ಜೈ ಕರ್ನಾಟಕ ಕ್ಕಾಗಿ

ಗಣೇಶನ ಸ್ಟೂಲ್

ಎಲ್ಲರ ಮನೆಯಲ್ಲಿಯು ಇರುವಂತೆ 
ನಮ್ಮ ಮನೆಯಲ್ಲೂ ಇತ್ತು, 
ಕಾಲುಮಣೆ 
ಹಾಂ ಸ್ಟೂಲ್ ಕಣಪ್ಪ 
ಅದೇ ಹಳೆಯ ಕಾಲದ 
ನಾಲಕ್ಕು ಕಾಲಿನ ಮರದ ಸ್ಟೂಲ್,
ಮೊಣಕಾಲು ಎತ್ತರದ ಕಾಲುಮಣೆ,
ಬೀಟೆ ಮರದ್ದು 
ಅದಕ್ಕೊಂದು ಹಿಸ್ಟರಿ, 
ಜಾಗ್ರಫಿ,ಎಲ್ಲವೂ ಇದೆ. 
ಕಬಿನಿ ನದಿ ತೀರದ 
ಅರಣ್ಯ ಕ್ಷೇತ್ರದಲ್ಲಿ ಬೆಳೆದ 
ರೋಸ್ ವುಡ್ಡೇ ಈ ಬೀಟೆ ಮರ 
ಇಂಜಿನಿಯರ್ ಆಗಿದ್ದ ನಮ್ಮಪ್ಪಂಗೆ 
ಅರಣ್ಯ ವಿಭಾಗದವರಿಂದ ಫಾರೆಸ್ಟ್ ರೇಂಜರ್ ಆಗಿದ್ದ ರಾಮಣ್ಣ ಒದಗಿಸಿದ್ದರು.
ತಲಕಾಡಿನ ಬಡಗಿ ಚೆಲುವರಾಜನಿಂದ  ನಾಲಕ್ಕು ಕಾಲುಳ್ಳ ಮಣೆ ಮಾಡಿಸ್ಕೊಂಡ್ರು,
ಕುಳಿತುಕೊಳ್ಳಲು ಅನುಕೂಲವಾದದ್ದು, 
ಎದ್ದು ಅದರ ಮೇಲೆ ನಿಂತರೆ 
ಬಲ್ಬ್ ಬದಲಿಸಲು, 
ಕ್ಯಾಲೆಂಡರ್ ತಗಲಿಸಲು 
ಜೇಡರ ಬಲೆಯ ಬಿಡಿಸಲು 
ಧೂಳು ಒರಸಲು ಉಪಯುಕ್ತವಾಗಿತ್ತು. 
ಆದರೆ ಸರಿಯಾಗಿ ಪ್ರತಿ ವರ್ಷ 
ಭಾದ್ರಪದ ಶುಕ್ಲದ ಚೌತಿಯಂದು 
ಆ ಕಾಲು ಮಣೆಗೆ ಶಾಪವೋ 
ಪಾಪವೋ ವಿಮೋಚನೆ ಆಗ್ತಿತ್ತು 
ಸ್ಟೂಲ್ ಜನ್ಮ ಫಲವ ಪಡೆಯುತ್ತಿತ್ತು 
ಚೌತಿಗೆ ಒಂದು ದಿನ ಹಿಂದೆ ಮಣೆಗೆ ಸೋಪು ಶಾಂಪೂ ಹಾಕಿ ನೀರಲ್ಲಿ ಸ್ನಾನ ಮಾಡಿಸಿ ಗಣೇಶ ಕೂರಿಸುವದಕ್ಕೆ ತಯ್ಯಾರಿ ನಡೆದಿತ್ತು.
