ ಪ್ರಾರಂಭಿಸಿದ ಗಣೇಶನ ಹಬ್ಬ
65 ವರ್ಷ ತುಂಬಿದೆ ನಡುವೆ 
ಅಮ್ಮ, ಅಪ್ಪ,ಅಣ್ಣ ತೀರಿಕೊಂಡ 
ಆ ಮೂರು ವರ್ಷ ಹಬ್ಬವ ಆಚರಿಸಲಿಲ್ಲ
ಆದ್ರೆ ಆ ರೀತಿ ರಿವಾಜು ಈ ದಿನದ ವರೆಗೂ ಪಾಲಿಸಿ ಕೊಂಡುಬರುತ್ತಿದ್ದೀವಿ.
ಬೆಳಗ್ಗೆ ಎದ್ದು ಸ್ನಾನ ಮಾಡಿ ಪಂಚೆ 
ಉಟ್ಕೊಂಡು ಗಣೇಶನ ಕರೆ ತರಲು 
ಮನೆಯಿಂದ ಅಣ್ಣ ತಮ್ಮಂದಿರು ನಾವು ನಾಲಕ್ಕು ಜನ ಮಾರ್ಕೆಟ್ ಗೆ ಹೋಗಿ 
ಒಳ್ಳೆಯ ಮುಕ್ಕಾಲು ಅಡಿ ಎತ್ತರದ ಬಣ್ಣದ ಗಣೇಶನ ತರಲು, ಅದನ್ನ ಬೆಳ್ಳಿ ತಟ್ಟೆಯಲ್ಲಿಟ್ಟು ಎತ್ತಿ ಕೊಂಡು ಬರಲು 
ಮೇಧಾವಿ ಅಣ್ಣಂಗೆ ಜಿಮ್ಮೆದಾರಿಯ ಸೌಂಪಿಸಲಾಗಿತ್ತು ಇನ್ನೊಂದು ತಂಡ ಹೂವು ಹಣ್ಣು ಎಲೆ ಅಡಿಕೆ ಕರ್ಪೂರ, ಊದು ಬತ್ತಿ ತರಲು 
ಸರಿಯಾಗಿ ಬೆಳಗ್ಗೆ ಒಂಬತ್ತು ಘಂಟೆಗೆ 
ಗಣೇಶನ್ನ ಮನೆಯಲ್ಲಿ ಕೂರಿಸಿ 
ಪ್ರಥಮ ಕಾಲ ಪೂಜೆ, ನೈವೇದ್ಯವೆಲ್ಲಾ ಮುಗಿಸಿ ಬೆಳಗ್ಗಿನ ಉಪಹಾರ 
ಇಡ್ಲಿ ದಾಲ್, ಉದ್ದಿನ ವಡೆ, ಚಟ್ನಿ 
ಕೇಸರಿ ಬಾತ್ ಕಡುಬು ಮುಗಿಸಲು 
ಗಣೇಶನ ತರಹ ಅಲ್ಲಾಡದೆ ಕುಳಿತು 
ಗಣಪತಿಯೇ ಗಜಮುಖನೆ ನಿನಗೆ ವಂದನೆ ನಂಬಿದವರ ಪಾಲಿನ 
ಕಲ್ಪತರುವು ನೀನೇ ಹಾಡನ್ನ ಟೇಪ್ ರೆಕಾರ್ಡ್ ನಲ್ಲಿ ಕೇಳ್ತಾ ಕೇಳ್ತಾ 
ಇನ್ನೊಂದು ಸುತ್ತು 
ಚಕ್ಕುಲಿ, ಕೋಡುಬಳೆ 
ತೆಂಗಿನ ಕಾಯಿ ಬರ್ಫಿ ತಿನ್ನಲು 
 ಬಂದೇ ಬಿಡ್ತು ಮಧ್ಯಾಹ್ನ ಪೂಜೆ 
ನೈವೇದ್ಯದ ನಂತರ ಊಟದ ಸಮಯ
ಕೋಸಂಬರಿ, ಹುರಳಿಕಾಯಿ ಪಲ್ಯ, ಹುರಿದ ಮಸಾಲೆ ಆಲೂಗೆಡ್ಡೆ,
ಮಸಾಲ್ ವಡೆ ಶ್ಯಾವಿಗೆ ಪಾಯಸ,
ಅನ್ನ, ನುಗ್ಗೆಕಾಯಿ ಸಾಂಬಾರ್, ಅಪ್ಪಳ 
ತಿಳಿಸಾರು, ಮಜ್ಜಿಗೆ, ಮಿಡಿ ಮಾವಿನ ಉಪ್ಪಿನ್ ಕಾಯಿ ಮೊಸರೂಂತ ಗಣೇಶಂಗೆ ಹಬ್ಬದೂಟ ಆದ್ರೆ 
ತಿಂದು ಚಪ್ಪರಿಸಿದ್ದು ನಾವು .