500 ಮನೆಗಳಿಗೂ 
ಹೆಚ್ಚಾಗಿ ಜೀವಂತವಾಗಿದ್ದ 
ಕಾರ್ಗಲ್ ಕಾಲೋನಿಯಲ್ಲಿ ನಾವು 
ನಮ್ಮ ಮನೆಯಲ್ಲಿ 
ಆಚರಿಸಿದ ಆಚರಿಸುತಿದ್ದ 
ಗಣೇಶನ ಹಬ್ಬ 
ಮರೆಯುವಂತದ್ದೇ ಇಲ್ಲಾ
ಮನೆಯ ದೊಡ್ಡ ಹಾಲ್ ನಲ್ಲಿ 
ಗಣೇಶನ್ನ ಕೂರಿಸಲು ಆಯ್ಕೆ 
ಮಾಡಿದ್ದಾಯ್ತು. ರಾತ್ರಿಯಿಡೀ 
ಶೃಂಗಾರಿಸಲು ನನ್ನ ಪಾಲಿಗೆ 
ಕೋಣೆ ತುಂಬಾ ಕಾಗದದ ಬಣ್ಣ ಬಣ್ಣದ 
ರಿಬ್ಬನ್ ತೋರಣ ಅಂಟಿಸಿದ್ದಾಯ್ತು. 
ರಾತ್ರಿ ಹನ್ನೆರಡು ಘಂಟೆಗೆ ಸರಿಯಾಗಿ 
ಅಮ್ಮನ ಮರದ ಪೆಟ್ಟಿಗೆ ಹೊರಗೆ ಬಂತು 
ಅದರೊಳಗಿಂದ ಎಂಬ್ರಾಯಿಡ್ರಿ ಕಸೂತಿ ಮಾಡಿದ ಪರದೆ, ಟೇಬಲ್ ಕ್ಲಾತ್ ಮತ್ತೆ ಬೆಳ್ಳಿ ದೀಪ ಸ್ಥಂಭಗಳು, ಕಾಮಾಕ್ಷಿ ದೇವಿಯ ದೀಪ, ಆರತಿ ತಟ್ಟೆ,  ಚೊಂಬು ಎಲ್ಲವೂ ಹೊರಬಂತು. ಎಲ್ಲವನ್ನು ಅಚ್ಚುಕಟ್ಟಾಗಿ ತೊಳೆದು
ಎರಡಡಿ ಎತ್ತರದ ಮರಪೆಟ್ಟಿಗೆ 
ಗಣೇಶನ ವಿಗ್ರಹವಿಡಲು 
ಯೋಗ್ಯವೆಂದು ನಡುವಿನಲ್ಲಿ 
ಗೋಡೆಗೆ ಸೇರಿಸಿ ತಳ್ಳಿಟ್ಟಿದ್ವಿ.
ಪೆಟ್ಟಿಗೆ ಮೇಲೊಂದು ಬಿಳಿ 
ಟೇಬಲ್ ಕ್ಲಾತ್ ಅದರಲ್ಲೇ ನಡುವೆ 
ಅಮ್ಮ ಬಿಡಿಸಿದ್ದ ರೆಕ್ಕೆ ಪಂಕ ಗರಿಯ 
ಜೋಡಿ ನವಿಲುಗಳ ಹೂ ಬಳ್ಳಿಯ ಕಸೂತಿ ಅತಿ ಸುಂದರ. 
ಅದರ ಮೇಲೆ ನಮ್ಮ ಮನೆಯ 
ಮ್ಯಾನ್ ಆಫ್ ದಿ ಮ್ಯಾಚ್ 
ನಾಲಕ್ಕು ಕಾಲಿನ ಮಣೆ 
ಮರದ ಸ್ಟೂಲ್ ನ್ನು 
ಉಲ್ಟಾ ಪುಲ್ಟಾ ಮಾಡಿ 
ನಾಲಕ್ಕೂ ಕಾಲುಗಳು 
ಆಕಾಶ ನೋಡಲು 
ನಡುವಿದ್ದ ಚೌಕಾಕರದ 
ಸಮತಟ್ಟಾದ ನಡು ಸ್ಥಳ   
ದೇವರನ್ನು ಕೂರಿಸಲು 
ಉಚಿತವಾಗಿತ್ತು 
ಒಂದೊಂದು ಕಾಲಿಗೆ ರಟ್ಟಿನಿಂದಾದ ಅರಮನೆಯ ಕಂಬಗಳ ಹೋಲುವಂತಹ 
ಡಿಸೈನ್ ಕತ್ತರಿಸಿ ಅದರ ಮೇಲೆ ಚಿನ್ನದ ಬಣ್ಣದ ಚಿನ್ನಾರಿಗಳನ್ನು ಗೋಂದಿನಿಂದ 
ಅಂಟಿಸಿ ಟ್ವಾಯ್ನ್ ದಾರದಿಂದ ಕಾಲಿಗೆ ಕಟ್ಟಿ ಮರ ಎಲ್ಲೂ ಕಾಣಿಸದಿದ್ದ ಹಾಗೇ 
ಅರಮನೆಯ ಸಿಂಹಾಸನ ಗಣೇಶನಿಗಾಗಿ
ಕಾಯುತ್ತಾ ಇತ್ತು. 