ಗಣೇಶ ವಿಗ್ನ ವಿನಾಶಕ, 
ಪರೀಕ್ಷೆ ಯಲ್ಲಿ 
ಸುಲಭವಾದ ಪ್ರಶ್ನೆಗಳು ಕೇಳಲು 
ನಿರ್ವಿಗ್ನ ಉತ್ತರಗಳು ಬರೆಯಲು 
ಧಾರಾಳವಾಗಿ ಅಂಕಗಳ ಕೊಡಿಸಲು ಮೇಷ್ಟ್ರುಗಳಿಗೆ ಉದಾರತೆ ತೋರಿಸಲು 
ಸ್ಕೂಲ್ ಪುಸ್ತಕಗಳು ವಿಶೇಷವಾಗಿ 
ಇಂಗ್ಲೀಷ್ ಹಾಗೂ ಗಣಿತದ ಪುಸ್ತಕಗಳ 
ಗಣೇಶನ ಮುಂದಿಟ್ಟು ಇದೆಲ್ಲವೂ ನಡೆಯಲೀಂತ ಬೇಡಿಕೊಳ್ಳುತ್ತಿದ್ದೆವು. 
ನನ್ನ ಸಹ ಪಾಠಿಗಳು ಸುಧೀರ, ಚಂದ್ರು 
ನಾಗೇಶ, ನನ್ನ ತಮ್ಮ ಉದಯ ಎಲ್ಲಾ ಸೇರಿ ಹುಡುಗರ ಜುಂಡೊಂದು  
ಮಧ್ಯಾಹ್ನ ಮೂರು ಘಂಟೆಗೆ 
ಮನೆಯ ಬಿಟ್ಟರೆ 108 ಗಣೇಶನ್ನ ನೋಡದೇನೆ ವಾಪಸ್ಸು ಮನೆಗೆ ಬರುತ್ತಿರಲಿಲ್ಲ. ಪ್ರತ್ಯೇಕ ಮನೆಯಲ್ಲಿ ಗಣೇಶ ಕೂರಿಸಿದ್ದೀರಾಂತ ಕೇಳೋದೊಬ್ಬ
ಧಢ ಧಡನೇ ನುಗ್ಗೋದು ನಾವೆಲ್ಲಾ 
ಗಣೇಶನಿಗೆ ಅಕ್ಷತೆ ಕಾಳು ಹಾಕೋದು ನಂತರ ಬಸ್ಕಿ ನಮಸ್ಕಾರ ಮಾಡಿ 
ಕಡ್ಲೆ ಕಾಳು ಹುಸ್ಲಿ, ಮೈಸೂರ್ ಪಾಕು ಮೋದಕ ಕಡುಬು ಹೀಗೇ ಎಲ್ರು ಮನೆಯಲ್ಲೂ ಏನಾದ್ರೂ ಪ್ರಸಾದ ಕೊಡೋವ್ರು ಅದನ್ನ ತಿಂದು ಕೆಲವೊಮ್ಮೆ ಪಾಯಸ ಕುಡಿದು ಗಣೇಶನ ಹೊಟ್ಟೆ ತರಹ ಆಗುವವರೆಗೂ ಅಥವಾ 108 ಗಣೇಶನ್ನ ನೋಡಿದ ಸಂಖ್ಯೆಯು ತಲುಪವವರೆಗೂ ನಡೀತಾ ಇತ್ತು 
ಸೋಡಾ ಫ್ಯಾಕ್ಟರಿ ಸುರೇಶಾಂತ 
ನಮ್ಮಣ್ಣನ ಕ್ಲಾಸ್ ಮೇಟ್ 
ಅವರ ಮನೆ ಮಾರ್ಕೆಟ್ ಪಕ್ಕ 
ಗಣೇಶ ಕೂರಿಸಿದ್ದೀರಾಂತ ಕೇಳ್ ದ್ವಿ 
ನಮ್ಮನ್ನು ನೋಡಿ ಬನ್ನಿ ಬನ್ನೀಂತ 
ಮನೆಯೊಳಗೆ ಓಡಿ ಹೋದ ಸುರೇಶಾ 
ಸರಿ ನಮ್ಮ ಲೆಕ್ಕದಲ್ಲಿ ಇನ್ನೊಂದು 
ಗಣೇಶಾಂತ ಒಳಗೆ ಹೋದರೆ ಗಣೇಶ ಇಲ್ಲಾ ಸುರೇಶ ಹೋಗಿ ಮಣೆ ಮೇಲೆ ಕೂತ್ಕೊಂಡು ನಾನೇ ಗಣೇಶಾಂತ 
ಅವರಮ್ಮ ಪರಕೆ ತೆಗೊಂಡು ಬಂದಿದ್ದೇ ತಡ ಓಡಿ ಹೋದ, ನಮಗೆಲ್ಲರಿಗೂ 
ಅವರಮ್ಮ ಕುಡಿಯಲು 
ಆರೆಂಜ್ ಕಲರ್ ಕ್ರಶ್ ಕೊಟ್ಟರು.
ಈ ಗಣೇಶ ದರ್ಶನ ಯಾತ್ರಾ... 
ಯಾರ ಮನೆಯ ಗಣೇಶನ ಡೆಕೋರೇಷನ್ ಚೆನ್ನಾಗಿತ್ತೂಂತ
ನಮ್ಮ ನಮ್ಮಲ್ಲೇ ಚರ್ಚೆ 
ಪುರಸ್ಕಾರ ಎಲ್ಲಾ ಕೊಟ್ಟು 
ಸಂತೋಷ ಪಡುತಿದ್ವಿ. 
ಸಂಜೆ 6 ಘಂಟೆಗೆಲ್ಲಾ ಟಾರ್ಗೆಟ್ ಮುಗಿಸಲು ಹಾತೊರೆಯುತ್ತಿದ್ದೆವು.  