ಆದ್ರೆ ನೋಡಿ ಆ ಸ್ಟೂಲ್ 
ಮಾಡಿದ ಪುಣ್ಯ ಇರಬೇಕು 
ಹಬ್ಬದ ದಿನ ತನ್ನ ಮಡಿಲಲ್ಲಿ ಗಣೇಶನ್ನ ದಿನವಿಡೀ ಕೂರಿಸಿ ಕೊಳ್ಳುತ್ತಿದ್ದದ್ದು 
ಎಲ್ಲರೂ ಗಣೇಶನ ಜೊತೆಗೇ 
ಸ್ಟೂಲ್ ಗೂ ಕೈ ಮುಗೀತಿದ್ದದ್ದು 
ಅದರ ಜೀವನ ಸಾರ್ಥಕ ಅನಿಸುತ್ತಿತ್ತು. 
1959ರ ಗಣೇಶನ ಹಬ್ಬ 
ಕಾರ್ಗಲ್ ನಲ್ಲಿ ಬೆಳಗ್ಗೆ 
ಪಕ್ಕದ್ಮನೆ ರಾಮನಾಥ್ ಮತ್ತೆ 
ಅವರ ಮಗಳು ಸಾವಿತ್ರಿ 
ನಮ್ಮಣ್ಣ ಮೇಧಾವಿಗೆ 
ಪಂಚೆ ಉಡಿಸಿ ಮಾರ್ಕೆಟ್ ಗೆ ಕರೆದುಕೊಂಡು ಹೋದರು.
ಅಲ್ಲಿ ಅವನು ಮಣ್ಣಲ್ಲಿ ಮಾಡಿದ 
ಅಂದ ಚಂದದ ಪುಟ್ಟ ಬಣ್ಣಹಚ್ಚಿದ 
ಗಣೇಶನ ವಿಗ್ರಹವ ಎತ್ಕೊಂಡ  
ಸಾವಿತ್ರಿ ಮತ್ತೊಂದನ್ನ ಎತ್ಕೊಂಡ್ಲು 
ಬೆಳ್ಳಿ ತಟ್ಟೆಯಲ್ಲಿ ಸ್ವಲ್ಪ ಹಳದಿ ಮಿಶ್ರಿತ 
ಅಕ್ಷತೆ ಕಾಳು ಹರಡಿ 
ಗಣೇಶನ್ನ ಅದರ ಮೇಲೆ ಕೂರಿಸಿ 
ಮನೆಗೆ ಕರೆದುಕೊಂಡು ಬಂದ್ರು 
ಅಮ್ಮನಿಗಾಗಲಿ ಅಪ್ಪನಿಗಾಗಲಿ 
ಗೊತ್ತೇ ಇರಲಿಲ್ಲಾ 
ಗಣೇಶ ಬಂದಾಂತ ಉತ್ಸಾಹದಿಂದ 
ನಾವೆಲ್ಲಾ ಕಿರುಚಲು 
ಪುಟ್ಟ ಗಣೇಶನ ಬಾ ಬಾ ಅಂತ
ಸಂತೋಷದಿಂದ ಬರಮಾಡಿಕೊಂಡ್ರು 
ಆಗ ಪ್ರಾರಂಭಿಸಿದ ಗಣೇಶನ ಹಬ್ಬ
65 ವರ್ಷ ತುಂಬಿದೆ 
ಬೆಳಗ್ಗೆ ಎದ್ದು ಸ್ನಾನ ಮಾಡಿ ಪಂಚೆ 
ಉಟ್ಕೊಂಡು ಗಣೇಶನ ಕರೆ ತರಲು 
ಮನೆಯಿಂದ ಅಣ್ಣ ತಮ್ಮಂದಿರು ನಾವು ನಾಲಕ್ಕು ಜನ ಮಾರ್ಕೆಟ್ ಗೆ ಹೋಗಿ 
ಒಳ್ಳೆಯ ಮುಕ್ಕಾಲು ಅಡಿ ಎತ್ತರದ ಬಣ್ಣದ ಗಣೇಶನ ತರಲು,  ಇನ್ನೊಂದು ತಂಡ ಹೂವು ಹಣ್ಣು ಎಲೆ ಅಡಿಕೆ ಕರ್ಪೂರ, ಊದು ಬತ್ತಿ ತರಲು 
ಸರಿಯಾಗಿ ಬೆಳಗ್ಗೆ ಒಂಬತ್ತು ಘಂಟೆಗೆ 
ಗಣೇಶನ್ನ ಮನೆಯಲ್ಲಿ ಕೂರಿಸಿ 
ಪ್ರಥಮ ಕಾಲ ಪೂಜೆ, ನೈವೇದ್ಯವೆಲ್ಲಾ ಮುಗಿಸಿ ಬೆಳಗ್ಗಿನ ಉಪಹಾರ 
ಇಡ್ಲಿ ದಾಲ್, ಉದ್ದಿನ ವಡೆ, ಚಟ್ನಿ 
ಕೇಸರಿ ಬಾತ್ ಕಡುಬು ಮುಗಿಸಲು 
ಗಣೇಶನ ತರಹ ಅಲ್ಲಾಡದೆ ಕುಳಿತು 
ಗಣಪತಿಯೇ ಗಜಮುಖನೆ ನಿನಗೆ ವಂದನೆ ನಂಬಿದವರ ಪಾಲಿನ 
ಕಲ್ಪತರುವು ನೀನೇ ಹಾಡನ್ನ ಟೇಪ್ ರೆಕಾರ್ಡ್ ನಲ್ಲಿ ಕೇಳ್ತಾ ಕೇಳ್ತಾ 
ಬಂದೇ ಬಿಡ್ತು ಮಧ್ಯಾಹ್ನ ಪೂಜೆ 
ನೈವೇದ್ಯದ ನಂತರ ಊಟದ ಸಮಯ
ಕೋಸಂಬರಿ, ಹುರಳಿಕಾಯಿ ಪಲ್ಯ, ಹುರಿದ ಮಸಾಲೆ ಆಲೂಗೆಡ್ಡೆ,
ಮಸಾಲ್ ವಡೆ ಶ್ಯಾವಿಗೆ ಪಾಯಸ,
ಅನ್ನ, ನುಗ್ಗೆಕಾಯಿ ಸಾಂಬಾರ್,
ಗಣೇಶಂಗೆ ಹಬ್ಬದೂಟ ಆದ್ರೆ 
ತಿಂದು ಚಪ್ಪರಿಸಿದ್ದು ನಾವು .
ಪರೀಕ್ಷೆ ಯಲ್ಲಿ 
ಸುಲಭವಾದ ಪ್ರಶ್ನೆಗಳು ಕೇಳಲು 
ನಿರ್ವಿಗ್ನ ಉತ್ತರಗಳು ಬರೆಯಲು 
ಧಾರಾಳವಾಗಿ ಅಂಕಗಳ ಕೊಡಿಸಲು ಮೇಷ್ಟ್ರುಗಳಿಗೆ ಉದಾರತೆ ತೋರಿಸಲು 
ಸ್ಕೂಲ್ ಪುಸ್ತಕಗಳು ವಿಶೇಷವಾಗಿ 
ಇಂಗ್ಲೀಷ್ ಹಾಗೂ ಗಣಿತದ ಪುಸ್ತಕಗಳ 
ಗಣೇಶನ ಮುಂದಿಟ್ಟು ಇದೆಲ್ಲವೂ ನಡೆಯಲೀಂತ ಬೇಡಿಕೊಳ್ಳುತ್ತಿದ್ದೆವು. 