ಭಯ, ಯಾಕೇಂದ್ರೆ ವಿಳಂಬವಾದರೆ 
ಚಂದ್ರ ಕಾಣಿಸಿದರೇ 
ಚಂದ್ರನ್ನ ನೋಡಬಾರದೂಂತ, 
ಅಮ್ಮ ಅಕ್ಕ ಎಲ್ರು ಹೇಳೋವ್ರು 
ನೋಡಿದ್ರೆ ಕಳ್ಳನಾಗ್ತೀಯಂತ 
ಇಲ್ಲದ ಸಲ್ಲದ ಅಪವಾದ ಬೇರೇ 
ತಗ್ಗಿಸಿ ಕೊಂಡ ತಲೆ ಎತ್ತದೇ 
ಬಿರ್ ಬಿರ್ ನೇ ನಡೆದು 
ಮನೆಗೆ ಬರುತ್ತಿದ್ದೆವು 
ವಿಸರ್ಜನೆ ಕಾರ್ಯಕ್ರಮ
ರಾತ್ರಿ ಎಂಟು ಘಂಟೆಗೆ ಮನೆಯಿಂದ ಹೊರಟು ಸ್ಕೂಲ್ ಬಳಿಯಿದ್ದ ಹರಿವ ನೀರಿನ ಕಾಲುವೆಯಲ್ಲಿ ಬಿಟ್ಟು ಬರಬೇಕು  ಬಲು ರಿಸ್ಕೀ ಜೋಖಂ ಭರಿತವಾದದ್ದು 
ಒಂದೆಡೆ ಚಂದ್ರನ್ನ ನೋಡಬಾರದು
ಇನ್ನೊಂದೆಡೆ ಸ್ವಲ್ಪ ದೂರ ಕತ್ತಲೆಯಲ್ಲಿ 
ನಡೆಯ ಬೇಕಿತ್ತು ಬರಬೇಕಾದ್ರೆ ಹೆದರುಪುಕ್ಕನಾದ ನನ್ನನ್ನ ಬಿಟ್ಟ್ ಬಿಟ್ಟು
ಜೂಟ್ ಅಂತ ಹೇಳಿ ಓಡಿ ಬಿಡೋರು.. 
ಆದ್ರೂವೆ ಬಿಟ್ಟುಕೊಡದೆ 
ಕೂಗಿ ಚಿಲ್ಲಾಡ್ಕೊಂಡು 
ಗಣೇಶ ಬಂದ ಕಾಯಿ ಕಡುಬು ತಿಂದ 
ಚಿಕ್ಕ ಕೆರೇಲಿ ಬಿದ್ದ ದೊಡ್ಡ ಕೆರೇಲಿ ಎದ್ದ
ಏನು ಆನಂದ, ಲೋ ಪಿಚ್ ಹೈ ಪಿಚ್ 
ರಾಗ ಬದ್ದವಾಗಿ ಪ್ರಾಸ ಬದ್ದವಾಗಿ 
ಆರತಿ ಎತ್ತಿ ಮೂರು ಸಲ ನೀರಲ್ಲಿ ಮುಕ್ಕಿ 
ಮೂರನೇ ಸಲ ನೀರಲ್ಲೇ ಬಿಟ್ಟು 
ಮನೆಯತ್ತ ಹೊರಡುತ್ತಿದ್ದೆವು 
ಬರುತ್ತಾ ಮರಾಠಿ ಎಲ್ಲಿಂದ್ ಬಂತೋ
ಅರ್ಥವಾಯ್ತೋ ಇಲ್ಲವೋ ಆದ್ರೆ 
ಗಣಪತಿ ಬಪ್ಪಾ ಮೋರ್ ಯಾ 
ಮುಂದಿಲ್ಯಾ ವರ್ಷಾ ಲೌಕರ್ ಯಾ
ಅಂತ ಕೂಗಿ ಹೇಳಿ ಮುಕ್ತಾಯಕ್ಕೆ 
ಬರುತ್ತಿತ್ತು ಗಣೇಶನ ಹಬ್ಬ.
ಈಗ ನಾವೆಲ್ಲಾ ಬೆಂಗಳೂರು ವಾಸಿ 
ಮನೆಯಲ್ಲಿ ಗಣೇಶ ಕೂರಿಸ್ತೀವಿ 
ಆದ್ರೆ ಆಗಿದ್ದ ಆ ಉತ್ಸಾಹ 
ಆ ಉಲ್ಲಾಸ ಆ ಜೋಷ್ 
ಈಗ ಎಲ್ಲಿದೆ 
ಸದ್ಯಕ್ಕೆ ಬೆಂಗಳೂರಲ್ಲಿದ್ದ 
ಮನೆ ಇರುವ ಮುಖ್ಯ ರಸ್ತೆಯಲ್ಲಿ 
ಡಿಜೆ ಮ್ಯೂಸಿಕ್ ಬ್ಯಾಂಡ್ ಜೋರು ಶೋರಾಗಿ ಕೇಳಿಸಿದೊಡನೆ 
ಮನೆಯಿಂದ ಎಲ್ಲರೂ 
ಹೊರಬಂದು ನೋಡಲು, 
ಬ್ಯಾಂಡ್ ಹಿಂದೆ ಹಾಡೋವ್ರ ಟ್ರೂಪ್ 
ಅದರೊಟ್ಟಿಗೆ ಕಪ್ಪು ಪ್ಯಾಂಟ್, 
ಕಪ್ಪುಜರಿ ಶರ್ಟ್, ಕಾಲಲ್ಲಿ ಆಡಿಡಾಸ್ 
ಶೂಗಳು ತಾಳ ಮೇಳ ಡಾನ್ಸ್ 
ದೊಡ್ಡ ರಾಕೆಟ್ ಗಣೇಶ  ಟ್ರಾಲಿಯಲ್ಲಿ
ಚಂದಾದಾರರಿಗೆ ಉತ್ಸವ, 
ಮಾರ್ಕೆಟ್ನಲ್ಲಿ, ಮನೆಗಳಲ್ಲಿ ಚಂದಾ ವಸೂಲಿಸೋದೇ ಮುಖ್ಯ ಧ್ಯೇಯ 
50 ಕೆಜಿ ತೂಕದ ಬೂಂದಿ ಲಡ್ಡು 
ಕಂಟ್ರಾಕ್ಟರ್ ಕಮಲೇಶ ಹರಾಜಿನಲ್ಲಿ 
50,000 ರೂಪಾಯಿಯ ಕೊಟ್ಟು ಖರೀದಿಸಿದ, ಹೀಗೇ ದುಡ್ಡಿಗೇನೂ
ಕೊರತೆಯಿಲ್ಲದೆ ಧನ ಸಹಾಯವ 
ಮಾಡಿಸಿದ್ದ ಐಶ್ವರ್ಯ ಗಣೇಶ.
ಮನೆಯಿಂದ ಹೊರಗೆ ಕೋಲಾಹಲ 
ಮನೆಯೊಳಗೆ ಯಾರ ಹಂಗೂ ಇಲ್ಲದೆ 
ಯಾರ ಗೋಜಿಗೂ ಹೋಗದೆ 
ಆರಾಮಾಗಿ ಮಂಟಪದಲ್ಲಿ 
ಮಂದಹಾಸವ ಬೀರಿ ಕುಳಿತಿದ್ದ 
ಸಿದ್ಧಿ ವಿನಾಯಕ ನಮ್ ಗಣೇಶ,
ಬೆಳಗಿಂದ ಗಣೇಶನ್ನ ಹೊರಗಿನವರು 
ಯಾರೂ ಬಂದು ನೋಡಲಿಲ್ಲಾ 
ಯಾರೂ ಕೇಳಲೂ ಇಲ್ಲಾ 
ಸಿಂಗಲ್ ಮಕ್ಕಳ ಕುಟುಂಬ 
ಅಮ್ಮ ಅಪ್ಪ ಮಗು ಅನ್ನೋದು 
ಒಂದು ಯೂನಿಟ್ ಕುಟುಂಬ
ಮತ್ತೆ ಜಾಯಿಂಟ್ ಫ್ಯಾಮಿಲಿಗಳು 
ಸಂಯುಕ್ತ ಕುಟುಂಬಗಳು 
ಮರೆಯಾಗ್ತಾ ಕಾಣೆಯಾಗ್ತಾ 
ಹಬ್ಬಗಳ ಮೇಲೂ ಪ್ರಭಾವ ಬೀರಿತ್ತು 
ಒಂದೆಡೆ ಜೆನ್ ಜೀ, ಎಲ್ಲವನ್ನೂ 
ಪ್ರಶ್ನಿಸುವ ನಾಸ್ತಿಕರು 
ಇನ್ನೊಂದೆಡೆ ಒಪ್ಪೋರ್ಚುನಿಸ್ಟುಗಳು 
ಅಂದರೆ ಅವಸರವಾದಿಗಳು, ಚಂದಾದಾರರಿಂದಾಗಿ 
ಗಣೇಶನ ಹಬ್ಬ ಕ್ರಮೇಣ 
ಮನೆಗಳಿಂದ ಹೊರ ಹಮ್ಮಿ ಬೀದಿಗೊಂದು ಗಣೇಶ 
ವಾರ್ಡ್ ಗೊಂದು ಗಣೇಶಂತ 
ವ್ಯಾಪಾರ ದ್ರಷ್ಟಿಯ 
ಅಳವಡಿಸಿಕೊಂಡು ಬೆಳೆದು 
ನಿಂತಿರುವ ಗಣೇಶನ್ನ ನೋಡಿದ್ರೆ ಆಶ್ಚರ್ಯವಷ್ಟೇ...