ಸಂಜೆಯೊಳಗೆ 108
ಗಣೇಶನ್ನ ನೋಡಬೇಕು 
ವಿಳಂಬವಾಗುವ ಭಯ,
ಯಾಕೇಂದ್ರೆ ಮುಸ್ಸಂಜೆಯಲ್ಲಿ 
ಚಂದ್ರ ಕಾಣಿಸಿದರೇ 
ಚಂದ್ರನ್ನ ನೋಡಬಾರದೂಂತ, 
ಅಮ್ಮ ಅಕ್ಕ ಎಲ್ರು ಹೇಳೋವ್ರು 
ನೋಡಿದ್ರೆ ಕಳ್ಳನಾಗ್ತೀಯಂತ 
ಇಲ್ಲದ ಸಲ್ಲದ ಅಪವಾದ ಬೇರೇ 
ತಗ್ಗಿಸಿ ಕೊಂಡ ತಲೆ ಎತ್ತದೇ 
ಬಿರ್ ಬಿರ್ ನೇ ನಡೆದು 
ಮನೆಗೆ ಬರುತ್ತಿದ್ದೆವು.
ಹಾಗೇನಾದ್ರೂ ಗೊತ್ತಿಲ್ಲದೇ 
ಚಂದ್ರನ್ನ ನೋಡಿಬಿಟ್ರೆ 
ಅದಕ್ಕೊಂದು ಪರಿಹಾರ 
ಶಮಂತಕ ಮಣಿಯ ಸಂಪೂರ್ಣ 
ಕಥೆ ಕೇಳಿದ್ರೇ ಅಪವಾದದಿಂದ 
ಮುಕ್ತಿ ಸಿಗತ್ತೇಂತ ನಂಬಿಕೆ.
ನಮ್ಮ ಮನೆಯಲ್ಲಿ ಗಣೇಶನ ಹಬ್ಬ 
ಒಂದು ದಿನಕ್ಕೇ ಸೀಮಿತ 
ರಾತ್ರಿ ಮಹಾ ಮಂಗಳಾರತಿಯ 
ನಂತರ ವಿಸರ್ಜನೆ ಕಾರ್ಯಕ್ರಮ
ರಾತ್ರಿ ಎಂಟು ಘಂಟೆಗೆ ಮನೆಯಿಂದ ಹೊರಟು ಸ್ಕೂಲ್ ಬಳಿಯಿದ್ದ ಹರಿವ ನೀರಿನ ಕಾಲುವೆಯಲ್ಲಿ ಬಿಟ್ಟು ಬರಬೇಕು. ಬಲು ರಿಸ್ಕೀ ಜೋಖಂ ಭರಿತವಾದದ್ದು 
ಒಂದೆಡೆ ಚಂದ್ರನ್ನ ನೋಡಬಾರದು
ಇನ್ನೊಂದೆಡೆ ಸ್ವಲ್ಪ ದೂರ ಕತ್ತಲೆಯಲ್ಲಿ 
ನಡೆಯ ಬೇಕಿತ್ತು. ಬರಬೇಕಾದ್ರೆ ಹೆದರುಪುಕ್ಕನಾದ ನನ್ನನ್ನ ಬಿಟ್ಟ್ ಬಿಟ್ಟು
ಜೂಟ್ ಅಂತ ಹೇಳಿ ಓಡಿ ಬಿಡೋರು.. 
ಆದ್ರೂವೆ ಬಿಟ್ಟುಕೊಡದೆ 
ಕೂಗಿ ಚಿಲ್ಲಾಡ್ಕೊಂಡು 
ಗಣೇಶ ಬಂದ ಕಾಯಿ ಕಡುಬು ತಿಂದ 
ಚಿಕ್ಕ ಕೆರೇಲಿ ಬಿದ್ದ ದೊಡ್ಡ ಕೆರೇಲಿ ಎದ್ದ
ಆರತಿ ಎತ್ತಿ ಮೂರು ಸಲ ನೀರಲ್ಲಿ ಮುಕ್ಕಿ 
ಮೂರನೇ ಸಲ ನೀರಲ್ಲೇ ಬಿಟ್ಟು 
ಮನೆಯತ್ತ ಹೊರಡುತ್ತಿದ್ದೆವು 
ಬರುತ್ತಾ ಮರಾಠಿ 
ಅರ್ಥವಾಯ್ತೋ ಇಲ್ಲವೋ ಆದ್ರೆ 
ಗಣಪತಿ ಬಪ್ಪಾ ಮೋರ್ ಯಾ 
ಮುಂದಿಲ್ಯಾ ವರ್ಷಾ ಲೌಕರ್ ಯಾ
ಅಂತ ಕೂಗಿ ಹೇಳಿ ಮುಕ್ತಾಯಕ್ಕೆ 
ಬರುತ್ತಿತ್ತು ಗಣೇಶನ ಹಬ್ಬ.
ಈಗ ನಾವೆಲ್ಲಾ ಬೆಂಗಳೂರು ವಾಸಿ 
ಪ್ರತಿವರ್ಷ ತಪ್ಪದೇ ಮನೆಯಲ್ಲಿ 
ಗಣೇಶನ್ನ ಕೂರಿಸ್ತೀವಿ.
ರಾತ್ರಿ ಹಲಸೂರು ಕೆರೆಯಲ್ಲಿ 
ಕಟ್ಟುಪಾಡುಗಳೊಂದಿಗೆ ವಿಸರ್ಜನೆ. 
ಆದ್ರೆ ಆಗಿದ್ದ ಆ ಉತ್ಸಾಹ, 
ಆ ಉಲ್ಲಾಸ, ಆ ಜೋಷ್ 
ಈಗ ಎಲ್ಲಿದೆ 
ಸದ್ಯಕ್ಕೆ ಬೆಂಗಳೂರಲ್ಲಿದ್ದ 
ಮನೆ ಇರುವ ಮುಖ್ಯ ರಸ್ತೆಯಲ್ಲಿ 
ಡಿಜೆ ಮ್ಯೂಸಿಕ್ ಬ್ಯಾಂಡ್ ಜೋರು ಶೋರಾಗಿ ಕೇಳಿಸಿದೊಡನೆ 
ಮನೆಯಿಂದ ಎಲ್ಲರೂ 
ಹೊರಬಂದು ನೋಡಲು, 
ಬ್ಯಾಂಡ್ ಹಿಂದೆ ಹಾಡೋವ್ರ ಟ್ರೂಪ್ 
ತಾಳ ಮೇಳ ಡಾನ್ಸ್ 
ದೊಡ್ಡ ರಾಕೆಟ್ ಗಣೇಶ ಟ್ರಾಲಿಯಲ್ಲಿ
ಚಂದಾದಾರರಿಗೆ ಉತ್ಸವ, 
ಮನೆಯಿಂದ ಹೊರಗೆ ಕೋಲಾಹಲ 
ಮನೆಯೊಳಗೆ ಯಾರ ಹಂಗೂ ಇಲ್ಲದೆ 
ಯಾರ ಗೋಜಿಗೂ ಹೋಗದೆ 
ಆರಾಮಾಗಿ ಮಂಟಪದಲ್ಲಿ 
ಮಂದಹಾಸವ ಬೀರಿ ಕುಳಿತಿದ್ದ 
ಸಿದ್ಧಿ ವಿನಾಯಕ ನಮ್ ಗಣೇಶ,
ಬೆಳಗಿಂದ ಗಣೇಶನ್ನ ಹೊರಗಿನವರು 
ಯಾರೂ ಬಂದು ನೋಡಲಿಲ್ಲಾ 
ಯಾರೂ ಕೇಳಲೂ ಇಲ್ಲಾ 
ಸಂಯುಕ್ತ ಕುಟುಂಬಗಳು 
ಮರೆಯಾಗ್ತಾ ಕಾಣೆಯಾಗ್ತಾ 
ಹಬ್ಬಗಳ ಮೇಲೂ ಪ್ರಭಾವ ಬೀರಿತ್ತು. 