ಆದ್ರೆ ಇದೆಲ್ಲವೂ ಕಿಂಚಿತ್ತೂ 
ಕಂಡು ಕೊಳ್ಳದ ಆತನಿಗೆ 
ಇದೆಲ್ಲವೂ ಗೊತ್ತಿರಬೇಕು ಸರ್ವಜ್ಞಾನಿಯಾದ 
ನಮ್ಮ ಗಣೇಶಂಗೆ 
ನಾವು ನೋಡಿದ್ದು, ಅನುಭವಿಸಿದ್ದು,
ಈಗ  ಇರೋದನ್ನ, ನಡೆಯೋದನ್ನ ನೋಡಿದ್ರೆ ಗೋಚರವಾಗೋ 
ವ್ಯತ್ಯಾಸ ಅಜಗಜಾಂತರ
ಅಜ ಅಂದ್ರೆ ಮೇಕೆ ಗಜಾ ಅಂದ್ರೆ ಆನೆ 
ಮೇಕೆಗೂ ಆನೆಗೂ ಇರುವ ಅಂತರವೇ ಅಜ ಗಜಾಂತರ
ಮೇಕೆ, ಆಡು, ಕುರಿ ಇವುಗಳ IQ ಬಲು ಕಮ್ಮಿ ಅದೇ ಆನೆಯ IQ ಅಪಾರ 
ಮಹಾರಾಜ ದಕ್ಷನಿಗೆ ತಲೆ ತುಂಡರಿಸಿದಾಗ ಕ್ಷಮತೆಗನುಗುಣವಾಗಿ 
ಮೇಕೆ ತಲೆ ಅಂಟಿಸಿ 
ಜೀವ ಕೊಟ್ಟರು, ಹಾಗೆಯೇ ಗಣೇಶನ ತಲೆತುಂಡಾದಾಗ 
ಕ್ಷಮತೆಗನುಗುಣವಾಗಿ 
ಆನೆಯ ತಲೆ ಜೋಡಿಸಿ 
ಗಜಮುಖ ಗಣಪತಿ 
ನಮಗೆ ದೊರಕಿದ.... 
ವಿಗ್ನೇಶ್ವರಾಯ ನಮಃ 
(ಮೇಲೆ ಬರೆದಿರುವ ಪ್ರಸ್ತಾವನೆಗೂ 
ಕೆಳಗೆ ಬರೆದಿರೋ ಬ್ಲಾಗ್ ಗೂ 
 ಸಂಬಂಧ ಹುಡುಕಬೇಡಿ ಇದೊಂತರಹ ಪ್ರಯತ್ನ ನಿಮ್ಮನ್ನು ಕೈ ಹಿಡಿದು ದಾರಿ ತೋರಿಸಿ ನನ್ನ ಬ್ಲಾಗ್ ಓದಲು ಪ್ರೋತ್ಸಾಹಿಸಲು ಅಷ್ಟೇ )




 




 










 




 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.