ಒಂದೆಡೆ ಜೆನ್ ಜೀ, ಎಲ್ಲವನ್ನೂ 
ಪ್ರಶ್ನಿಸುವ ನಾಸ್ತಿಕರು 
ಇನ್ನೊಂದೆಡೆ ಒಪ್ಪೋರ್ಚುನಿಸ್ಟುಗಳು 
ಅಂದರೆ ಅವಸರವಾದಿಗಳು, ಚಂದಾದಾರರಿಂದಾಗಿ 
ಗಣೇಶನ ಹಬ್ಬ ಕ್ರಮೇಣ 
ಮನೆಗಳಿಂದ ಹೊರ ಹಮ್ಮಿ ಬೀದಿಗೊಂದು ಗಣೇಶ 
ವಾರ್ಡ್ ಗೊಂದು ಗಣೇಶಂತ 
ವ್ಯಾಪಾರ ದ್ರಷ್ಟಿಯ 
ಅಳವಡಿಸಿಕೊಂಡು ಬೆಳೆದು 
ನಿಂತಿರುವ ಗಣೇಶನ್ನ ನೋಡಿದ್ರೆ ಆಶ್ಚರ್ಯವಷ್ಟೇ...
ಗಣೇಶನನ್ನು ತನ್ನ ಮಡಿಲಲ್ಲಿ 
ದಿನವಿಡೀ ಕೂರಿಸಿ ಹೆಮ್ಮೆ 
ಪಟ್ಟುಕೊಂಡ ಸ್ಟೂಲ್ 
ಗಣೇಶ ವಿಸರ್ಜನೆಯ ನಂತರ 
ಉದಾಸನಾಗಿದ್ದೇನೋ ನಿಜ 
ಮೇಕ್ ಅಪ್ ಅಳಿಸದ ನಟಿಯಂತೆ 
ಇನ್ನೂ ಜರಿ, ಹೂವ, ಬಾಳೆಮರ, 
ದೀಪ, ಧೂಪ ಯಾವದನ್ನು 
ಕದಡದೇ ಇದ್ದದ್ದು ಸ್ಟೂಲ್ ಗೆ 
ಸ್ವಲ್ಪ ಜಂಬ ಬಂದಿತ್ತೂಂತ ಕಾಣಿಸುತ್ತೆ.
ಮತ್ತೆ ಇರಲ್ವಾ ಅದೂನೂವೇ 
ಒಂದು ದಿನವಾದ್ರೇನೂ 
ವರ್ಷವಾದರೇನೂ 
ಗಣೇಶನ ಸ್ಟೂಲ್ ಅಂದ್ರೆ ಅದು 
ಗಣೇಶಂದೆ 
ಇದ್ದರೆ ಇರಲಿ ಬಿಡಿ 
ಗಣೇಶನ ಸ್ಟೂಲ್ ಅನ್ನಿ 
ಆದ್ರೆ ಇನ್ನೂ ಅದರ ಸರದಿ 
ಬರುವ ವರ್ಷ ಬರಲಿರುವ 
ಗಣೇಶನ ಹಬ್ಬಕ್ಕೆ... ಅದುವರೆಗೂ...ಅದು 
ಗಣೇಶನ ಸ್ಟೂಲ್ 
ಸುಮ್ಮನೇ ಮಾತಿಗೆ 
ಬರೀ ಸ್ಟೂಲ್ ಅಷ್ಟೇಂತ ಹೇಳಿದ್ದೆ 
ಅದಕ್ಕೇ ಕೋಪ ಮಾಡ್ಕೊಂಡು 
ನಾನು ಒಂದ್ ಸಲ ಸ್ಟೂಲ್ ಹತ್ತಿದಾಗ 
ಕಾಲು ಬ್ಯಾಲೆನ್ಸ್ ತಪ್ಪಿ ಬಿದ್ದದ್ದುಂಟು
ಸೇಡಿಗೆ ಸೇಡು ತೀರಿಸಿಕೊಂಡಿತ್ತು.
ಈಗ ಅದು ಬರೀ ಸ್ಟೂಲ್ 
ಅಲ್ಲಾಂತ ಒಪ್ಪಿಕೊಳ್ಳುತ್ತೀನಿ 
ಹೌದು, ಅದು, 
ಗಣೇಶನ ಸ್ಟೂಲ್. 
      ಕೆ. ಸುರೇಶ್. ನಿವೃತ್ತ ಭಾ. ಪ್ರ. ಸೇ 

 






 




 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.